Light
Dark

ಬಿಕೋ ಎನ್ನುತ್ತಿರುವ ಬಾಲ್ಯದ ಗದ್ದೆ ಮಾಳಗಳು

  • ಅಜಯ್ ಕುಮಾರ್ ಎಂ ಗುಂಬಳ್ಳಿ

ಗದ್ದೆ ಮಾಳಕ್ಕೆ ಮೊನ್ನೆದಿನ ಹೋಗಿದ್ದೆ. ಅಪ್ಪ-ಅವ್ವ ಇಬ್ಬರೇ ಭತ್ತದ ಕುಯ್ಲು ಕುಯ್ದು ಮುಗಿಸಿದ್ದರು. ಗದ್ದೆಯೇನು ಅಷ್ಟು ದೊಡ್ಡದಲ್ಲ. ಇಡೀ ಗದ್ದೆ ಬಯಲಲ್ಲಿ ಅಲ್ಲೊಂದು ಇಲ್ಲೊಂದು ಗುಂಪು ಮಾತ್ರ ಭತ್ತವನ್ನು ಬಡಿಯುತ್ತಿದ್ದರೆ, ಕಂಬಕ್ಕೆ ಕಟ್ಟಿದ್ದ ಹಸುಗಳು ಹುಲ್ಲನ್ನು ತುಳಿಯುತ್ತಿದ್ದವು. ಮಿಕ್ಕ ಗದ್ದೆಗಳನ್ನು ಮಿಷಿನ್ನು ಕುಯ್ದು ತನ್ನ ಆರ್ಭಟವನ್ನು ಮೆರೆದಿತ್ತು. ಆಗ ನನಗೆ ಆಧುನಿಕತೆಯ ಪರಿಣಾಮ ಅರಿವಾಗತೊಡಗಿತು. ಮೊದಲೆಲ್ಲ ಅಂದರೆ ನಾವು ಸಣ್ಣವರಿದ್ದಾಗ ಇಡೀ ಗದ್ದೆ ಬಯಲು ಜನರಿಂದ ಕಂಗೊಳಿಸುತ್ತಿತ್ತು. ಎತ್ತ ತಿರುಗಿದರೂ ಒಂದೊಂದು ಗುಂಪು ಒಂದೊಂದು ಗದ್ದೆಯ ಕುಯ್ಲು ಇಲ್ಲವೇ ಒಕ್ಕಣೆಯಲ್ಲಿ ತೊಡಗಿರುತ್ತಿತ್ತು. ಅದು ಹೇಗೆಂದರೆ ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಹಾಗೆ ಮಾಡಿದರೆ ಕೆಲಸ ಬೇಗ ಸಾಗುತ್ತದೆ ಎನ್ನುವುದು ಅವರ ಅನುಭವ. ಅನುಭವ ಎಂದಿಗೂ ಸತ್ಯವೇ ತಾನೇ.

ಕೆಲಸ ಮಾಡುವ ಜಾಗದಲ್ಲಿ ಊರುಕೇರಿಯ ಅನೇಕ ವಿಚಾರಗಳು ಲೀಲಾಜಾಲವಾಗಿ ನುಸುಳಿಕೊಳ್ಳುತ್ತಿದ್ದವು. ಮಬ್ಬಿಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲುಗುವ ತನಕ ನಡೆವ ಎಲ್ಲರಾ ಹಟ್ಟಿ ತೂತುಗಳು ಸಹ ಅಲ್ಲಿ ಎಲ್ಲರ ಎದುರಿಗೆ ಬಯಲಾಗುತ್ತಿದ್ದವು. ಅಲ್ಲದೇ ಕುಯ್ಲಿಗೆ ರಾತ್ರಿ ಬರುತ್ತೇನೆಂದವನು ಬೆಳಿಗ್ಗೆ ಇನ್ನೊಂದು ಗದ್ದೆಗೆ ಇಳಿದು ಬಿಡುತ್ತಿದ್ದ. ಸಾವಾನ್ಯವಾಗಿ ಯಾರೂ ಮಾತಿಗೆ ತಪ್ಪಿಸಿಕೊಳ್ಳುವುದಿಲ್ಲ. ಅಂದರೆ ಒಬ್ಬನಿಗೆ ಕೆಲಸಕ್ಕೆ ಒಪ್ಪಿಕೊಂಡು ಇನ್ನೊಬ್ಬನಿಗೆ ಹೋಗುವುದು ನಡೆಯಲ್ಲ. ಅಪರೂಪಕ್ಕೆ ಒಬ್ಬನೋ ಇಬ್ಬರೋ ಆಥರ ಮಾಡಿಬಿಡುತ್ತಿದ್ದರು. ಹಾಗೆ ಮಾಡಿದ್ದು ಗೊತ್ತಾದ ಮೇಲೆ ಜನಗಳಿಂದ ಉಗಿಸಿಕೊಳ್ಳುತ್ತಿದ್ದರು. ಅಂಥವರ ಸಾಲಿನಲ್ಲಿ ಹೆಸರು ಮಾಡಿರುವ ಒಬ್ಬನಿದ್ದಾನೆ. ಅವನೇ ಪ್ಯಾಕೆಟ್ ನಿಂಗಣ್ಣ. ಅವನ ಹೆಸರೇ ಹೇಳುವಂತೆ ಅವನೊಬ್ಬ ಕುಡುಕ. ಹಾಗಂತ ಕೆಲಸದಲ್ಲಿ ಸೋಂಭೇರಿ ಖಂಡಿತ ಅಲ್ಲ. ಚೆನ್ನಾಗಿ ದುಡೀತಿದ್ದ. ಅಷ್ಟೇ ಚೆನ್ನಾಗಿ ಎಣ್ಣೆ ಕುಡಿಯುತ್ತಿದ್ದ. ಒಮ್ಮೆ ಕುಡಿದ ಮತ್ತಿನಲ್ಲಿ ಎರಡು ಕೆಜಿ ಬಾಡನ್ನು ಒಬ್ಬನೇ ತಿಂದಿದ್ದ. ಪ್ಯಾಕೆಟ್ ನಿಂಗಣ್ಣನ ವಿಚಾರದಲ್ಲಿ ಗದ್ದೆಯ ಮಾಲೀಕರು ಕೆಲವು ಭಾರಿ ಜಗಳವಾಡಿಕೊಂಡಿದ್ದರು. ಇಂಥ ಡಿಫರೆಂಟು ಮನುಷ್ಯ ಪ್ಯಾಕೆಟ್ ನಿಂಗಣ್ಣ. ಭತ್ತವನ್ನು ಕುಯ್ದು ಬಿಸಿಲಿಗೆ ಒಣಗಲಿ ಅಂತ ಎರಡು ಮೂರು ದಿನ ಹಾಗೆ ಬಿಡುತ್ತಿದ್ದರು. ಆಮೇಲೆ ದಾಸಯ್ಯನ ಹುಣಸೆ ಮರದ ಬಳಿಗೆ ತಂದು ಅಲ್ಲಿ ಒಕ್ಕಣೆ ಮಾಡುತ್ತಿದ್ದರು. ಗದ್ದೆಯಿಂದ ಭತ್ತದ ಕುಯ್ಲನ್ನು ಒಕ್ಕಣೆ ಜಾಗಕ್ಕೆ ಹೆಗಲಲ್ಲಿ ಹೊತ್ತು ತರಬೇಕಿತ್ತು. ಹುಲ್ಲಿನಲ್ಲಿ ತೀರ ಸಣ್ಣ ಕೀಟಗಳು ಇರುತ್ತಿದ್ದರಿಂದ ಹೆಗಲು, ಮೈಕೈ ಉರಿ ಬರುತ್ತಿತ್ತು. ನನಗೆ ಹಲವಾರು ಭಾರಿ ಮಾರುಹುಳ ಹರಿದು ಉರಿಯಿಂದ ಅರಚಾಡಿ, ಅನುಭವಿಸಿದ ನೋವಿಗೆ ಹೆದರಿ ನಾನು, ಭತ್ತದ ಗದ್ದೆಗೆ ಹೋಗಲು ಭಯಪಡುತ್ತಿದ್ದೆ.

ಒಕ್ಕಣೆ ಜಾಗದ ಮಧ್ಯಕ್ಕೆ ನೆಟ್ಟಗಿನ ಮರದ ಉದ್ದವಾದ ತುಂಡನ್ನು ನಿಲ್ಲಿಸಿ ಅದಕ್ಕೆ ಹಸು, ಎತ್ತುಗಳನ್ನು ಒಂದರ ಪಕ್ಕಕ್ಕೆ ಒಂದನ್ನು ಒಟ್ಟಿಗೆ ಹಗ್ಗದಿಂದ ಕಟ್ಟುತ್ತಾರೆ. ಆಳುಗಳು ತಾವು ಬಡಿದ ಭತ್ತದ ಹುಲ್ಲನ್ನು ಅಲ್ಲೇ ನೆಲಕ್ಕೆ ಚೆಲ್ಲುತ್ತಾರೆ. ಅಂದರೆ ಹಸುಗಳ ಕಟ್ಟಿರುವ ಜಾಗಕ್ಕೆ ಚೆಲ್ಲಿದಾಗ ಹಸುಗಳು ಅದೇ ಹುಲ್ಲನ್ನು ಮೇಯುತ್ತ ಅದೇ ಹುಲ್ಲಿನ ರಾಶಿಯನ್ನು ಗಿರಕಿ ಹೊಡೆದಂತೆ ತುಳಿಯುತ್ತಲೇ ತಿರುಗುತ್ತವೆ. ಇದನ್ನು ಉಲ್ಲುತುಳಿಸೋದು ಅಂತ ಕರಿಯೋದು. ಹೀಗೆ ಮಾಡುವುದರಿಂದ ಹುಲ್ಲಿನಲ್ಲಿ ಅಂಟಿಕೊಂಡಿರುವ ಒಂದೊಂದು ಭತ್ತವೂ ಸಹ ಉದುರಿ ಇನ್ನೊಂದಷ್ಟು ಭತ್ತ ಹೆಚ್ಚಾಗುತ್ತದೆ. ಇನ್ನು ಗದ್ದೆ ಕುಯ್ಲಿನ ಕಾಲಕ್ಕೆ ಅಲ್ಲಿಗೆ ದನ-ಕರು ಹೊಡೆದುಕೊಂಡು ಮೇವಿಗೆ ಜನಗಳು ಬರುತ್ತಿದ್ದರು. ಹಾಗೆ ಬಂದವರನ್ನು ಗದ್ದೆಯವರು ಊಟಕ್ಕೆ ಕರೆದು ಇಕ್ಕುತ್ತಿದ್ದರು. ಕಾಲುವೆಯಲ್ಲಿ ಹರಿಯುತ್ತಿದ್ದ ನೀರನ್ನೇ ಎಲ್ಲರೂ ಕುಡಿಯುತ್ತಿದ್ದುದು. ನಾನು ಕೂಡ ಅನೇಕ ಸಲ ಕಾಲುವೆ ನೀರನ್ನೇ ಕುಡಿದಿದ್ದೇನೆ. ಒಂದೇ ಸಮನೆ ಎರಡು ಮೂರು ಗಂಟೆ ಗಿರಕಿ ಹೊಡೆಯುತ್ತ ಹುಲ್ಲನ್ನು ತುಳಿದ ಕಾರಣಕ್ಕೆ ನಂತರದಲ್ಲಿ ಹಸು-ಎತ್ತುಗಳು ಬಯಲ ತುಂಬ ಓಡಾಟ ನಡೆಸುತ್ತಿದ್ದವು. ಬಡಿದ ಭತ್ತವನ್ನು ಗಾಳಿಗೆ ತೂರುತ್ತ ಜಳ್ಳನ್ನು ಬೇರ್ಪಡಿಸುತ್ತ, ಗಾಳಿ ಹೆಚ್ಚು ಬೀಸದಿದ್ದಾಗ ಪದ ಹೇಳುತ್ತ ಆಳುಗಳು ವಾಯುವಿಗೆ ಮೊರೆ ಇಡುತ್ತಿದ್ದರು. ಭತ್ತದ ರಾಶಿಯ ಮೇಲೆ ಸಗಣಿಯಿಂದ ಮಾಡಿದ ಗೊಂಬೆ ದೇವರನ್ನು ಇಟ್ಟು, ಚೂರು ಹೂ ಹಾಕಿ ಪೂಜೆ ಮಾಡಿ ಆಮೇಲೆ ಚೀಲಗಳಿಗೆ ತುಂಬುತ್ತಿದ್ದರು. ಕೊಳಗದಲ್ಲಿ ಭತ್ತವನ್ನು ಚೀಲಗಳಿಗೆ ತುಂಬುವಾಗ ಲೆಕ್ಕ ದಿಕ್ಕುತಪ್ಪಿ ಹೋಗದಿರಲೆಂದುಆ ಒಂದು, ಒಂದು -ಎರಡು, ಎರಡು’ಅಂತ ರಾಗವಾಗಿ ಎಣಿಸಿಕೊಳ್ಳುತ್ತಿದ್ದರು. ಸಗಣಿಯಿಂದ ತ್ರಿಭುಜಾಕಾರದಲ್ಲಿ ಒಂದು ಆಕೃತಿ ಮಾಡಿ, ಅದರ ತುದಿಗೆ ಭತ್ತದ ಗೊನೆಯನ್ನು ಸಿಕ್ಕಿಸಿದರೆ ಅದೇ ಗೊಂಬೆ ದೇವರು. ದಾಸಯ್ಯನವರು ಕುಯ್ಲಿನ ಕಾಲಕ್ಕೆ ತಪ್ಪದೇ ಗದ್ದೆಗಳಿಗೆ ಬರುತ್ತಿದ್ದರು. ಬಂದು ಜಾಗಟೆ ಕುಟ್ಟಿ ಜೈ ಜೈ ಶ್ರೀಮನ್ನಾರಾಯಣ ಅಂತ ಶುರುಮಾಡಿ ಚಿಕ್ಕದಾಗಿ ಬಿಳಿಗಿರಿರಂಗನ ಬಗ್ಗೆ ಸಣ್ಣ ಕತೆಯನ್ನೆ ಹೇಳುತ್ತಿದ್ದರು. ಕೊನೆಗೆ ಶಂಖವನ್ನು ಊದಿದಾಗ ಅವರ ಜೋಳಿಗೆಗೆ ಒಂದಷ್ಟು ಭತ್ತ ದೊರಕುತ್ತಿತ್ತು. ಸಣ್ಣ ವಯಸ್ಸಲ್ಲಿ ನನಗೆ ಶಂಖವನ್ನು ಊದಬೇಕೆಂಬ ಆಸೆ ಇತ್ತು. ಅದಕ್ಕಾಗಿ ನಮ್ಮೂರಿನ ಕೆರೆ, ಕಾಲುವೆಗಳಲ್ಲಿ ಸಿಕ್ಕುವ ಸಣ್ಣ ಶಂಖಗಳಲ್ಲಿ ಊದಲು ಪ್ರಯತ್ನಿಸುತ್ತಿದ್ದೆ. ಆಳುಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಆದ್ದರಿಂದಲೇ ಅಕ್ಕಪಕ್ಕದ ಗದ್ದೆಯವರು ಮಾತಾಡಿಕೊಂಡು ಕೆಲಸಕ್ಕೆ ದಿನ ಗೊತ್ತು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಪರಸ್ಪರರಲ್ಲಿ ಕೊಡುಕೊಳ್ಳುವಿಕೆ ನಡೆಯುತ್ತಿತ್ತು. ಭತ್ತದ ಮೂಟೆಗಳನ್ನು ಊರಿಗೆ ಸಾಗಿಸಲು ಎತ್ತಿನಗಾಡಿಗಳೇ ಮೂಲವಾಗಿತ್ತು. ನಾನು ಕಂಡಂತೆ ಸುಮಾರು ಜನರ ಮನೆಯಲ್ಲಿ ಒಂದು ಗಾಡಿ, ಒಂದು ಜೊತೆ ಎತ್ತುಗಳು ಇದ್ದವು. ಕೆಲವರು ಹಸು-ಕರು, ಆಡು-ಕುರಿ ಸಾಕುತ್ತಿದ್ದರು. ಈಗ ಬಯಲು ಬಿಕೋ ಎನ್ನುವಂತಿದೆ. ಎತ್ತ ತಿರುಗಿದರೂ ನಿರ್ಜನ ಪ್ರದೇಶವೇ ಹೊರತು, ಜನರ ಸದ್ದು ಕೇಳಿಸುತ್ತಿಲ್ಲ. ದನಕರುಗಳ ಸಂಖ್ಯೆಯೋ ಕ್ಷೀಣಿಸಿದೆ. ಇಡೀ ಗದ್ದೆ ಬಯಲಿಗೆ ಜನಪ್ರಿಯವಾಗಿದ್ದ ದಾಸಯ್ಯನ ಹುಣಸೆ ಮರದ ಬಯಲು ಅನಾಥವಾಗಿದೆ.

ದಾಸಯ್ಯ ಬಿಳಿಗಿರಿರಂಗನ ಭಕ್ತ. ಉದ್ದನೆಯ, ಅಗಲ ಎದೆಗಳ ಮನುಷ್ಯ. ಥೇಟ್ ನಾರಾಯಣನ ರೂಪವನ್ನೇ ಹೋಲುತ್ತಿದ್ದ. ಹೊಸಮನೆ ಕಾರ್ಯಗಳಿಗೆ ದೊಡ್ಡದೇವರನ್ನು ಹಿಡಿದು ಬ್ಯಾಟೆಮನೆ ಸೇವೆ ವಾಡುವಲ್ಲಿ ನಿಸ್ಸೀಮನಾಗಿದ್ದ. ಬ್ಯಾಟೆಮನೆ ಅಂದರೆ ನೆನೆಸಿದ ಅಕ್ಕಿಗೆ ಎಳ್ಳು, ಬೆಲ್ಲ, ಚಕ್ಕುಲಿ, ನಿಪ್ಪಟ್ಟು, ಕಜ್ಜಾಯ ಕಾಯಿ ಇವನ್ನೆಲ್ಲ ಹಾಕಿ ತಯಾರಿಸಿದ ಸಿಹಿ. ಅದನ್ನು ನಾರಾಯಣನಿಗೆ ಎಡೆ ಇಕ್ಕಿ “ಆಪರಾ-ಗೋಪರ” ಅಂತ ಎಡೆಯ ಸುತ್ತ ಕಿರುಚುತ್ತ ಬಳಸಾಡುವುದು. ದಾಸಯ್ಯ ಅನೇಕ ಮರಗಳನ್ನು ಬೆಳೆಸಿದ್ದ. ಗದ್ದೆಬಯಲಿನ ಹುಣಸೆ ಮರವೂ ಅವನ ನೆನಪನ್ನೇ ಹೇಳುತ್ತದೆ. ಈಗ ಆ ಹುಣಸೆ ಮರದ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದು ಕಾಲಾಕಲು ಜಾಗವಿಲ್ಲ. ಮಾಳದ ಮಧ್ಯೆದಲ್ಲಿರುವ ದಾಸಯ್ಯನ ಗೋರಿಯ ಸುತ್ತ ಕಳ್ಳಿಗಿಡ, ಎಕ್ಕದ ಗಿಡ, ಗೊಬ್ಬಳಿಗಿಡಗಳು ಬೆಳೆದಿವೆ. ಈಚಲು ಮರ ಒಣಗಿದೆ. ಒಂದು ಕಾಲಕ್ಕೆ ನೆರೆಹೊರೆಯ ಗದ್ದೆಗಳ ಭತ್ತ, ಹುಲ್ಲನ್ನು ತನ್ನ ಮಡಿಲಲ್ಲಿ ಹಾಕಿಸಿಕೊಳ್ಳುತ್ತಿದ್ದ ಬಯಲು ಈಗ ತನ್ನ ರೂಪವನ್ನೇ ಬದಲಿಸಿಕೊಂಡಿದೆ. ಪಾಳು ಬಿದ್ದಿರುವ ಕರೆಂಟು ಮನೆ. ಸುಳಿ ಇಲ್ಲದ ತೆಂಗಿನ ಮರ. ಕಾಯಿ ಬಿಡದ ಹುಣಸೆ ಮರ. ನೀರಿಲ್ಲದ ಹಳೆ ಬಾವಿ. ಇವೆಲ್ಲವೂ ನೆನಪಿನ ಬುತ್ತಿಯನ್ನು ಕೆದಕುತ್ತವೆ. ನಾವು ಸಣ್ಣವರಿದ್ದಾಗ ಇಡೀ ಬಯಲು ಹೆಂಗಿತ್ತೂ? ಅಬ್ಬಾ! ಕಂಗಳು ಪುಣ್ಯ ಮಾಡಿದ್ದವು. ಕುಯ್ಲಿನ ಕಾಲಕ್ಕೆ ಹಕ್ಕಿಗಳ ಹಿಂಡು ಗದ್ದೆಗೆ ಧಾವಿಸುತ್ತಿದ್ದವು. ನನಗೆ ಗುರುತಿರುವ ಪಕ್ಷಿಗಳು ಕೊಕ್ಕರೆ, ಗೀಜುಗ, ಕೆಂಬೂತ, ಹೊನೆಗೊನೆ ಹಕ್ಕಿ. ತರಾವರಿ ಬಣ್ಣದ, ತರಾವರಿ ಸದ್ದು ಮಾಡುವ, ಹೆಸರು ಗೊತ್ತಿಲ್ಲದ ಅದೆಷ್ಟೋ ಹಕ್ಕಿಗಳನ್ನು ನಾನು ಗದ್ದೆ ಬಯಲಲ್ಲಿ ಕಂಡಿರುವೆ. ಕಾಲುವೆ ಇಕ್ಕೆಲಗಳಲ್ಲಿ ನಳ್ಳಿಗಳು ಬೀಟದಿಂದ ಇಣುಕಿರುತ್ತಿದ್ದವು. ಆ ನೋಟ ಈಗ ಕಾಣಿಸುತ್ತಿಲ್ಲ. ಕಾಡಲ್ಲದೇ ಕೇರಿಯ ಮನೆಗಳ ಮೇಲಿನ ಹೆಂಚುಗಳಲ್ಲಿ ಹಿಂಡು ಹಿಂಡು ಗುಬ್ಬಚ್ಚಿಗಳು ಚಿಲಿಪಿಲಿಗುಟ್ಟುತ್ತ ಕೂತಿರುತ್ತಿದ್ದವು. ಚಾವಡಿ ಜಗುಲಿಯಲ್ಲಿ ಬೇಯಿಸಿದ ಭತ್ತವನ್ನು ಒಣಹಾಕಿದರೆ ಗುಬ್ಬಚ್ಚಿಗಳನ್ನು ಓಡಿಸಲೇ ಒಬ್ಬರು ನಿಲ್ಲಬೇಕಾಗಿತ್ತು. ಅಷ್ಟೊಂದು ಗುಬ್ಬಚ್ಚಿಗಳು ಭತ್ತವನ್ನು ತಿನ್ನಲು ಧಾವಿಸುತ್ತಿದ್ದವು. ದುರದೃಷ್ಟವಶಾತ್ ಈಗ ಗುಬ್ಬಚ್ಚಿಗಳೇ ಕಾಣಸಿಗುತ್ತಿಲ್ಲ. ಆಧುನಿಕ ಜೀವನ ಪದ್ಧತಿಯಿಂದ ಪರಿಸರ ನಾಶವಾಗುತ್ತಿದೆ. ಎಲ್ಲವನ್ನೂ ಬೇಗ ಬೇಗ ಪಡೆಯಬೇಕೆನ್ನುವ ಆಸೆ, ಹಂಬಲ, ದುರಾಸೆಗಳಿಂದ ಅವಸಾನದ ಅಂಚಿಗೆ ನಾವು ಬೇಗ ತಲುಪುತ್ತಿದ್ದೇವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ