ಸಿರಿ ಮೈಸೂರು
ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ ದೂರದಲ್ಲಿರುವ ಅದು ಬೆಟ್ಟಗುಡ್ಡಗಳ ಮಧ್ಯೆ ಅವಿತ ಒಂದು ಯೋಗಶಾಲೆ. ಅಥವಾ ಧ್ಯಾನಮಂದಿರ ಅಂತಲೂ ಅನ್ನಬಹುದು. ಒಂದು ಆಯಾಮದಲ್ಲಿ ಯೋಚಿಸಿದರೆ ಪ್ರಸಿದ್ಧ ಪ್ರವಾಸಿ ಸ್ಥಳ. ಅದರ ಒಳಗೆ ದೇವಾಲಯಗಳು, ಗೋಶಾಲೆ, ಕೊಳಗಳು, ಧ್ಯಾನಮಂದಿರ, ಯೋಗ ಕಲಿಕೆ, ಮಕ್ಕಳಿಗೆ ಔಪಚಾರಿಕವಲ್ಲದ ವಿಶೇಷ ಶಿಕ್ಷಣ ಎಲ್ಲವೂ ಇವೆ. ಎತ್ತೆತ್ತ ನೋಡಿದರೂ ನಮ್ಮ ದೇಶದವರು, ವಿದೇಶದವರು ಯೋಗಾಭ್ಯಾಸ ಮಾಡಿತ್ತಿರುತ್ತಾರೆ. ಇಷ್ಟೆಲ್ಲಾ ಸಂಗತಿಗಳ ನಡುವೆ ನನ್ನ ಗಮನ ಸೆಳೆದಿದ್ದು ಇಲ್ಲಿದ್ದ ಸ್ವಯಂ ಸೇವಕರು. ಅದರಲ್ಲೂ ನಮಗೆ ಇಡೀ ಆವರಣವನ್ನು ತೋರಿಸಿದ ಓರ್ವ ವ್ಯಕ್ತಿ.
ನಮ್ಮನ್ನು ಅಲ್ಲೆಲ್ಲಾ ಸುತ್ತಾಡಿಸಿ, ಅಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ನಮಗೆ ತಿಳಿಸಿ ಆ ದಿನ ಕೆಲ ಗಂಟೆಗಳ ಸಮಯವನ್ನು ನಮ್ಮೊಂದಿಗೆ ಕಳೆದ ಆತ ಮೂಲತಃ ಯಾರು, ಇಲ್ಲಿ ಬಂದು ಸ್ವಯಂಸೇವಕನಾಗಿ ನೆಲೆಸಲು ಕಾರಣ ಏನು, ಈತ ಎಲ್ಲಿಯವನು ಎಂಬ ಕುತೂಹಲ ನನಗೆ ಇದ್ದೇ ಇತ್ತು. ಹಾಗಾಗಿ ಅವರೊಂದಿಗೆ ಮಾತಿಗಿಳಿಯುವ ಅವಕಾಶವನ್ನು ನಾನು ತಪ್ಪಿಸಿಕೊಳ್ಳಲಿಲ್ಲ. ನೇರವಾಗಿ ಅವರು ಎಲ್ಲಿಯವರು, ಏನು ಕಥೆ ಎಂದು ಕೇಳಿದಾಗ ನನಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಈತ ಮೂಲತಃ ಐಟಿ ಉದ್ಯೋಗಿ.
ಉತ್ತರ ಕರ್ನಾಟಕದವರು. ಪುಣೆಯ ಎಂಎನ್‌ಸಿಯಲ್ಲಿ ಕೆಲಕಾಲ ಲಕ್ಷಾಂತರ ರೂ. ಸಂಬಳಕ್ಕೆ ಕೆಲಸ ಮಾಡಿದವರು. ೪೫ ದಿನಗಳ ಒಂದು ಕೋರ್ಸ್ ಮಾಡಲೆಂದು ಇಲ್ಲಿಗೆ ಬಂದವರು ಐದು ವರ್ಷಗಳಿಂದ ಇಲ್ಲೇ ಉಳಿದಿದ್ದಾರೆ. ಮನೆಗೆ ಆಗಾಗ ಹೋದರೆ ಹೋದಂತೆ, ಇಲ್ಲದಿದ್ದರೆ ಇಲ್ಲ. ಇಲ್ಲಿ ನಾನು ಭೇಟಿ ಮಾಡಿದ ಇನ್ನೋರ್ವ ಮಹಿಳೆಯದ್ದು ಕೂಡ ಇದೇ ಕಥೆ. ಆಕೆ ದೆಹಲಿಯವಳು. ಯಾವುದೋ ಏರ್‌ಲೈನ್ಸ್‌ಗೆ ಸಂಬಂಽಸಿದ ಒಂದು ಸ್ಟಾರ್ಟ್ ಅಪ್ ಶುರು ಮಾಡಿದ್ದವಳು. ಆಕೆಯೂ ಕೆಲ ದಿನಗಳ ಯೋಗ ತರಬೇತಿಗೆ ಇಲ್ಲಿ ಬಂದು ವರ್ಷಗಳಿಂದ ಇಲ್ಲೇ ಉಳಿದಿದ್ದಾಳೆ.
ಇದು ಇವರಿಬ್ಬರ ಕಥೆಯಲ್ಲ. ಇಲ್ಲಿರುವ ನೂರಾರು ಸ್ವಯಂಸೇವಕರದ್ದು ಹೆಚ್ಚೂ ಕಡಿಮೆ ಇದೇ ರೀತಿಯ ಕಥೆ. ಇವರಿಬ್ಬರನ್ನೂ ನೋಡಿ ನನಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಇತ್ತ ನನ್ನಂತಹ ಅದೆಷ್ಟೋ ಜನರು ಇನ್ನೂ ಒಳ್ಳೆ ಕೆಲಸ ಬೇಕು, ಒಳ್ಳೆ ಸಂಬಳ ಬೇಕು, ಏನನ್ನಾದರೂ ಸಾಧಿಸಬೇಕು ಎಂದು ಲೌಕಿಕ ಜೀವನದಲ್ಲಿ ಹೊಡೆದಾಡುತ್ತಿದ್ದರೆ ಇನ್ನೊಂದೆಡೆ ಇವೆಲ್ಲವನ್ನೂ ಸಾಧಿಸಿರುವ ಇಂತಹ ಅದೆಷ್ಟೋ ಜನರು ಮೌನವಾಗಿ ಇಂತಹ ಯೋಗಶಾಲೆಗಳಲ್ಲಿ, ಆಶ್ರಮಗಳಲ್ಲಿ ಉಳಿದು ಲೌಕಿಕ ಜೀವನದಿಂದ ಶಾಶ್ವತವಾಗಿ ನೇಪಥ್ಯಕ್ಕೆ ಸರಿದುಬಿಡುತ್ತಾರೆ. ಅಂದಹಾಗೆ ಇದು ಅಷ್ಟೊಂದು ಸುಲಭದ ವಿಷಯವಾ? ನಾವು ಇಷ್ಟು ವರ್ಷಗಳ ಕಾಲ ನಡೆಸಿದ ಜೀವನ, ಮನೆ, ತಂದೆ-ತಾಯಿ, ಕುಟುಂಬ, ಸ್ನೇಹಿತರು, ನಾವು ನಮಗಾಗಿ ಕನಸು ಕಂಡು ಕಟ್ಟಿಕೊಂಡ ಬದುಕು. ಇವೆಲ್ಲವನ್ನೂ ಒಂದೇ ಸಲಕ್ಕೆ ತೊರೆದು ದೂರದಲ್ಲೆಲ್ಲೋ ಈ ರೀತಿ ಬದುಕುತ್ತಾರೆ ಎಂದರೆ ಈ ಕೇಂದ್ರಗಳು ಅವರನ್ನು ಅದೆಷ್ಟರ ಮಟ್ಟಕ್ಕೆ ಆವರಿಸಿಕೊಂಡಿರಬಹುದು? ಅತ್ತ ‘ಮಕ್ಕಳು ನಮ್ಮ ಪಾಲಿಗಿರುತ್ತಾರೆ’ ಎಂದು ಕನಸು ಕಂಡ ತಂದೆ-ತಾಯಿ ಯರು ಒಂಟಿಯಾಗಿದ್ದರೆ ಇತ್ತ ‘ನಮಗೂ ನಮ್ಮ ಪೂರ್ವಾಶ್ರಮದ ಬದುಕಿಗೂ ಸಂಬಂಧವೇ ಇಲ್ಲ’ ಎನ್ನುತ್ತಾ ಮಕ್ಕಳು ಮೌನವಾಗಿಬಿಟ್ಟರೆ ಅವರನ್ನೇ ನಂಬಿಕೊಂಡಿರುವವರ ಕಥೆಯೇನು? ಎಂಬಿತ್ಯಾದಿ ಹಲವು ಪ್ರಶ್ನೆಗಳು ನನ್ನನ್ನು ಕಾಡಲು ಶುರು ಮಾಡಿದವು.
ಇಂದಿನ ಆಧುನಿಕ ಜೀವನ, ಕೆಲಸಗಳು ಬಹಳವೇ ಒತ್ತಡ ಇರುವಂತಹವು ಎಂಬುದೇನೋ ನಿರ್ವಿವಾದ. ಈಗಂತೂ ಎಲ್ಲರೂ ಉಸಿರು ತೆಗೆದುಕೊಳ್ಳಲೂ ಸಮಯವಿಲ್ಲವೆಂಬಂತೆ ಒಂದೇ ಸಮ ಕೆಲಸ ಮಾಡುತ್ತಿರುತ್ತಾರೆ. ಕೆಲಸ ಮಾತ್ರವಲ್ಲದೆ ವೈಯಕ್ತಿಕ ಜೀವನ ಕೂಡ ಒತ್ತಡದಲ್ಲೇ ನಡೆಯುತ್ತಿರುತ್ತದೆ. ಇಷ್ಟೆಲ್ಲಾ ಇರುವಾಗ ಯೋಗ, ಧ್ಯಾನ, ಪ್ರಾಣಾಯಾಮದಂತಹ ಸಂಗತಿಗಳನ್ನು ಅಭ್ಯಾಸ ಮಾಡುವುದು ಉಚಿತವೇ. ಅವಶ್ಯ ಕೂಡ. ಇಂತಹ ಯೋಗ-ಧ್ಯಾನ ಕೇಂದ್ರಗಳಲ್ಲಿ ಕೆಲಕಾಲ ಇದ್ದು ಬರುವುದೂ ಒಳ್ಳೆಯ ಸಂಗತಿ. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆ.
ಮುಂದಿನ ಒತ್ತಡಗಳನ್ನು ನಿಭಾಯಿಸಲು ಮನಸ್ಸು ಸಜ್ಜಾಗುತ್ತದೆ. ಆದರೆ ಇಲ್ಲಿಗೆ ಬಂದವರನ್ನು ಈ ಕೇಂದ್ರಗಳು ವರ್ಷಾನುಗಟ್ಟಲೆ ಇಲ್ಲೇ ಸ್ವಯಂಸೇವಕರಾಗಿ ಉಳಿಸಿಕೊಂಡುಬಿಡುತ್ತವೆ ಎಂದರೆ ಅದು ಈ ಕೇಂದ್ರಗಳ ಸಾಮರ್ಥ್ಯವಾ? ಅಥವಾ ಈಗಿನ ಪೀಳಿಗೆಯವರ ದೌರ್ಬಲ್ಯವಾ? ಯೋಗ-ಧ್ಯಾನ ಅಭ್ಯಾಸ ಮಾಡಬೇಕು ಎಂದರೆ ತಮ್ಮ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿ ಇಲ್ಲೇ ಬಂದು ಉಳಿದುಬಿಡಬೇಕೆಂದರೆ ನಮಗಾಗಿ ನಾವು ಇಷ್ಟು ವರ್ಷ ಕಟ್ಟಿಕೊಂಡ ಬದುಕಿನ ಕಥೆಯೇನು? ಇದರ ಅರ್ಥ ನಾವು ನಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದೇವೆ ಎಂದಲ್ಲವೇ? ಹೀಗೆ ಇದ್ದಕ್ಕಿದ್ದಂತೆ ಎಲ್ಲವನ್ನೂ ತೊರೆದು ಬಂದವರ ಬದುಕನ್ನು ಈ ಕೇಂದ್ರಗಳು ನೋಡಿಕೊಳ್ಳುತ್ತವಾ? ಈ ಪ್ರಶ್ನೆಗಳಿಗೆ ಯಾವ ಉತ್ತರವೂ ಇಲ್ಲ.
ನಮ್ಮ ಜೀವನದ ಪರಮ ಗುರಿ ಏನು ಎಂಬುದನ್ನು ಕಂಡುಕೊಂಡು ಅದರ ಸಾಧನೆಯ ಸಲುವಾಗಿ ಎಲ್ಲವನ್ನೂ ಬಿಟ್ಟುಬರುವ ಯೋಗಿಗಳು ನಮ್ಮ ನಡುವೆ ಇದ್ದು ಹೋಗಿದ್ದಾರೆ, ಈಗಲೂ ಇದ್ದಾರೆ. ಅವರ ಬಗೆಗಿನ ಮಾತು ಇದಲ್ಲ. ಆದರೆ ಒಂದಷ್ಟು ಸಮಯದ ಆಕರ್ಷಣೆಗೆ ಬಲಿಯಾಗಿ ಇದನ್ನೇ ಬದುಕು ಮಾಡಿಕೊಳ್ಳುವುದು ಎಷ್ಟು ಸರಿ ಎಂಬುದಕ್ಕಂತೂ ಯಾರ ಬಳಿಯೂ ಉತ್ತರವಿಲ್ಲ. ಒಂದು ಕೇಂದ್ರದಲ್ಲಿ ಇಂತಹ ನೂರು ಜನರಿದ್ದಾರೆ ಎಂದಿಟ್ಟುಕೊಳ್ಳೋಣ. ಇಂತಹ ಅದೆಷ್ಟು ಕೇಂದ್ರಗಳು ನಮ್ಮ ನಡುವೆ ಇವೆಯಲ್ಲಾ..ಅದೆನ್ನೆಲ್ಲಾ ಸೇರಿಸಿದರೆ ಸಾವಿರಾರು ಜನರಾಗುತ್ತಾರೆ.
ಹೋಗಲಿ ಎಂದರೆ ಇಷ್ಟು ಜನರು ಸೇರಿ ಯಾವುದಾದರೂ ಲೋಕೋದ್ಧಾರದ ಕಾರ್ಯದಲ್ಲಿ ತೊಡಗಿ ದ್ದಾರೆಯೇ? ಇಲ್ಲ. ಆಯಾ ಕೇಂದ್ರಗಳ ಸ್ವಹಿತಾಸಕ್ತಿಯ ಅಭಿವೃದ್ಧಿ ಯಲ್ಲಿ ತೊಡಗಿದ್ದಾರೆ ಎಂಬುದು ನಗ್ನ ಸತ್ಯ. ಇಷ್ಟೆಲ್ಲಾ ಯೋಚಿಸುವ ವಿವೇಕ ಇದ್ದರೂ ನಮ್ಮ ಯುವಜನತೆಗೆ ಇದು ಅರ್ಥವಾಗುತ್ತಿಲ್ಲ ವೇಕೆ? ಅಧ್ಯಾತ್ಮ ಬದುಕಿನ ಭಾಗವಾಗಿರಬೇಕೇ ಹೊರತು ಅಧ್ಯಾತ್ಮ, ಯೋಗ, ಧ್ಯಾನದ ಹೆಸರಲ್ಲಿ ಲೋಕೋದ್ಧಾರದ ಮುಖವಾಡ ಹಾಕಿರುವ ಇಂತಹ ಕೇಂದ್ರಗಳಿಗೆ ತಮ್ಮ ಜೀವನ ವನ್ನೇ ತಾವು ಅರ್ಪಿಸಿಕೊಳ್ಳಬಾರದು ಎಂಬುದನ್ನು ಅವರವರೇ ತಿಳಿಯಬೇಕಿದೆ. ನಮ್ಮ ಜವಾಬ್ದಾರಿಗಳನ್ನು ನಾವು ನಿರ್ವಹಿಸಬೇಕೇ ಹೊರತು ತಪ್ಪಿಸಿ ಕೊಂಡು ತಲೆಮರೆಸಿಕೊಳ್ಳುವುದರಿಂದ ಯಾವುದಕ್ಕೂ ಪರಿಹಾರ ಸಿಗದು ಎಂಬ ಸಂಗತಿ ಎಲ್ಲರಿಗೂ ಮನದಟ್ಟಾಗ ಬೇಕಿದೆ. ಮಾರ್ಕೆಟಿಂಗ್ ಹಾಗೂ ಜ್ಞಾನೋದಯದ ನಡುವಿನ ವ್ಯತ್ಯಾಸವೇ ಗೊತ್ತಿಲ್ಲವಾದರೆ ನಾವುಗಳು ಎಷ್ಟು ಕಲಿತು ಏನು ಪ್ರಯೋಜನ?
” ಮಾರ್ಕೆಟಿಂಗ್ ಹಾಗೂ ಜ್ಞಾನೋದಯದ ನಡುವಿನ ವ್ಯತ್ಯಾಸವೇ ಗೊತ್ತಿಲ್ಲವಾದರೆ ನಾವುಗಳು ಎಷ್ಟು ಕಲಿತು ಏನು ಪ್ರಯೋಜನ?”




