ಮಧುಕರ ಮಳವಳ್ಳಿ
ಅಂಬೇಡ್ಕರ್ ಪರಿಚಯ ಆಗಿದ್ದು, ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಕನ್ನಡದ ಮೇಷ್ಟ್ರು ನಾವು ತರಲೆ ಮಾಡುವಾಗ ನೀವು ಹಿಂಗೆ ಇದ್ರೆ ಅಂಬೇಡ್ಕರ್ ಅವರಿಂದ ಪಡೆದ ಸಂವಿಧಾನದ ಅವಕಾಶಗಳನ್ನು ಹಾಳು ಮಾಡಿಕೊಳ್ಳುತ್ತೀರಿ’ ಎಂದಾಗ ಈಗಾಗಲೇ ಜಾತಿಯ ಭರ್ಜಿ ತುದಿಯಿಂದ ಕೊನೆ ಬೆಂಚಿನ ವಿದ್ಯಾರ್ಥಿಗಳಾಗಿದ್ದವು. ಮತ್ತೆ ಪ್ರತಿ ವರ್ಷವೂ ಯಾವುದೋ ತಿಂಗಳಲ್ಲಿ ‘ದಲಿತ ವಿದ್ಯಾರ್ಥಿಗಳು ಯಾರಿದ್ದೀರಿ? ನಿಮಗೆ ವಿದ್ಯಾರ್ಥಿ ವೇತನ ಬಂದಿದೆ. ನಾಳೆ ಅಪ್ಪ ಅಮ್ಮನನ್ನು ಜೊತೆಗೆ ಬಂದು ಪಡೆದುಕೊಳ್ಳಬಹುದು’ ಎಂದಾಗ ಪಕ್ಕ ಕೂರುತ್ತಿದ್ದ ವಿದ್ಯಾರ್ಥಿಗಳಿಗೆ ನಮ್ಮ ಜಾತಿ ಯಾವುದೆಂದು ತಿಳಿಯುತ್ತಿತ್ತು. ಆಗೆಲ್ಲ ಈ ವಿದ್ಯಾರ್ಥಿ ವೇತನ ಅವರು ನಮ್ಮ ಜೊತೆ ಒಂದು ವಾರ ಕಾಲ ಅಂತರ ಇರುವಂತೆ ನೋಡಿಕೊಳ್ಳುತ್ತಿತ್ತು.
ಆದರೆ ಕೇರಿಯ ಒಳಗಡೆ ತಮಟೆಯ ಸದ್ದು ಬಡಿಯುತ್ತಾ ‘ದಲಿತರು ಬರುವರು ದಾರಿ ಬಿಡಿ’ ಮತ್ತು ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಎಂಬ ಹಾಡುಗಳನ್ನು ಹೇಳುತ್ತಿದ್ದರು. ಅಷ್ಟೇ ಅಲ್ಲ ಹಾಡುತ್ತಲೇ ನಮ್ಮನ್ನು ಹುರಿದುಂಬಿಸಿ, ದಲಿತ ಸಮಾವೇಶಕ್ಕೆ ಎಲ್ಲರೂ ಲಾರಿ ಹತ್ತಿ ಮೈಸೂರಿಗೆ ಬನ್ನಿ ಎಂದು ಹೇಳುತ್ತಿದ್ದರು. ‘ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕು, ಸಮಾನತೆ ಮತ್ತು ಸ್ವಾತಂತ್ರ್ಯದ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಬರಲೇಬೇಕು’ ಎಂದು ಹೇಳುತ್ತಿದ್ದರು.
ಎಲ್ಲಿತ್ತೋ ಧೈರ್ಯ! ಸಮಾವೇಶಕ್ಕೆ ಕೇರಿಯ ಹುಡುಗರೆಲ್ಲ ಲಾರಿ ಏರಿ ಹೋದೆವು. ಅಲ್ಲೇ ಕೂತಿದ್ದವರಲ್ಲೊಬ್ಬರು, ಮಧ್ಯೆ ಗಲಾಟೆ ಆಗಬಹುದು ಎಂದರು. ಸುಮ್ಮನೆ ಹೇಳಿದ್ದೋ ಅಥವಾ ನಿಜಕ್ಕೂ ಗಲಭೆ ನಡೆಯುತ್ತಿತ್ತಾ? ಗೊತ್ತಿಲ್ಲ. ಹೆದರಿದ್ದ ನಾವೆಲ್ಲ ಯಾವ ಕಾರಣಕ್ಕೂ ಲಾರಿಯಿಂದ ಇಳಿಯದೆ, ಒಂದೇ ಭಂಗಿಯಲ್ಲಿ ಕೂತು ಭಾಷಣ ಕೇಳಿದೆವು. ಅ ನಿವಾರ್ಯತೆಗೆ ಕಟ್ಟುಬಿದ್ದು ಭಾಷಣ ಕೇಳಿದೆವು. ಆಗ ತಿಳಿಯಿತು ಅಂಬೇಡ್ಕರ್ ಅವರು ನಮಗಾಗಿ ಏನೊ ಬರೆದಿದ್ದಾರೆ, ಅವರಿಂದ ನಾವು ಶಾಲೆಗೆ ಹೋಗಲು ಕಾರಣವಾಗಿದೆ ಎಂದು.
ಹಾಗೇ ನಮ್ಮ ಕೇರಿಯ ಹಿರಿಯ ಅಣ್ಣಂದಿರು ಆಗಲೇ ಮೈಸೂರು, ಬೆಂಗಳೂರುಗಳಲ್ಲಿ ಕಾಲೇಜು ಕಲಿಯಲು ಹೋಗಿದ್ದರು. ತಮ್ಮ ಹಾಸ್ಟೆಲ್‌ಗೆ ಬಂದು ಚಳವಳಿ ನಾಯಕರು ಅಂಬೇಡ್ಕರ್ ರ ಬಗ್ಗೆ ಮಾಡುತ್ತಿದ್ದ ಭಾಷಣಗಳನ್ನು ಅವರು ಊರಿಗೆ ಬಂದಾಗ ಸಣ್ಣವರಾಗಿದ್ದ ನಮಗೂ ವಿವರಿಸುತ್ತಿದ್ದರು. ಆಗ ನನಗೆ ಅನಿಸುತ್ತಿದ್ದದ್ದು, ‘ನಾವು ಮನುಷ್ಯರಲ್ವಾ? ಮತ್ತೆ ನಮ್ಮ ಕೇರಿ ಯಾಕೆ ಊರಾಚೆ ಇದೆ?’ ಎಂಬಿತ್ಯಾದಿ ಪ್ರಶ್ನೆಗಳು ತುಂಬಾ ಕಾಡುತ್ತಿದ್ದವು.
ಅಂಬೇಡ್ಕರ್ ಬಗ್ಗೆ ಕುರಿತು ಇನ್ನೂ ಹೆಚ್ಚು ತಿಳಿಯಬೇಕೆನಿಸಿತು. ಗ್ರಂಥಾಲಯಕ್ಕೆ ಹೋಗಲು ಆರಂಭಿಸಿದೆ. ಆಗ ಅಂಬೇಡ್ಕರ್ ಅವರ ಬಗ್ಗೆ ಇರುವ ಸಣ್ಣ ಸಣ್ಣ ಪುಸ್ತಕಗಳನ್ನು ಓದತೊಡಗಿದೆ. ಹೀಗೆ ಅಂಬೇಡ್ಕರ್ ಅವರು ನನ್ನೊಳಗೆ ಪ್ರಶ್ನೆಯ ಮೂಲಕವೇ ಪ್ರವೇಶ ಪಡೆದರು.





