Mysore
24
broken clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಭೂತ್ ಜೋಲೋಕಿಯಾ: ಖಾರ ಎನ್ನಬೇಕೋ ಇಲ್ಲಾ ಬೆಂಕಿಯ ಬಾಣ ಎನ್ನಬೇಕೋ  

ನಂದಿನಿ ಎನ್.

ಹತ್ತು ಜನರಿಗಾಗುವಷ್ಟು ಅಡುಗೆಗೆ ಕೇವಲ ೨ ಮೆಣಸಿನ ಕಾಯಿ ಸಾಕು ಎಂದರೆ ನಂಬುತ್ತೀರಾ!? ನಾಗಾಲ್ಯಾಂಡ್ ಪ್ರವಾಸದಲ್ಲಿ ಅಲ್ಲಿನ ಮಾಲಿನ್ಯ ರಹಿತ ಹವೆ, ಕಣ್ಮನ ಸೂರೆಗೊಳ್ಳುವ ಪ್ರಕೃತಿ ಸೌಂದರ್ಯ, ನಾಗರಿಕ ಹೊಣೆಗಾರಿಕೆ, ತಮ್ಮ ಮಾತೃಭೂಮಿ ಬಗೆಗಿನ ಪ್ರೀತಿ ಮತ್ತು ಕಾಳಜಿ, ವಿಭಿನ್ನ ಪಾಕ ಪದ್ಧತಿ, ಇವೆಲ್ಲಕಿಂತ ನನ್ನ ಗಮನ ಸೆಳೆದದ್ದು ಈ ಅತಿ ಖಾರದ ಕೆಂಪು ಸುಂದರಿ! ಎರಡರಿಂದ ಮೂರಿಂಚು ಉದ್ದವಿರುವ ಇದು, ಮಾಗುವ ಹೊತ್ತಿಗೆ ಹಸಿರಿನಿಂದ ಒಳ್ಳೆಯ ಟೊಮೆಟೊನಂತೆ ಕೆಂಪಾಗಿ ಅಥವಾ ಕೇಸರಿ ಬಣ್ಣಕ್ಕೆ ತಿರುಗುತ್ತದೆ. ನಮ್ಮ ಕಡೆಯ ಮೆಣಸಿನಕಾಯಿಗಿಂತ ಕೊಂಚ ದಪ್ಪಗಿನ ಮೈಮಾಟ ಹೊಂದಿರುವ ಈ ಮೆಣಸಿನ ತವರು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಹೆಚ್ಚು ಫಲ ಕೊಡುವ ಕಾಲ. ಈಶಾನ್ಯ ಭಾರತದ ಮಣ್ಣು ಮತ್ತು ಹವಾಮಾನದಲ್ಲಿ ಮಾತ್ರ ಉತ್ಕ ಷ್ಟ ಗುಣಮಟ್ಟದ ಭೂತ್ ಜೋಲೋಕಿಯಾ ಬೆಳೆಯಲು ಸಾಧ್ಯ.

ಅಸ್ಸಾಂನಲ್ಲಿ ಭೂತ ಜಾಲೊಕಿಯಾ ಎಂದು, ನಾಗಾ ಲ್ಯಾಂಡ್‌ನಲ್ಲಿ ರಾಜ ಮಿರ್ಚಾ ಅಥವಾ ನಾಗ ಮಿರ್ಚಾ ಹಾಗೂ ಮಣಿಪುರದಲ್ಲಿ ಯುಮಂಕ್ ಎಂದು ಕರೆಯಲ್ಪಡುವ ಇದನ್ನು ಆಂಗ್ಲರು ಘೋಸ್ಟ್ ಪೆಪ್ಪರ್ (ghost pepper) ಎಂದು ಕರೆದಿದ್ದಾರೆ. ತಿಝಿತ್ ಎನ್ನುವ ಹಳ್ಳಿಯೊಂದು ಮೊದಲಾಗಿ, ನಾವು ನಾಗಾಲ್ಯಾಂಡ್ ಪ್ರವೇಶಿಸುತ್ತಿದ್ದಂತೆ ಕಾಣ ಸಿಕ್ಕಿದ್ದು ರಸ್ತೆ ಬದಿ ಯಲ್ಲಿದ್ದ ಸಾಲು ಸಾಲು ಟೆಂಟಿನ ತರಕಾರಿ ಅಂಗಡಿಗಳು, ಮತ್ತದರಲ್ಲಿ ರಾರಾಜಿಸುತ್ತಿದ್ದ ತಾಜಾ ಮತ್ತು ಒಣಗಿದ ರಾಜ ಮಿರ್ಚಾ ಅಥವಾ ನಾಗಾ ಮಿರ್ಚಾ. ಬೇಕಾದಷ್ಟು ವಿಧದ ಗಡ್ದೆಗಳು, ಕಂಡು ಕೇಳರಿಯದ ತರಕಾರಿಗಳು ಇದ್ದರೂ, ನನ್ನ ಕಣ್ಣನ್ನು ಕುಕ್ಕಿದ್ದು ಈ ನಾಗ ಮಿರ್ಚಾ ಮಾತ್ರ. ಅದರ ಹೆಸರು ಕೇಳಿದಾಕ್ಷಣ ಅದರ ಬಗ್ಗೆ ಓದಿದ ನೆನಪಾಯಿತು. ಮುಂದೆ ಮತ್ತೆ ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿ ಒಂದಷ್ಟು ಕೊಂಡಿದ್ದೂ ಆಯಿತು. ಹೋದಲ್ಲೆಲ್ಲಾ ಕಣ್ಣು ಕೋರೈಸುತ್ತಿದ್ದ ಈ ಮೆಣಸಿನಕಾಯಿ, ನಾವು ಪ್ರವಾಸ ಮುಗಿಸುವ ಹೊತ್ತಿಗೆ ಅರ್ಧ ಸೂಟ್ ಕೇಸ್ ತುಂಬಿತ್ತು.

ಅಸ್ಸಾಂನ ದಿಬ್ರುಗಡ್ ವಿಮಾನ ನಿಲ್ದಾಣದಿಂದ ನಾವು ನೇರ ಹೋದದ್ದು ಮೋನ್ ಎನ್ನುವ ನಗರಕ್ಕೆ. ದಾರಿಯಲ್ಲಿ ಕೊಂಡ ಕಿಂಗ್ ಚಿಲ್ಲಿ, ತನ್ನ ಖಾರದ ಪರಿಮಳದಿಂದ, ಕೆಂಪು ಬಣ್ಣದಿಂದ ಮನಸೂರೆಗೊಂಡಿತ್ತು. ಖಾರ ಪ್ರಿಯಳಾದ ನನಗೆ, ಇದರ ಅಂದ ಕಣ್ಣು ತುಂಬಿದ ಮೇಲೆ, ರುಚಿ ನೋಡುವ ತವಕ ಹೆಚ್ಚಾಯಿತು. ನಾವು ಇಳಿದಿದ್ದ ಹೋಟೆಲ್‌ನಂಥ ಹೋಂ ಸ್ಟೇನಲ್ಲಿದ್ದ ಮಂದಿಯ ಬಳಿ ನಮ್ಮ ಬಯಕೆ ಹೇಳಿದ ಕೂಡಲೇ, ರಾಜ ಮಿರ್ಚಾ ಒಳಗೊಂಡ ಯಾವುದಾದರೂ ಖಾದ್ಯ ತಯಾರಿಸುವುದಾಗಿ ಭರವಸೆ ನೀಡಿದರು. ಮೇಲಾಗಿ ನಾವು ಸಸ್ಯಾಹಾರಿಗಳು. ಅವರಿಗೂ ಏನಪ್ಪಾ ಮಾಡೋದು ಅನಿಸಿರಬೇಕು. ಕಡೆಗೆ ಸುಟ್ಟ ಟೊಮೆಟೊ ಹಣ್ಣಿನ ಚಟ್ನಿ ಬಂತು. ಕೆಂಪು ತುಂಬಿ ತುಳುಕುತ್ತಿದ್ದ ಚಟ್ನಿಯ ಮೇಲೆ ಉದುರಿಸಿದ್ದ ಹಸಿರು ಕೊತ್ತಂ ಬರಿ ಅದರ ಅಂದವನ್ನು ಹೆಚ್ಚಿಸಿತ್ತು. ಚಪಾತಿ, ದಾಲ್, ಸಲಾಡ್ ಇನ್ನು ಏನೇನೋ ತಂದು ಊಟದ ಮೇಜಿನ ಮೇಲೆ ಇಡುತ್ತಲೇ ಇದ್ದರು. ಇನ್ನು ನನಗೆ ತಡೆಯಲಾಗಲೇ ಇಲ್ಲ. ಪಕ್ಕದಲ್ಲಿದ್ದ ಚಮಚೆಯನ್ನು ರಪ್ಪನೆ ಹಿಡಿದು ಒಂದರ್ಧ ಚಮಚೆ ಚಟ್ನಿಯನ್ನು ಬಾಯಿಗಿಳಿಸಿದೆ. ಅಬ್ಬಾ..! ಕ್ಷಣಾರ್ಧದಲ್ಲಿ ಖಾರ ನಾಲಗೆ ಸುಟ್ಟು, ಮೂಗು, ಕಿವಿ, ಗಂಟಲು, ತಲೆ, ಕಣ್ಣು… ಹೀಗೆ ಸಿಕ್ಕ ಸಿಕ್ಕಲ್ಲೆಲ್ಲಾ ಬೆಂಕಿಯಾಡಿತು. ತಲೆ ಸುತ್ತಿದಂತಾಗಿ ಅಲ್ಲೇ ಕುರ್ಚಿಯ ಮೇಲೆ ಕುಸಿದೆ. ಏನೂ ಮಾಡಲಾಗುತ್ತಿಲ್ಲ! ಬಾಯಲ್ಲಿದ್ದ ಚಟ್ನಿ ತಟ್ಟೆಗೆ ಬಿದ್ದಿತ್ತು. ಕೈ ಕಾಲುಗಳನ್ನು ಜೋರಾಗಿ ವದರುತ್ತಾ, ನೀರು ನೀರು ಅಂತ ಕಿರುಚತೊಡಗಿದೆ. ಯಾರೋ ಬಾಯಿಗೆ ನೀರು ಸುರಿದರೆ, ಮತ್ಯಾರೋ ಸಕ್ಕರೆ ತುರುಕಿದರು. ಯಾವುದು ಕೆಲಸ ಮಾಡಲಿಲ್ಲ. ಒಂದರ್ಧ ಗಂಟೆಗೆ ಕಣ್ಣಿಂದ ನೀರು ಅನಾಯಾಸವಾಗಿ ಸುರಿಯುತ್ತಿತ್ತು. ಪುಣ್ಯಕ್ಕೆ ಚಟ್ನಿ ನುಂಗಿರಲಿಲ್ಲವಾದ್ದರಿಂದ ಹೊಟ್ಟೆ ಈ ಬೆಂಕಿಯಿಂದ ಪಾರಾಗಿತ್ತು. ಈ ರುಚಿಗೆ ಖಾರ ಎನ್ನಬೇಕೋ ಅಥವಾ ಬೇರೆ ಹೆಸರಿಡಬೇಕೋ ತಿಳಿಯದಾದೆ. ಪಟ್ಟ ಪಾಡಿಗೆ ಹಸಿವೆ ಅಡಗಿದ್ದರೂ, ಹೆದರಿ ಸಪ್ಪೆ ಅನ್ನ ದಾಲ್ ತಿಂದು, ರಾಜ ಮಿರ್ಚಾನನ್ನು ರಾಜಾರೋಷವಾಗಿ ಬೈಯುತ್ತಾ ಮಲಗಿದೆ.

ಇಷ್ಟೆಲ್ಲಾ ಉರಿಸಿದ, ಉರಿದ, ಉರಿರಾಯ – ರಾಜ ಮಿರ್ಚಾನನ್ನು ಮತ್ತೆಂದೂ ಬಾಯಿಗಿಡಲಾರೆ ಎಂದು ಮಲಗುವ ಮುನ್ನ ಶಪಥಗೈದ ನಾನು, ಬೆಳಕು ಹರಿವಷ್ಟರಲ್ಲಿ ತಣ್ಣಗಾಗಿ ಮತ್ತೆ ಟೊಮೊಟೊ ಚಟ್ನಿ ಮಾಡಿರೆಂದು ಹೋಟೆಲ್ ಮಂದಿಗೆ ದುಂಬಾಲು ಬಿದ್ದೆ. ನಕ್ಕರೋ, ಚಕಿತ ರಾದರೋ ಗೊತ್ತಿಲ್ಲ, ಅವರ ಮುಖಭಾವದ ಗೊಡವೆಗೆ ಹೋಗದೆ, ತಂದಿಟ್ಟ ಚಟ್ನಿ ಸವಿದೆ. ಈ ಬಾರಿ ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಅರಿವಿದ್ದರಿಂದ, ಒಂದುಅಭೂತಪೂರ್ವ ರುಚಿಯ ಅನುಭವ ನನ್ನದಾಯಿತು. ೧೦ ದಿನಗಳ ನಾಗಾಲ್ಯಾಂಡ್ ಪ್ರವಾಸದಲ್ಲಿ ಸಸ್ಯಾಹಾರಿ ಯಾದ ನನಗೆ ತುಸು ಕಷ್ಟ ಎನಿಸಿದ್ದು ನಿಜ. ಅಲ್ಲಿನ ಜನರ ದೈನಂದಿನ ಪ್ರಮುಖ ಆಹಾರ ಮಾಂಸ. ಮಾಂಸಾಹಾರ ಸೇವನೆಯಲ್ಲೂ ಅವರ ರೀತಿಗಳು ತೀರಾ ವಿಭಿನ್ನ.

ಯಾವುದೇ ನಾಗ ಮನೆಯ ಅತೀ ಪ್ರಮುಖ ಮತ್ತು ವಿಶಾಲವಾದ ಭಾಗ ಅಡುಗೆಮನೆಯೇ ಆಗಿರುತ್ತದೆ. ವಿಶಾಲ ಅಡುಗೆ ಕೋಣೆಯ ಮಧ್ಯದಲ್ಲಿ ಕಟ್ಟಿಗೆ ಒಲೆ. ಒಲೆಯ ಮೇಲೆ ತೊಟ್ಟಿಲಿನಂತೆ ತೂಗುವ, ಬಿದಿರಿನ ಅಥವಾ ಮರದ ಜಾಲರಿಯಂತಹ ತೂಗು ದಬ್ಬೆಗಳು ನೇತಾಡುತ್ತವೆ.

ಈ ತೂಗು ದಬ್ಬೆಗಳ ಮೇಲೆ ಮಾಂಸದ ತುಂಡುಗಳು, ಸಿರಿಧಾನ್ಯಗಳ ತೆನೆಗಳು, ಮುಸುಕಿನ ಜೋಳ, ಕೆಲವೊಮ್ಮೆ ತುಂಡರಿಸಿದ ಹಂದಿಯ ಮುಖ… ಹೀಗೆ ಎಲ್ಲ ಆಹಾರಗಳನ್ನೂ ಜೋಡಿಸಲಾಗುತ್ತದೆ. ಕೆಳಗೆ ಉರಿವ ಸೌದೆ ಒಲೆಯಿಂದ ಬರುವ ಶಾಖ ಮತ್ತು ಹೊಗೆಯಿಂದ ಇವೆಲ್ಲ ಒಣಗಿ ಒಂದು ವಿಶಿಷ್ಟವಾದ ರುಚಿ, ಪರಿಮಳ ಹೊಂದು ತ್ತವೆ. ಈ ಮಾದರಿಯಲ್ಲಿ ಆಹಾರವನ್ನು ಅದರಲ್ಲೂ ಮಾಂಸವನ್ನು ವರ್ಷಗಟ್ಟಲೆ ಕಾಪಿಡುವುದುಂಟು. ಎಣ್ಣೆಯ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ವಿರಳ. ಇಂತಿಪ್ಪ ಆಹಾರಕ್ಕೆ ಮತ್ತಷ್ಟು ರುಚಿ ಕೊಡುವುದೇ ಭೂತ್ ಜೋಲೋಕಿಯಾ! ನಾಗಾಲ್ಯಾಂಡ್‌ನ ಅನೇಕ ನಗರಗಳ ಮಾರುಕಟ್ಟೆಯನ್ನು ಭೇಟಿ ಮಾಡಿ ನಾನು ಅವಾಕ್ಕಾಗಿದ್ದು ಸತ್ಯ. ಜೇನುನೋಣ, ವಿಧವಿಧವಾದ ಹುಳಗಳು, ಮಿಡತೆ, ಕಪ್ಪೆ, ಇಲಿ, ಹಕ್ಕಿಗಳು, ಹಾವು ಇನ್ನೂ ಅನೇಕ ಪ್ರಾಣಿ ಪಕ್ಷಿಗಳು ಮಾರುಕಟ್ಟೆಗಳಲ್ಲಿ ಲಭ್ಯ. ಹೀಗೆ ಎಲ್ಲವನ್ನೂ ತಿನ್ನುವ ಇವರ ಆಹಾರ ವೈವಿಧ್ಯ ವಿಶಿಷ್ಟವಾದದ್ದು. ಇವರ ದೈನಂದಿನ ಊಟದಲ್ಲಿ ಕೋಳಿ ಮತ್ತು ಕುರಿಯ ಬಳಕೆ ಕಮ್ಮಿ. ಇದರ ಬದಲಿಗೆ ನಾಯಿ ಮತ್ತು ಹಂದಿ ಮಾಂಸವನ್ನು ಯಥೇಚ್ಛವಾಗಿ ಉಪಯೋಗಿಸುತ್ತಾರೆ.

ಸ್ವಲ್ಪ ಅಂಟು ಅಂಟಾದ ಅನ್ನ ಉಣ್ಣುವ ನಾಗಾ ಜನ ಗೋಧಿಯನ್ನು ಹೆಚ್ಚು ಬಳಸುವುದಿಲ್ಲ. ನಾಗಾ ಅಡುಗೆಯ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಅತೀ ಜನಪ್ರಿಯವಾದ ಮತ್ತೊಂದು ಖಾದ್ಯ ‘ಅಖೂನಿ’ (Axoni). ನುಣ್ಣಗೆ  ರುಬ್ಬಿದ ಸೋಯಾಬೀನ್ ಅನ್ನು ಉಪ್ಪಿನಕಾಯಂತೆ ಕಲಸಿ, ಹುಳಿಬರಿಸಿ ನಾಗಾ ಮಿರ್ಚಾ ಬೆರೆಸಿ ಮಾಡುವ ತಿಳಿಸಾರಿನಂಥ ಈ ತಯಾರಿಕೆ ನಾಗಾ ಮಂದಿಗೆ ಬಹಳ ಪ್ರಿಯ. ಇದರ ವಾಸನೆ ಅದೆಷ್ಟು ವಿಚಿತ್ರವಾಗಿತ್ತು ಅಂದ್ರೆ, ನನಗೆ ಮುಟ್ಟಲೂ ಸಾಧ್ಯವಾಗಲಿಲ್ಲ.

” ನಾಗಾಲ್ಯಾಂಡ್ ಪ್ರವಾಸದಲ್ಲಿ ಅಲ್ಲಿನ ಮಾಲಿನ್ಯ ರಹಿತ ಹವೆ, ಕಣ್ಮನ ಸೂರೆಗೊಳ್ಳುವ ಪ್ರಕೃತಿ ಸೌಂದರ್ಯ, ನಾಗರಿಕ ಹೊಣೆಗಾರಿಕೆ, ತಮ್ಮ ಮಾತೃಭೂಮಿ ಬಗೆಗಿನ ಪ್ರೀತಿ ಮತ್ತು ಕಾಳಜಿ, ವಿಭಿನ್ನ ಪಾಕ ಪದ್ಧತಿ, ಇವೆಲ್ಲಕಿಂತ ನನ್ನ ಗಮನ ಸೆಳೆದದ್ದು ಈ ಅತಿ ಖಾರದ ಕೆಂಪು ಸುಂದರಿ!”

 

 

Tags:
error: Content is protected !!