ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು
ಓ.ಎಲ್.ನಾಗಭೂಷಣ ಸ್ವಾಮಿ
ದೇವನೂರ ಮಹಾದೇವ ಕನ್ನಡಿಗರ ಮನಸಿನಲ್ಲಿ ಮನೆ ಮಾಡಿರುವವರು. ಒಬ್ಬೊಬ್ಬರೂ ಮಹಾದೇವರ ತಮ್ಮದೇ ಬಿಂಬಗಳನ್ನು ಮೂಡಿಸಿಕೊಂಡಿದ್ದಾರೆ. ಕನ್ನಡದ ಬರಹಗಾರರು ಮತ್ತು ಓದುಗರ ಗ್ರಹಿಕೆಗಳನ್ನು ಮತ್ತೆ ಮೊದಲಿನ ದಾರಿಗೆ ಹೊರಳಲಾಗದಂತೆ ಬದಲಿಸಿದ ಪ್ರೀತಿಯ ದೇವನೂರ ಮಹಾದೇವರಿಗೆ ಕನ್ನಡದ ಮೊದಲ ಮಹಾಕವಿಯ ಹೆಸರಿನ ಮನ್ನಣೆ ದೊರೆತದ್ದು ನಮ್ಮ ಕಾಲಮಾನದವ ರೆಲ್ಲರಿಗೂ ದೊರೆತ ಮನ್ನಣೆ ಅನ್ನುವಷ್ಟು ಖುಷಿಯಾಗಿದೆ. ಈ ಪುಟ್ಟ ಬರವಣಿಗೆ ನನ್ನ ಮನಸಿನಲ್ಲಿ ಹುಟ್ಟಿದ ನೆನಪುಗಳ ಮೆರವಣಿಗೆಯ ನುಡಿಚಿತ್ರ ಮಾತ್ರ.
ಮಹಾದೇವ ಅವರನ್ನು ರಾಮುವಿನಿಂದ ಬೇರೆಯಾಗಿ ನೆನೆಯಲಾರೆ. ರಾಮು, ದೇವನೂರು ಮಹಾದೇವ ಮತ್ತೆ ನಾನು ಸುಮಾರಾಗಿ ಒಂದೇ ಸಮಯದಲ್ಲಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಂಪನನ್ನು, ಬಸವಣ್ಣ, ಕುಮಾರವ್ಯಾಸ ನನ್ನು ಓದಿದವರು. ಪಂಪನೆಂದರೆ ನನಗೆ ಗೌರವ, ರಾಮು ನನಗೆ ಕನ್ನಡಿ, ದೇವ ನೂರ ನನಗೆ ಬೆರಗು, ಪ್ರೀತಿ, ಗೌರವ. ಹೆಮ್ಮೆ. ಅವರ ‘ದ್ಯಾವನೂರು’ ಸಂಕಲನ ಪ್ರಕಟವಾದ ಮೇಲೆ ಮೈಸೂರು ಬಿಟ್ಟವನು ಮತ್ತೆ ಅವರನ್ನು ಹೆಚ್ಚು ನಿಕಟವಾಗಿ ಕಂಡದ್ದು ೨೦೦೫ರ ನಂತರ, ಮೈಸೂರಿಗೆ ಮರಳಿದ ಮೇಲೆಯೇ.
ಈಗ ನೆನೆದರೆ ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು ಮನಸಿಗೆ ಬರುತ್ತಿವೆ. ಬೆಳಗಿನ ಜಾವದ ಹೊತ್ತಿನಲ್ಲಿ, ಸಣ್ಣಗೆ ಸುರಿಯುವ ಇಬ್ಬನಿ ಮಬ್ಬಿನಲ್ಲಿ, ಮೈಸೂರಿನ ದೊಡ್ಡ ಕೆರೆಯ ಏರಿಯ ಮೇಲೆ ಮಿಣುಕು ಲಾಟೀನು ಹಚ್ಚಿಕೊಂಡ ಎತ್ತಿನ ಗಾಡಿಗಳು ಕಡಕೊಳ, ನಂಜನಗೂಡು ದಿಕ್ಕಿನಿಂದ ಸಾಲಾಗಿ ಬರುತಿದ್ದ ಕಾಲ; ಏರಿಯ ಪಕ್ಕದಲ್ಲೇ ಇದ್ದ ನಮ್ಮ ಮನೆಯ ಹಿತ್ತಿಲಿನಲ್ಲಿ ನಿಂತರೆ ಸಿಮೆಂಟು ರಸ್ತೆಯ ಮೇಲೆ ಗಾಡಿಯ ಚಕ್ರದ ಕೀಲಿ ಕಿರುಗುಟ್ಟುವ ಸದ್ದು, ಎತ್ತುಗಳ ಕೊರಳ ಕಿರು ಗಂಟೆಯ ಕಿಣಿಕಿಣಿ ಕೂಡ ಕೇಳಿಸುವಷ್ಟು ಊರು ನಿಶ್ಶಬ್ದವಾಗಿದ್ದ ಕಾಲ. ಮಧ್ಯಾಹ್ನದ ಊಟದ ಹೊತ್ತಿನಲ್ಲಿ ಝೂನ ಸಿಂಹಗಳ ಗರ‍್ಜನೆ ನೂರಡಿ ರಸ್ತೆಯವರೆಗೂ ಕೇಳುವಷ್ಟು ನಿಶ್ಶಬ್ದವಿದ್ದ ಕಾಲ.
ಹಾಗೆಯೇ ಅದು “ಅರಿವಿನ ಸ್ಛೋಟ”ದ ಕಾಲವೂ ಹೌದು. ಪ್ರತಿಷ್ಠೆಗೊಂಡಿದ್ದ ನವೋದಯ-ನವ್ಯಗಳ ಘರ್ಷಣೆ; ಮೊದಲ ಬಾರಿಗೆ ಮುದ್ರಣಗೊಂಡು ಓದು ಗರಿಗೆ ದೊರೆಯುವಂತಾದ ಮಲೆಮಾದಪ್ಪ, ಮಂಟೇಸ್ವಾಮಿ ಕಥೆ; ಎಡಪಂಥದ ವಿವಿಧ ಟಿಸಿಲು ಮತ್ತು ಸಮಾಜವಾದಿ ಚಿಂತನೆಗಳ ಹಾಸುಹೊಕ್ಕು; ಮಹಾ ರಾಜರ ನೆನಪು ಹೊತ್ತ ಮೈಸೂರು ರಾಜ್ಯ ಕರ್ನಾಟಕವಾದದ್ದು; ವಿದ್ಯಾರ್ಥಿಗಳ ಸಮೂಹವು ಹೋಟೆಲು ತಿಂಡಿಯ ದರಗಳಿಂದ ಹಿಡಿದು ಶಿಕ್ಷಣ ವ್ಯವಸ್ಥೆಯ ಪ್ರಮುಖರನ್ನು ಪ್ರಶ್ನಿಸುವ ಗತ್ತು, ಧೈರ್ಯ ತೋರುತ್ತಿದ್ದದ್ದು; ಬಾಂಗ್ಲಾ ವಿಮೋಚನೆ; ತುರ್ತುಪರಿಸ್ಥಿತಿ; ಉಳುವವರಿಗೆ ಭೂಮಿಯ ಒಡೆತನ– ೧೯೭೦-೮೦ರ ದಶಕ ನೆನೆದರೆ ಕಡಲ ಕುದಿತದ ಎಣ್ಣೆ ಕೊಪ್ಪರಿಗೆ ಕೂಡ ಹೌದು ಆ ಕಾಲ ಅನಿಸುತ್ತದೆ. ಅರ್ಧ ಶತಮಾನದ ಹಿಂದಿನ ಬದುಕನ್ನು ನೆನೆದರೆ ಆ ಕಾಲದ ಅರಿವಿನ ಸ್ಛೋಟದ ಮೂರು ಮುಖ್ಯದನಿಗಳಾಗಿ ಮಹಾದೇವ, ಸಿದ್ದಲಿಂಗಯ್ಯ ಮತ್ತು ಬಿ.ಕೃಷ್ಣಪ್ಪ ಇವರು ಇಂದಿನ ಯುವ ಮನಸುಗಳಲ್ಲೂ ದನಿಯಾಗಿ ಕೇಳಿಸುತ್ತಿದ್ದಾರೆ. ಇವರು ಮೂವರೂ ಕನ್ನಡದ ಕಳೆದ ಐದು ದಶಕಗಳ ಬದುಕನ್ನು ರೂಪಿಸಿದ ಶಕ್ತಿಗಳ ಸಂಕೇತವಾಗಿ ಕಾಣುತ್ತಾರೆ. ದ್ಯಾವನೂರು ಕಥಾ ಸಂಕಲನ ಮೊದಲ ಬಾರಿ ಪುಸ್ತಕವಾಗಿ ಪ್ರಕಟಗೊಂಡಾಗ ಮುಖಪುಟದಲ್ಲಿ ಮಹಾದೇವ ಅವರ ಚಿತ್ರ, ಅದರಲ್ಲೂ ಅವರ ಕಣ್ಣುಗಳು ಎದ್ದು ಕಾಣುತ್ತಿದ್ದವು. ಒಳಪುಟದಲ್ಲಿ ಖಂಡವಿದೆಕೋ ಮಾಂಸವಿದೆಕೋ ಎಂಬ ಕೊಟೇಶನ್ ಇತ್ತು. ಅವರ ಅಕ್ಷರಗಳನ್ನೇ ಬ್ಲಾಕ್ ಮಾಡಿ ಹಾಕಿದ್ದು ಇರಬಹುದು. ನನ್ನ ಜೊತೆಯಲ್ಲಿದ್ದ ಎಂ.ಎ ಹುಡುಗಿಯೊಬ್ಬಾಕೆ ‘ಈ ಕಣ್ಣು ನೋಡೇ ಹೇಗಿದೆ’ ಅಂದಾಗ, ಇನ್ನೊಬ್ಬ ಗೆಳತಿ, ‘ಎಂಥಾ ಅದ್ಭುತ ಕಣ್ಣು, ಎಷ್ಟೊಂದು ಫೀಲಿಂಗ್ ಇವೆ’ ಅಂತ ಪುಸ್ತಕದ ಚಿತ್ರ ನೇವರಿಸಿದ್ದಳು.
ಮಹಾದೇವ ಅವರ ಕಣ್ಣು, ಇಸ್ತ್ರಿ ಮಾಡದ ಬಟ್ಟೆ ಎರಡೂ ವಿಶೇಷ. ಅಂಥ ಡ್ರೆಸ್ಸು ಮಹಾದೇವ ಅವರಿಗಲ್ಲದೆ ಬೇರೆ ಯಾರಿಗೂ ಹೊಂದದು. ಅವರ ಕಣ್ಣು ಕೆಲವೊಮ್ಮೆ ಕೆಂಪಾಗಿರುತ್ತವೆ. ಆದರೂ ಇರುವುದನ್ನೆಲ್ಲ ಮಾತ್ರವಲ್ಲದೆ, ಇಲ್ಲದಿರುವುದನ್ನು ಕೂಡ ಕಾಣುತ್ತಿವೆ ಅನಿಸುತ್ತದೆ. ಹಾಗೆ ಇಲ್ಲದ್ದನ್ನೂ ಕಾಣಬಲ್ಲ ಕಣ್ಣು ಆದ್ದರಿಂದಲೇ ನಿಜ ಹುಡುಗಿಯೊಬ್ಬಳ ಸಿಂಗಲ್ಲು ಕುಸುಮಬಾಲೆಯ ಚೆಲುವನ್ನು ಹಿಡಿದಿಟ್ಟ ರೂಪಕವಾಗಿದೆ. “ಕಿಟ್ಟಪ್ಪ ಕೊಟ್ಟಿರುವ ರಗ್ಗು ಲಚಮೀನ ಕವುಚಿ ಕೊಂಡಿದೆ, ಕಿಟ್ಟಪ್ಪ ಕಟ್ಟಿಸಿಕೊಟ್ಟಿರುವ ಮನೆ ಇಬ್ಬರನ್ನೂ ಕವಿದುಕೊಂಡಿದೆ” ಅಂತ ಹೇಳುವ ವಾಕ್ಯ “ಮಾರಿಕೊಂಡವರು” ಕಥೆಯ ತಿರುಳು ಅನ್ನುವ ಹಾಗೆ ವಾಕ್ಯ ಕಟ್ಟಬಲ್ಲರು. ಜೊತೆಯಲ್ಲಿರುವವರು ಆಡುವ ಮಾತನ್ನು ಮಾತ್ರವಲ್ಲ, ಅದರ ಹಿಂದಿನ ಉದ್ದೇಶ, ಮುಂದಿನ ಗುರಿ ಯನ್ನೂ ಕಾಣುವ ತೀಕ್ಷ್ಣತೆ ಆ ನೋಟಕ್ಕಿದೆ ಅನಿಸುತ್ತದೆ. ಮಂಟೇಸ್ವಾಮಿಯ ಕತೆಯ ಮೊದಲಲ್ಲಿ ಬರುವ ಜ್ಯೋತಿಗಳು ಜೋತಮ್ಮಗಳಾಗಿ ಇಡೀ ಮನುಕುಲದ ಕತೆ ಹೇಳಿಕೊಳ್ಳುವವ ರಾಗಿ ಕಾಣುತ್ತಾರೆ. ಅವರು ಎರಡನೆಯ ಬಿಎಯಲ್ಲಿರು ವಾಗ ಚಿತ್ರವೊಂದನ್ನು ಬಿಡಿಸಿದ್ದರು, ವಿದ್ಯಾರ್ಥಿಗಳ ಎಕ್ಸಿಬಿಶನ್‌ನಲ್ಲಿತ್ತು, ಅದನ್ನು ರಾಮು, ನಾನು ನೋಡಿದ್ದು ನೆನಪಾಗುತ್ತಿದೆ. ಯಾವ ಕಾರಣಕ್ಕೋ ಚಿತ್ರ ಬರೆಯುವುದು ಬಿಟ್ಟರು, ಭಾಷೆಯಲ್ಲಿಯೇ ಜೀವಂತಚಿತ್ರರೇಖೆಗಳನ್ನು ಮೂಡಿಸಿದರು. ಆ ನುಡಿ ಚಿತ್ರಗಳಲ್ಲಿದನಿ ಕೇಳುತ್ತವೆ, ಮಾತು, ನಿಟ್ಟುಸಿರು, ಮೌನ ಕೇಳುತ್ತವೆ, ಅಮಾಸ, ಗಾರಸಿದ್ದ ಮಾವ, ತೂರಮ್ಮ, ಈರಿ, ಯಾಡ ಅಕ್ಕಮಾದೇವಮ್ಮ ಹೀಗೆ ಅವರು ಸೃಷ್ಟಿಸಿದ ಪಾತ್ರಗಳೆಲ್ಲವೂ ಓದುಗರ ಮನೋಲೋಕದ ಶಾಶ್ವತ ಜೀವಿಗಳಾಗಿ, ಅವರ ಬದುಕಿನ ನಿಜದ ಅನುಭವ ನುಡಿಯ ಮೂಲಕವೇ ನಮ್ಮ ಮೈಗೆ ಮನಸಿಗೆ ಸಿಗುವ ಹಾಗೆ ಮಹಾದೇವ ಬರೆಯುತ್ತಾರೆ.
ಹಾಗೆ ಓದಿದ್ದು ಮನಸ್ಸಿನಲ್ಲಿ ಹೇಗೆ ಉಳಿಯುತ್ತದೆ ಅನ್ನುವುದಕ್ಕೆ ಒಂದು ಜೀವಂತ ಉದಾಹರಣೆ ಇದೆ. ಹಂಪಿಯಿಂದ ಹೊಸಪೇಟೆಗೆ ಹೋಗುವ ಬಸ್ಸಿನಲ್ಲಿ ನಾವು ಕೆಲವು ಜನ ಹೀಗೇ ಮಾತಾಡುತ್ತ ಕುಸುಮಬಾಲೆಯ ಪ್ರಸ್ತಾಪ ಬಂದಿತ್ತು. ಆಗ ಮಧ್ಯವಯಸ್ಸಿನ ಹೆಂಗಸೊಬ್ಬರು ತಟ್ಟನೆ, “ಅಲಲಾ ಅಂತ ಗೆಲುಗಾಡುತ್ತಿದ್ದವಲಾ ತೂರಮ್ಮನ ಜೋಪಡಿ ತೆಂಗಿನಗರಿಗಳಾದಿ…” ಅಂತ ನಾಲ್ಕಾರು ಸಾಲು ಹಾಗೇ ನುಡಿದಿದ್ದರು. ಎದೆಗೆ ಬಿದ್ದ ಅಕ್ಷರಗಳು ಓದುಗರನ್ನು ಹೇಗೆ ಹೇಗೆ ಯಾವಾಗ ಸೋಕುವುದೋ, ಬೆಳಕಾಗುವುದೋ ಹೇಳಲಾಗದು.
ಎತ್ತರದ ಆಳು, ಅನುಭವ ವೃದ್ಧಿಸಿರುವ ಮುಖದ ಗೆರೆ ನಿರಿಗೆ, ಉದ್ದನೆ ಕೈಬೆರಳು, ಸಾಮಾನ್ಯವಾಗಿ ಕೆದರಿದ ಹಾಗೆ ಕಾಣುವ ತಲೆ, ಇಸ್ತ್ರಿ ಮಾಡದ ಬಟ್ಟೆ ತೊಟ್ಟ ಹಿರಿಯ ಜೀವ ಕರ್ನಾಟಕದ ನಮ್ಮ ದೇಶದ ಯಾರಿಗೆ ಕಂಡರೂ ಅಪ್ಪಟ ಭಾರತದ ಮಣ್ಣಿನಲ್ಲಿಮಾಗಿದ ಎಲ್ಲರಂಥ ಜೀವ, ಆದರೆ ಎಲ್ಲರಂತಲ್ಲದೆ ವಿವೇಕ, ಒಳನೋಟ, ಎಲ್ಲರ ಒಳಿತು ಬಯಸುವ ಜೀವ ಅನಿಸುತ್ತದೆ. ಎಲ್ಲರಂತಿದ್ದರೂ ಯೇಟ್ಸ್ ಕವಿ ಹೇಳಿದ ಹಾಗೆ ಬರಹದ ದುಡಿಮೆಯನ್ನು ಮನಃಪೂರ್ವಕ ಒಪ್ಪಿದವರು. “ಒಂದು ಸಾಲು ಬರೆಯುವುದಕ್ಕೆ ಗಂಟೆಗಟ್ಟಲೆ ಸಮಯ ಬೇಕು. ಆದರೂ ಓದುವುದಕ್ಕೆ ಕ್ಷಣ ಸಾಕು. ಎಷ್ಟು ಸಲ ಹೊಲಿಗೆ ಹಾಕಿ, ಬಿಚ್ಚಿ, ಹೊಲಿ ದದ್ದು ಈ ವಾಕ್ಯಗಳು ಅಂತ ತಿಳಿಯದು. ನೆಲದ ಮೇಲೆ ಮಂಡಿಯೂರಿ ಅಡುಗೆ ಮನೆಯ ನೆಲ ಸಾರಿಸುತ್ತಾ ಮೂಳೆ ಸವೆಸಿಕೊಳ್ಳುವುದು ಒಳ್ಳೆಯದು. ನುಡಿಯ ಜೋಡಣೆ ಸೋಮಾರಿಗಳ ಕೆಲಸ ಅನ್ನುವ ಬ್ಯಾಂಕರು, ಮೇಷ್ಟರು, ಪಾದ್ರಿಗಳು, ಲೋಕದ ಬದುಕಿಗೆ ತುತ್ತಾದ ಹುತಾತ್ಮರಿಗೇನು ಗೊತ್ತು? ಕವಿತೆ ಬರೆಯುವುದೆಂದರೆ, ರಸ್ತೆಗೆ ಕಲ್ಲಿಟ್ಟಿಗೆ ಕೂರಿಸುವುದಕ್ಕಿಂತ ಮಿಗಿಲು ಕಷ್ಟ” ಎಂದು ಯೇಟ್ ಕವಿಯ “ಆಡಮ್ಸ್ ಕರ್ಸ್” ಅನ್ನೋ ಪದ್ಯ ಹೇಳುತ್ತದೆ. ರಾಮು ಮಾತಲ್ಲಿ ಹೇಳುವುದಾದರೆ “ಮಾದೇವ ಏನಾದರೂ ಬ್ರಹ್ಮ ಆಗಿದ್ದಿದ್ದರೆ ಒಂದು ಚಿಟ್ಟೆ ಸೃಷ್ಟಿ ಮಾಡಕ್ಕೆ ಸಾವಿರ ವರ್ಷ ತಗೋತಿದ್ದ”.
ಹಾಗೆ ಮಾತು ಹೆಕ್ಕಿ ಹೆಕ್ಕಿ ಜೋಡಿಸಿ ಕವಿತೆಯಂಥ ಕಥೆ ಕಟ್ಟುವುದರಿಂದ ಥೇಟುಪಂಪನ ಥರವೇ ಒಂದೊಂದು ನುಡಿಚಿತ್ರವೂ ನೂರಾರು ಅರ್ಥ ಹೊಳೆಯಿಸು ತ್ತವೆ. ನೂರು ಪುಟವೂ ದಾಟದ ಕುಸುಮಬಾಲೆ ಆದಿಪುರಾಣದಂಥ, ಕಾಮದ, ಸಾವಿನ, ಮರುಹುಟ್ಟಿನ ಕಥೆಯಾಗುತ್ತದೆ, ಕುಟುಂಬ ಕಲಹ ಹೇಳುವ ಪಂಪ ಭಾರತದಂತ ಕಥೆಯೂ ಇಂದಿನ ಸಮಸ್ತ ಭಾರತದ ಸಹಜ ಕಥೆಯೂ ಆಗುತ್ತದೆ. ಒಂದೇ ವಾಕ್ಯದಲ್ಲಿ ನಾಟಕವನ್ನೂ ಕಾವ್ಯವನ್ನೂ ಕಥೆಯ ಮುನ್ನಡೆಯನ್ನೂ ಬರೆಯ ಬಲ್ಲ ಅವರ ಶಕ್ತಿಯನ್ನು ಎಲ್.ಬಸವರಾಜು ಅವರು “ಪಂಪನಂತೆ ದೇಸೀ- ಮಾರ್ಗಗಳನ್ನು ಮಿಶ್ರಮಾಡಿದ, ಜಾನಪದೀಯ ಮತ್ತು ಚಾಲ್ತಿ ಮಾತಿನ ರೀತಿಗಳನ್ನು ಮಿಶ್ರ ಮಾಡಿದ “ಪಂಚಲೋಹಪಾಕ” ಅನ್ನುತ್ತಾರೆ. ರಾಮುವಂತೂ ಮಹಾದೇವನಲ್ಲಿ ಪಂಪನ ಆಧುನಿಕ ರೂಪವನ್ನೇ ಕಾಣುತ್ತಿದ್ದ.“ನನ್ನ ಮಾದೇವನ ಸಂಬಂಧ ಯಾರಿಗೂ ಅರ್ಥ ಆಗಲ್ಲ” ಅನ್ನುತ್ತಿದ್ದ. ರಾಮು ಮನೆ ಎಲ್ಲ ಬಗೆಯ ಜನ ಕೂಡಿ ಬಾಳಿದರೆ ಹೇಗೆ ಇರುತ್ತದೆ ಅನ್ನುವುದರ ಮಾದರಿ ಯಾಗಿತ್ತು. ರಾಮುನಷ್ಟೇ ಮಹಾದೇವ ಕೂಡ ಆ ಮನೆಯ ಚೈತನ್ಯವೇ ಆಗಿದ್ದರು.
ರಾಮು ಆರೋಗ್ಯ ಚೆನ್ನಾಗಿರುವವರೆಗೆ ಮಹಾದೇವ ದಿನಕ್ಕೊಮ್ಮೆಯಾದರೂ ಬರುತ್ತಿದ್ದರು. ಯಾವುದೋ ಲೇಖನ, ಇನ್ಯಾವುದೋ ಪ್ರೂಫು ತಿದ್ದುವುದು, ಇನ್ಯಾ ವುದೋ ಪತ್ರ ಮೇಲ್ ಮಾಡುವುದು… ಹೀಗೆ. ಪದ, ವಿಭಕ್ತಿ, ವಾಕ್ಯ ರಚನೆ, ವಾಕ್ಯದೊಳಗಿನ ಪದಜೋಡಣೆ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡಿ, ಒಂದು ವಾಕ್ಯ ತಕ್ಕಮಟ್ಟಿಗೆ ಓಕೆ ಅಂತಾಗುವುದಕ್ಕೆ ಅರ್ಧಗಂಟೆ ಹಿಡಿಯುತ್ತಿತ್ತು. ಮಹಾದೇವರನ್ನು ಟೀಕಿಸುವ ಸಲುಗೆ ಸ್ವಾತಂತ್ರ್ಯ ಇದ್ದದ್ದು ರಾಮುಗೆ ಮಾತ್ರ. ರಾಮು ಮಾಡಿದ ಮಹಾಭಾರತದ ಕನ್ನಡ ಕತೆಗಳನ್ನು ದೇವನೂರ ತಿದ್ದಿ ಸಂಪಾದಿಸಿ ಈಗ ಅದು ಪುಸ್ತಕವಾಗಿ ಬರಲಿದೆ. ಅವರಿಬ್ಬರೊಡನಾಟದ ಕುರುಹಾಗಿ ಉಳಿಯಲಿದೆ. ಸೌಲಭ್ಯಗಳಿರುವ ಮೇಲು ಜಾತಿಯ ಜನ ಬದುಕನ್ನು ನೋಡದೆಯೇ ಇದ್ದದ್ದಕ್ಕೆ, ನೋಡಿದ್ದೇವೆ ಅಂದುಕೊಂಡಿದ್ದರೂ ಅವರಿಗೆ ಅರ್ಥವೇ ಆಗದಿರುವುದಕ್ಕೆ ಲೇಖಕರು, ಓದುಗರು ಸಂಕೋಚ, ಲಜ್ಜೆಪಟ್ಟು ಅಷ್ಟೊಂದು ಹೊಗಳಿದರೇನೋ. ಬಸವಣ್ಣ, ಕುವೆಂಪು, ದೇವನೂರ ಇಂಥ ಜೀವಗಳ ಬಗ್ಗೆ ಅಭಿಮಾನ ವಿರುವುದು ಬೇರೆ, ಅವರ ಬರಹವನ್ನು ನಮ್ಮದಾಗಿಸಿಕೊಳ್ಳುವುದೇ ಬೇರೆ ಅಂತ ರಾಮು, ನಾನು ಹಲವು ಸಲ ಮಾತಾಡಿಕೊಂಡಿದ್ದೆವು.
ಜಿ.ಎಚ್.ನಾಯಕ್, ಅನಂತ ಮೂರ್ತಿ, ಚಿತ್ತಾಲರು, ಚದುರಂಗರಂಥ ಹಿರಿಯರು, ಬಸವರಾಜು ಥರದ ವಿದ್ವಾಂಸರು ದೇವನೂರರ ಬರಹದಿಂದ ಪಡೆದ ನೋಟವನ್ನು ಮನಸಾರೆ ಹೇಳಿ ಕೃತಜ್ಞತೆ ತೋರಿದ್ದಾರೆ. ಮಹಾದೇವ ಕೆಲಸ ಬಿಟ್ಟಿದ್ದು, ತೋಟ ಮಾಡಿದ್ದು, ದಲಿತ ಸಂಘರ್ಷ ಸಮಿತಿಯ ಹೋರಾಟ ಮೊದಲಾದ ಅವರ ಸಾರ್ವಜನಿಕ ಬದುಕು ವಿವರವಾಗಿ ದಾಖಲಾಗಿದೆ. ವಾಗ್ವಾದಗಳು ನಡೆದಿವೆ. ರಾಜನ ಮಿತ್ರನಲ್ಲ, ಜನರೊಡನೆ ಬದುಕಿ, ಜನರ ಬದುಕನ್ನು ಕಂಡು, ಕನ್ನಡದ ಗುಪ್ತಸತ್ವವನ್ನೆಲ್ಲ ಹೀರಿಕೊಂಡು ಬರೆದ, ಕನ್ನಡದ ಸಹಜ ಜನರೊಳಗೇ ಬದುಕಿರುವ ಪಂಪ ದೇವನೂರ ಮಹಾದೇವ. ಈ ಬರಹದಲ್ಲಿ ಹೆಸರಿಸಿ ರುವ ಎಲ್ಲ ಹಿರಿಯರ ಒಡನಾಟ ದೊರೆತದ್ದು ನನ್ನ ಪಾಲಿನ ಸಂತೋಷ.
” ದೇವನೂರ ಮಹಾದೇವರ ಮಾತನ್ನು ಹೆಕ್ಕಿಹೆಕ್ಕಿ ಜೋಡಿಸಿ ಕವಿತೆಯಂಥ ಕಥೆ ಕಟ್ಟುವುದರಿಂದ ಥೇಟು ಪಂಪನ ಥರವೇ ಅವರ ಒಂದೊಂದು ನುಡಿಚಿತ್ರವೂ ನೂರಾರು ಅರ್ಥ ಹೊಳೆಯಿಸುತ್ತವೆ. ನೂರು ಪುಟವೂ ದಾಟದ ಕುಸುಮಬಾಲೆ ಆದಿಪುರಾಣದಂಥ ಕಾಮದ, ಸಾವಿನ, ಮರುಹುಟ್ಟಿನ ಕಥೆಯಾಗುತ್ತದೆ”





