Light
Dark

ಮಳೆಯಿಲ್ಲದ ಕೊಡಗಲ್ಲಿ ಕಪ್ಪೆಗಳ ಪಾಡು

  • ರೂಪಶ್ರೀ ಕಲಿಗನೂರು

ಕೊಡಗಿನ ಊರಿಂದ ಬೆಂಗಳೂರಿಗೆ ಬರುವ ಮೂರು ವಾರಗಳ ಹಿಂದೆ ನಮ್ಮ ಊರಿನ ಬಹುತೇಕ ಮನೆಗಳ ಬಾವಿ ಬತ್ತಿಹೋಗಿದ್ದವು. ಬೆಂಗಳೂರಿಗೆ ಹೋದ ನಮಗೆ, ಊರಲ್ಲಿನ ಕಡಿಮೆ ಎನ್ನಬಹುದಾದಷ್ಟು ಜನಸಂಖ್ಯೆಯೇ ನೀರಿಲ್ಲದೆ ಒದ್ದಾಡುತ್ತಿರುವಾಗ, ಹೀಗೆ ಒಂದೊಂದು ಅಪಾರ್ಟ್‌ಮೆಂಟಿನಲ್ಲಿರುವ ಸಾವಿರಾರು ಜನಕ್ಕೆ ನೀರು ಒದಗುವುದಾದರೂ ಹೇಗೆ ಎಂದು ಅಚ್ಚರಿಯಾಯಿತು

ಜೂನ್‌ನಿಂದ ಮೂರು ತಿಂಗಳು ಕೊಡಗಿನಲ್ಲಿ ಮನೆಯಿಂದ ಹೊರಗೆ ಕಾಲಿಡದಷ್ಟು ಮಳೆ ಅನ್ನುವ ಮಾತು ಅಕ್ಷರಶಃ ಹುಸಿಯಾಗಿತ್ತು. ಜೂನ್ ಆಯಿತು, ಜುಲೈ ಆಯಿತು… ಆಗಸ್ಟ್ ಬಂದರೂ ಮಳೆಯ ಸುದ್ದಿಯಿಲ್ಲ. ಜೂನ್‌ನಲ್ಲಿ ಬಂದಿಲ್ಲವಲ್ಲ… ಹಾಗಾದ್ರೆ ಜುಲೈನಲ್ಲಿ ಯರ್ರಾಬಿರ್ರಿ ಮಳೆ? ಅಯ್ಯೋ ಜುಲೈ ನಲ್ಲಿಯೂ ಮಳೆ ಬಂದಿಲ್ಲಾಂದ್ರೆ ಮುಗೀತು? ಆಗಸ್ಟ್‌ನ ಕಕ್ಕಡ ವಾಸದಲ್ಲಿ ಸರಿಯಾಗಿ ಚಚ್ಚತ್ತೆ ಎಲ್ಲಾ ಕಡೆ ಜೋರು ಪ್ರವಾಹ ಆಗತ್ತೆ? ಎಷ್ಟೆಲ್ಲಾ ಮನೆ ಬಿದ್ದು ಏನೆಲ್ಲಾ ಅನಾಹುತಗಳಾಗಬಹುದೋ ಎಂದು ಮೇಲಿಂದ ಮೇಲೆ ಲೆಕ್ಕ ಹಾಕಿದ್ದೇ ಬಂತು. ಆದರೆ ಮಳೆುಂ ಸುಳಿವಿಲ್ಲ. ಹಾಗಾಗಿ ಯಾವತ್ತೂ ಬತ್ತದ ಬಾವಿಗಳೆಲ್ಲ ಒಂದೊಂದೆ ಒಂದೊಂದೇ ಬತ್ತಲಾರಂಭಿಸಿ, ಜೀವನ ಒಂದು ಮಟ್ಟಿಗೆ ಫಜೀತಿಗಿಟ್ಟುಕೊಂಡಿತು.

ಮಳೆ ಶುರುವಾಗುವ ಹೊತ್ತಿಗೆ ಗದ್ದೆಗಳೆಲ್ಲ ನಾಟಿಯಾಗಿ, ಹಸಿರುಹಸಿರಾಗಿ ನಳನಳಿಸಬೇಕಿತ್ತು. ಆದರೆ ನೆಟ್ಟ ನಾಟಿಯಲ್ಲ ಬೇಕಾದಷ್ಟು ಮಳೆಯಿಲ್ಲದೇ, ಮೆಲ್ಲಗೆ ಹಳದಿ ಬಣ್ಣಕ್ಕೆ ತಿರುಗಲಾರಂಭಿಸಿದ್ದವು. ಇದೇ ಸಮಯದಲ್ಲೇ ಕೀಟಗಳೂ ಜಲಚರಗಳೂ ತಮ್ಮ ವಂಶಾಭಿವೃದ್ಧಿಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ. ಈ ಮಳೆಯ ದಿನಗಳು ಆರಂಭವಾದರೆ ಮುಗಿಯಿತು; ಬೆಳಿಗ್ಗೆ ಸಿಕಾಡಗಳ ಜೀರ್ ಜೀರ್ ಶಬ್ದ ಆರಂಭವಾದರೆ ಸಂಜೆಗೆ ಕಪ್ಪೆಗಳ ವಟಗುಡುವಿಕೆುಂ ಮೇಳ. ಕೊಟ್ ಕೊಟರ್… ಟುಕ್ ಟುಕ್ ಎಂತೆಲ್ಲ ಸಂಜೆಯಿಂದ ರಾತ್ರಿಯವರೆಗೆ ಅವುಗಳದ್ದೇ ಸಂಗೀತ ಸಮಾರಾಧನೆ. ಆದರೆ ಈ ಸಲ ಕಪ್ಪೆಗಳ ಇಂಥ ಯಾವುದೇ ಸದ್ದುಗಳೂ ಕಿವಿಗೆ ಬೀಳಲಿಲ್ಲ. ಇನ್ನೇನು ಒಂಚೂರು ಆಗೀಗ ಮಳೆ ಬರುತ್ತದೆನ್ನುತ್ತಲೇ ಜೀರ್… ಜೀರ್ ಎಂದು ಸಿಕಾಡಗಳು ಸದ್ದು ವಾಡುವ ಹೊತ್ತಿಗೆ ಮಳೆ ನಿಂತಾಗಿರುತ್ತಿತ್ತು.

ಕೀಟಗಳ ಸಂಖ್ಯೆಯನ್ನು ಸಮತೋಲನದಲ್ಲಿಡಲು ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುವಲ್ಲಿ ಕಪ್ಪೆಗಳ ಪಾತ್ರ ದೊಡ್ಡದು. ಇಂಥ ಕಪ್ಪೆಗಳೂ ಮಳೆಯ ಏರುಪೇರಿಗೆ ಸಿಕ್ಕು ನಲುಗುತ್ತವೆ. ಕಪ್ಪೆಗಳಲ್ಲೇ ಸಾಕಷ್ಟು ವಿಧಗಳಿದ್ದು ಕೆಲವೊಂದು ನೀರಿನಲ್ಲಿ, ಕೆಲವೊಂದು ಪೊದೆಗಳಲ್ಲಿ, ಮರದ ಮೇಲೆ ಕೆಲವು, ಇನ್ನೂ ಕೆಲವು ಹರಿವ ಜಲದ ಸ್ಥಳಗಳಲ್ಲಿ ವಾಸಿಸುವಂಥ ಕಪ್ಪೆಗಳಿವೆ. ಇವು ಎಂದಿನಂತೆ ಸಾಧಾರಣ ಮಳೆಯ ನಿರೀಕ್ಷೆಯಲ್ಲಿ, ನೀರಲ್ಲಿ ವಾಸಿಸುವ ಕಪ್ಪೆ ನೀರಿನಲ್ಲಿ, ಪೊದೆಗಳಲ್ಲಿರುವ ಕಪ್ಪೆಗಳು ಅವುಗಳ ಬುಡ ಅಥವಾ ಪಾಚಿಯ ನಡುವೆ ಮೊಟ್ಟೆ ಇಟ್ಟರೆ, ಮರದ ಮೇಲಿರುವ ಕಪ್ಪೆ, ಕೆಳಗೆ ನೀರಿನ ಒರತೆಯಿರುವ ಮರಗಳ ಮೇಲಿನ ಎಲೆಗಳನ್ನು ಜೋಡಿಸಿ ಅದರ ನಡುವೆ ಮೊಟ್ಟೆಯಿಡುತ್ತದೆ. ಹರಿುುಂವ ನೀರಿನಲ್ಲಿ ವಾಸಿಸುವ ಕಪ್ಪೆಗಳು ನೀರಿನ ಮೇಲ್ಮಟ್ಟದಲ್ಲಿರುವ ಕಲ್ಲು ಹಾಗೂ ಎಲೆಗಳ ಮೇಲೆ ಮೊಟ್ಟೆಯಿಡುತ್ತವೆ.

ಮಳೆಗಾಲದಲ್ಲಿ ನಿರೀಕ್ಷಿತ ರೀತಿಯಲ್ಲಿ ಮಳೆ ಸುರಿಯದೇ ಹೋದರೆ ಅಥವಾ ವಾರಗಟ್ಟಲೇ ಮಳೆ ಬಾರದೇ ಹೋದರೆ, ಗದ್ದೆಯಲ್ಲಿ ನಿಂತ ನೀರು, ಸಣ್ಣ ಸಣ್ಣ ಹೊಂಡಗಳಲ್ಲಿನ ನಿಂತ ನೀರೆಲ್ಲವೂ ಬತ್ತಿ ಕಪ್ಪೆಗಳು ಹಾಕಿದ ಮೊಟ್ಟೆಗಳು ಒಣಗಿ, ಅವು ಕೀಟಗಳಿಗೋ ಇಲ್ಲವೇ ಪಕ್ಷಿಗಳಿಗೋ ಆಹಾರವಾಗುತ್ತವೆ. ಪೊದೆಗಳಲ್ಲಿ ಇಟ್ಟ ಮೊಟ್ಟೆಗಳು ಇರುವೆ ಅಥವಾ ಬೇರೆಬೇರೆ ಕೀಟಗಳಿಗೆ ಆಹಾರವಾಗುತ್ತವೆ. ಮರದ ಎಲೆಗಳ ನಡುವೆ ಇಟ್ಟ ಮೊಟ್ಟೆ ಒಣಗಿಯೋ ಅಥವಾ ಕೊಳೆತೋ ಕೆಳಗಿರುವ ನೀರಿನಲ್ಲಿ ಬಿದ್ದು ಮೀನು ಏಡಿಯಂಥ ಜಲಚರಗಳಿಗೆ ಆಹಾರವಾಗುತ್ತವೆ. ಹಾಗೇ ಹರಿಯುವ ನೀರಿನ ಮೇಲ್ಮಟ್ಟದಲ್ಲಿ ಹಾಕಿದ ಮೊಟ್ಟೆಗಳು ಅಲ್ಲೇ ಒಣಗಿ ಜೀವ ಕಳೆದುಕೊಳ್ಳುತ್ತವೆ. ಇದರಿಂದಾಗಿ ಹುಟ್ಟಬೇಕಿದ್ದ ಕಪ್ಪೆಗಳ ಸಂತತಿ ಸರಿಯಾದ ಸಂಖ್ಯೆಯಲ್ಲಿ ಹುಟ್ಟದೇ ಆಯಾ ಜಾತಿಯ ಕಪ್ಪೆಗಳ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತದೆ.

ಕಪ್ಪೆಗಳು ತಮ್ಮ ಜೀವನ ನಿರ್ವಹಣೆಗೂ ಹಾಗೂ ವಂಶಾಭಿವೃದ್ಧಿಗೂ ನೀರಿನ ಮೇಲೆ ಅವಲಂಬಿತವಾಗಿರುವವು. ಮಳೆಯ ಅಭಾವದಿಂದ ಜರಿ, ನದಿ, ಹೊಳೆ, ಗದ್ದೆಗಳಲ್ಲಿ ನೀರಿಲ್ಲದಾಗಿ ಮಳೆ ಕಡಿಮೆಾಂದರೆ ಕೀಟಗಳೂ ಕಡಿಮೆಯಾಗುತ್ತವೆ. ಕೀಟಗಳೇ ಕಪ್ಪೆಗಳಿಗೆ ಆಹಾರವಾದ್ದರಿಂದ ಆಹಾರ ಸರಪಳಿ ತುಂಡಾಗುತ್ತದೆ…

ಸರಿಯಾದ ಹೊತ್ತಿಗೆ ಮಳೆಬರದೇ, ಭೂಮಿಯ ಉಷ್ಣಾಂಶ ಹೆಚ್ಚಾಗಿ, ತೇವಾಂಶ ಕಡಿಮೆಯಾದಲ್ಲಿ ಕಪ್ಪೆಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಮಳೆಯಿಲ್ಲದೇ ಶಾಖ ಹೆಚ್ಚಾದಷ್ಟೂ ಕಾಯಿಲೆಗಳು ಹೆಚ್ಚು. ಮಳೆಯ ಅಭಾವದಿಂದ ನೀರಿನ ಒರತೆಗಳು ಒಣಗಿ, ಅಳಿದುಳಿದ ನೀರಿನ ಸ್ಥಳಗಳನ್ನು ಸುತ್ತಮುತ್ತ ಇರುವ ಕಪ್ಪೆಗಳು ಹುಡುಕಿಕೊಂಡು ಬರುತ್ತವೆ. ಹೀಗೆ ಕಪ್ಪೆಗಳೆಲ್ಲ ಒಟ್ಟಾಗಿ ಬಂದಾಗ, ಅಕಸ್ಮಾತ್ ಯಾವುದೋ ಒಂದು ಕಪ್ಪೆಗೆ ಬಂದಿರುವ ರೋಗ ಇನ್ನುಳಿದ ಕಪ್ಪೆಗಳಿಗೂ ಹಬ್ಬಿ, ಅಲ್ಲಿನ ಇಡೀ ಕಪ್ಪೆಗಳ ಸಂಖ್ಯೆ ನಾಶವಾಗಿಬಿಡುವ ಅಪಾಯವೂ ಇರುತ್ತದೆ.

ಪಶ್ಚಿಮಘಟ್ಟ ಜೀವವೈವಿಧ್ಯತೆಯ ತಾಣ. ಇಲ್ಲಿ ಸಿಗುವ ಕಪ್ಪೆಗಳು ಬೇರೆಲ್ಲೂ ಸಿಗುವುದಿಲ್ಲ. ಇಲ್ಲೆಲ್ಲ ಹೀಗೆ ಮಳೆಯ ಅಭಾವವಾದಲ್ಲಿ ಹಲವಾರು ಅನನ್ಯ ಜಾತಿಯ ಕಪ್ಪೆಗಳು ನಶಿಸಿಹೋಗುವ ಸಂಭವವಿರುತ್ತದೆ. ಕಪ್ಪೆಗಳು ಕಡಿಮೆಯಾದಲ್ಲಿ ಸೊಳ್ಳೆಗಳು ಹೆಚ್ಚಾಗಿ ಮಲೇರಿಯಾ ಡೆಂಗ್ಯೂವಿನಂಥ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿರುತ್ತವೆ. ಅಲ್ಲದೇ ಇತರ ಕೀಟಗಳೂ ಹೆಚ್ಚಾಗಿ ಗಿಡ-ಮರಗಳನ್ನು ಬಾಧಿಸುವಂತಾಗುತ್ತದೆ.

ಹೀಗೆ ಹಲವಾರು ಅಡಚಣೆಗಳಿಗೆ ಸಿಲುಕಿ ಬದುಕುವ ಕಪ್ಪೆಗಳ ಸಂಖ್ಯೆ ಕಡಿಮೆಯಾದಾಗ, ಮಳೆಗಾಲದ ನಂತರ, ತಂತಮ್ಮ ಸ್ಥಳಗಳಿಗೆ ತೆರಳಿ, ಮುಂದಿನ ಮಳೆಗಾಲದಲ್ಲಿ ತಮ್ಮ ಅಡಗುದಾಣಗಳಿಂದ ಹೊರಬಂದು, ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳಲು ಸಂಗಾತಿಯನ್ನು ಹುಡುಕುವಾಗ ಕಷ್ಟವಾಗುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ