ಚಳಿಗಾಲ ಬಂತೆಂದರೆ ಕೂದಲು ಉದುರುವುದು ಸಾಮಾನ್ಯ. ಈ ಕಾಲದಲ್ಲಿ ನೆತ್ತಿಯ ತುರಿಕೆಯೂ ಜಾಸ್ತಿ. ಚಳಿಗಾಳಿಯಲ್ಲಿ ದೂಳು, ಜಿಡ್ಡು ಹೆಚ್ಚಾಗಿ ಕೂದಲನ್ನು ಹಾನಿಗೊಳಿಸುವುದರಿಂದ ಕೂದಲನ್ನು ತೊಳೆದ ನಂತರವೂ ಮತ್ತಷ್ಟು ಒರಟಾಗಿಸುತ್ತದೆ. ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುವುದು ಸೂಕ್ತ. ಹಿಂದೆಯೆ ಮನೆ ಹಿರಿಯರು ‘ಎಣ್ಣೆ ಬಿಸಿ ಮಾಡ್ಕೊಂಡು ಹಚ್ಚಬೇಕು’ ಎಂದು ಸಲಹೆ ನೀಡುತ್ತಿದ್ದರು. ಅದು ಸರ್ವ ಕಾಲಕ್ಕೂ ಅನುಕರಣೀಯ. ಏಕೆಂದರೆ ಬೆಚ್ಚಗಿನ ಎಣ್ಣೆ ಕೂದಲಿಗೆ ಹೊಳಪು ತಂದು ತೇವಾಂಶವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ ಕೂದಲು ತುದಿಯಲ್ಲಿ ಸೀಳಾಗುವುದು ಮತ್ತು ಚಳಿಗಾಲದ ವಾತಾವರಣಕ್ಕೆ ಶುಷ್ಕವಾಗುವುದನ್ನು ತಡೆಯಬಹುದು.
ತಲೆ ಹೊಟ್ಟಿನ ಸಮಸ್ಯೆಗೆ ಇದು ರಾಮಬಾಣವೆಂದು ಅನೇಕ ಹಿರಿಯರು ಹೇಳುತ್ತಾರೆ. ಅಂತೆಯೇ ಬೆಚ್ಚಗಿನ ಎಣ್ಣೆಯನ್ನು ಚಳಿಗಾಲದಲ್ಲಿ ಕೂದಲಿಗೆ ಬಳಸುವುದರಿಂದ ಕೂದಲು ಹೆಚ್ಚು ಮೃದು ಮತ್ತು ನಯವಾಗಿ ಕಾಣುತ್ತಾ ಸಿಕ್ಕುಗಟ್ಟುವುದನ್ನು ತಡೆಯುತ್ತದೆ.