Mysore
23
overcast clouds

Social Media

ಭಾನುವಾರ, 01 ನವೆಂಬರ್ 2026
Light
Dark

‘ಬಾ ಯಾ ಬಾ, ಉಂಬಟ್ ಬಾ ಮಗಾ’

ಅವ್ವನ ಬೀದರ ಭಾಷೆ ಕಿವಿಯಲ್ಲೇ ಇದ್ದಂತೆ, ಅವಳ ದನಿ ಗುನುಗಿದಂತೆ ಈಗಲೂ ಭಾಸವಾಗುತ್ತದೆ

ಬೀದರಿನ ಭಾಷೆಯಲ್ಲಿ ದೇಶೀಯತೆ ನೆನಪಿಸಿಕೊಂಡರೆ, ಅವ್ವನ ನೆನಪು ಕಾಡುತ್ತದೆ. ಅವ್ವ ಎಂದರೆ ಅಜ್ಜಿ, ಅಪ್ಪನ ಹೆತ್ತವಳು. ಅವಳನ್ನು ಎಲ್ಲ ಮೊಮ್ಮಕ್ಕಳು ಅವ್ವಾ ಎಂದೇ ಕರೆಯುತ್ತಿದ್ದೆವು. ಅದು ದಿನನಿತ್ಯದಲ್ಲಿ ಯವ್ವಾ ಆಗಿತ್ತು. ‘ಅಜ್ಜಿ… ಅಜ್ಜಿ…’ ಎಂದು ಕರೆದರೆ, ಓಗೊಡದವಳು, ‘ಏ ಯಾವ್ವಾ’ ಎಂದರೆ ಸಾಕು ‘ಯಾನ್ ಮಗಾ?’ ಎಂದು ಕೂಡಲೆ ಉತ್ತರಿಸುತ್ತಿದ್ದವಳ ನೆನಪು ಮರುಕಳಿಸಿತು.

‘ಊರ್ ಹೊರ್‌ಗಿನ್ ಕೆರಿಗ್ಹೋಗಿ ಮೈ ತೊಳ್ಕೊಂಡ್ ಬರರಿ ಮಗಾ ನಡಿ. ಹಂಗೆ ಬರಾಮುಂದ ಸೈನೀರ್ ಭಾವ್ಯಾಗಿಂದು ಕುಡಿಲಾಕ್ ನೀರ್ ತರರಿ. ನಡಿ ಮಗಾ ನಡಿ, ಬಿಸಿಲ್ ನೆತ್ತಿ ಮ್ಯಾಲ್ ಬಂತಂದುರಾ ಚಕ್ಕರ್ ಬಂದಪ್ಲೆ ಐತುದ್. ಬಿಸಲ್ ಏರಾಕಿನ ಪೈಲೆ ಹೋಗಿ ಬರರಿ’ ಅವ್ವಾನ ಕೈ ಹಿಡಿದು ಕೆರೆ ಕಡೆ ನಡೆದೆವು. ಮೊಣಕಾಲುವರೆಗಿನ ನೀರಲ್ಲಿ ಕೂರಿಸಿದಳು.

‘ಮಗಾ ಅಂಗಿ ಕಳ್ದುರಾ ಛಳಿ ಆಯ್ತಾವೇನು?’ ‘ಇಲ್ಲ ಯವ್ವಾ’

‘ಥಂಬ್ಗಿ ತಂದಿಲ್ ಮಗಾ, ನನ್ ಕುಡ್ತಿಲೆ ನೀರ್ ಹಾಕ್ತಾ.’ ಕುಡ್ತಿ ಎಂದರೆ ಬೊಗಸೆ ನೀರು. ತನ್ನ ಬೊಗಸೆಯಲ್ಲಿ ಹಿಡಿದಷ್ಟು ನೀರನ್ನು ಎತ್ತಿ ಎತ್ತಿ ತಲೆಯ ಮೇಲೆ ಸುರಿದಾಗ, ಅವ್ವನ ಕಾಳಜಿಗೆ ಆ ತಣ್ಣನೆಯ ನೀರೂ ಬಿಸಿಯಾದ ಬಿಸುಪು!

ಅವ್ವಾ ಬೆಳ್ಳಗಿದ್ಲು, ನೆಟ್ಟನೆ ಮೂಗು, ನಗು ಮುಖ, ಕೆನ್ನೆ ಮುಂದು ಮಾಡಿಕೊಂಡು, ನಾ ಮುತ್ತು ಕೊಡಲೆಂದು ಕಾಯುತ್ತಿದ್ದಳು. ಎಂಟೋ ಒಂಬತ್ತೋ ವರ್ಷದ ನನಗೆ ನಾಚಿಕೆಯಾಗಿತ್ತು. ಒಂದು ಕ್ಷಣದಲ್ಲಿ ಅವ್ವನ ಕೆನ್ನೆಗೆ ಮುತ್ತು ಕೊಟ್ಟೆ.

‘ಐ ಪೋರಿಗಿ ಏಟ್ ನಾಚ್ಕಿ ಬಂತೆವ್ವಾ! ಬಾ ಮಗಾ ಇಲ್ಲಿ ನೆಳ್ಳಾಗ ಕೂಡು. ನಾ ಬಟ್ಟಿ ಒಗ್ದು ಮೈತೊಳ್ಕಂಡ್ ಬರ್ತಾ. ಅಲ್ಲಿಥನಾ ನೀ ಈ ಕ್ಯಾರಿಕಾಯ್ ತಿನ್ಕೋತ, ನನಗ್ ನೋಡ್ಕೋತ ಇಲ್ಲೇ ಕೂಡ್ ಮಗಾ.’ ಅಲ್ಲಿ ಹತ್ತಾರು ಹೆಂಗಳೆಯರು ಇದ್ದರೂ ನನ್ನ ಕಣ್ಣು ಅವ್ವನ ಮೇಲೇ ನೆಟ್ಟಿತ್ತು. ಬಟ್ಟೆ ಒಗೆದಳು, ಅಲ್ಲೇ ನೀರಿನಲ್ಲೇ ಕುಂತು ಮೈ ತೊಳೆದುಕೊಂಡಳು, ಒದ್ದೆ ಸೀರೆಯಲ್ಲೇ ನೀರಿನಿಂದ ಹೊರಬಂದಳು. ಮರದ ಮರೆಯಲ್ಲಿ ನಿಂತು, ಕುಂತು ಒಣಸೀರೆ ಉಟ್ಟಳು. ‘ಬಾ ಯಾ ಬಾ, ಉಂಬಟ್ ಬಾ ಮಗಾ’ ‘ಹೂಂನವ್ವಾ’

‘ಮಗಾ, ಬಿಳ್‌ಜೋಳುದ್ ರೊಟ್ಟಿ ಘಟ್‌ಬ್ಯಾಳಿ, ಕಾರೆಳ್ ಹಿಂಡಿ ಮೊಸುರಾ, ಅದರ್ ಸಂಗಾಟಾ ಹುರ್‌ದಿಂದು ಭಂಗಿನ್ ಬೀಜಾ ಅವ, ಉಣು ಮಗಾ’ ಪ್ರೀತಿಯಿಂದ ಉಣಬಡಿಸಿದಳು. ನನ್ನ ಬಾಯಿಗಂಟಿದ ಮೊಸರನ್ನು ನೋಡಿ ನಕ್ಕಳು. ‘ಏ ಯವ್ವಾ ನಮ್ಮವ್ವಾ’ ಎನ್ನುತ್ತ ಬೆರಳಿನ ತುದಿಯಿಂದ ಅದನ್ನು ತೆಗೆದುಕೊಂಡು ತನ್ನ ಬಾಯಿಗೆ ಇಟ್ಟುಕೊಂಡಳು. ಅವ್ವನ ಮೇಲೆ ನನಗೆ ಪ್ರೀತಿ ಉಕ್ಕಿ, ‘ಅವ್ವಾ…’ ಎನ್ನುತ್ತ ಮುಸುರೆ ಕೈಯಲ್ಲೇ ಹಾರಿ ತಬ್ಬಿಕೊಂಡೆ.

‘ಅವ್ವ ಇಗೊತ್ತು ಇಲ್ಲ ಖರೆ. ಆದ್ರ ನೀ ಇಲ್ದೆ ನಮ್ಮೊಪ್ಪ ಒಬ್ನೆ ತಬ್ಲಿ ಆಗಲಿಲ್ಲೇ ಯಾವ್ವಾ… ನಾನೂ ತಬ್ಲಿ ಆದ್ನೇ…’ ಮನಸ್ಸು ಈಗಲೂ ರೋದಿಸುತ್ತದೆ.

– ಡಾ.ಕಾವ್ಯಶ್ರೀ ಮಹಾಗಾಂವಕರ (ಸಿಕಾ) ಲೇಖಕಿ, ಕವಯಿತ್ರಿ ಮತ್ತು ವಚನ ಸಾಹಿತ್ಯ ಪರಿಚಾರಕಿ

Tags:
error: Content is protected !!