ಹಿಂದೊಂದು ಕಾಲವಿತ್ತು. ಲೇಖಕರು ಬರೆದ ಬರಹಗಳು ಒಂದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು; ಇಲ್ಲವಾದಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಬೇಕಿತ್ತು. ಅವೆರಡೇ ಲೇಖಕರ ಬರಹಗಳು ಓದುಗರ ಕೈಸೇರಲು ಇದ್ದ ಮಾರ್ಗಗಳು.
ಕಾದಂಬರಿಗಳನ್ನು ಬಿಟ್ಟರೆ ಕತೆ, ಕಾವ್ಯ, ಬಿಡಿಬರಹ, ಪ್ರಬಂಧಗಳೆಲ್ಲ ಸಾಕಷ್ಟು ಇದ್ದಾಗ, ಅವುಗಳನ್ನು ಒಟ್ಟು ಮಾಡಿ ಪ್ರಕಟಿಸಬಹುದು. ಇಲ್ಲವಾದರೆ ಬಿಡಿ ಬರಹಗಳಿಗೆ ಜಾಗವಿದ್ದದ್ದು, ಪತ್ರಿಕೆಗಳಲ್ಲಿ ಮಾತ್ರವೆ. ಅದರಲ್ಲೂ ಮಾಸಿಕ, ಪಾಕ್ಷಿಕ ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗುವುದೆಂದರೆ ಬರಹಗಾರರಿಗೆ ಕೋಡು ಬಂದಂತೆ. ಹಾಗಾಗಿ, ತಮ್ಮ ತಮ್ಮ ಬರಹಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಆಯಾ ಪತ್ರಿಕೆಗಳು, ಆಯಾ ಬರಹಗಳು ಪ್ರಕಟಣೆಗೆ ಯೋಗ್ಯವೋ ಇಲ್ಲವೋ ಎಂಬುದನ್ನು ತಿಳಿಸುವವರೆಗೂ ಕಾಯುತ್ತಿದ್ದರು. ಹಿಂದೆಲ್ಲ ಎಲ್ಲ ಪತ್ರಿಕೆಗಳವರೂ ಬಂದ ಲೇಖನಗಳನ್ನು ಪ್ರಕಟಿಸುತ್ತಾರೋ ಅಥವಾ ಇಲ್ಲವೋ ಎಂಬ ಪ್ರತಿಕ್ರಿಯೆಯನ್ನು ಅಂಚೆ ಮೂಲಕ ತಿಳಿಸಲಾಗುತ್ತಿತ್ತು. ಪ್ರಕಟಿಸುತ್ತಾರೆ ಎಂದಾದರೆ ಸರಿ, ಇಲ್ಲ ಎಂಬ ಉತ್ತರಬಂದಾದಲ್ಲಿ ಕೆಲವರು ಅದೇ ಬರಹವನ್ನು ಬೇರೊಂದು ಪತ್ರಿಕೆಗೆ ಕಳುಹಿಸಿದರೆ, ಇನ್ನೂ ಕೆಲವರು, ತಮ್ಮ ಬರಹದ ಪ್ರಕಟಣೆಯ ಆಸೆಯನ್ನೇ ಬಿಟ್ಟು ಸುಮ್ಮನೇ ಆಗಿಬಿಡುತ್ತಿದ್ದರು. ಅದರಲ್ಲೂ ಜನಪ್ರಿಯ, ಮಾಸಿಕ/ದಿನಪತ್ರಿಕೆಗಳು ನಡೆಸುವ ಯುಗಾದಿ, ಸಂಕ್ರಾಂತಿ, ದೀಪಾವಳಿ ವಿಶೇಷ ಕಥಾ-ಕವನ ಸ್ಪರ್ಧೆಗಳಲ್ಲಿ ಭಾಗವಹಿಸುವುದೂ ಮತ್ತು ಅವುಗಳಲ್ಲಿ ಬಹುಮಾನ ಬರುವುದೆಲ್ಲಾ ಹೇಳತೀರದ ಸಂಭ್ರಮವನ್ನುಂಟು ಮಾಡುತ್ತಿದ್ದವು; ಬಹುಮಾನ ಗೆದ್ದ ಬರಹಗಾರರು ಜೀವನದಲ್ಲೇ ಗೆದ್ದರೆಂಬಂತೆ ಭಾವಿಸುತ್ತಿದ್ದ ದಿನಗಳವು!
ಆದರೆ ಇಲ್ಲೊಂದು ಸಮಸ್ಯೆಯಿತ್ತು. ಆಯಾ ಪತ್ರಿಕೆಗಳು ತಮ್ಮ ಪತ್ರಿಕೆಗಳ ದೃಷ್ಟಿಕೋನಕ್ಕೆ ಸರಿಹೊಂದುವಂಥ ಅಥವಾ ಆಯ್ಕೆ ಮಾಡುವವರಿಗೆ ಇಷ್ಟವಾಗುವಂಥ ಬರಹಗಳನ್ನು ಮಾತ್ರವೇ ಪ್ರಕಟಿಸುತ್ತಿದ್ದುದು ಒಂದೆಡೆಯಾದರೇ, ಬರವಣಿಗೆ ಪರವಾಗಿಲ್ಲ ಅನ್ನುವ ಯಾವುದೇ ಬರಹಗಾರರಿಗೂ ಅವಕಾಶ ಸಿಗುತ್ತಿರಲಿಲ್ಲ. ಜೊತೆಗೆ ತಮ್ಮದೇ ಒಳ್ಳೆಯ ಬರಹಗಳನ್ನೂ ಪೋಸ್ಟ್ ಮಾಡಲು ಅನುಕೂಲವಿಲ್ಲದ ಅಥವಾ ಆಲಸ್ಯದ ಕಾರಣಗಳಿಂದ ಪತ್ರಿಕೆಗಳಿಗೆ ಕಳಿಸದೇ ಉಳಿದ ಬರಹಗಳೆಷ್ಟೋ? ಬರೆದವರಿಗೆ ಮಾತ್ರವೇ ಗೊತ್ತು.
ಹೀಗಿರುವಾಗ ಫೇಸ್ಬುಕ್ ಎಂಬ ಮಾಯಾವಿ ಬಂದಮೇಲೆ ಬರವಣಿಗೆಯ ಲೋಕದಲ್ಲಿ ಆದ ಸಂಚಲನ ಒಂದು ಅದ್ಭುತ ಅಂತಲೇ ಅನ್ನಬೇಕು. ಎಲ್ಲ ಮಾಧ್ಯಮಗಳಂತೆ ಬರಹ ಮಾಧ್ಯಮ ದಲ್ಲೂ ಆಗುವ ಸಾಕಷ್ಟು ಪ್ರಯೋಗಗಳಿಗೆ, ಹೊಸ ಪ್ರಕಾರದ ಬರಹಗಳಿಗೆ, ಹೊಸ ಬರಹಗಾರರಿಗೆ ಮತ್ತೂ ಕೆಟ್ಟ, ಒಳ್ಳೆಯ, ಸಾಧಾರಣ ಎಲ್ಲ ಪ್ರಕಾರದ ಬರಹಗಳಿಗೂ ಇದು ವೇದಿಕೆಯಾಗಿ ಸಿಕ್ಕಿತ್ತು. ಒಳ್ಳೆಯ ಬರಹ/ಪ್ರಯೋಗಗಳಿಗೆ ಪೂರಕವಾಗಿಯೂ ದ್ವೇಷದ, ವೈಯಕ್ತಿಕ ವೈರದ ಸಂಗತಿಗಳ ವಿಷಯದಲ್ಲಿ ಮಾರಕವಾಗಿಯೂ ಈ ವೇದಿಕೆ ಉಪಯೋಗವಾಗಿದೆ, ಆಗುತ್ತಿದೆ. ಫೇಸ್ಬುಕ್ ಬರಹಗಳಿಂದ ಎಷ್ಟೆಲ್ಲ ಹೊಸ ಉತ್ತಮ ಬರಹಗಾರರು ನೇರವಾಗಿ ಪ್ರಕಾಶಕರ/ ಪತ್ರಿಕೆಯ ಕಣ್ಣಿಗೆ ಬಿದು ತಮ್ಮ ಬರಹಗಳ ಪ್ರಕಟಣೆ ಯನ್ನು ಕಂಡಿದ್ದಾರೆಂದರೆ, ಇಂಥದ್ದೊಂದು ಮಾಧ್ಯಮವಿಲ್ಲದೇ ಹೋದಲ್ಲಿ, ಇವರ ಪ್ರತಿಭೆ ಏನಾಗಿ ಹೋಗುತ್ತಿತ್ತೋ ಎನ್ನಿಸಿಬಿಡುತ್ತದೆ.
ಬಹುಶಃ ಫೇಸ್ಬುಕ್‌ಗಿಂತಲೂ ಮುಂಚೆ ಬಂದ ಕೆಲವು ಆನ್‌ಲೈನ್ ಪತ್ರಿಕೆಗಳು ಹಾಗೂ ಬ್ಲಾಗ್‌ಗಳೂ ಬರಹಗಾರರಿಗೆ, ಪ್ರಕಟಣೆಯ ಬಾಗಿಲನ್ನು ತೆರೆದು, ಜಗತ್ತಿನಲ್ಲಿ ಯಾವ ಮೂಲೆಗೆ ಹೋಗಿ ಕೂತರೂ ಇಂಥ ಬರಹಗಳನ್ನು ಓದಲು ಅನುಕೂಲ ಮಾಡಿಕೊಡ ಲಾರಂಭಿಸಿದವು. ಅಲ್ಲಿಯೂ ಎಲ್ಲ ತೆರನಾದ ಬರಹಗಳು ಪ್ರಕಟಗೊಳ್ಳತೊಡಗಿ, ಒಳ್ಳೆಯ ಬರಹಗಾರರ ಪ್ರತಿಭೆಗೆ ಅನುಕೂಲಕರ ರೀತಿಯಲ್ಲಿ ಇವು ಕೆಲಸ ಮಾಡತೊಡಗಿದವು. ಈಗಲೂ ಮಾಡುತ್ತಿವೆ.
ಈಗೆಲ್ಲ ಹತ್ತು ಹಲವು ಪತ್ರಿಕೆಗಳಿವೆಯಾದರೂ, ಬರಹಗಾರರೂ ಸಾಕಷ್ಟು ಇರುವ ಈ ಸಮಯದಲ್ಲಿ ಮತ್ತೆ ಮತ್ತೆ ಇವರ ಬರಹಗಳು ರಿಪೀಟ್ ಆಗಲು ಅನನುಕೂಲ ಎನ್ನಿಸುವಲ್ಲಿಯೂ ಜಾಲತಾಣ ವೇದಿಕೆಗಳು ಸಹಾಯಕಾರಿ ಎನ್ನಿಸಿವೆ. ಕೆಲವರಿಗೆ ತಮ್ಮ ಬರಹಗಳು ಯಾವುದೋ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕೆಂದೇನೂ ಇಲ್ಲದೇ, ಕೇವಲ ತಮ್ಮ ಸುತ್ತಮುತ್ತಲಿದ್ದವರಿಗೆ, ತಮ್ಮ ಬರಹದ ಉದ್ದೇಶ ತಲುಪಿದರೆ ಸಾಕು ಎನ್ನುವಂಥವರಿಗೂ ಇದು ವೇದಿಕೆ ಒದಗಿಸಿಕೊಟ್ಟಿದೆ.
ಸುಮಾರು ಹನ್ನೆರಡು ವರ್ಷಗಳ ಹಿಂದಿನ ಸಮಯ ಅಂತಿಟ್ಟುಕೊಳ್ಳಿ? ಆಗ ಫೇಸ್ಬುಕ್ಕಿನಲ್ಲಿ ಕಾವ್ಯ ಕಾಲ ನಡೆಯುತ್ತಿತ್ತು. ಬೆಳಿಗ್ಗೆದ್ದರೆ ಅಥವಾ ರಾತ್ರಿ ಇನ್ನೇನು ತೀರಾ ಹೊತ್ತಾಗಿಹೋಯ್ತು ಅನ್ನಿಸುವ ಈ ಎರಡು ಹೊತ್ತಿಗೆ ಬರೆಯುವ ಕವಿಗಳ ದೊಡ್ಡ ಗುಂಪೇ ಇತ್ತು. ಅದರಲ್ಲೂ ಪ್ರೇಮಕವಿಗಳು ಹಾಗೂ ಬದುಕನ್ನು ತೀವ್ರವಾಗಿ ಪರಿಗಣಿಸುವ ಕವಿಗಳದ್ದು ಜೋರು ಹವಾ? ಫೇಸ್ಬುಕ್ ತೆರೆದಾಗಲೆಲ್ಲಾ ಪ್ರೇಮವೂ, ಬದುಕಿನ ದಾರ್ಶನಿಕತೆಯೂ ಬೇಡಬೇಡವೆಂದರೂ ಕಣ್ಣಿಗೆ ಬಿದ್ದು, ಬರಹಗಾರರನ್ನು ಇನ್ನಷ್ಟು, ಮತ್ತಷ್ಟು ಬರೆಯಲು ಹಚ್ಚುತ್ತಿತ್ತು. ಸಾಹಿತ್ಯದ ಓದುಗರು, ಪ್ರೋತ್ಸಾಹಕರು ಎಲ್ಲರೂ ಅಲ್ಲಿಯೇ ಇದ್ದ ಕಾರಣ, ಬರೆಯುವವರಿಗೊಂದು ಹುಮ್ಮಸ್ಸಿತ್ತು. ಈಗಲೂ ಇದೆ. ಒಂದು ಒಳ್ಳೆಯ ಬರಹವಾಗಲಿ ಬರಹಗಾರನಾಗಲಿ ವೇದಿಕೆಯಿಲ್ಲದೆ ಅವಕಾಶಗಳಿಲ್ಲದೆ ಎಲ್ಲೋ ಕಳೆದುಹೋಗಿ ಬಿಡುತ್ತಾನೆನ್ನುವ ಕಾಲವಂತೂ ಇದಲ್ಲ. ಯಾವುದೋ ಒಂದು ಪುಟ್ಟ ಹಳ್ಳಿಯಲ್ಲಿ ಕೂತು ಬರೆಯುತ್ತಿದ್ದ ಎಷ್ಟೋ ಹುಡುಗರು ಈಗ ಟಿ. ವಿ. ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ಕೆಲಸ ಹಿಡಿದಿದ್ದಾರೆ. ಅದಕ್ಕೆ ಈಗ ಸಾಕಷ್ಟು ಮುಂದುವರಿದಿರುವ ತಂತ್ರಜ್ಞಾನದ ಕೊಡುಗೆ ಅಪಾರ. ಕನ್ನಡದ ಕೀಲಿಮಣೆ, ಇಂಟರ್‌ನೆಟ್ ಸೌಲಭ್ಯವಿದ್ದರೆ ಆಯಿತು. ಕೂತಲ್ಲೇ ಮೊಬೈಲಿನಲ್ಲಿ ಟೈಪಿಸಿ ಮೇಲ್ ಮಾಡಿದರೂ ಆಯಿತು, ವಾಟ್ಸಾಪ್‌ನಲ್ಲಿ ಕಳುಹಿಸಿದರೂ ಆಯಿತು. (ಈಗ ಸಾಕಷ್ಟು ಅಂಕಣಕಾರರು ಅವರ ಬರಹಗಳನ್ನು ನೇರವಾಗಿ ವಾಟ್ಸಾಪ್‌ನಲ್ಲೇ ಕಳಿಸಿಬಿಡುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ) ಹಿಂದಿನಂತೆ, ಒಂದು ಬರಹವನ್ನು ಮೊದಲು, ನೋಟ್ ಪುಸ್ತಕದಲ್ಲೋ, ಬೇರೆ ಹಾಳೆಗಳಲ್ಲೋ ಬರೆದು, ಅದರಲ್ಲೇ ತಿದ್ದುಪಡಿಯನ್ನೆಲ್ಲ ಮಾಡಿ, ನಂತರ ಅದನ್ನು ಒಂದು ಖಾಲಿ ಹಾಳೆಗೆ, ಆದಷ್ಟೂ ಚಿತ್ತಿಲ್ಲದಂತೆ ಬರೆದು, ಅಂದರೆ ವರ್ಗಾಯಿಸಿ, ನಂತರ, ಅದರ ಜೊತೆಗೆ, ಹೀಗೆ ತಮ್ಮ ಬರಹ ಕಳಿಸುತ್ತಿರುವುದರ ಕುರಿತು ಸಂಪಾದಕರಿಗೊಂದು ಪತ್ರವನ್ನೂ ಬರೆದು ಅದನ್ನು, ಅವರ ಬರಹದ ಮೊದಲಿಗೆ ಲಗತ್ತಿಸಿ, ಅದನ್ನು ಕವರ್‌ನಲ್ಲಿ ಹಾಕಿ, ಇಂದ, ಗೆ, ವಿಳಾಸಗಳು ಸರಿಯಾಗಿದೆಯೇ ನೋಡಿ ಮಾಡಿ, ನಂತರ ಪೋಸ್ಟ್ ಆಫೀಸಿಗೆ ಓಡಿ, ಅಲ್ಲಿ ಇಂಥ ಪೋಸ್ಟಿಗೆ ಎಷ್ಟರ ಸ್ಟ್ಯಾಂಪ್ ಹಾಕಬೇಕೆಂದು ಕೇಳಿ, ಮತ್ತೆ “ಎಷ್ಟು ದಿನಕ್ಕೆ ತಲುಪುತ್ತೆ? ಯಾವ ಪೋಸ್ಟ್ ಡಬ್ಬಿಗೆ ಹಾಕಬೇಕು? ” ಅನ್ನುವ ವಿಚಾರಗಳನ್ನೆಲ್ಲ ತಿಳಿದ ನಂತರವೇ ಅದನ್ನು ಆಯಾ ಪೋಸ್ಟ್ ಡಬ್ಬಿಗೆ ಹಾಕಿ ಮನೆಗೆ ಬಂದ ನಂತರವೇ ಜೀವಕ್ಕೆ ನೆಮ್ಮದಿ. ಆಮೇಲೆ ಪ್ರತಿ ವಾರ ತಂತಮ್ಮ ಬರಹಗಳು ಬಂತೋ ಇಲ್ಲವೋ ಅಂತ ಪತ್ರಿಕೆ ನೋಡೋದೇ ನೋಡೋದು. . . ಉಸ್ಸಪ್ಪಾ. . . ನನ್ನ ಶಾಲಾ ದಿನಗಳಲ್ಲಿ ಪತ್ರಿಕೆಗಳ ವಿಶೇಷಾಂಕಗಳ ಚಿತ್ರ ಸ್ಪರ್ಧೆಗೆ ಚಿತ್ರಗಳನ್ನು ಕಳುಹಿಸುತ್ತಿದ್ದುದು ನೆನಪಾಗುತ್ತಿದೆ. ಫಲಿತಾಂಶ ನೋಡುವುದಕ್ಕಾಗಿ ಪೇಪರ್ ಅಂಗಡಿಗೆ ಓಡುವುದು ಅಥವಾ ಪತ್ರಿಕೆ ಮನೆಗೆ ಬರುತಿದ್ದರೆ, ಪತ್ರಿಕೆ ಸಿಕ್ಕ ತಕ್ಷಣ ರಪರಪ ಎಂದು ಪುಟಗಳನ್ನು ತಿರುವುದು. . . ಎಷ್ಟು ಮಜವಿತ್ತು ಅದನ್ನೆಲ್ಲ ಮಾಡುವುದು!
ರೂಪಶ್ರೀ ಕಲ್ಲಿಗನೂರ್
ananyaroopa89@gmail.com





