Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಶೃುತಿ ರಂಜನಿಯ ಸಂಗೀತ ಸಾಂಗತ್ಯ

ಕೀರ್ತಿ ಬೈಂದೂರು

ಅಪ್ಪನ ಹಿಂದೆ ಗಾಡಿಯಲ್ಲಿ ಕೂತು, ಇಂಜಿನಿಯರಿಂಗ್ ಕಾಲೇಜಿಗೆ ದಾಖಲಾಗುವುದಕ್ಕೆಂದು ಶ್ರುತಿ ರಂಜನಿ ಅವರು ಹೊರಟಿದ್ದರು. ಆದರೆ ತಂದೆಯವರು ದಾಖಲಿಸಿದ್ದು ಮಾತ್ರ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿಗೆ! ತನ್ನ ಕನಸಿನ ಹಕ್ಕಿಗೆ ರೆಕ್ಕೆಗಳಾಗಿ ಸಂಗೀತವೇ ಒದಗಿಬರಬಹುದೆಂಬ ಸುಳಿವೂ ಇವರಿಗಿರಲಿಲ್ಲ.

ಡಾ. ಎಂ. ಟಿ. ಶ್ರುತಿ ರಂಜನಿ ಅವರ ಮನೆ ಸಂಗೀತ ನಾದದಿಂದ ತುಂಬಿತ್ತು. ನಿತ್ಯವೂ ಒಂದಷ್ಟು ವಿದ್ಯಾರ್ಥಿಗಳು ತಂದೆ ವಿದ್ವಾನ್ ಎಚ್. ಎಸ್. ತಾಂಡವಮೂರ್ತಿ ಅವರಲ್ಲಿ ಸಂಗೀತ ಕಲಿಕೆಗೆಂದು ಬರುತ್ತಿದ್ದರೆ, ಶ್ರುತಿ ರಂಜನಿ ಅವರ ತಾಯಿ ಸುಜಾತ ಅವರು ಮಕ್ಕಳಿಬ್ಬರನ್ನೂ ಬೆಳಿಗ್ಗೆ ನಾಲ್ಕೂವರೆಗೆ ಎಬ್ಬಿಸಿ, ಸಂಗೀತ ಕಲಿಕೆಗೆ ಅಣಿಗೊಳಿಸುತ್ತಿದ್ದರು. ತಂದೆ ತಾಂಡವಮೂರ್ತಿ ಅವರು ಪೊಲೀಸ್ ಬ್ಯಾಂಡ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದರು. ತಂದೆಯ ಸಂಗೀತ ಪರಂಪರೆಯ ಬೇರು ಇವರಲ್ಲೂ ಮೊಳೆಯಿತು. ತಂದೆ ತಾಂಡವಮೂರ್ತಿ ಅವರು ವಯೋಲಿನ್ ವಾದಕರಾಗಿದ್ದರಿಂದ ಶ್ರುತಿರಂಜನಿ ಅವರಿಗೆ ವಯೋಲಿನ್ ಜೊತೆಗೆ ಸಂಗೀತ ಸಂಬಂಧ ಸಹಜವಾಗಿಯೇ ಬೆಸೆಯಿತು.

ತಾಯಿಯವರು ಕಾದಂಬರಿಯೊಂದನ್ನು ಓದುತ್ತಿದ್ದಾಗ, ಅಲ್ಲಿದ್ದ ‘ಶ್ರುತಿ’ ಪಾತ್ರವನ್ನು ಬಹು ಮೆಚ್ಚಿದ್ದರು. ತನಗೆ ಹೆಣ್ಣು ಮಗುವಾದರೆ ಈ ಹೆಸರನ್ನೇ ಇಡುತ್ತೇನೆಂದು ತೀರ್ಮಾನಿಸಿದ್ದರು. ತಂದೆಯವರು ಸಂಗೀತವನ್ನೇ ಬದುಕಾಗಿಸಿಕೊಂಡ ಕಾರಣದಿಂದ ಹುಟ್ಟುವ ಮಗುವಿಗೆ ರಾಗದ ಹೆಸರಿಡಬೇಕೆಂದು ನಿಶ್ಚಯಿಸಿಯಾಗಿತ್ತು. ಹಾಗಾಗಿ ಇಬ್ಬರು ಕೂಡಿಇಟ್ಟ ಹೆಸರೇ ‘ಶ್ರುತಿರಂಜನಿ’.

ಶ್ರುತಿ ರಂಜನಿ ಬೆಳಿಗ್ಗೆ ಎರಡು ಗಂಟೆಗಳ ಕಾಲ ಸಂಗೀತಾಭ್ಯಾಸ ಮುಗಿಸಿಕೊಂಡು, ಸಂಸ್ಕ ತ ಪಾಠಕ್ಕೆಂದು ಹೊರಡುತ್ತಿದ್ದರು. ಆದಾದ ಮೇಲೆ ಮತ್ತೆ ಶಾಲೆ ಆದರೆ ಅವರಿಗೆ ಓದು ಹೊರೆಯೆನಿಸುವ ವಾತಾವರಣವೇ ಸೃಷ್ಟಿಯಾಗಲಿಲ್ಲ. ಮನೆಗೆ ಬರುವಷ್ಟರಲ್ಲಿ ಅಮ್ಮ ಕೈಯಲ್ಲಿ ತಿಂಡಿ ಹಿಡಿದು, ಪಕ್ಕದಲ್ಲಿ ಪತ್ರಿಕೆ ಇಟ್ಟುಕೊಂಡು ಕಾಯುತ್ತಿದ್ದರು. ಪತ್ರಿಕೆಯಲ್ಲಿ ಬಂದ ಸಂಗತಿಗಳನ್ನು ಅದೇ ಭಾವದಲ್ಲಿ ಹಾಡಬೇಕಿತ್ತು. ಅಷ್ಟು ಮಾತ್ರವಲ್ಲ, ಆಯಾ ವಿಷಯಕ್ಕೆ ಅನುಗುಣವಾಗಿ ರಾಗವನ್ನು ಬದಲಾಯಿಸಬೇಕಿತ್ತು.

ಕನ್ನಡದ ವರ್ಣಮಾಲೆಯನ್ನು ಶ್ರುತಿ ರಂಜನಿ ಅವರಿಗೆ ತಾಯಿ ಸುಜಾತ ಅವರು ಕಲಿಸಿದ್ದು ಇದೇ ಮಾರ್ಗದಲ್ಲಿ. ಶ್ರುತಿ ರಂಜನಿ ಅವರ ಪಾಲಿಗೆ ಅಮ್ಮ ಭಾವದ ಗೆಳತಿ. ಸಂಗೀತ ಕಲಿಕೆಗೆ ಒಟ್ಟಿಗೇ ಕೂರುತ್ತಿದ್ದರು. ಕೆಲ ಹಾಡುಗಳನ್ನು ಹಾಡುವಾಗೆಲ್ಲ ಅಮ್ಮ ಕಣ್ಣೀರಿಡುತ್ತಿದ್ದದ್ದನ್ನು ಕಂಡಾಗ, ‘ಅಷ್ಟು ಅಳು ಬರುತ್ತೆ ಅಂದ್ರೆ, ಆ ಹಾಡನ್ನೇ ಹಾಡೋದು ಬೇಡ’ ಎನ್ನುತ್ತಿದ್ದರು. ಆಗೆಲ್ಲ ತಾಯಿ ಸುಜಾತ ಅವರು ಹೇಳುತ್ತಿದ್ದದ್ದೊಂದೇ ‘ಭಾವ ತುಂಬಿ ಹಾಡಬೇಕು’ ಎಂದು. ಅಮ್ಮ ಕಲಿಸಿಕೊಟ್ಟ ಹಾಡುಗಳ ಅರ್ಥ ಈಗ ತಿಳಿದು, ಕಣ್ಣಾಲಿಗಳು ಒದ್ದೆಯಾಗುತ್ತಿವೆ ಎನ್ನುವಾಗ ಶ್ರುತಿ ರಂಜನಿ ಅವರ ಕಣ್ಣುಗಳಲ್ಲಿ ತಾಯಿಯ ನೆನಕೆಗಳಿದ್ದವು.

ಪಿಯುಸಿ ವಿದ್ಯಾಭ್ಯಾಸ ಮುಗಿದ ಮೇಲೆ ಇಂಜಿನಿಯರಿಂಗ್ ಓದುವುದೆಂದು ಶ್ರುತಿ ರಂಜನಿ ಅವರು ತೀರ್ಮಾನಿಸಿದ್ದರು. ತಂದೆ ತಾಂಡವಮೂರ್ತಿ ಅವರು ಮಾತ್ರ ಲಲಿತಕಲಾ ಕಾಲೇಜಿಗೆ ಮಗಳನ್ನು ಕರೆತಂದು ದಾಖಲಿಸಿಯಾಗಿತ್ತು. ‘ನಂಗಿಷ್ಟ ಇಲ್ಲ’ ಎಂಬುದು ಶ್ರುತಿ ರಂಜನಿ ಅವರ ನಿಲ್ಲದ ವರಾತ.

ಮಗಳ ಹಠಕ್ಕೆ ತಂದೆ ಮಣಿದು, ‘ಆಯ್ತು. ಒಂದು ಸೆಮಿಸ್ಟರ್ ಓದು ಸಾಕು. ಆಗಲ್ಲ ಅಂದ್ರೆ ಇಂಜಿನಿಯರಿಂಗ್‌ಗೇ ಸೇರಿಸ್ತೀನಿ’ ಎಂದುಬಿಟ್ಟರು! ಮೊದಲ ಸೆಮಿಸ್ಟರ್ ಸಿಂಗಾಪುರಕ್ಕೆ, ಎರಡನೆಯ ಸೆಮಿಸ್ಟರ್ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಲು ನೆರವಾಗಿದ್ದು, ಸಂಗೀತವೇ. ಇಂಜಿನಿಯರಿಂಗ್ ಓದುತ್ತಿದ್ದ ಸ್ನೇಹಿತೆಯರೆಲ್ಲ ಪ್ರಾಕ್ಟಿಕಲ್, ಥಿಯರಿ ಎಂದು ಕಂಗಾಲಾಗಿದ್ದರೆ, ತಾನು ಖುಷಿಯಾಗಿದ್ದೇ ನಲ್ಲಾ ಎಂದು ತಮ್ಮ ಇಂಜಿನಿಯರಿಂಗ್ ಓದುವ ಕನಸು ಬಿಟ್ಟರು.

ಸಂಗೀತ ಮತ್ತು ಭರತನಾಟ್ಯದಲ್ಲಿ ಪ್ರಥಮ ರ‍್ಯಾಂಕ್, ಚಿನ್ನದ ಪದಕಗಳೊಂದಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದ ಶ್ರುತಿ ರಂಜನಿ ಅವರು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಂಗೀತ ಉಪನ್ಯಾಸಕರಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾಗಿ ಮತ್ತು ವಯೋಲಿನ್ ವಾದಕರಾಗಿರುವ ಶ್ರುತಿ ರಂಜನಿ ಅವರು `An analytical study if raaga system in indian classical music and scale system in westen classical music’ ಎಂಬ ವಿಷಯದ ಮೇಲೆ ಪಿಎಚ್. ಡಿ. ಪದವಿಯನ್ನು ಪಡೆದಿದ್ದಾರೆ. ಅಚ್ಚರಿ ಅನಿಸಬಹುದು, ಇವರ ಮಹಾಪ್ರಬಂಧದಲ್ಲಿ ಕೃತಿಚೌರ್ಯದ ಪ್ರಮಾಣವೇ ‘ಶೂನ್ಯ’! ಇದೆಲ್ಲದರ ನಡುವೆ ’ನಾವು ಬ್ಯಾಂಡ್’ನ ಕಲಾವಿದರಾಗಿ ಜನಪ್ರೀತಿಯನ್ನು ಗಳಿಸಿದ್ದಾರೆ. ಸಂಗಾತಿ ಸುಂದರೇಶ್ ದೇವ ಪ್ರಿಯ, ಜೀವಚೇತನ ತುಂಬುವ ಮಕ್ಕಳು ಸಿಯಾನ್ ಸುಜನ್ ಮತ್ತು ರಿಯಾನ್ ಸುಶ್ರುತ್, ಅಧ್ಯಯನಕ್ಕೆ ಜೊತೆಯಾಗುವ ಅತ್ತೆ- ಮಾವರ ಸಹಕಾರ ಇವರಿ ಗಿದೆ. ಇತ್ತೀಚೆಗಷ್ಟೆ ಮೈಸೂರು ಕನ್ನಡ ವೇದಿಕೆ ಶ್ರುತಿ ರಂಜನಿ ಅವರ ಸಂಗೀತ ಶಿಕ್ಷಣದ ಸೇವೆಯನ್ನು ಗುರುತಿಸಿ, ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ ನೀಡಿ ಗೌರವಿಸಿದೆ. ಮನೆ-ಕಾಲೇಜಿನ ಬಿಡುವಿಲ್ಲದ ಓಡಾಟ ಗಳ ನಡುವೆ ಸಂಗೀತ ಕಛೇರಿಗೂ ಸಮಯ ಹೊಂದಿಸಿ ಕೊಳ್ಳುವ ಶ್ರುತಿ ರಂಜನಿ ಅವರು ಸ್ವಂತ ಸಂಗೀತ ಶಾಲೆಯನ್ನು ತೆರೆಯಬೇಕೆಂಬ ಕನಸಿನೊಂದಿಗೆ ಜೀವಿಸುತ್ತಿದ್ದಾರೆ.

Tags: