‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು
ಆಷಾಢ ಮಾಸದ ಅಮವಾಸ್ಯೆಯ ದಿನ ಅಬ್ಬಿ ಕಷಾಯ ಕುಡಿಸುತ್ತಾಳೆ ಎಂಬ ಘನಘೋರ ಕಷ್ಟ ಬಿಟ್ಟರೆ, ನಮ್ಮ ಸಂಭ್ರಮಕ್ಕೆ ಎರಡು ಕಾರಣ. ಒಂದು, ಮರವಂತೆ ಸಮುದ್ರದ ಪಕ್ಕದಲ್ಲಿರುವ ಮಹಾರಾಜ ಸ್ವಾಮಿಗೆ ಆ ದಿನ ವಿಶೇಷ ಪೂಜೆ. ಸಾಲು ಎಷ್ಟು ಉದ್ದ ಇದೆ ಇಣುಕುವಾಗ ಪಕ್ಕದಲ್ಲಿದ್ದ ಗೆಳೆಯ ‘ಕಾಣ. ಬಗ್ಗಿಬಗ್ಗಿ ಕಾಣ್. ದೇವ್ರಿಗ್ ಒಪ್ಸುಕೆ ಹಣ್ ಕಾಯೆಲ್ಲ ಹಿಡ್ಕ ಬಂದಿರಾ ಕಾಣ್ ಮರ್ರೆ!’ ಎಂದು ನಕ್ಕು ತಲೆಬಡಿಯುತ್ತಿದ್ದ. ಹಾಂ, ಇನ್ನೊಂದು ಕಾರಣ ಆವತ್ತೇ ನಮ್ಮ ‘ವಿಶ್ವ ಕುಂದಾಪ್ರ ಕನ್ನಡ ದಿನ’. ಊರು ಬಿಟ್ಟು ಮಹಾನಗರ ಸೇರಿದರೂ ಆ ದಿನ ಪಾಯಸದೂಟ ಮಾಡುವುದು ಮಾತ್ರ ತಪ್ಪಿಸಿಲ್ಲ. ಮತ್ತೆ ‘ಅಲ್ ಕೇಂಡ್ರು ಇಲ್ ಕೇಂಡ್ರು ಎಲ್ ಕೇಂಡ್ರು ಕನ್ನಡ, ಎದಿ ಮೇಲೆ ಬರ್ಕಂಡಿತ್ ಕುಂದಾಪ್ರ ಕನ್ನಡ’ ಅಂತ ಹಾಡಿ ಕುಣಿಯುವುದು ಇದ್ದೇ ಇದೆ.
ಹಿಂದೆಲ್ಲ ಕುಂದಾಪ್ರದವರಿಗೆ ಮಾಡುತ್ತಿದ್ದ ಆರೋಪ ಒಂದೇ. ಕುಂದಾಪ್ರದವರಿಗೆ ಟೆಲಿಫೋನ್ ಬಿಲ್ ಕಡಿಮೆ ಎಂದು. ‘ಸ್ನಾನ ಮಾಡಿಕೊಂಡು ಬರಬೇಕಾ?’ ಇದನ್ನು ನಮ್ಮವರು ‘ಮೀಕ ಬಾ’ ಎನ್ನುತ್ತಾರಷ್ಟೇ. ನಮ್ಮಲ್ಲಿ ಇದಕ್ಕೆಂದೇ ಒಂದು ಕತೆಯಿದೆ. ಕುಂದಾಪ್ರದ ಶಾಲೆಗೆ ಶಿಕ್ಷಕರೊಬ್ಬರು ಹೊಸತಾಗಿ ಬಂದಿದ್ದರಂತೆ. ತರಗತಿ ಮುಗಿಸಿ ಹೊರಡುತ್ತಿದ್ದರು. ಅದರಲ್ಲೊಬ್ಬಳು ಎದ್ದು ನಿಂತು, ‘ಟೀಚರೆ, ನಾಳಿಗ್ ಬರ್ಕ ಬರ್ಕ?’ ಕೇಳಿದಾಗ, ಈ ನಮ್ಮ ಟೀಚರ್ ಕಂಗಾಲು! ಉಳಿದ ಶಿಕ್ಷಕರಲ್ಲಿ ಕೇಳಿದರೆ, ‘ನಾಳೆ ಇದನ್ನು ಬರೆದುಕೊಂಡು ಬರಬೇಕಾ ಅಂತ ಕೇಳಿದಾರಷ್ಟೇ’ ಎಂದರಂತೆ. ಪ್ರತೀ ವರ್ಷ ಯಾರಾದರೊಬ್ಬರು ಈ ಕತೆಯನ್ನು ತಮ್ಮ ಭಾಷಣದಲ್ಲಿ ಹೇಳುತ್ತಾರೆ. ‘ಆ ಟೀಚರ್ ಇದ್ದಿರೆ ‘ನನ್ ಕತಿಯೇ ಎಷ್ಟ್ ಹೇಳ್ತ್ರಿ?’ ಅಂದ್ಕ ಮ್ಯಾಳಿಗೇ (ಗಂಟಲಿಗೇ) ಬಾಯ್ ಹಾಕ್ತಿದ್ದೀರ್’ ಎಂದು ನಾವೂ ಸವಕಲಾದ ಟೀಚರ್ ಕತೆಗೆ ಮರುಕ ಸೂಚಿಸಿದ್ದಿದೆ.
‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು. ಊರು ಕುಂದಾಪ್ರ ಎನ್ನುತ್ತಿದ್ದ ಹಾಗೆ ‘ಓ, ಹೊಯ್ಕ್ ಬರ್ಕ್!’ ಎಂದು ಗುರುತಿಸುವುದಿದೆ. ನಾಗರಪಂಚಮಿ ಬಂದರೆ ‘ಹ್ವಾಯ್, ಬೆಳಗಾತೆ ತನು ಎರುಕ್ ಬೇಗ ಹೋಯ್ಕ್’ ಎಂಬ ಮನೆಯೊಡತಿಯ ಎಚ್ಚರಿಕೆಯಲ್ಲಿ, ‘ಹರ್ಮೈಕ ಸಾಕ್. ದೈದ್ ಮನಿ (ದೈವದ ಮನೆ) ಹಬ್ಬಕ್ ಬಪ್ಪೆಲೆ ಬಲ್ಯಾ’ ಎಂಬ ಅಪ್ಪಯ್ಯನ ಕರೆಯೋಲೆಯ ಪ್ರೀತಿಯಲ್ಲಿ ನೀವು ಹೇಳುವ ಅದೇ ಹೋಯ್ಕ್ ಬರ್ಕ್ ಇದೆ.
ಕುಂದಾಪುರ ಕನ್ನಡದಲ್ಲೇ ಬಹಳಷ್ಟು ವಿಧ. ಹೋಗುತ್ತಾಳೆ ಪದ, ‘ಹೋಗ್ತ್ , ಹೋತಳ್, ಹೋತ್ಲ್’ ಹೀಗೆ ಭಿನ್ನವಾಗಿ ಹೇಳುತ್ತಾರೆ. ಸೋಜಿಗ ಎನಿಸುವುದು, ಬಗೆಬಗೆಯ ಕುಂದಾಪ್ರ ಕನ್ನಡದಲ್ಲಿ ಭಕ್ತರ ಬೇಡಿಕೆ ಕೇಳುವ ಭಗವಂತ, ಪಂಜು ಗಂಗೊಳ್ಳಿ ಅವರ ಕುಂದಾಪ್ರ ಕನ್ನಡ ನಿಘಂಟು ಇಟ್ಟುಕೊಂಡಿರುತ್ತಾನಾ ಎಂದು!
– ಕೀರ್ತಿ ಬೈಂದೂರು, ಲೇಖಕಿ, ಉಪನ್ಯಾಸಕಿ, ರೇಡಿಯೋ ಜಾಕಿ





