Mysore
23
broken clouds

Social Media

ಶುಕ್ರವಾರ, 13 ಜೂನ್ 2025
Light
Dark

ಸ್ವಚ್ಛ ಹಳ್ಳಿಗಾಗಿ ಸಾಥ್‌ ನೀಡುವ ಮಹಿಳಾ ಚಾಲಕಿಯರು

ಮಹಿಳಾ ಸ್ವಸಹಾಯ ಸಂಘಗಳ ಮೂಲಕ ತ್ಯಾಜ್ಯ ನಿರ್ವಹಣೆಗೆ ಸಾಥ್‌ ನೀಡುತ್ತಿರುವ ಮಹಿಳಾ ಚಾಲಕಿಯರ ಆರ್ಥಿಕ ಸಬಲತೆಗೆ ಸರ್ಕಾರದ ಡೇ-ನಲ್ಮ್‌ ಯೋಜನೆ ನೆರವು

ಕೆ. ಬಿ. ರಮೇಶನಾಯಕ

ಹೈನುಗಾರಿಕೆಯನ್ನೇ ನಂಬಿಕೊಂಡು ಸಹಸ್ರಾರು ಜನರು ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದರೆ, ಮತ್ತೊಂದೆಡೆ ಸ್ವಯಂ ಉದ್ಯೋಗ ಕಂಡುಕೊಂಡು ಆರ್ಥಿಕವಾಗಿ ಸಬಲರಾಗಲು ಹೆಜ್ಜೆ ಇಟ್ಟಿರುವ ಮಹಿಳಾ ಸ್ವಸಹಾಯ ಸಂಘದ ವರು ಹಳ್ಳಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಸ ನಿರ್ವಹಣೆ ಮತ್ತು ಸಂಸ್ಕರಣೆ ಹೊಣೆ ಹೊತ್ತಿರುವ ಮಹಿಳಾ ಸ್ವಸಹಾಯ ಸಂಘಗಳ ವಾಹನಗಳಿಗೆ ಚಾಲಕರಾಗಿ ಮಹಿಳೆಯರೇ ಸಾಥ್ ನೀಡುತ್ತಿದ್ದಾರೆ.

ಚಾಲನಾ ತರಬೇತಿ ಪಡೆದ ಮಹಿಳಾ ಸದಸ್ಯಯೇ ಟಿಪ್ಪರ್ ಓಡಿಸಿಕೊಂಡು ಹಳ್ಳಿಗಳಲ್ಲಿ ಕಸ ಸಂಗ್ರಹಣೆ ಮಾಡುತ್ತಿದ್ದು, ಸ್ವಚ್ಛತೆಯ ಪರ್ವಕ್ಕೆ ಸಂಜೀವಿನಿ ಯೋಜನೆಯು (ಡೇ-ನಲ್ಮ್) ನೆರವಾಗಿದೆ. ಮಹಿಳಾ ಸಬಲೀಕರಣ ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಸಂಜೀವಿನಿ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು, ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿದೆ. ಪ್ರಮುಖವಾಗಿ ನೋಂದಾಯಿತ ಮಹಿಳಾ ಸಂಘಗಳು ಸುತ್ತು ನಿಽ ಹಾಗೂ ಸಮುದಾಯ ಬಂಡವಾಳ ವಂತಿಕೆ ಮೂಲಕ ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡುತ್ತಿರುವುದು ಗ್ರಾಮೀಣ ಮಹಿಳೆಯರು ಕುಟುಂಬ ನಿರ್ವಹಣೆಯ ನೊಗವನ್ನು ಹೊತ್ತು ಮುನ್ನಡೆಯಲು ಸಹಾಕಾರಿಯಾಗಿದೆ.

ಜಿಲ್ಲೆಯಲ್ಲಿ ೨೫೬ ಗ್ರಾಮ ಪಂಚಾಯಿತಿಗಳಿದ್ದು, ೧,೩೫೨ ವಾರ್ಡ್‌ಗಳಿವೆ. ಇವುಗಳ ವ್ಯಾಪ್ತಿಯಲ್ಲಿ ೧೬,೦೪೭ ಸ್ವಸಹಾಯ ಸಂಘಗಳು ನೋಂದಣಿ ಮಾಡಿಕೊಂಡಿದ್ದು, ೨,೦೨,೬೯೨ ಮಹಿಳಾ ಸದಸ್ಯರಿದ್ದಾರೆ. ಇದುವರೆಗೆ ಸರ್ಕಾರವು ೫೩. ೮೯ ಕೋಟಿ ರೂ. ಅನುದಾನವನ್ನು ಸಮುದಾಯ ಬಂಡವಾಳ ನಿಽಯಾಗಿ ನೀಡಿದ್ದು, ೭,೦೫೨ ಸ್ವಸಹಾಯ ಸಂಘಗಳ ೭೮,೨೫೦ ಸದಸ್ಯರು ಪಡೆದುಕೊಂಡಿದ್ದಾರೆ. ಈ ಅನುದಾನ ಪುನರಾವರ್ತಿತವಾಗಿ ೨೩೦ ಕೋಟಿ ರೂ. ವಹಿವಾಟು ನಡೆಸಿದೆ. ಈ ಅನುದಾನವು ಮಹಿಳಾ ಸಂಘಗಳು ನಡೆಸುತ್ತಿರುವ ಆರ್ಥಿಕ ಚಟುವಟಿಕೆಗೆ ನೆರವಾಗಿ ನಿಂತಿದೆ. ಹೈನುಗಾರಿಕೆ, ಟೈಲರಿಂಗ್, ಬಳೆ ವ್ಯಾಪಾರ, ಹೋಟೆಲ್, ಸಾಧನ ಸಲಕರಣೆಗಳ ತಯಾರಿಕೆ, ಗೃಹಬಳಕೆ ವಸ್ತುಗಳು, ತಿಂಡಿ-ತಿನಿಸು ಗಳ ಮಾರಾಟ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಂಘದ ಸದಸ್ಯರು ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ವಿಶೇಷವಾಗಿ ಮೊದಲ ಬಾರಿಗೆ ಜಿಪಂ ವತಿಯಿಂದ ಸಂಜೀವಿನಿ ಯೋಜನೆ ಯಡಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಚಾಲನಾ ತರಬೇತಿ ನೀಡಿದ್ದು, ೭೧೮ ಮಹಿಳೆಯರು ತರಬೇತಿ ಪಡೆದಿದ್ದಾರೆ. ಇದರಲ್ಲಿ ೨೦೦ ಮಹಿಳೆಯರಿಗೆ ಡಿಎಲ್ ಕೂಡ ನೀಡಲಾಗಿದೆ.

ಮಹಿಳಾ ಸ್ವಸಹಾಯ ಸಂಘಗಳು ಗ್ರಾಮ ಪಂಚಾಯಿತಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಘನತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆಯನ್ನು ಹೊತ್ತುಕೊಂಡಿವೆ. ೯೧ ಮಹಿಳಾ ಚಾಲಕರು ಈಗ ಗ್ರಾಪಂಗೆ ಸೇರಿದ ಆಟೋ, ಟಿಪ್ಪರ್‌ಗಳನ್ನು ಓಡಿಸುವ ಮೂಲಕ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಜಿಲ್ಲೆಯ ಗರ್ಗೇಶ್ವರಿ, ಬನ್ನಿಕುಪ್ಪೆ, ನಾಗವಾಲ, ಕಿರುನಲ್ಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈಗ ಕಸ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ನಿರ್ವಹಿಸುತ್ತಿದ್ದಾರೆ. ಚಾಲನೆ ಕಲಿತ ಮಹಿಳಾ ಚಾಲಕಿಯೇ ಆಟೋ ಚಾಲನೆ ಮಾಡಿ ಬೀದಿ ಬೀದಿಗೆ ಹೋದಾಗ ಮಹಿಳೆಯರು ಕಸ ತಂದು ಸುರಿಯುತ್ತಾರೆ. ನಂತರ, ಮಹಿಳೆಯರೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಮರು ಬಳಕೆ ಮಾಡುವಂತೆ ಮಾಡಲು ಮುಂದಾಗಿರುವುದು ಸ್ವಚ್ಛತಾ ಆಂದೋಲನಕ್ಕೂ ದೊಡ್ಡ ಶಕ್ತಿ ತಂದುಕೊಟ್ಟಿದೆ.

ಸಜೀವಿನಿ ಬರೀ ಸ್ವಯಂ ಉದ್ಯೋಗಕ್ಕೆ ಸೀಮಿತವಾಗದೆ ಕೃಷಿ, ತೋಟಗಾರಿಕೆ, ಪಶುಪಾಲನಾ ಇಲಾಖೆ ಕಾರ್ಯಕ್ರಮಗಳಲ್ಲಿ ರೈತಾಪಿ ವರ್ಗದವರಿಗೆ ಸಿಗುವ ಸೌಲಭ್ಯಗಳನ್ನು ತಲುಪಿಸಲು ೩,೦೭೬ ಸಂಘಗಳ ಸದಸ್ಯರಿಗೆ ಕೃಷಿಯೇತರ ಜೀವನೋಪಾಯ ಕೃಷಿ ಶಾಖೆಗಳನ್ನು ಆಯ್ಕೆ ಮಾಡಿ, ಇವರು ಗ್ರಾಮ ಮಟ್ಟದಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಬೇಕಾದ ನೆರವನ್ನು ಒದಗಿಸುತ್ತಿದ್ದಾರೆ. ಮಳೆ ಹವಾಮಾನದ ವರದಿಯನ್ನು ಪಡೆದುಕೊಂಡು ಹಳ್ಳಿ ಜನರಿಗೆ ವಿಷಯ ಮುಟ್ಟಿಸುತ್ತಿದ್ದಾರೆ. ಸಂಜೀವಿನಿ ಯೋಜನೆಯು ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗು ವಂತೆ ಜಿಲ್ಲಾ ಪಂಚಾಯಿತಿ ಕೂಡ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಗತಕ್ಕೆ ಮುಂದಾಗಿದೆ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಎಂ. ಗಾಯತ್ರಿ, ಮುಖ್ಯ ಯೋಜನಾಧಿಕಾರಿ ಕೆ. ಬಿ. ಪ್ರಭುಸ್ವಾಮಿ ಅವರ ಶ್ರಮದಿಂದಾಗಿ ಸಂಜೀವಿನಿ ಯೋಜನೆಯನ್ನು ಬಳಸಿಕೊಂಡಿರುವುದರಲ್ಲಿ ಮೈಸೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರೇ ಗರ್ಗೇಶ್ವರಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳು ನಿರ್ವಹಿಸುತ್ತಿರುವ ಮಾಹಿತಿ ಪಡೆದುಕೊಂಡು ಸಿಎಂ ಗಮನಕ್ಕೆ ತಂದಿದ್ದಲ್ಲದೆ, ಇದಕ್ಕೆ ಒತ್ತಾಸೆಯಾಗಿ ನಿಲ್ಲಲು ಒಂದಿಷ್ಟು ಪ್ರೋತ್ಸಾಹಧನ ನೀಡಲು ಚಿಂತನೆ ಮಾಡಿರುವುದು ಗಮನಾರ್ಹ.

 

Tags:
error: Content is protected !!