Mysore
21
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ದೇವರ ನಾಡು ಕೇರಳದಲ್ಲಿ ಜೆನ್ ಝೀಗಳ ಸಾಮರಸ್ಯ ಮ್ಯಾಜಿಕ್

ಅಕ್ಷತಾ

ಆಗಸ್ಟ್ ೨೧, ಕೇರಳದ ಕೋಝಿಕ್ಕೋಡ್‌ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಓಣಂ ಹಬ್ಬದ ಆಚರಣೆಗೆ ಅಣಿಯಾಗುತ್ತಿದ್ದರು. ಅಂದಿನ ರಾತ್ರಿ ಓಣಂ ಹಬ್ಬ ಆಚರಿಸಿಕೊಳ್ಳುವ ಸಡಗರದಲ್ಲಿತ್ತು ಯುವಸಮೂಹ. ಆದರೆ ಶಾಲೆಯ ಆಡಳಿತ ಮಂಡಳಿ ಏಕಾಏಕಿ ‘ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಓಣಂ ಸಾಂಪ್ರದಾಯಿಕ ಉಡುಗೆ ಧರಿಸಿ ಶಾಲಾ ಆವರಣ ಪ್ರವೇಶಿಸುವಂತಿಲ್ಲ’ ಎಂಬ ಆದೇಶ ಹೊರಡಿಸಿತು. ಹಿಂದೆಂದೂ ಇರದ ಈ ನಿಷೇಧ ವಿದ್ಯಾರ್ಥಿ – ಪೋಷಕರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಆ ಕ್ಷಣದಿಂದಲೇ ಇದಕ್ಕೆ ತೀವ್ರ ವಿರೋಧಗಳೂ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಗಳೂ ಆರಂಭವಾಗುತ್ತವೆ. ಪರಿಸ್ಥಿತಿಯ ಗಂಭೀರತೆ ಮನಗಂಡ ಶಾಲಾ ಆಡಳಿತ ನಿಷೇಧ ಹೊರಿಸಿದಷ್ಟೇ ವೇಗವಾಗಿ ನಿಷೇಧಾಜ್ಞೆಯನ್ನೂ ಹಿಂಪಡೆಯುತ್ತದೆ.

ಶಾಲೆಯ ಈ ‘ಓಣಂ ಪ್ರಹಸನ’ ಅಲ್ಲಿಗೇ ಮುಗಿದರೂ ಘಟನೆ ಒಂದು ಹೊಸ ಚರ್ಚೆಗೆ ಕಾರಣವಾಗುತ್ತದೆ. ಓಣಂ ಕೇರಳದಲ್ಲಿ ಸರ್ವಧರ್ಮೀಯರೂ ಸೇರಿ ಆಚರಿಸುವ ಹಬ್ಬವಾಗಿರುವುದರಿಂದ ತೊಡುಗೆಗೆ ಏಕೆ ಹೊಸ ನಿಯಮ ಎಂಬುದು ಒಂದು ಕಡೆಯಿಂದ ಕೇಳಿ ಬಂದ ಪ್ರಶ್ನೆಯಾದರೆ, ಧರ್ಮದಲ್ಲಿ ಇಂತಹ ಆಚರಣೆಗಳಿಗೆ, ನೃತ್ಯಕ್ಕೆ ಅವಕಾಶ ಇಲ್ಲ ಎಂಬುದು ಇಸ್ಲಾಮಿಕ್ ಮೂಲಭೂತವಾದಿಗಳ ಕೆಂಗಣ್ಣಿಗೆ ಕಾರಣ. ಇದೇ ಕಾರಣಕ್ಕೆ ಓಣಂ ಹಬ್ಬ ಆರಂಭದ ನಂತರದ ಪ್ರತೀ ನಡೆಯೂ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಯಿತು.

ಕೇರಳಿಗರ ಸಾಂಪ್ರದಾಯಿಕ ಹಬ್ಬವಾದ ಓಣಂ ಜಾತಿ-ಧರ್ಮ-ಮತಗಳಾಚೆಗಿನ ಹಬ್ಬವಾದರೂ ಇತ್ತೀಚಿನ ವರ್ಷಗಳಲ್ಲಿ ಹಬ್ಬವನ್ನು ನೋಡುವ ರೀತಿ ಬದಲಾಗಿದೆ. ೨೦೨೫ರಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಓಣಂ ಸಾಂಪ್ರದಾಯಿಕ ನೃತ್ಯ ಮಾಡುವ ವಿಡಿಯೋ ಮತ್ತೆ ಈ ಸಲವೂ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಒಂದು ಧರ್ಮಕ್ಕೆ ಮೀಸಲಾದ ಹಬ್ಬದಂತೆ ಪ್ರತಿಬಿಂಬಿಸಿ ಆಚರಣೆಗೆ ನಿರ್ದಿಷ್ಟ ಕಟ್ಟುಪಾಡುಗಳನ್ನು ಹಾಕಲು ಹಿಂದೂ – ಮುಸ್ಲಿಂ ಇತ್ತಂಡಗಳು ತೊಡಗಿದವು. ಇದಕ್ಕೆ ಪುಷ್ಟಿ ಕೊಡುವಂತೆ ಕೆಲವು ಇಸ್ಲಾಮಿಕ್ ಮೂಲಭೂತವಾದಿಗಳು ‘ಮುಸ್ಲಿಂ ಸಮುದಾಯದವರು ಓಣಂ ಆಚರಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂಬ ಫತ್ವಾ ಹೊರಡಿಸಿದ್ದು ಇನ್ನಷ್ಟು ವಾದ ವಿವಾದಗಳಿಗೆ ಕಾರಣವಾಯಿತು. ಓಣಂ ಸಾಂಪ್ರದಾಯಿಕ ನೃತ್ಯದಲ್ಲಿ ತೊಡಗಿದ್ದ ಯುವತಿಯರು ಹಿಜಾಬ್ ಧರಿಸಿದ್ದರು, ಹಿಜಾಬ್ ಧರಿಸಿ ನೃತ್ಯ ಮಾಡುವುದು ಸಂಪ್ರದಾಯಕ್ಕೆ ವಿರುದ್ಧ ಎಂಬ ವಿರೋಧ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತು. ಇದು ಇನ್ನೊಂದು ಧರ್ಮ ಸಂಘರ್ಷಕ್ಕೆ ಕಾರಣವಾಯಿತು. ಒಂದಷ್ಟು ಹಸಿಬಿಸಿ ಚರ್ಚೆಯಲ್ಲಿದ್ದರೂ ಓಣಂ ಮತ್ತು ಈದ್ ಮಿಲಾದ್ ಜೊತೆಯಾಗಿ ಬಂದು ಹಬ್ಬಕ್ಕೆ ಮನುಷ್ಯ ತಾರತಮ್ಯ ಇಲ್ಲ ಎಂದು ತೋರಿಸಿಕೊಟ್ಟವು.

ಮಾವೇಲಿ (ಬಲಿ ಚಕ್ರವರ್ತಿ)ಯನ್ನು ಪೈಗಂಬರರ ಸಂದೇಶದೊಂದಿಗೆ ಬರಮಾಡಿಕೊಳ್ಳುವ ಸಂಭ್ರಮ ಕೇರಳಿಗರದ್ದು. ಆದರೆ, ಬೂದಿ ಮುಚ್ಚಿದ ಕೆಂಡದಂತಿದ್ದ ಓಣಂ ನೃತ್ಯ ವಿವಾದ ಮತ್ತೆ ಹೊಗೆಯಾಡಲು ಕಾರಣ ಈ ಸಲವೂ ಮುಸ್ಲಿಂ ಸಮುದಾಯದ ಹೆಣ್ಣುಮಗಳೊಬ್ಬಳು ಓಣಂ ಉಡುಗೆ ತೊಟ್ಟು ಹಿಜಾಬ್ ಧರಿಸಿ ಮಾಡಿದ ನೃತ್ಯ. ಮತ್ತೆ ಅದೇ ಹಳೆಯ ಆರೋಪ, ಪ್ರತ್ಯಾರೋಪಗಳ ಕಮೆಂಟುಗಳು, ವಿವಿಧ ಪ್ರತಿಕ್ರಿಯೆಗಳು. ಧಾರ್ಮಿಕ ಮೂಲಭೂತವಾದಿಗಳ ತೀವ್ರ ಖಂಡನೆ ಇನ್ನೆಲ್ಲಿಗೆ ತಲುಪುವುದೋ ಎಂದುಕೊಳ್ಳುವಷ್ಟರಲ್ಲಿ ಜೆನ್ ಝೀ ಎಂದು ಕರೆಯಿಸಿಕೊಳ್ಳುವ ಯುವಪೀಳಿಗೆ ಚಿಂತನೆಯ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿದರು. ‘ಇವೆಲ್ಲ ಸರಿ, ತಪ್ಪು… ಬೇಕು, ಬೇಡ… ಅಂತೆ ಕಂತೆಗಳ ಔಟ್ ಡೇಟೆಡ್ ಮ್ಯಾಟ್ರುಗಳು’ ಎಂದ ಜೆನ್ ಝೀ ಓಣಂ, ಈದ್ ಜೊತೆಯಾಗಿಯೇ ಆಚರಿಸಿ ಹಲವು ಬಾಯಿಗಳನ್ನು ಮುಚ್ಚಿಸಿದರು. ‘ಮುಸ್ಲಿಮರು ಓಣಂ ಆಚರಿಸಬಾರದು’ ಎಂದು ಕರೆ ಕೊಟ್ಟಿದ್ದ ಉಸ್ತಾದ್‌ರಿಗೆ ಯುವ ತಲೆಮಾರಿನ ಹೆಣ್ಣುಮಗಳೊಬ್ಬಳು ಅವರದ್ದೇ ಶೈಲಿಯಲ್ಲಿ ಕೊಟ್ಟ ಖಡಕ್ ಉತ್ತರ ಹೀಗಿತ್ತು.

‘ಉಸ್ತಾದರೇ…’ ಎಂದು ಮಾತು ಆರಂಭಿಸಿದ ಯುವತಿ ‘ಕೇರಳದ ಸಾಂಪ್ರದಾಯಿಕ ಹಬ್ಬ ಓಣಂ ಒಂದು ಆಚರಣೆಯಾಗಿರುವಾಗ ನಮ್ಮಂತಹವರು ಭಾಗವಹಿಸಬಾರದು ಎಂದು ಹೇಳುತ್ತಿದ್ದೀರಿ, ಇಷ್ಟೊಂದು ದ್ವೇಷವನ್ನು ನಿಮ್ಮ ತಲೆಯೊಳಗೆ ತುಂಬಿಕೊಂಡಿದ್ದೀರಿ ಎಂದು ನನಗೆ ಬೇಸರವಾಗುತ್ತದೆ ಉಸ್ತಾದರೇ, ಪೈಗಂಬರರ ಶಾಂತಿ, ಸಹಬಾಳ್ವೆ, ಸೌಹಾರ್ದದ ಮಂತ್ರವನ್ನು ಮತ್ತೊಮ್ಮೆ ಓದಬೇಕಾಗಿದೆ…’ ಎಂದು ಹೇಳುವುದರ ಜೊತೆಗೆ ಪ್ರಸ್ತುತದ ವಿವಾದಾತ್ಮಕ ಘಟನೆಗಳ ಕುರಿತುನಿರಂತರವಾಗಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಗಮನಸೆಳೆಯುತ್ತಾಳೆ. ಉಸ್ತಾದ್ ಅವರ ವಿಡಿಯೋಗೆ ನೀಡಿದ ಪ್ರತಿ ಕ್ರಿಯೆಯ ಹಿನ್ನೆಲೆಯಲ್ಲಿ ಆಕೆಯ ಪರ-ವಿರೋಧ ಹಲವು ಇದ್ದರೂ ಕೇರ್ ಮಾಡದ ಯುವತಿ ತನಗನ್ನಿಸಿದ್ದನ್ನು ಹೇಳುತ್ತಲೇ ಬಂದಿರುವುದು ಜೆನ್ ಝೀ ದಿಟ್ಟತನಕ್ಕೆ ಸಾಕ್ಷಿಯಾಗಿದೆ. ಬಹುಪಾಲು ಮಂದಿ ಆಕೆಯನ್ನು ಬೆಂಬ ಲಿಸಿರುವುದು ಯುವಪೀಳಿಗೆಯ ಚಿಂತನೆಗೆ ಸಿಕ್ಕ ಯಶಸ್ಸೆಂದರೂ ತಪ್ಪಲ್ಲ! ‘ಹಿಜಾಬ್ ಧರಿಸಿ ನೃತ್ಯ ಮಾಡುವುದು ಧರ್ಮ ವಿರೋಧ’ ಎಂದು ಬಹುವರ್ಷಗಳಿಂದ ಮೂಲಭೂತವಾದಿಗಳು ಹೇಳಿಕೊಂಡು ಬಂದಿದ್ದ ಸಾಲನ್ನೇ ನೃತ್ಯದ ಮೂಲಕ ಯುವಜನತೆ ಟ್ರೋಲ್ ಮಾಡಿದ್ದಾರೆ. ಹಬ್ಬ ಎಂಬುದು ಧರ್ಮ ಸಾಮರಸ್ಯದ ಆಚರಣೆಯೆಂದು ಹೇಳುವಲ್ಲಿಗೆ ತಲೆಮಾರುಗಳಿಂದ ಬಂದ ಪರಂಪರಾಗತ ಆಚರಣೆ ಸಿದ್ಧ ನಿಷಿದ್ಧಗಳಿಗೆ ತೆರೆ ಎಳೆಯುವ ಪ್ರಯತ್ನ ಜೆನ್ ಝೀಗಳದ್ದು! ಆದಾಗ್ಯೂ, ಚರ್ಚೆಗಳು ಅಂತ್ಯ ಕಂಡಿಲ್ಲ. ಮೂಲಭೂತವಾದಿಗಳು ಮತ್ತು ಧರ್ಮಬೋಧಕರ ಹಸಿಬಿಸಿ ವಾದ ವಿವಾದಗಳ ನಡುವೆಯೇ ಸಮನ್ವಯಕಾರ ಯುವಪೀಳಿಗೆಗೆ ಬಲ ತುಂಬಿಸಲು ಹಬ್ಬಗಳು ಕೈ ಜೋಡಿಸಿವೆ! ಹೊರಗಿನ ಕುತರ್ಕಗಳು ಹಲವಿದ್ದರೂ ಕೇರಳಿಗರು ಮಾತ್ರ ‘ಡೋಂಟ್ ಕೇರ್’ ಮನಸ್ಥಿತಿಯನ್ನು ಹೊಂದಿರುವ ವಿಶಾಲ ಪರಿಕಲ್ಪನೆಯ ಪುಟ್ಟ ನಾಡಿನ ಮಂದಿ.

ಮೂಲಭೂತವಾದಿಗಳ ಸಾಕಷ್ಟು ಚರ್ಚೆಗಳ ಮಧ್ಯೆ ಕೇರಳಿಗರು ಓಣಂ ಮತ್ತು ಈದ್ ಹಬ್ಬದಾಚರಣೆಯನ್ನು ‘ಇದು ನನ್ನ ಕೇರಳದ ನೈಜ ಕತೆ’ ಎಂದು ಸಮಾನಮನಸ್ಕರಾಗಿ ಹಂಚಿಕೊಳ್ಳುತ್ತಿದ್ದಾರೆ. ಈದ್ ಮೆರವಣಿಗೆಯಲ್ಲಿ ಓಣಂ ಹಬ್ಬದ ಪಾನಕವೂ ಮಾವೇಲಿಯ ಸ್ವಾಗತಕ್ಕೆ ಈದ್ ಮೆರವಣಿಗೆಯೂ ಕೇರಳದ ಬೀದಿ ಬೀದಿಗಳಲ್ಲಿ ಸಾಗಿದೆ. ದೇವರ ನಾಡು ಕೇರಳದಲ್ಲಿ ಓಣಂ ಸಾಧ್ಯ(ಭೋಜನ)ವೂ ಈದ್ ಹಬ್ಬದೂಟವೂ ಜೊತೆಯಾಗಿ ಕಳೆಗಟ್ಟಿದೆ. ಆದರೆ ಕೇರಳದಿಂದಾಚೆ ನಿಂತವರಿಗೆ ಕೇರಳ ಎಂದರೆ…? ಇದಕ್ಕೆ ಉತ್ತರ ದೇವರ ನಾಡಿನೊಳಗಿನ ಬದುಕು ಮತ್ತು ಬದುಕು ಕಟ್ಟಿಕೊಂಡವರ ನೋಟದಲ್ಲಿ ನೋಡಲೇಬೇಕಾದ ಕೂಡಿಬಾಳುವ ದಿನಚರಿ!

” ‘ಹಿಜಾಬ್ ಧರಿಸಿ ನೃತ್ಯ ಮಾಡುವುದು ಧರ್ಮ ವಿರೋಧ’ ಎಂದು ಬಹುವರ್ಷಗಳಿಂದ ಮೂಲಭೂತವಾದಿಗಳು ಹೇಳಿಕೊಂಡು ಬಂದಿದ್ದ ಸಾಲನ್ನೇ ನೃತ್ಯದ ಮೂಲಕ ಯುವಜನತೆ ಟ್ರೋಲ್ ಮಾಡಿದ್ದಾರೆ. ಹಬ್ಬ ಎಂಬುದು ಧರ್ಮ ಸಾಮರಸ್ಯದ ಆಚರಣೆಯೆಂದು ಹೇಳುವಲ್ಲಿಗ ತಲೆಮಾರುಗಳಿಂದ ಬಂದ ಪರಂಪರಾಗತ ಆಚರಣೆ ಸಿದ್ಧ ನಿಷಿದ್ಧಗಳಿಗೆ ಜೆನ್ ಝೀಗಳು ಸವಾಲು ಹಾಕಿದ್ದಾರೆ. ”

 

 

Tags:
error: Content is protected !!