Mysore
26
broken clouds

Social Media

ಭಾನುವಾರ, 06 ಸೆಪ್ಟೆಂಬರ್ 2026
Light
Dark

ಬಹುತ್ವ ಭಾರತ ನೀತಿಗೆ ಮೋಹನ್ ಭಾಗವತ್ ಬದ್ಧರೇ?

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ 

ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆರಂಭವಾಗಿ ನೂರು ವರ್ಷ ತುಂಬಿದ ಸ್ಮರಣಾರ್ಥವಾಗಿ ಸಂಘದ ಉದ್ದೇಶ ಮತ್ತು ಅದರ ಗೊತ್ತು ಗುರಿಯನ್ನು ವಿಶ್ವಕ್ಕೆ ಪರಿಚಯಿಸಲು ಮತ್ತು ವಿದೇಶದಲ್ಲಿ ನೆಲೆಸಿರುವ ತನ್ನ ಶಿಷ್ಯ ಬಳಗದಲ್ಲಿ ಆಂತರಿಕವಾಗಿರುವ ಸನಾತನ ಧರ್ಮವನ್ನು ಜಗೃತಗೊಳಿಸಲು ಸಂಘದ ಸರಸಂಚಾಲಕ ಮೋಹನ್ ಭಾಗವತ್ ಎರಡು ವಾರಗಳಿಂದ ಮೂರು ಪ್ರಮುಖ ರಾಷ್ಟ್ರಗಳ ಪ್ರವಾಸ ಮಾಡುತ್ತಿದ್ದಾರೆ.

ಕೆನಡಾದ ಟೊರೋಂಟೋ, ಅಮೆರಿಕದ ನ್ಯೂಯಾರ್ಕ್‌ನ ಮೆಡಿಸನ್ ಸ್ವ್ಕೇರ್ ಗಾರ್ಡನ್ ಸಭೆ ಮುಗಿಸಿ ಈಗ ಬ್ರಿಟನ್ ನ ಲಂಡನ್ ನಲ್ಲಿ ಭಾರತೀಯ ಸಂಜತರು ಮತ್ತು ವಿದೇಶಿ ಮಂದಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಟೊರೋಂಟೊದಲ್ಲಿನ ‘ಹಿಂದೂ ವಿಶ್ವ ಬಂಧು’ ವಿಷಯ ಯಾವುದೇ ವಿವಾದಗಳಿಲ್ಲದೆ ಮುಗಿಯಿತು. ಆದರೆ ಆಗಸ್ಟ್ ೨೯ರಂದು ಅನೇಕ ಸಂಘ ಸಂಸ್ಥೆಗಳು ಅವುಗಳಲ್ಲಿ ಕೆಲವು ಭಾರತೀಯರನ್ನೊಳಗೊಂಡ ಸಂಘಗಳು ಮತ್ತು ನ್ಯೂಯಾರ್ಕ್ ಮಹಾನಗರದ ಮೇಯರ್ ವಿರೋಧದ ನಡುವೆ ನಡೆದ ಸಭೆ ಈಗ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ನ್ಯೂಯಾರ್ಕ್‌ನಲ್ಲಿ ಅವರು ಯೂನಿವರ್ಸಲ್ ಒನ್ನೆಸ್ಸ್ ( ವಿಶ್ವದ ಮಂದಿಯೆಲ್ಲ ಒಂದೇ) ವಿಷಯ ಕುರಿತು ವಿವಿಧ ಧರ್ಮಗಳ ಸಂತರನ್ನು ಒಂದೇ ವೇದಿಕೆಯಲ್ಲಿ ಕರೆದು ಭಾಗವತರು ಮಾಡಿದ ಭಾಷಣ ಈಗ ದೇಶ- ವಿದೇಶಗಳಲ್ಲಿ ವಿವಾದ ಮತ್ತು ಅವರ ದ್ವಂದ್ವ ನಡೆಯನ್ನು ಪ್ರದರ್ಶಿಸಿದೆ ಎಂದು ಹಲವಾರು ವೇದಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ದಿನ ಬೆಳಗಾದರೆ ಚರ್ಚೆಯಾಗುತ್ತಿದೆ.

ಈ ಮಧ್ಯೆ ಈ ಸಮಾವೇಶದಲ್ಲಿ ಭಾಗವಹಿಸಿದ್ದ ಬೇರೆ ಧರ್ಮ ಗುರುಗಳು ಈ ಸಮಾವೇಶದ ನಿಜವಾದ ಉದ್ದೇಶ ಹಿಂದುತ್ವವನ್ನು ಪ್ರತಿಪಾದಿಸುವುದು. ಈ ಸತ್ಯಸಂಗತಿಯನ್ನು ಮುಚ್ಚಿಟ್ಟು ವಿಶ್ವದ ಜನರೆಲ್ಲ ಒಂದು ಎನ್ನುವ ಸಂದೇಶವನ್ನು ಸಾರುವ ಉದ್ದೇಶ ಈ ಸಮಾವೇಶದ್ದು ಎಂದು ತಮಗೆ ವ್ಯವಸ್ಥಾಪಕರು ತಿಳಿಸಿಲ್ಲದ ಕಾರಣ ನಾವು ಭಾಗವಹಿಸಬೇಕಾಯಿತು ಎಂದು ಅಪಸ್ವರ ಎತ್ತಿದ್ದಾರೆ.

ಆರ್‌ಎಸ್‌ಎಸ್ ಮೂಲ ಸಿದ್ಧಾಂತ ಸನಾತನ ಧರ್ಮ ರಕ್ಷಣೆ. ಇದರ ಹೆಸರಿನಲ್ಲಿ ರಾಷ್ಟ್ರಪ್ರೇಮ, ಹಿಂದೂ ಸಂಘಟನೆ, ಹಿಂದೂ ಸಮಾಜವನ್ನು ಒಗ್ಗೂಡಿಸುವುದು. ಒಂದು ಸಂಘಟನೆ ತಾನು ನಂಬಿದ ತತ್ವವನ್ನು ಪ್ರಚಾರ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಅಲಿಖಿತವಾಗಿ ಮುಸ್ಲಿಮರು, ಕ್ರೈಸ್ತರನ್ನು ದ್ವೇಷಿಸುವ ಮತ್ತು ದಲಿತ ವರ್ಗದ ಬಗೆಗೆ ಹಿಂದಿನಿಂದಲೂ ಆಚರಿಸಿಕೊಂಡು ಬಂದ ತಾರತಮ್ಯ, ಅಸ್ಪೃಶ್ಯತೆ ಮತ್ತು ಜತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯವನ್ನು ಸನಾತನ ಸಿದ್ಧಾಂತದಲ್ಲಿ ನಂಬಿಕೆ ಇರುವ ಮತ್ತು ಅದೇ ಶ್ರೇಷ್ಠ ಎಂದು ನಂಬಿಸುವ ಕಾರ್ಯ ನಿರಂತರವಾಗಿ ನಡೆದು ಬರುತ್ತಿರುವುದು ರಹಸ್ಯವಾಗೇನೂ ಉಳಿದಿಲ್ಲ. ದೇಶದಾದ್ಯಂತ ಈ ಸಿದ್ಧಾಂತವನ್ನೇ ಪ್ರಚಾರ ಮಾಡುತ್ತಾ ಈ ವಿಚಾರವನ್ನೇ ಹಿಂದೂಗಳ ತಲೆ ತುಂಬುತ್ತಾ ಬಂದಿರುವುದು ಗೊತ್ತಿರುವ ಸಂಗತಿ. ಆದರೆ ಅಚ್ಚರಿ ಎನ್ನುವಂತೆ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಅಂತರ ರಾಷ್ಟ್ರೀಯ ಮಂದಿಯ ಗಮನ ಸೆಳೆಯಲು ತಮ್ಮ ಸಿದ್ಧಾಂತ ಮತ್ತು ನಂಬಿಕೆಗೆ ಹೊರತಾಗಿ ಮಾತನಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಅವರು ಹೇಳಿದ್ದು, ನಿಜವಾದ ಹಿಂದೂ ಸಹಬಾಳ್ವೆಯಲ್ಲಿ ನಂಬಿಕೆ ಉಳ್ಳವನಾಗಿರುತ್ತಾನೆ. ಭಾರತದಲ್ಲಿ ಒಬ್ಬ ಮುಸ್ಲಿಮರೂ ಇರಬಾರದೆಂದು ಯೋಚಿಸುವ ಯಾರೇ ಆಗಿರಲಿ ಅವನು ಹಿಂದೂ ಆಗಿರಲಾರ. ಭಾರತವುವೈವಿಧ್ಯತೆಯಲ್ಲಿ ಏಕತೆ ಎಂಬ ನಂಬಿಕೆ ಇಟ್ಟುಕೊಂಡಿರುವ ದೇಶ. ಬಹುತ್ವದಲ್ಲಿ ಅಚಲವಾದ ನಂಬಿಕೆ ಇರುವ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಯೂ ಸಮಾನತೆ ಮತ್ತು ಗೌರವದಿಂದ ಬದುಕುವ ಜೀವನ ವಿಧಾನವನ್ನು ರೂಢಿಸಿಕೊಳ್ಳಬೇಕು. ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ತತ್ವದಲ್ಲಿ ಆರ್‌ಎಸ್‌ಎಸ್‌ಗೆ ನಂಬಿಕೆ ಇದೆ ಎಂದು ಜಗತ್ತಿನ ಇತರೆ ದೇಶಗಳ ಜನರಲ್ಲಿ ಬಹುತ್ವ ಭಾರತದ ಬಗೆಗೆ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅವರ ಒಟ್ಟಾರೆ ಭಾಷಣದಲ್ಲಿ ವಿವಾದ ಮತ್ತು ಚರ್ಚೆಯ ಕೇಂದ್ರ ಬಿಂದುವಾಗಿರುವುದು ಭಾರತದಲ್ಲಿ ಒಬ್ಬ ಮುಸ್ಲಿಮರೂ ಇರಬಾರದೆಂದು ಯೋಚಿಸುವ ಯಾರೇ ಆಗಿರಲಿ ಅವನು ಹಿಂದೂ ಆಗಿರಲಾರ ಎನ್ನುವ ನುಡಿಮುತ್ತು. ಮೋಹನ್ ಭಾಗವತ್ ಅವರು ವಿಶ್ವದ ವೇದಿಕೆಯಲ್ಲಿ ಹೇಳಿರುವ ಈ ಮಾತನ್ನು ಭಾರತದಕೆ ಹೇಳುತ್ತಿಲ್ಲ? ಈ ಮಾತನ್ನು ಅವರಾಗಲಿ ಅವರ ಸಂಘದ ಕಾರ್ಯಕರ್ತರಾಗಲಿ ಯಾಕೆ ಮಾತನಾಡುವುದಿಲ್ಲ? ಸಂಘದ ಸ್ವಯಂ ಸೇವಕರಾಗಿ ರಾಜಕೀಯವಾಗಿ ಈಗ ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಸಚಿವರಾಗಿರುವ ಮತ್ತು ಸಂಸತ್ ಹಾಗೂ ವಿಧಾನ ಮಂಡಲಗಳಲ್ಲಿ ಸದಸ್ಯರಾಗಿರುವವರಾರೂ ಈ ಮಾತನ್ನು ಇದುವರೆಗೂ ಏಕೆ ಮಾತನಾಡುತ್ತಿಲ್ಲ? ತಮ್ಮ ಆದೇಶದಂತೆ ನಡೆಯುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅವರ ಸಚಿವರು ಮತ್ತು ಸಂಸದರಿಗೆ ಬಹುತ್ವ ಭಾರತದ ಸಂದೇಶವನ್ನು ಪಾಲಿಸುವಂತೆ ಸೂಚಿಸಿ ಎಂದು ಮೋಹನ್ ಭಾಗವತರಿಗೆ ಹಲವರು ಒತ್ತಾಯಿಸುತ್ತಿದ್ದಾರೆ.

ದಿನ ಬೆಳಗಾದರೆ ಮುಸ್ಲಿಮರನ್ನು ದ್ವೇಷಿಸುವುದು ನಿರಂತರವಾಗಿ ನಡೆದಿದೆ. ಬಹುತ್ವ ಭಾರತ ಸಿದ್ಧಾಂತದಲ್ಲಿ ನಂಬಿಕೆ ಇದ್ದಿದ್ದರೆ ತನ್ನ ಶಕ್ತಿಯಿಂದ ರಾಜಕೀಯವಾಗಿ ಬೆಳೆದಿರುವ ಬಿಜೆಪಿ ನಾಯಕರಿಂದ ಹಿಡಿದು ತಳಮಟ್ಟದ ಕಾರ್ಯಕರ್ತರವರೆಗೆ ಏಕೆ ಅನ್ಯ ಧರ್ಮದವನ್ನು ಹೊರಗಿನವರು, ಪಾಕಿಸ್ತಾನಕ್ಕೆ ಒಲವಿರುವವರು ಎಂದು ಅನುಮಾನ ಪಡುತ್ತಾ ನಿತ್ಯವೂ ಒಂದಲ್ಲ ಒಂದು ಕಡೆ ಕೋಮು ದ್ವೇಷವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವತರನ್ನು ಪ್ರಶ್ನಿಸುತ್ತಿದ್ದಾರೆ.

ಸುಪ್ರೀಂ ಕೋರ್ಟಿನ ಹೆಸರಾಂತ ಹಿರಿಯ ನ್ಯಾಯವಾದಿ ಮತ್ತು ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಒಂದು ಗಂಟೆ ಕಾಲ ಪತ್ರಿಕಾ ಸಂದರ್ಶನ ಮಾಡಿ, ಮೋಹನ್ ಭಾಗವತ್ ಅವರದ್ದು ದ್ವಂದ್ವ ನಡೆ. ನ್ಯೂಯಾರ್ಕ್‌ನಲ್ಲಿ ಹೇಳಿರುವ ಮಾತುಗಳನ್ನು ಭಾರತದಕೆ ಹೇಳುವುದಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಹಿಂದೂ ನಾವೆಲ್ಲ ಒಂದು ಎಂದು ಬಾಯಿಮಾತಿನಲ್ಲಿ ಹೇಳುವ ಮಂದಿ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಗವನ್ನು ಗೋಮೂತ್ರದಿಂದ ತೊಳೆದು ಹೋಮ ಮಾಡಿ ಅಸ್ಪೃಶ್ಯತೆ ಆಚರಿಸಿದ ಉತ್ತರಾಖಂಡದಲ್ಲಿನ ಕಟ್ಟಾ ಸನಾತನವಾದಿಗಳ ವಿರುದ್ಧ ಸ್ವತಃ ಖರ್ಗೆ ಅವರೇ ಈ ಪ್ರಕರಣದ ಬಗೆಗೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಭಾರತ ಏಕತೆಯಲ್ಲಿ ವೈವಿಧ್ಯತೆ ಹೊಂದಿರುವ ಎಲ್ಲರೂ ಸಮಾನರು ಎಂದು ಹೇಳುತ್ತಲೇ ವಾಸ್ತವವಾಗಿ ಜತಿ ತಾರತಮ್ಯ ಮಾಡುವ ನಾಯಕರ ಮಾತಿನ ಬಗೆಗೆ ಇರುವ ಅನುಮಾನ ಮತ್ತಷ್ಟು ಗಟ್ಟಿ ಮಾಡುತ್ತಿದೆ.

ಈ ಮಧ್ಯೆ ಮುಸ್ಲಿಮರು, ಕ್ರೈಸ್ತರು ಮತ್ತು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ತಾರತಮ್ಯ ನೀತಿ ಬಗೆಗಿನ ವರದಿಯ ವಿಷಯವಾಗಿ ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನೀತಿಯ ವಿಮೋಚನಾ ಸಮಿತಿಯು ( ಸಿಇಆರ್‌ಡಿ) ಭಾರತದ ಸಿಬ್ಬಂದಿಯನ್ನು ಕರೆಸಿ ತನ್ನ ತಾರತಮ್ಯ ನೀತಿಯ ಆಚರಣೆ ಬಗೆಗೆ ವಿವರಣೆ ಪಡೆದಿರುವುದು ಗಮನಾರ್ಹ. ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಆಂತರಿಕವಾಗಿ ತಾನು ಆಚರಿಸುತ್ತಾ ಬಂದಿರುವ ನಡೆ ನುಡಿಯಲ್ಲಿ ವಾಸ್ತವವಾಗಿರುವ ಸಾಮಾಜಿಕ ತಾರತಮ್ಯ ನೀತಿಯ ಬಗೆಗೆ ತನ್ನ ನಿಲುವನ್ನು ಬದಲಿಸಿಕೊಳ್ಳುವುದು ಅನಿವಾರ್ಯವಾಗಲಿದೆ. ಆರ್ ಎಸ್ ಎಸ್ ನಾಯಕ ಮೋಹನ್ ಭಾಗವತ್ ತಮ್ಮ ವಿದೇಶ ಪ್ರವಾಸದ ಕೊನೆಯ ಲಂಡನ್ ಭಾಷಣ ಮುಗಿಸಿ ಬಂದ ಮೇಲೆ ತಮ್ಮ ಉದಾರ ನಿಲುವಿನ ವಿಷಯವಾಗಿ ನೀಡುವ ಸ್ಪಷ್ಟನೆ ಕೇವಲ ಹಿಂದುತ್ವವನ್ನೇ ಮೈಗೂಡಿಸಿಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಯಾವ ದಿಕ್ಸೂಚಿ ನೀಡಲಿದೆ ಎನ್ನುವುದು ಕುತೂಹಲಕಾರಿ ಸಂಗತಿ.

” ಹಿಂದೂ ನಾವೆಲ್ಲ ಒಂದು ಎಂದು ಬಾಯಿಮಾತಿನಲ್ಲಿ ಹೇಳುವ ಮಂದಿ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ ಮಾಡಿದ ಜಗವನ್ನು ಗೋಮೂತ್ರದಿಂದ ತೊಳೆದು ಹೋಮ ಮಾಡಿ ಅಸ್ಪೃಶ್ಯತೆ ಆಚರಿಸಿದ ಉತ್ತರಾಖಂಡದಲ್ಲಿನ ಕಟ್ಟಾ ಸನಾತನವಾದಿಗಳ ವಿರುದ್ಧ ಸ್ವತಃ ಖರ್ಗೆ ಅವರೇ ಈ ಪ್ರಕರಣದ ಬಗೆಗೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಭಾರತ ಏಕತೆಯಲ್ಲಿ ವೈವಿಧ್ಯತೆ ಹೊಂದಿರುವ ಎಲ್ಲರೂ ಸಮಾನರು ಎಂದು ಹೇಳುತ್ತಲೇ ವಾಸ್ತವವಾಗಿ ಜತಿ ತಾರತಮ್ಯ ಮಾಡುವ ನಾಯಕರ ಮಾತಿನ ಬಗೆಗೆ ಇರುವ ಅನುಮಾನ ಮತ್ತಷ್ಟು ಗಟ್ಟಿ ಮಾಡುತ್ತಿದೆ.”

 

 

Tags:
error: Content is protected !!