Mysore
25
overcast clouds
Light
Dark

ಸ್ವಪ್ನ ಗುಬ್ಬಚ್ಚಿ

  • ಮಧುರಾಣಿ ಎಚ್ ಎಸ್

ಅವಳು ಯಾವಾಗಲೂ ಹೆಗಲಿಗೆ ಒಂದು ಬ್ಯಾಗು ನೇತು ಹಾಕಿಕೊಂಡೆ ಓಡಾಡುವಳು. ಅವಳ ಆಕಾರಕ್ಕೊ ಅಥವಾ ಚಿಟಚಿಟನೆ ಓಡಾಡುತ್ತಾ ಅಸಂಬದ್ಧ ಮಾತಾಡುತ್ತಾ ಇರುವ ಅವಳ ಪರಿಗೋ, ಪರಿಚಿತರೆಲ್ಲ ಅವಳನ್ನು ಗುಬ್ಬಚ್ಚಿ ಅಂತಲೇ ಕರೆಯುವರು. ಇದ್ದ ಜಾಗದಲ್ಲಿ ಇರದೇ ನಿಂತಲ್ಲಿ ನಿಲ್ಲದೆ ತಿರುಗುವ ತಿರುಗಲ ತಿಪ್ಪಿಯೆಂದು ತನ್ನ ಮನೆಯವರಿಂದ ಬೈಸಿಕೊಳ್ಳುವುದು ಅವಳಿಗೆ ಹೊಸತೇನಲ್ಲ. ಇರುವ ಗೂಡೊಂದು ತನ್ನದೇ ಆಗಿರಬೇಕೆಂಬ ಹಂಬಲವೂ ಅವಳಿಗಿಲ್ಲ. ತಾನೊಂದು ಗುಬ್ಬಚ್ಚಿಯೆಂದು ಅವಳೂ ಒಪ್ಪಿಕೊಂಡಂತಿದೆ. ಈಗಿರುವ ಗೂಡು ಇತ್ತೀಚೆಗೆ ಅವಳಿಗೆ ಬೇಸರ ತರಿಸುತ್ತಿದೆ. ಹಾಗೇ ತಿರುಗಾಡುತ್ತಾ ಹೊಸ ಗೂಡು ದೊರಕುವುದೇ ನೋಡಬೇಕೆಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ ಒಂದು ವಾರದಲ್ಲೇ ಕಂಡಿದ್ದು, ಗಿಜಿಗಿಜಿಗುಡುವ ಆ ಪೇಟೆಬೀದಿಯಿಂದ ಬಲಕ್ಕೆ ತಿರುಗಿದರೆ, ಸಿಗುವ ನಿಶ್ಶಬ್ದ ಗಲ್ಲಿಯೊಳಗೆ ಅರ್ಧ ಫರ್ಲಾಂಗು ಎಡಬಲ ನಡೆದು ಹಳೇ ದಿವಾನರ ರಸ್ತೆಗೆ ಇಳಿದರೆ ಅಲ್ಲೊಂದು ಅನಾಥ ಮನೆ… ಯಾರೂ ಹೊರಗೇ ಇಣುಕದ ಮನೆ ಅದು. ಆದರೂ ಬಾಗಿಲು ಅರೆ ತೆರೆದೇ ಇತ್ತು. ಮರುದಿನವೂ ಹಾಗೇ…

ಮಳ್ಳಿ ಗುಬ್ಬಚ್ಚಿ ತುಂಬಾ ದಿನದಿಂದ ಆ ಮನೆಯ ಮೇಲೆ ಕಣ್ಣಿಟ್ಟಿದ್ದಳು. ಒಂದು ಸಂಜೆ ಕಿರ್ರನೆ ಸದ್ದು ಮಾಡುವ ಬಾಗಿಲು ತಳ್ಳುತ್ತಾ ಮೆಲ್ಲಗೆ ಮನೆಯೊಳಗೆ ತೂರಿದಳು. ಭಕ್ಕನೆ ಏನಾದರೊಂದು ಎದುರಾಗಿ ಹೆದರಿಸಿಬಿಟ್ಟರೆ..? ಅಂದುಕೊಂಡವಳಿಗೆ ಪಾದದ ಬಳಿ ಬಿಳೀ ನಾಯಿಮರಿಯೊಂದು ಧುತ್ತನೆ ಎದುರಾಗಿ ನಿಂತು ದುರುದುರು ನೋಡಿತು. ಅರೆಗಳಿಗೆ ತಡಬಡಿಸಿ ಸುಧಾರಿಸಿಕೊಂಡ ಗುಬ್ಬಚ್ಚಿ ʼಹತ್ತೆರಿಕೆ ಹಲ್ಕಾ ಮುಂಡೆದೇ..ʼ ಅಂತ ಬೈದು ಆ ಪುಟ್ಟ ಹತ್ತಿ ಉಂಡೆಯಂಥ ನಾಯಿಮರಿಯನ್ನು ತನ್ನ ಚೋಟು ಪಾದಗಳಿಂದ ರಾಡಿಸಿ ಒಳಗೆ ಹೋದಳು. ಹೆಜ್ಜೆ ಮುಂದಿಡುತ್ತಿದ್ದ ಹಾಗೆ ತೀರಾ ಎದುರು ಗೋಡೆಗೆ ತನ್ನ ನಖಶಿಖಾಂತ ನಿಲುವು ಕಾಣುವಷ್ಟು ದೊಡ್ಡ ಕನ್ನಡಿ ಅಂಟಿಕೊಂಡಿದ್ದು ವಿಚಿತ್ರ ಅನಿಸಿದರೂ ಖುಷಿಯಾಯಿತು. ಪೇಟೆಬೀದಿ ಪೋಲಿಯೊಬ್ಬ ಕುಡಿದ ಮತ್ತಿನಲ್ಲಿ ಇವಳ ಮೇಲೆ ಕವನ ಕಟ್ಟಿ ʼಓಹೋ ಗುಬ್ಬಚ್ಚಿ ಆಹಾ ಗುಬ್ಬಚ್ಚಿ.. ಮೇನಕೆಯ ಮೊಮ್ಮಗಳೇ ಶಕುಂತಲೆ ಮರಿಮಗಳೆ.. ಸನ್ನಿ ಡಿಯೋಲ್ ತಂಗಿಯೇ ಇನ್ಯಾರದೋ ಅಕ್ಕನೇ… ಎಂದೆಲ್ಲಾ ಹಾಡಿ ಹೊಗಳಿದ್ದ. ಮೊದಲು ಖುಷಿ ಅನಿಸಿದರೂ ಆಮೇಲೆ ಅವರೆಲ್ಲ ಯಾರೆಂದು ಗೊತ್ತಾಗಿ ಇವಳಿಗೆ ಸಿಟ್ಟು ಬಂದಿತ್ತು. ಆದರೂ ಅಂದಿನಿಂದ ಕನ್ನಡಿ ಮುಂದೆ ಸ್ವಲ್ಪ ಹೆಚ್ಚೇ ನಿಲ್ಲುವ ಹೊಸ ಚಾಳಿ ಅಂಟಿಕೊಂಡಿತ್ತು. ಹಾಗೆ ನೋಡಿದರೆ ಅವಳೇನೂ ನಿಂತು ನೋಡಬೇಕೆನಿಸುವಷ್ಟು ಚೆಲುವೆಯೇನಲ್ಲ. ಕೃಶ ದೇಹದ, ಬಿಳಿಚಲು ಮುಖದ, ಅಷ್ಟೇನೂ ಆಕರ್ಷಕವಲ್ಲದ ಮೈಮಾಟ. ಆದರೆ ಅವಳ ಕಣ್ಣುಗಳ ಹೊಳಪು ವಾತ್ರ ಅಲೌಕಿಕವಾಗಿತ್ತು. ಕೆಲವೊಮ್ಮೆ ತಡರಾತ್ರಿ ಓಡಾಡುವಾಗ ಬೀದಿನಾಯಿಗಳು ಬೊಗಳಿದರೆ ಅವಳು ಹಿಂತಿರುಗಿ ದುರುಗುಟ್ಟಿ ನೋಡುವಳು. ಅಷ್ಟೇ..! ಆ ನಾಯಿಗಳು ಕುಯ್‌ ಕುಯ್ ಎನ್ನುತ್ತ ಅವಳ ಕಣ್ಣ ಮಾಟಕ್ಕೆ ಹೆದರಿ ಹಿಂದೆ ಸರಿದುಬಿಡುತ್ತಿದ್ದವು. ಕೇರಿಯ ಸಣ್ಣಮಕ್ಕಳು ಇವಳು ಹೇಳಿದಂತೆ ಕೇಳುತ್ತಿದ್ದರು. ಯಾರಾದರೂ ಇವಳ ಕಣ್ಣುಗಳಲ್ಲಿ ಕಣ್ಣಿಟ್ಟು ಕೆಲಕಾಲ ನೋಡಿದರೆ ಅವರನ್ನು ಇವಳು ಕೈಗೊಂಬೆ ಮಾಡಿಕೊಂಡು ತಲೆ ಕೆಡಿಸುವಳು ಎಂದು ಕೇರಿಯ ಇತರ ಹೆಂಗಸರು ಮಾತಾಡುವರು. ಅದಕ್ಕೆ, ಅವಳು ತನ್ನನ್ನು ತಾನೇ ದೊಡ್ಡ ಮಾಟಗಾತಿಯೆಂದು ತಿಳಿದಿದ್ದಳು.

ಒಳಗೆ ಯಾರಾದರೂ ಇರಬಹುದು ಎಂಬ ಗುಮಾನಿಯಲ್ಲಿಯೇ ಇವಳು ಮನೆಯನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾ ಒಂದು ಸುತ್ತು ಹಾಕಿದಳು. ಎಲ್ಲೂ ಯಾರೂ ಕಾಣದ್ದರಿಂದ ತನ್ನ ಚೀಲವನ್ನು ರೂಮಿನಲ್ಲಿ ಮಂಚದ ಪಕ್ಕ ಇಟ್ಟು ಮೆತ್ತನೆಯ ಹಾಸಿಗೆಯ ಮೇಲೆ ಕುಳಿತು ಕೈಕಾಲು ಚಾಚಿದಳು. ಕುಂಡೆಯು ಹಾಸಿಗೆಯೊಂದಕ್ಕೆ ತಾಗಿ ಯಾವುದೋ ಕಾಲವಾಗಿದ್ದರಿಂದ ಆ ಮೆತ್ತನೆಯ ಅನುಭವ ಅವಳನ್ನು ಮೆಲ್ಲ ನಿದ್ರೆಗೆ ಜಾರಿಸಿತು. ಎಷ್ಟು ಹೊತ್ತು ಹಾಗೇ ನಿದ್ರಿಸಿದಳೋ ಅವಳಿಗೆ ಗೊತ್ತಾಗಲಿಲ್ಲ. ಕಣ್ಣು ತೆರೆದಾಗ ಬಾಗಿಲು ಮುಚ್ಚಿತ್ತು. ಹೊತ್ತು ಮುಳುಗುತ್ತಿದೆಯೋ ಹುಟ್ಟುತ್ತಿದೆಯೋ ಅರಿವಾಗದೆ ನಿಧಾನವಾಗಿ ಮೆತ್ತನೆಯ ಮಂಚವನ್ನು ಇಳಿದು ಪುಕ್ಕದಷ್ಟು ಹಗುರವಾಗಿ ಹೆಜ್ಜೆ ಹಾಕುತ್ತ ಹೊರಗೆ ಬಂದಳು. ಈಗ ತಾನೇ ಹಾಲು ಕಾಸಿಟ್ಟ ವಾಸನೆ ಅಡುಗೆಮನೆಯ ಕಡೆಯಿಂದ ಬರುತ್ತಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಈಗಷ್ಟೇ ಯಾರೋ ಶುಭ್ರಗೊಳಿಸಿ ಹೋದಂತೆ ಲಕಲಕ ಹೊಳೆಯುತ್ತಿತ್ತು. ಗುಬ್ಬಚ್ಚಿಗೆ ಹೊತ್ತು ಯಾವುದೆಂದು ಕೂಡ ಮರೆತುಹೋಗಿ ಕಾಫಿ ಕುಡಿಯುವ ಹಂಬಲ ಮೂಡಿತು. ತಂತಾನೇ ಕಾಫಿಪುಡಿ, ಸಕ್ಕರೆ, ಲೋಟ, ಎಲ್ಲವನ್ನು ಎತ್ತಿಕೊಂಡು ಸಲೀಸಾಗಿ ಕಾಫಿ ಮಾಡಿಕೊಂಡು ಬಂದು ಮುಂಬಾಗಿಲ ಹಿಂದಿನ ವೆರಾಂಡಾದಲ್ಲಿ ಕೂತು ಕಾಫಿ ಹೀರಿ, ಲೋಟವನ್ನು ಸಿಂಕಿಗೆ ಹಾಕಿ ರೂಮಿನ ಕಡೆಗೆ ನಡೆದುಬಂದಳು. ಕಾಫಿ ಕುಡಿದ ಅನುಭವ ಹಿತವಾಗಿತ್ತು. ಇದೆಲ್ಲ ಹೊಸದೆಂದು ಅಲೆಮಾರಿಯಾದ ಗುಬ್ಬಚ್ಚಿಗೆ ಅನಿಸಲೇ ಇಲ್ಲ. ಇದು ತನ್ನ ಮನೆಯೇ… ಇಲ್ಲಿ ಹೀಗೆ ಮಲಗಿ, ಹೀಗೆ ಎದ್ದು, ಹಿತ್ತಲಲ್ಲಿ ಕಾಫಿ ಕುಡಿದ ಅನುಭವ ಇದೇ ಮೊದಲಲ್ಲ ಎನಿಸಿತು. ವಿಚಿತ್ರ! ಮುಂದಿನ ಕೆಲವು ಗಂಟೆಗಳು ತನ್ನಂತಾನೆ ಸರಿದು ಹೋದವು. ಯಾತ್ರಿಕವಾಗಿ ಹಾಲಿನ ಪಾತ್ರೆಯನ್ನು ಫ್ರಿಜ್ಜಿಗೆ ಇಟ್ಟು ರಾತ್ರಿ ಊಟಕ್ಕೆಂದು ಒಂದಷ್ಟು ಬ್ರೆಡ್, ಮೀಟ್ ಹಾಗೂ ಸ್ಯಾಂಡ್ವಿಚ್ ವಾಡುವ ಸಾಧನಗಳನ್ನು ತೆಗೆದಿಟ್ಟುಕೊಂಡಳು. ನಂತರ ವಿಶಾಲವಾದ ಪೋರ್ಟಿಕೋನಿಂದ ನಡೆದು ಹಿತ್ತಲಿಗೆ ಬಂದಳು. ಅಚ್ಚ ಬಿಳಿ ಹಾಗೂ ತಿಳಿಗುಲಾಬಿ ಬಣ್ಣಗಳ ಟೀ ಶರ್ಟ್, ಕ್ಯಾಮಿಸೋಲ್ ಹಾಗೂ ಕಾಟನ್ ನೈಟಿಗಳನ್ನು ನಿತ್ಯಕರ್ಮವೆಂಬಂತೆ ಕ್ಲಿಪ್ಪಿನ ಮಂಗಪಟ್ಟಿನಿಂದ ಬಿಡಿಸಿ ಭುಜಕ್ಕೇರಿಸುತ್ತ ಕಡೆಯಲ್ಲಿ ಉಳಿದ ಸಾಕ್ಸ್‌ಗಳನ್ನು ಕ್ಲಿಪ್ಪಿನಿಂದ ಕಿತ್ತು ಬೇರ್ಪಡಿಸಿ ತುದಿಗೈಯಲ್ಲಿ ಹಿಡಿದು ತಂದು ಬಾಗಿಲ ಹಿಂದಿದ್ದ ಟಬ್ಬಿನೊಳಗೆ ಎಸೆದಳು. ಭುಜದ ಮೇಲಿದ್ದ ಬಟ್ಟೆಗಳನ್ನು ವಾರ್ಡ್ ರೋಬಿನೊಳಗಿಟ್ಟಳು. ಅಲ್ಲಿದ್ದ ಕ್ರೀಮಿನ ಡಬ್ಬಿಯೊಂದನ್ನು ಹೊರತೆಗೆದು ಮುಖ ಮುಂಗೈ ಹಾಗೂ ಕುತ್ತಿಗೆಯ ಬಳಿ ಲೇಪಿಸಿಕೊಂಡಳು. ಇದೆಲ್ಲವೂ ಸ್ವಲ್ಪ ಮಾದಕವೆನಿಸುವ ಹೊತ್ತಿಗೆ ಸಂಗೀತ ಕೇಳಬೇಕೆಂಬ ಬಯಕೆ ಹುಟ್ಟಿತು. ಮೆಲ್ಲನೆದ್ದು ನಡುಮನೆಗೆ ಬಂದು ಅಲ್ಲಿದ್ದ ಯಾವುದೋ ಒಂದು ಕ್ಯಾಸೆಟ್ಟನ್ನು ಟೇಪ್ ರೆಕಾರ್ಡರಿಗೆ ತಗುಲಿಸಿ ಪ್ಲೇ ಬಟನ್ ಒತ್ತಿದಳು. ಶುರುವಾದ ಸಂಗೀತವೊಂದು ಅವಳನ್ನು ಸಂಪೂರ್ಣವಾಗಿ ಈ ಲೋಕದಿಂದ ಬೇರ್ಪಡಿಸಿತು. ಈಗ ಆ ಪುಟ್ಟ ನಾಯಿಮರಿಯು ಅವಳನ್ನು ಪರಕೀಯಳೆಂದು ನೋಡದೆ ಕುಯ್ ಕುಯ್ ಮಾಡುತ್ತಾ ಇವಳ ಸುತ್ತಲೂ ಗಿರಗಿರನೆ ಗಿರಕಿ ಹೊಡೆಯಲು ಆರಂಭಿಸಿತು. ಅವಳಿಗೆ ಈವರೆಗಿನ ಮನೆಗಳಂತಲ್ಲದೆ ಈ ಮನೆ ತನ್ನದೇ ಎನ್ನುವಷ್ಟು ಹಿತವಾಗಿತ್ತು.

ಹೆಗಲಿಗೆ ನೇತು ಬಿಟ್ಟುಕೊಳ್ಳುವ ಒಂದು ಚರ್ಮದ ಬ್ಯಾಗನ್ನು ಬಿಟ್ಟರೆ ತನ್ನದೆಂಬುದು ಏನೂ ಈ ಭೂಮಿಯ ಮೇಲಿಲ್ಲ ಎಂಬಷ್ಟು ನಿರಾಳವಾಗಿ ಬದುಕುತ್ತಿದ್ದ ಗುಬ್ಬಚ್ಚಿಗೆ ಈ ಮನೆಯು ಕರ್ಮದ ನಂಟಿನಂತೆ ಅಂಟಿಕೊಂಡು ಇಂಚಿಂಚೂ ನಿಧಾನವಾಗಿ ಒಳಗೆಳೆದುಕೊಳ್ಳುತ್ತಿತ್ತು. ತಾನು ಇಲ್ಲಿಯೇ ಹೀಗೆ ಬೆರೆತು ಮಸುಕಾಗುತ್ತಿರುವುದು ಗೊತ್ತಾದರೂ ಅದರಲ್ಲಿ ಅಡಗಿದ್ದ ಅವ್ಯಕ್ತ ಹಿತವೊಂದು ಗುಬ್ಬಚ್ಚಿಯನ್ನು ಎಲ್ಲದಕ್ಕೂ ಒಪ್ಪಿಕೊಳ್ಳುವಂತೆ ಮಾಡಿತು. ದಿನವೂ ಹೀಗೇ ಮಾಡುವಳೇನೋ ಎಂಬಂತೆ ಹೆಚ್ಚು ಶ್ರಮವಿಲ್ಲದೆ ರಾತ್ರಿಗೆ ಮೀಟ್ ಸ್ಯಾಂಡ್ವಿಚ್ ಮಾಡಿ ತಿಂದು ಅಡುಗೆಮನೆಯನ್ನು ಸ್ವಚ್ಛಗೊಳಿಸಿ ರೂಮಿಗೆ ಬಂದಳು. ನಾಯಿಮರಿಯು ರೂಮಿನಲ್ಲಿ ಮಂಚದ ಕೆಳಗೆ ಗಿರಗಿರನೆ ಸುತ್ತು ಹೊಡೆಯುತ್ತಾ ನೆಮ್ಮದಿಯಾಗಿ ಓಡಾಡಿಕೊಂಡಿತ್ತು. ಮೆತ್ತನೆಯ ಹಾಸಿಗೆಗೆ ಬೆನ್ನು ಕೊಟ್ಟು ಭಾರವನ್ನೆಲ್ಲ ಮಂಚದ ಕೈಗೊಪ್ಪಿಸಿ ಹತ್ತಿಯಂತೆ ಹಗುರಾಗಿ ನೆಮ್ಮದಿಯಿಂದ ದಿಂಬಿಗೊರಗಿದಳು. ಸೀಲಿಂಗ್‌ಗೆ ಅಂಟಿಕೊಂಡಿದ್ದ ಕಾಫಿಬಣ್ಣದ ಫ್ಯಾನ್ ಅನ್ನು ತದೇಕಚಿತ್ತಳಾಗಿ ನೋಡತೊಡಗಿದಳು. ಹಾಗೆ ಕಣ್ಣು ಮುಚ್ಚಿ ನಿದ್ರೆಗೆ ಜಾರಿದವಳು ಎಚ್ಚರಾದಾಗ ಇನ್ನೂ ಹಗುರಾಗಿದ್ದಳು. ಮೊದಲಿನಂತೆ ಈಗ ಅವಳಿಗೆ ಕಾಫಿ ಮಾಡಿಕೊಳ್ಳಲು ಓಡುವ ಆತುರವಿರಲಿಲ್ಲ. ಇಲ್ಲಿ ಎಲ್ಲವೂ ತನ್ನದೇ ಆಗಿರುವಾಗ ಓಡುವಂಥ ತುರ್ತಾದರೂ ಏನಿತ್ತು? ಇಂದೇಕೋ ಏನಾದರೂ ಬೇರೆ ತಾಯಾರು ಮಾಡಬೇಕೆಂಬ ಹಂಬಲ ಶುರುವಾಯಿತು. ಮೆಲ್ಲನೆ ದೊಡ್ಡ ಪಾತ್ರೆಗಳನ್ನು ಕೆಳಗಿನ ಕಟ್ಟೆಯಿಂದ ಮೇಲೆತ್ತಿಟ್ಟುಕೊಂಡು ಅಕ್ಕಿ ಬೇಳೆ ತರಕಾರಿ ಎಲ್ಲವನ್ನೂ ಸೇರಿಸಿ ಅಡುಗೆ ಮಾಡುವ ಖುಷಿ ಹೊಕ್ಕಿತು. ಯಾರಾದರೂ ಮಾಡಿದ್ದನ್ನು ತಿನ್ನಲೇ ನೂರೆಂಟು ಮಾತಾಡುತ್ತಿದ್ದ ಗುಬ್ಬಚ್ಚಿ ಈಗ ತಾನೇ ಈ ಅಗಾಧ ಮೌನದಲ್ಲಿ ಮುಳುಗಿ ಅಡುಗೆಗೆ ತೊಡಗಿದಳು. ರುಚಿಕಟ್ಟಾದ ಮೂರ್ನಾಲ್ಕು ರೀತಿ ಅಡುಗೆ ಮುಗಿಸಿದ ನಂತರ ಯಾರೋ ಉಣ್ಣಲು ಬರುತ್ತಿರುವರು ಎಂಬಂತೆ ಕಾಯುತ್ತಾ ಯೋಚಿಸತೊಡಗಿದಳು. ಇದೆಲ್ಲ ಯಾಕಾಗಿ ಮಾಡುತ್ತಿದ್ದಳೋ ಅವಳಿಗೂ ಗೊತ್ತಿಲ್ಲ. ಮೆಲ್ಲನೆ ವೆರಾಂಡದ ಬಳಿ ಬಂದು ನೋಡಿದರೆ ಹೊರಬಾಗಿಲು ತಾನು ಒಳಬಂದಾಗ ತೆರೆದಷ್ಟು ಕೂಡ ತೆರೆದುಕೊಳ್ಳದೇ ಗಟ್ಟಿಗೆ ಕಚ್ಚಿಕೊಂಡಿತ್ತು. ಅರೇ, ತಾನು ಮಲಗುವ ಮೊದಲು ಬಾಗಿಲನ್ನೇ ಗಮನಿಸಲಿಲ್ಲವಲ್ಲಾ ಅಂದುಕೊಂಡು ತಲೆ ಕೊಡವಿದಳು. ಯಾಕೋ ಗುಬ್ಬಚ್ಚಿಗೆ ಮುಚ್ಚಿದ ಬಾಗಿಲು ಹಿತವೆನಿಸಿತು. ಅದನ್ನು ಹಾಗೇ ಇರಲು ಬಿಟ್ಟು ವಾಪಸು ಮನೆಯೊಳಗೆ ನಡೆದಳು. ಅವಳು ಇಷ್ಟು ಕಾಲ ಮುಚ್ಚಿದ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡು ಬದುಕಿದ ದಿನಗಳೇ ಇರಲಿಲ್ಲ. ಮನೆಯಿಂದ ಮನೆಗೆ, ಜನದಿಂದ ಜನರನ್ನು ಮಾತನಾಡಿಸುತ್ತಾ ರಾತ್ರಿ ನಿದ್ದೆಯಲ್ಲೂ ಕೈಕಾಲು ಜಾಡಿಸುತ್ತಾ ನಡುರಾತ್ರಿಯಲ್ಲಿ ಎದ್ದು ಏನನ್ನಾದರೂ ಮುಕ್ಕುತ್ತಾ ತನ್ನ ಸುತ್ತಲ ಎಲ್ಲವೂ ತನ್ನದೇ ಎಂಬಂತೆ ಬದುಕಿದ ಗುಬ್ಬಚ್ಚಿ ಈಗ ಈ ಏಕತಾನತೆಯೇ ಬದುಕು ಎಂಬಂತೆ, ಆ ಮನೆಯೇ ತನ್ನ ಅಸ್ತಿತ್ವ ಎಂಬಂತೆ, ಎಲ್ಲದರಿಂದ ಕಳೆದುಹೋದವಳಂತೆ ಆರಾಮವಾಗಿದ್ದಾಳೆ.

ಇತ್ತೀಚೆಗೆ ಅವಳು ಒಮ್ಮೊಮ್ಮೆ ವೈನ್ ಕುಡಿಯುತ್ತಾಳೆ, ಬರಗೆಟ್ಟವರಂತೆ ಸ್ಯಾಂಡ್ ವಿಚ್ ತಿನ್ನುತ್ತಾಳೆ. ಸಕ್ಕರೆ ಹಾಕದ ಟೀಯನ್ನು ಗಟಗಟ ಕುಡಿಯುತ್ತಾಳೆ. ಮತ್ತೊಂದು ದಿನ ಹಿತ್ತಿಲಿನಲ್ಲಿ ಫುಟ್ಬಾಲ್ ಆಡುತ್ತಾಳೆ, ಒಬ್ಬಳೇ ಚೆಸ್ ಆಡುತ್ತಾಳೆ. ಒಮ್ಮೊಮ್ಮೆ ದಿವಾನರ ಬೀದಿಯ ಹಿರಿಗರತಿ ಶಂಕರಮ್ಮನಂತೆ ಶುದ್ಧ ಶಾಖಾಹಾರಿ ಅಡುಗೆ ಮಾಡಿಕೊಂಡು ನೆಲದ ಮೇಲೆ ಕೂತು ಊಟ ಮಾಡುತ್ತಾಳೆ. ಆ ಮನೆಯ ವಿಲಾಸಿ ಬಾತ್‌ಟಬ್‌ನಲ್ಲಿ ಕುಳಿತು ಗಂಟೆಗಟ್ಟಲೆ ಜಾಸ್ ಮ್ಯೂಸಿಕ್ ಕೇಳುತ್ತಾಳೆ. ಇದ್ದಕ್ಕಿದ್ದಂತೆ ಶೋಕೇಸಿನಲ್ಲಿದ್ದ ಕನ್ನಡಕವನ್ನು ಮೂಗಿನ ಮೇಲಿಟ್ಟು ಇಂಗ್ಲಿಷ್ ಪತ್ರಿಕೆಯೊಂದನ್ನು ಒಂದಕ್ಷರವೂ ಬಿಡದೆ ಓದುತ್ತಾಳೆ. ರಾತ್ರಿಯಿಡೀ ಬಿಕಿನಿ ಹಾಕಿಕೊಂಡು ತೂಗುಕುರ್ಚಿಯಲ್ಲಿ ತಲೆಯೆತ್ತಿ ತುಂಬಿದ ಕಣ್ಣಿನಲ್ಲಿ ಮಡುಗಟ್ಟಿದ್ದ ನೀರನ್ನು ಸುಮ್ಮನೆ ಹೊರಹೋಗಲು ಬಿಡುತ್ತಾ ನಿರುಮ್ಮಳವಾಗಿ ಕೂತಿರುತ್ತಾಳೆ.

ಈಗೀಗ ಅವಳಿಗೆ ಮುಚ್ಚಿದ ಬಾಗಿಲಿನ ಹೊರಗೆ ಹೇಳಿಕೊಳ್ಳುವಂಥ ಆಸಕ್ತಿ ಏನೂ ಉಳಿದಿಲ್ಲ. ನಡುಮನೆಯಲ್ಲಿ ಟೇಬಲ್ ಮೇಲೆ ಬೇಸರದ ಮುಖ ಹೊತ್ತಿರುವ ಫೋಟೋದೊಳಗಿನ ಸುಂದರಿಯೊಬ್ಬಳು ಆಗಾಗ ಇವಳ ಬಳಿ ಮಾತಾಡುತ್ತಾಳೆ. ತಾನು ಈ ಮನೆಗೆ ಬಂದ ಹೊತ್ತು, ದೂರದ ತನ್ನ ದೇಶದಿಂದ ಪ್ರೀತಿಸಿದ ಹುಡುಗನ ಜೊತೆ ಹಿಂದೆ ಮುಂದೆ ನೋಡದೆ ಈ ದೇಶಕ್ಕೆ ಹೊರಟು ಬಂದದ್ದು, ಈ ಮನೆಯಲ್ಲಿದ್ದ ತನ್ನ ಹುಡುಗನ ಅಪ್ಪ-ಅಮ್ಮ ಅಗಾಧ ಪ್ರೀತಿಯಿಂದ ತನ್ನನ್ನು ಒಳಗೊಂಡದ್ದು… ಎಷ್ಟೋ ವರ್ಷಗಳ ಹೊರಗಿರುವ ಪ್ರಪಂಚಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ಈ ಮನೆಯಲ್ಲಿ ತಾನು ಬದುಕಿದ್ದು, ಯಾರೂ ಕೊಡಲಾಗದ ಪ್ರೀತಿಯನ್ನು ತನ್ನ ಹುಡುಗ, ಈ ಮನೆಯ ರೂಪದಲ್ಲಿ ತನಗೆ ಮೊಗೆಮೊಗೆದು ಕೊಟ್ಟದ್ದು, ಹಾಗೆ ಒಂದು ದಿನ ಮುಚ್ಚಿದ ಬಾಗಿಲ ಹಿಂದೆ ತನ್ನನ್ನು ಬಿಟ್ಟು ಹೊರಗೆ ಹೋದ ಅವರನ್ನೆಲ್ಲಾ ಈಗಲೂ ತಾನು ಕಾಯುತ್ತಿರುವುದು, ಯಾರೂ ಬರದ ಈ ಬಾಗಿಲೊಳಗೆ ಗುಬ್ಬಚ್ಚಿ ಪುರ್ರನೆ ಹಾರಿ ಬಂದದ್ದು… ಮತ್ತು ಈಗ ಆ ಗುಬ್ಬಚ್ಚಿಯು ತಾನಾಗಿ ತನ್ನ ಬದುಕು ಬದುಕುತ್ತಿರುವುದು… ಹೀಗೆ ಅವರಿಬ್ಬರೂ ಎಲ್ಲವನ್ನೂ ಮಾತಾಡುತ್ತಾರೆ. ಗುಬ್ಬಚ್ಚಿಗೆ ಈ ಬದುಕು ಈಗ ತನ್ನದಾಗಿದೆ.

ಈಗೀಗ ಗುಬ್ಬಚ್ಚಿ ತನ್ನ ಮುಂಗೈಯ ಮೇಲೆ ಮೂಡುವ ನವಿರು ನರಿಗೆಗಳನ್ನು ಎವೆಯಿಕ್ಕದೆ ನೋಡುತ್ತಾಳೆ. ಹಗಲೋ ರಾತ್ರಿಯೋ ತಿಳಿಯದ ಗಳಿಗೆಯಲ್ಲಿ ನಡುಮನೆಯ ನಿಲುವುಗನ್ನಡಿಯಲ್ಲಿ ಕೊಂಚ ಬಾಗಿದಂತಾದ ತನ್ನ ಬೆನ್ನನ್ನು ಮುಟ್ಟಲು ಪ್ರಯತ್ನಿಸುತ್ತಾಳೆ. ಬಾಗಿಲ ಹೊರಗೆ ಎಷ್ಟು ವರ್ಷಗಳು ಕಳೆದಿರಬಹುದು? ಲೆಕ್ಕ ಹಾಕಲು ತೊಡಕಾಗಿ ಅಚ್ಚರಿಪಡುತ್ತಾಳೆ. ಇಲ್ಲಿನ ಕಿಟಕಿಗಳಲ್ಲಿ ಸದಾ ಬೆಳಕು ಇಣುಕುತ್ತಲೇ ಇರುತ್ತದೆ. ಆದರೆ ತಾನು ನಿದ್ರಿಸಬೇಕೆಂದಾಗ ವಾತ್ರ ಇದ್ದಕ್ಕಿದ್ದಂತೆ ಪರದೆ ಸರಿದಂತಾಗಿ ಎಲ್ಲೆಲ್ಲೂ ತಿಳಿಗತ್ತಲು ಮೂಡುತ್ತದೆ. ಯಾರೊ ಲಾಲಿ ಹಾಡಿದಂತಾಗಿ ಮತ್ತು ಬರಿಸುವ ನಿದ್ರೆೊಂಂದು ಆಕ್ರಮಿಸುತ್ತದೆ. ಅದರ ಆಕ್ರಮಣಕಾರಿ ಬಲವಂತಿಕೆಗೆ ಸೋತು ಗುಬ್ಬಚ್ಚಿ ಕಣ್ಣು ಮುಚ್ಚಿಕೊಳ್ಳುತ್ತಾಳೆ. ಕಣ್ತೆರೆದಾಗ ಅದೇ ತಿಳಿಯಾದ ಬೆಳಕು, ಬಿಸಿಬಿಸಿ ಕಿರಣಗಳು, ಚುಮುಗುಡುವ ಸುಖದ ತಂಗಾಳಿ, ಈ ಸುಖವಾದ ನಿದಿರೆ, ಎಚ್ಚರ, ಆನಂದ, ಇವೆಲ್ಲ ಬಿಟ್ಟು ಎಲ್ಲಾದರೂ ಓಡಿ ಹೋಗಬೇಕೆಂಬ ಬಯಕೆ ಗುಬ್ಬಚ್ಚಿಗೆ ಒಮ್ಮೆುೂಯೂ ಬಂದದ್ದಿಲ್ಲ. ಈಗ ಹೊರಗೆ ಬಹುಶಃ ಕತ್ತಲಾಗಿರಬಹುದು. ಅವಳು ಒಳಬಂದಾಗ ಅವಳನ್ನೇ ದುರುಗುಟ್ಟುತ್ತಿದ್ದ ರಸ್ತೆ ತುದಿಯ ವಾಮೂಲಿ ಭಿಕಾರಿಯೊಬ್ಬ ಇನ್ನೂ ಬದುಕಿರುವನೊ? ಪೇಟೆಬೀದಿಯ ಮೂರನೇ ತಿರುವಿನಲ್ಲಿ ಮಂಡಕ್ಕಿ ಅಂಗಡಿ ಇಟ್ಟುಕೊಂಡಿದ್ದ ಸಿದ್ಧಶೆಟ್ರು ಎರಡು ರೂಪಾಯಿಗೆ ಕಾರ ಕೊಡಲು ಬರುವುದಿಲ್ಲವೆಂದು ಇವಳೊಟ್ಟಿಗೆ ಜಗಳ ಆಡುವಾಗ ಇದ್ದ ಹಾಗೆ ಇನ್ನೂ ಗಟ್ಟಿಮುಟ್ಟಾಗಿ ಇರುವರೊ? ಅಕಾರಣವಾಗಿ ಇವಳನ್ನು ಆದರಿಸುವ, ನಡುಮನೆಯಲ್ಲಿ ಕುಳ್ಳಿರಿಸಿ ಹೊಟ್ಟೆ ತುಂಬಾ ತಿನ್ನುವಷ್ಟು ಊಟ… ಕೋಸುಂಬರಿ… ಪಲ್ಯ… ಮುಗಿದಾಗ ಕೈತುಂಬಾ ಮೂರು ದಿನಕ್ಕಾಗುವಷ್ಟು ತಿನಿಸುಗಳನ್ನು ಕೊಡುತ್ತಿದ್ದ ವಸಂತಮ್ಮ ಈಗಲೂ ತಾವೇ ಅಡುಗೆ ವಾಡುತ್ತಾರೋ? ಇನ್ನೇನು ಬೀದಿನಾಯಿಗಳು ಕಚ್ಚಿಬಿಟ್ಟವು ಎನ್ನುವಷ್ಟರಲ್ಲಿ ಅವಳ ಕೈ ಹಿಡಿದು ಎಳೆದು ಸೈಕಲ್ ಮೇಲೆ ಕೂರಿಸಿಕೊಂಡು ಪರಾರಿಯಾಗಿ ಅವಳ ಜೀವ ಉಳಿಸಿದ ಆಚೆ ಬೀದಿಯ ತರುಣನೊಬ್ಬ ಈಗ ಹೇಗಿರಬಹುದು?

ಗುಬ್ಬಚ್ಚಿಗೆ ಸ್ಯಾಂಡ್ರ ಈಗ ಎಲ್ಲರಿಗಿಂತ ಪ್ರೀತಿಪಾತ್ರಳು. ಈಗೀಗ ಅವಳಿಗೆ ಸ್ಯಾಂಡ್ರ ಬರುವವರೆಗೂ ಎಲ್ಲವನ್ನೂ ನಿಭಾಯಿಸಬೇಕು ಎಂಬ ಹುಕಿ ಹತ್ತಿಬಿಟ್ಟಿದೆ. ಕೈ ಮೇಲಿನ ಸುಕ್ಕು ಕಣ್ಣ ಕೆಳಗಿನ ಕಪ್ಪು ಕಲೆ, ಬಾಚಿದಾಗ ಕೈಗೆ ಬರುವ ಮುಷ್ಟಿಯಷ್ಟು ತಲೆಕೂದಲು ಕೆಲವೊಮ್ಮೆ ದಿನಗಟ್ಟಲೆ ನಿಲ್ಲದ ಕೆಮ್ಮು, ಯಾವುದೂ ಗುಬ್ಬಚ್ಚಿಗೆ ನೋವು ಕೊಡುವುದಿಲ್ಲ. ತಾನು ಬರುವಾಗ ತಂದ ಬ್ಯಾಗನ್ನು ಮಾತ್ರ ಒರೆಸಿ ಒಪ್ಪವಾಗಿಟ್ಟುಕೊಂಡಿದ್ದಾಳೆ. ಮನೆಯೊಡತಿ ಸ್ಯಾಂಡ್ರ ಬಂದ ಮೇಲೆ ಈ ಚೀಲವನ್ನು ಮಾತ್ರವೇ ಹೆಗಲಿಗೇರಿಸಿ ಹೊರಟು ಬಿಡಬೇಕೆಂದು ಪ್ರತಿಬಾರಿ ಸ್ಯಾಂಡ್ವಿಚ್ ತಿನ್ನುವಾಗ ಅಂದುಕೊಳ್ಳುತ್ತಾಳೆ. ಒಮ್ಮೊಮ್ಮೆ ಅವಳಿಗೆ ತನ್ನ ಸುತ್ತಲೂ ತಿರುಗುವ ಈ ನಾಯಿಮರಿಗೆ ತಿನ್ನಲು ಏನನ್ನು ಕೊಡದಿರುವುದು ಬಾಧೆ ಎನಿಸುತ್ತದೆ. ಆದರೆ ಆ ಮರಿಗೆ ಯಾವುದರ ಪರಿವೆಯೂ ಇದ್ದಂತಿಲ್ಲ. ಕೆಲವೊಮ್ಮೆ ಅದು ಒಂದು ರೋಬೋ ಇರಬಹುದು ಎಂದು ಗುಬ್ಬಚ್ಚಿಯೂ ಯೋಚಿಸುತ್ತಾಳೆ.

ಅಂದು ರಾತ್ರಿ ಎಚ್ಚರವಾದಾಗ ಗುಬ್ಬಚ್ಚಿ ಮಂಚದ ಮೇಲೆ ಮಲಗಿರಲಿಲ್ಲ. ಮಂಚದ ಮೇಲಿನ ಹಾಸಿಗೆಗಿಂತಲೂ ಮೆತ್ತಗಿನ ಯಾವುದೋ ವಸ್ತುವಿನ ಮೇಲೆ ಮಲಗಿದ್ದಳು. ಮಲಗಿದ್ದಳು ಎನ್ನುವುದಕ್ಕಿಂತಲೂ ಇದ್ದ ಜಾಗದಲ್ಲೇ ಕಣ್ಣು ತೆರೆದಳು. ಹೆಗಲಿನಲ್ಲಿ ಚರ್ಮದ ಚೀಲ ಇಲ್ಲದಿರುವುದು ಅವಳಿಗೆ ಸ್ವಲ್ಪ ಅವಾಕ್ಕೆನಿಸಿತು. ಅವಳು ಆ ಚೀಲದಲ್ಲಿ ಏನೇನೋ ಉಪಯುಕ್ತ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದಳು. ಈಗ ಇದ್ಯಾವುದೋ ನಿರ್ಜನ ಪ್ರದೇಶದಲ್ಲಿ ಎಚ್ಚೆತ್ತಾಗ ನಾಯಿಮರಿ ಇಲ್ಲದೆ ತನ್ನ ಬ್ಯಾಗು ಇಲ್ಲದೆ ಹೀಗೆ ಹಗುರವಾಗಿ ಕೂತಿರುವುದು ಅವಳಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಅನತಿ ದೂರದಲ್ಲಿ ಸಂತೆಪೇಟೆಯ ಸಮಸ್ತ ಜನಸಂದಣಿ ಕಾಣುತ್ತಿತ್ತು. ಆದರೆ ಅವರೆಲ್ಲರೂ ಬಿಸಿಲುಕುದುರೆಗಳಂತೆ ಈಗ ಕಂಡು ಹೀಗೆ ಮಾಯವಾಗತೊಡಗಿದರು. ನಿಂತ ಜಾಗದಲ್ಲೇ ಎರಡು ಸುತ್ತು ಹಾಕಿದವಳಿಗೆ ದೂರದಲ್ಲಿ ಸ್ಯಾಂಡ್ರಾ ನಗುತ್ತ ನಿಂತಿರುವಂತೆ ಕಂಡಿತು. ಅವಳ ಮನೆಯನ್ನು ಇಷ್ಟು ಕಾಲ ತಾನು ಅಚ್ಚುಕಟ್ಟಾಗಿ ಕಾಪಾಡಿರುವುದನ್ನು ಹೇಳಬೇಕೆಂದು ಗುಬ್ಬಚ್ಚಿ ತಡಬಡಿಸಿದಳು ಅಥವಾ ಅವಳ ವಸ್ತುಗಳನ್ನು ಬಳಸಿದ್ದಕ್ಕಾಗಿ ಸ್ಯಾಂಡ್ರಾ ಇವಳ ಮೇಲೆ ಕೋಪಗೊಳ್ಳುವಳೇನೋ ಎಂಬ ಸಣ್ಣ ಭಯವೊಂದು ತಲೆದೋರಿ ಗುಬ್ಬಚ್ಚಿ ಮಾತಿಲ್ಲದೆ ಮೂಕಳಾಗಿ ಎಲ್ಲವನ್ನು ನೋಡುತ್ತಿದ್ದಳು. ಕಥೆಯಲ್ಲಿ ಮೊದಲಿಗೆ ಬಂದಿದ್ದ ಚಿಲಿಪಿಲಿಗುಡುವ ಅಲೆವಾರಿ ಪುಟಾಣಿ ಕೃಶದೇಹಿ ಗುಬ್ಬಚ್ಚಿಗೆ ಈ ಮೂಕದೆವ್ವದಂತಹ ಹೊಸ ಗುಬ್ಬಚ್ಚಿಯ ಮೇಲೆ ಸಿಟ್ಟು ಬೇಸರ ಬರತೊಡಗಿತು. ಇನ್ನೇನು ಎಲ್ಲವೂ ಮುಗಿಯುತ್ತಿತ್ತು, ಅಷ್ಟರಲ್ಲಿ ಮುಖದ ಮೇಲೆ ಯಾರೋ ನೀರೆರಚಿದಂತಾಗಿ ಬೆಚ್ಚಿ ಬಿದ್ದ ಗುಬ್ಬಚ್ಚಿ ತಡಬಡಿಸಿ ಎದ್ದು ನೋಡಿದಳು. ಪಕ್ಕದಲ್ಲಿ ಅಮ್ಮ ನಿಂತಿದ್ದಳು. “ಅಯ್ಯಾ ಮೂದೇವಿ, ಯಾಪಟಿ ಮಲಗತಿ ಎದ್ದಳು… ಬರೇ ಮಾಡಿದ್ದು ತಿನ್ನಕೇ ಈ ಸಂಭ್ರಮ… ಬಡಕೊಂಡರೂ ಸಿನಿಮ ನೋಡದು ಬಿಡಲ್ಲ ಹೀಗೆ ಹುಚ್ಚುಚ್ಚಾಡದೂ ಬಿಡಲ್ಲ. ಎಷ್ಟು ಕೈಕಾಲು ವದರತಿ, ಥೂ ಪೀಡೆಯೇ…” ಅರಚಲು ತೊಡಗಿದಳು. ಗುಬ್ಬಚ್ಚಿ ಹೆಗಲಿಗೆ ಚರ್ಮದ ಬ್ಯಾಗು ಏರಿಸಿಕೊಂಡು ಮಾತಾಡದೆ ಇವತ್ತು ಹೊಸದೊಂದು ಗೂಡು ನೋಡೇಬಿಡುವ ಇರಾದೆಯೊಂದಿಗೆ ಚಪ್ಪಲಿ ಮೆಟ್ಟಿದಳು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ