ಮೈಸೂರು ತಾಲ್ಲೂಕಿನ ಕೋಚನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಎಲೆಕ್ಟ್ರಾನಿಕ್ ಹಬ್ ಆರಂಭಗೊಳ್ಳಲಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ. ಬಂಡವಾಳವೂ ಹೂಡಿಕೆಯಾಗಲಿದೆ. ಈ ಸಂದರ್ಭದಲ್ಲಿ ಈ ಊರಿನ ಪಕ್ಕದ ಆಯರಹಳ್ಳಿಯಲ್ಲಿ ಬೇಸಾಯ ಮಾಡುತ್ತಿರುವ ಕನ್ನಡದ ಲೇಖಕಿ ಕುಸುಮಾ ಬರೆದ ಬರಹ ಇಲ್ಲಿದೆ.
ಕುಸುಮಾ ಆಯರಹಳ್ಳಿ
ಈ ತರವಾಗಿ ನಮ್ಮೂರುಗಳನ್ನು ಲೇಔಟೋ, ಕೈಗಾರಿಕೆಯೋ ತಬ್ಬಿಕೊಳ್ಳುವ ಸುದ್ದಿಗಳು ಎರಡು ತರದ ಪ್ರತಿಕ್ರಿಯೆ ಉಂಟುಮಾಡುತ್ತದೆ. ಒಂದು: ಭೂಮಿಗಳ ಬೆಲೆ ಹೆಚ್ಚಿ, ಅದರಿಂದ ಸಿಗುವ ಕೋಟಿ ಕೋಟಿ ಹಣ, ಜೊತೆಗೆ ಹೊಸ ರಸ್ತೆಗಳು, ಕಟ್ಟಡಗಳು, ಎಲ್ಲೆಲ್ಲಿಂದಲೋ ಬರುವ ಜನರ ಜೊತೆಗೆ ಸಂಪರ್ಕ, ಹುಟ್ಟುವ ಹೊಸ ಉದ್ಯೋಗ, ತಮ್ಮೂರೂ ಸಿಟಿಯಾಗುವ, ನಾವೂ ಸಿಟಿಯವರೇ ಆಗಿಬಿಡೋ ಸಂಭ್ರಮ. ಇನ್ನೊಂದು, ನನ್ನಂತೋರದು: ನಮ್ಮನ್ನು ನಾವು ಕಳಕೊಳ್ಳುವ ತಳಮಳ, ಭಾಷೆ, ಪರಂಪರೆ, ನಮ್ಮೂರ ಬನಿಯೆನಿಸುವ ಎಲ್ಲವೂ ಇನ್ನು ಇಲ್ಲವಾಗಿಬಿಡುವ, ಹೊಸ ರಸ್ತೆಯ ಬುಲ್ಲೋಜರಿನಡಿಗೆ ಊರು ಸಿಕ್ಕಿಕೊಳ್ಳುವ ಕಳವಳ. ಇಲ್ಲೊಂದೂರಿತ್ತಲ್ಲಾ? ಅಂತ ಗುರುತೂ ಸಿಗದಂತಾಗಿಬಿಡುವ ನಾಶದ ಪ್ರಕ್ರಿಯೆ, ಕೇಡು, ನಿರಂತರ ನಡೆಯುತ್ತಲೇ ಇರುವ ಈ ಕೇಡಿನದು ಬೇರೆಯೇ ಆದ ಮತ್ತು ಬಹುದೊಡ್ಡದಾದ ಚರ್ಚೆ. ಅದನ್ನು ಮತ್ಯಾವಾಗಲಾದರೂ ಮಾಡುವ. ಈ ಕೋಚನಹಳ್ಳಿ ಸುದ್ದಿ ಪೇಪರಲ್ಲಿ ಓದಿದಾಗ ಈ ಸಲ ನನಗೆ ಪಟ್ ಅಂತ ತಲೆಗೆ ಹೋಗಿದ್ದು ‘ಕೋಚನಹಳ್ಳಿ” ಅನ್ನುವ ಹೆಸರು.
ನಮ್ಮ ಮೈಸೂರು ಸೀಮೆ ಸುತ್ತಮುತ್ತ ಪುರ, ಹುಂಡಿ, ಹಳ್ಳಿ ಪದಗಳಿಂದ ಕೊನೆಯಾಗುವ ಊರುಗಳು ಅನೇಕ. ಕೆಂಪನಪುರ. ಮಾದಯ್ಯನಹುಂಡಿ, ರಾಯನಹುಂಡಿ, ಆಯರಹಳ್ಳಿ, ದೇವಲಾಪುರ ಹೀಗೆ… ಇದನ್ನೆಲ್ಲ ಕೆಲವರು ಜಾತಿ ಆಧಾರದ ಮೇಲೆ ವಿಂಗಡಿಸುತ್ತಾರೆ. ಅದು ಬೇರೆಯದೇ ಅಧ್ಯಯನ, ನನ್ನ ಆಸಕ್ತಿ ಆ ಹೆಸರುಗಳ ಕುರಿತು. ತುಕಡಿ ಮಾದಯ್ಯನ ಹುಂಡಿ ಅಂತಿದೆ. ಇಲ್ಲಿ ತುಕಡಿ ಅಂದರೆ ಸೈನ್ಯದ ತುಕಡಿಯೇ? ಸೈನ್ಯದ ತುಕಡಿಯಲ್ಲಿದ್ದ ಯಾವನೋ ಮಾದಯ್ಯ ಎಂಬವನಿಂದ ಆ ಹೆಸರು ಬಂತೇ? ಅಥವಾ ಆ ಊರೇ ಒಂದು ತುಕಡಿಯಾಗಿತ್ತೋ? ಮಾದಯ್ಯ ಅದರ ಲೀಡರಾಗಿದ್ದನೋ? ಯಾವ ತುಕಡಿ? ಯಾವ ರಾಜನ ಕಾಲದ್ದು? ಇವನ್ಯಾರು ಮಾದಯ್ಯ? ಗೊತ್ತಿಲ್ಲ. ಚಿಕ್ಕೇಗೌಡನಹುಂಡಿ, ಮಾದಯ್ಯನಹುಂಡಿ, ಸಿದ್ದರಾಮಯ್ಯನಹುಂಡಿ ಎಲ್ಲದರಲ್ಲೂ ವ್ಯಕ್ತಿಗಳ ಹೆಸರಿದೆ ನೋಡಿ, ಹುಂಡಿ ಅಂದರೇನು? ಹಣಕಾಸಿಗೆ ಸಂಬಂಧಿಸಿದ ಹಾಗಿದೆ ಈ ಪದ. ಅಂದರೆ ಆ ಕಾಲದಲ್ಲಿ ಆ ಊರಿನ ಟ್ಯಾಕ್ಸ್ ಕಲೆಕ್ಟರನಾಗಿದ್ದವನ ಹೆಸರಿಂದ ಆ ಜಾಗವನ್ನು ಇಂತಹವನ ಹುಂಡಿ ಅಂತ ಕರೆದಿರಬಹುದೇ? ಗೊತ್ತಿಲ್ಲ. ಸುಮ್ಮನೇ ಊಹಿಸುತ್ತಿದ್ದೇನೆ ಅಷ್ಟೆ.
ಈಗ ನೂರಾರು ಕೋಟಿ ರೂ. ಬಂಡವಾಳದ ಭಾಗ್ಯದ ಬಾಗಿಲು ತೆರೆದಿರುವ ಕೋಚನಹಳ್ಳಿಯ ವಿಷಯಕ್ಕೆ ಬರೋಣ. ಕೋಚನಹಳ್ಳಿ ನಮ್ಮೂರ ಪಕ್ಕದಲ್ಲೇ ಇದ್ದರೂ, ಎಷ್ಟೋ ಕಾಲದಿಂದ ಕೇಳಿದ ಹೆಸರಾದರೂ ಈ ಹೊಸ ಸುದ್ದಿಯಿಂದ ಆ ಹೆಸರು ಮತ್ತೊಮ್ಮೆ ಗಮನ ಸೆಳೆಯಿತು. ಅದಕ್ಕೆ ಕಾರಣವೂ ಇದೆ ಕೇಳಿ; “ಕೋಚನಹಳ್ಳಿ’… ಅಂದರೆ ಕೋಚ” ಎಂಬ ವ್ಯಕ್ತಿಯಿಂದ ಈ ಹೆಸರು ಬಂದಿರಬಹುದು. ಹಾಗಾದರೆ ಆ ಕೋಚನೆಂಬವನು ಯಾರಾಗಿದ್ದನು? ಏನಾಗಿದ್ದನು? ಈ ಮೊದಲು ಹೇಳಿದಂತೆ ನಮ್ಮ ಸುತ್ತಲ ಅನೇಕ ಊರುಗಳ ಹೆಸರು ವ್ಯಕ್ತಿಯ ಹೆಸರಿನಾಧಾರಿತ ಊರುಗಳೇ ಆಗಿದ್ದರೂ, ಕೋಚನಹಳ್ಳಿ ಮಾತ್ರ ವಸಿ ಜಾಸ್ತಿನೇ ವಿಶೇಷ ಯಾಕೆಂದರೆ ಕೋಚನಹಳ್ಳಿಯಲ್ಲಿ ಬರುವ ಕೋಚನೆಂದರೆ ಅದು ಬರೀ ಹೆಸರಲ್ಲ, ಅದೊಂದು ಸ್ಪೆಷಲ್ ಕ್ಯಾರೆಕ್ಟರ್. ಅದೆಷ್ಟೆಷ್ಟೋ ವರ್ಷಗಳ ಹಿಂದೆ ಇಲ್ಲಿ ಇದ್ದಿರಬಹುದಾದ ಕೋಚನೆಂಬ ಆ ಜೀವವು ಹೀಗಿಯೇ ಇದ್ದಿರಬಹುದೆಂದು, ಇಂತಹುದೇ ಕ್ಯಾರೆಕ್ಟರಾಗಿತ್ತೆಂದು ನಿನಗೆ ಹೇಗೆ ಗೊತ್ತು? ಏನಾದರೂ ದಾಖಲೆಗಳಿವೆಯಾ? ಅಂತ ನೀವು ಹೇಳುವಿರಾದರೆ… ಹೀಗೊಂದು ಜನಪದೀಯ ವಿವರಣೆಯನ್ನು ಮಾತ್ರ ಕೊಡಬಲ್ಲೆ ನಾನು.
ನಮ್ ಸುತ್ತಲ ಹಳ್ಳಿಗಳಲ್ಲಿ ಯಾರಾದರೂ ಕಿರಿಪಿರಿ” ಸ್ವಭಾವದವರಿದ್ದರೆ ಯಾವುದಕ್ಕೂ ಸಮಾಧಾನ ಸಂತೃಪ್ತಿ ಇರದೇ ಸದಾ ಇನ್ನೊಬ್ಬರಿಗೆ ಇರಿಟೇಟು ಮಾಡುತ್ತಿದ್ದರೆ ಅಂತೋರನ್ನ ಇದ್ಯಾಕ ಮುದೇವಿ ಕ್ವಾಚರಂಗಾಡೀಯೇ?’ ಅನ್ನುತ್ತಾರೆ. ವಯಸ್ಸಾದವರು ಕಿರಿಪಿರಿ ಮಾಡ್ತಾ ಇದ್ದರೆ ಯಾಕೋ ಈಚೀಚೆ ಒಂತರಾ ಕ್ವಾಚ್ ಬುದ್ಧಿ ಬಂದುಟ್ಟದ’ ಅಂತಾರೆ. ಹೆಂಡತಿಯನ್ನು
ಅನುಮಾನಿಸುವ, ಸದಾ ಕ್ಯಾತೆ ತೆಗೆವ ಗಂಡನಿಗೂ “ಹೋಗು ತಾಯಿ ನೀನು, ಮದ್ದೇ ಸರಿಯಿಲ್ಲ ನಿನ್ ಗಂಡ ಒಂತರಾ ಕ್ವಾಚ್ ಮನ್ನ’ ಅಂತಾರೆ. ಹಠ ಮಾಡೋ ಚಿಕ್ ಮಕ್ಕಳಿಗೂ ಇದ್ಯಾಕ ಮೂದವಿ ಇಂತಾ ಕ್ವಾಚ್ ಬುದ್ಧಿ ಕಲ್ ಕಂಡಿದ್ದೆ” ಅಂತಾರೆ. ಮುಖ್ಯವಾಗಿ ಈ ಕೋಚನಹಳ್ಳಿಯನ್ನು ನಾವೆಲ್ಲಾ ಲೋಕಲ್ಲಿಗರು ಕರೆಯುವುದೇ ಕ್ವಾಚನಹಳ್ಳಿ’ ಅಂತ. ಅಲ್ಲಿಗೆ ಅಲ್ಲಿ ಅಂತಾ ಒಬ್ಬ ಮನ್ನನು ಇದ್ದಿರಲೇಬೇಕು ಮತ್ತು ಅವನದು ವಿಚಿತ್ರ ಕಿರಿಕಿರಿ ಕ್ಯಾರೆಕ್ಟರು ಆಗಿರಬೇಕು.
ವಿಚಿತ್ರ ವರ್ತನೆಗೆ ಕಾಚ ಬುದ್ದಿ ಅನ್ನೋ ರೆಫರೆನ್ಸ್ ತಗೊಳೋ ಹಿನ್ನೆಲೆಯಲ್ಲಿ ಇದನ್ನು ಇನ್ನೊಂದು ರೀತಿಯೂ ನೋಡಬಹುದು. ಅದು ಕೋಚ” ಆಗಿತ್ತೋ ಅಥವಾ ‘ಕೋಜ”ದಿಂದ ಕೋಚ ಆಗಿರಬಹುದೋ? “ಕೋಜ” ಎಂಬ ಪದವನ್ನು ತೃತೀಯ ಲಿಂಗಿಗಳಿಗೂ ಬಳಸುತ್ತೇವೆ. ಈ ಹಿನ್ನೆಲೆಯಲ್ಲಿಯೂ ಸ್ವಲ್ಪ ಸ್ವಭಾವದಲ್ಲಿ ಏರುಪೇರು ಕಂಡರೆ ಬೈಯಲು ಅವನಂಗಾಡ್ತೀಯ ಅನ್ನೋ ಬಳಕೆ
ಶುರುಮಾಡಿರಬಹುದು ಜನಪದರು. ಅವನ ಹೆಸರೇ ಊರಿಗಿದೆ ಅಂದಮೇಲೆ ಅವನು ಸಾಮಾನ್ಯ ಪ್ರಜೆಯಾಗಿರಲಿಕ್ಕಿಲ್ಲ. ಆ ಊರಿನ ರಾಜನಾಗಿರಬಹುದು. ರಾಜನೂ ಕ್ವಾಚ ಬುದ್ದಿಯವನೋ, ಅಥವಾ ಕೋಜನೋ ಆಗಿರಬಹುದು. ಅಥವಾ ಸಾಮಾನ್ಯ ಪ್ರಜೆಯಾದರೂ ಸ್ವಭಾವದ ಕಾರಣಕ್ಕೆ ಪ್ರಸಿದ್ಧನಾಗಿ ಅವನ ಊರು ಅನ್ನುವ ರೆಫರೆನ್ಸಿನಿಂದಲೂ ಆ ಹೆಸರು ಬಂದಿರಬಹುದು. ಒಂದು ಕ್ಯಾಮೆರಾ ಹಿಡಿದು, ಟೈಂ ಟ್ರಾವೆಲಿಂಗ್ ಮಷೀನು ಹತ್ತಿ ಆ ಕಾಲದಲ್ಲಿ ಇಳಿದು, ಯಾರನ್ನಾದರೂ ಮಾತಾಡಿಸಿ, ಒಂದು ಬೈಟು ರೆಕಾರ್ಡ್ ಮಾಡಿ ಬರುವ ಹಾಗಿದ್ದರೆ, ಹೀಗೆಯೇ ಅಂತ ಪಕ್ಕಾ ಹೇಳಬಹುದಿತ್ತು. ಹಾಗಾಗಲ್ಲವಲ್ಲ, ಇಲ್ಲೇ ಇದೇ ಕಾಲದಲ್ಲಿ ಇದ್ದು ಹಳದು ಹೊಸತರ ನಡುವಿನ, ಜನಪದದ, ಭಾಷೆಯ, ಗಾದೆಯ ಸಿಕ್ಕ ಸಿಕ್ಕ ಚುಕ್ಕೆಗಳನ್ನು ಜೋಡಿಸಿಕೊಂಡು, ಇತಿಹಾಸದ ರಂಗೋಲಿ ಬಿಡಿಸುವ ಕೆಲಸ ಇದು.
ಸರಿ ಅದೇನು ಅಲ್ಲಿ ಹೋಗಿಯೇ ನೋಡೋಣ ಅಂತ ಹೋದರೆ, ಅಲ್ಲಿ ಊರೇ ಇಲ್ಲ! ಗಾಬರಿಯಾಗಬೇಡಿ. ಊರಿದೆ. ಆದರೆ ಈಗ ಭಯಾನಕವಾಗಿ ಬದಲಾಗಿರುವ ಚಿತ್ರದಲ್ಲಿ ದೊಡ್ಡ ರಸ್ತೆಗಳು, ಕಂಡಕಂಡಲ್ಲಿ ಲಾರಿಗಳೂ ನಿಂತು ದಿಕ್ಕುತಪ್ಪಿಸುತ್ತವೆ. ಗೂಗಲ್ಲಕ್ಕನ್ನ ಕೇಳೋಣ ಅಂತ ಹೋದರೆ, ನಾನು ಕೋಚನಹಳ್ಳಿ ಅಂತ ಟೈಪಿಸಿದರೂ ಅದು ಗ್ರಾಮಕ್ಕೆ ಕರಕೊಂಡು ಹೋಗದೇ ಗ್ರಾಮದಿಂದ ತುಸುವೇ ದೂರದಲ್ಲಿರುವ ಇಂಡಸ್ಟ್ರಿಯಲ್ ಏರಿಯಾವನ್ನೇ ತೋರಿಸಿತು. ಸರಿ ಯಾರನ್ನಾದರೂ ಕೇಳೋಣವೆಂದರೆ ಅಲ್ಲಿ ಸ್ಥಳೀಯರಾರು? ಮಾಲುಮ್ ನಯೀ ಅನ್ನುವ ಹೊರಗಿನವರಾರೋ ಗೊತ್ತಾಗುವುದೇ ಇಲ್ಲ. ಅಂತೂ ಹುಡುಕಿದಾಗ ಸಿಕ್ಕಿತು. ಅಪ್ಪಟ ಕೋಚನಹಳ್ಳಿ! (ಗೂಗಲ್ ಅದನ್ನು ಕಾಚನಹಳ್ಳಿ ಅಂತ ತೋರಿಸುತ್ತದೆ. ಒಂತರಾ ಸಿಂಬಾಲಿಕ್ ಆಗಿದೆ ಬಿಡಿ. ನಮ್ಮಂತ ಅಷ್ಟಾದರೂ ಉಳಿಸಿದ್ದಾರಲ್ಲಾ.)
ಊರಲ್ಲಿ ಜನರಿದ್ದಾರೆ. ಜನಪದರಿದ್ದಾರೆ. ಸ್ಕೂಲಿದೆ, ಐಕಿವೆ, ಹೆಂಗಸರು, ಗಂಡಸರು, ಮಾರಿಗುಡಿ, ದೊಡ್ಡಮ್ಮತಾಯಿ, ಹಪ್ಪಳ ಸಂಡಿಗೆ, ಕುರುಕಲು, ಕರುಬಲು ಎಲ್ಲಾ ಇವೆ. ಊರೊಳಗಲ ಬೀದೀಲಿ, “ನೀರ್
ಬುಡಪ್ಪ ಒಸ್ಯಾ, ತಿಕ್ಕೆ ಮೊಕೆ ನೀರ್ ಬ್ಯಾಡ್ವಾ?” ಅಂತ ಯಾರೋ ನೀರುಗಂಟಿಗೆ ಹೇಳಿದ್ದರು. ನಲ್ಲೀಲಿ ನೀರು ಬರಲೋ ಬೇಡವೋ ಅಂತ ಸಣ್ಣಗೆ ಬರಿತ್ತು. ಇವರಿಗೆ ತಿಕ್ಕೆ ಮೊಟ್ಟೆ ಇಲ್ಲದ ನೀರು ಇಂಡಸ್ಟ್ರಿಯ ತೊಳಿಯಕೆ ಬಳಿಯಕೆ ಎಲ್ಲಿಂದ ಬರುತ್ತೋ, ಕಪಿಲೆ ಹರಿಯೋವರೆಗೂ ಆಡ್ತಾರೆ ಆಟ ಆಡಲಿ ಬಿಡಿ. ಸರಿ ಈ ಗೋಳು ಇದ್ದದ್ದೇ ಅಂತ ಕ್ವಾಚನ ಬಗ್ಗೆ ಕೇಳಿದರೆ ನಮಗೇನ್ ಗೊತ್ತು? ತಲ್ ಬಲ್ಲೋರಾಗಬೇಕು ನೋಡಿ, ಅಂತರಾರಿಲ್ಲ” ಅಂದರು ಹೆಂಗಸರು. ಹೊಸಕಾಲದ ಸೊಸೇರು ಟಿವಿ ಗಿವಿ ನೋಡ್ತಿದ್ದರು. ಚಿಗುರು ಮೀಸೆ ಗಂಡೈಕ್ಕು ಜಗಲೀಲಿ ಚೌಕಾಬಾರದ ಮೇಲೆ ಕೇರಂ ಮಡಿಕಂಡು ಹೊಡೀತಿದ್ದರು. ತಲೆಬಲ್ಲೋರು ಅಂತ ಯಾರೂ ಸಿಗಲಿಲ್ಲ. ಕೂದಲು ಬೆಳ್ಳಗಾಗಿದ್ದ ಕೆಲವರು ಊರ ಮುಂದೆ ಯಾವೋ ಕಾಲದ ಮಾಸ್ತಿಕಲ್ಲಿನಂತ ಕಲ್ಲಿನ ಸುತ್ತ ಹೊಸದಾಗಿ ಸಿಮೆಂಟು ಬಳಿದು ಮಾತಾಡ್ತಿದ್ದರು. ಇನ್ಯಾವೋ ದೇವಸ್ಥಾನ ಇದೆ. ಅಲ್ಲಿ ದೇವರು ತಾನೇ ಒಡದು ಮೂಡಿರದು ಅಂದರು. ಆದರೆ ಕ್ವಾಚನ ಕತೆ ಮಾತ್ರ ಯಾರೆಂದರೆ ಯಾರಿಗೂ ಗೊತ್ತಿಲ್ಲ!
ಎಲ್ಲ ಊರಿನ ಹೆಸರುಗಳಿಗೂ ಏನೋ ಒಂದು ಹಿನ್ನೆಲೆ ಇದ್ದೇ ಇರುತ್ತದೆ. ದೊಡ್ಡ ದೊಡ್ಡ ಊರುಗಳಾದರೆ, ಆಡಳಿತ ಕೇಂದ್ರಗಳಾದರೆ ಅದರ ಹೆಸರಿನ ಇತಿಹಾಸ ಹೇಗೋ ಸಿಗುತ್ತದೆ ಅಥವಾ ಆ ಊರಿನ ಶಕ್ತಿಯಿಂದಾಗಿ ಯಾರೋ ಹುಡುಕುತ್ತಾರೆ. ಆದರೆ ಸುಟ್ಟ ಅಶಕ್ತ, ಸಾಮಾನ್ಯ ಜನ ಬಾಳುವ ಸಾಮಾನ್ಯ ಊರುಗಳ ಹೆಸರುಗಳಿಗೆ, ಅವರ ಹಿಂದಿನ ಬಾಳ್ವೆಗಳಿಗೆ ಯಾರ ಬೆಳಕೂ ಇಲ್ಲ. ಅವತ್ತಿನ ಹಳ್ಳಿಗರೂ ಕತ್ತಲಲ್ಲಿ ಬದುಕಿ ಹೋದರು. ಊರ ಇತಿಹಾಸವೂ ಕತ್ತಲಲ್ಲೆ ಉಳಿಯಿತು.
ಈಗ ಹೊಸ ಯೋಜನೆ ಜಾರಿಯಾದರೆ ( ಏನಿಲ್ಲ ಆಗ್ತಾ ಇದೆ) ಕೋಚನ ಹಳ್ಳಿಗೆ ಕೋಟಿ ಕೋಟಿ ರೂ. ಬಂಡವಾಳ ಹರಿಯುತ್ತದೆ. ಹತ್ತಾರು ಕಡತಗಳಲ್ಲಿ, ಯಾವ್ಯಾವುದೋ ದೇಶಗಳ ದೊಡ್ಡ ದೊಡ್ಡ ಎಸಿ ಕಾನ್ಸರೆನ್ಸ್ ರೂಮುಗಳಲ್ಲಿ, ಒಪ್ಪಂದದ ಹಾಳೆಗಳಲ್ಲಿ ಕೋಚನಹಳ್ಳಿಯ ಹೆಸರು ರಾರಾಜಿಸುತ್ತದೆ. ಆದರೆ… ಕೋಚ ಯಾರಾಗಿದ್ದನು ಏನಾಗಿದ್ದನು ಎಂಬುದು ಮಾತ್ರ ಗೊತ್ತೇ ಆಗುವುದಿಲ್ಲ. ಆ ಕಾಲವೇನೋ ಹಾಗಿತ್ತು. ಬದುಕುವುದೇ ದುಸ್ತರವಾಗಿತ್ತು. ದಾಖಲೆಗಳು ಅಮುಖ್ಯವಾಗಿತ್ತು. ಅಕ್ಷರವಂತೂ ಬಾರದಾಗಿತ್ತು. ಈ ಕಾಲದಲ್ಲಾದರೂ ಇಂತಹ ಪ್ರಯತ್ನ ಯಾಕಾಗಬಾರದು ಅನಿಸುತ್ತದೆ. ಮೈಸೂರೆಂಬುದು ಜಗ ದ್ವಿಖ್ಯಾತ ಹೆಸರು. ಐಭೋಗದ ಇತಿ ಹಾಸಕ್ಕೆ ನೂರಾರು ಸಾಕ್ಷಿಗಳು, ಆದರೆ ಮನಸ್ಸು ಮಾಡಿದರೆ ಅರಮನೆಯಿಂದ ನಡಕೊಂಡೇ ಬಂದುಬಿಡ ಬಹುದಾದಷ್ಟು ದೂರದ ಊರುಗಳ ಬಗ್ಗೆ ಹೆಚ್ಚೇನೂ ಮಾಹಿತಿಯೇ ಇಲ್ಲ. ದೀಪದ ಬುಡದ ಕತ್ತಲಿನ ಹಾಗೆ.
ಮೈಸೂರಿನ ಸುತ್ತಲ ಊರುಗಳು ಮಾತ್ರವಲ್ಲ, ಕರ್ನಾಟದ ಎಲ್ಲಿ ಹೋದರೂ ಪ್ರತಿ ಊರಿನ ಹೆಸರು ನೋಡಿದಾಗಲೂ “ಹೇಗೆ ಬಂದಿರಬಹುದು ಈ ಹೆಸರು?” ಅಂತ ಕುತೂಹಲವಾಗುತ್ತದೆ. ಕೆಲವಂತೂ ಚೆಂದ ಚೆಂದದ ಹೆಸರುಗಳು, ಕುತೂಹಲ ಹುಟ್ಟಿಸುವ ಹೆಸರುಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತೊಂದಿದೆಯಲ್ಲಾ… ನಾನೇನಾದರೂ ಅದರ ಮಂತ್ರಿಯಾದರೆ ಮೊದಲು ಮಾಡೋ ಕೆಲಸ ಇದೇ ನೋಡಿ, ಎಲ್ಲ ಊರುಗಳ ಹೆಸರುಗಳ ಅರ್ಥ ಹುಡುಕಿ, ದಾಖಲಿಸುವುದು (ನಾ ಮಂತ್ರಿಯಾಗಲ್ಲ ಅಂತ ನಿಮಗೂ ಗೊತ್ತು. ನನಗೂ ಗೊತ್ತು. ಸುಮ್ಮೆ ಮಾತಿಗಂದೆ ಅಷ್ಟೆ, ಅಥವಾ ಅಸಹಾಯಕತೆಯಿಂದ).ಇದು ಖರ್ಚು ಬೇಡುವ ಕೆಲಸವಾದ್ದರಿಂದ ಎಲ್ಲರಿಂದಲೂ ಸಾಧ್ಯವಿಲ್ಲ. ಇಲಾಖೆಯೋ, ಅಕಾಡೆಮಿಗಳೋ, ಯಾರಾದರೂ ಈ ಕೆಲಸ ಮಾಡಲಿ ಎಂಬ ಆಶಯ, (ಕೆಲವು ಜಿಲ್ಲೆಗಳಲ್ಲಿ ಯಾರೋ ಮಾಡಿದ್ದಾರೆಂದು ಕೇಳಿದ್ದೇನೆ, ಪೂರ್ಣ ಮಾಹಿತಿ ಇಲ್ಲ). ನಾವು ದಿನವೂ ಬಳಸುವ ತಮ್ಮೂರಿನ ಹೆಸರಿನ ಅರ್ಥ, ಅದರ ಹಿಂದಿನ ಕತೆ ಊರಿನವರಿಗೆಲ್ಲಾ ಗೊತ್ತಾಗುವುದೆಷ್ಟು ಚೆಂದ! ಹಾಗೆ ಗೊತ್ತಾಗದಿದ್ದರೆ ಊರ ಹೆಸರುಗಳಿಗೆ ಅರ್ಥ, ಭಾವ, ಅಸ್ಥಿತೆ, ಸ್ವಂತಿಕೆ ಏನೆಂದರೆ ಏನೂ ಇರದೇ ಅದು ಸ್ಥಳ ಗುರುತಿಸಲು ಬೇಕಾದ ಯಾವುದೋ ಒಂದು ಶಬ್ದವಾಗಿ ಮಾತ್ರ ಉಳಿಯುತ್ತದೆ. ಕೋಚನಹಳ್ಳಿಯಂತೆ. ಬಹುತೇಕ ನಮ್ಮೆಲ್ಲರ ಹಳ್ಳಿಗಳಂತೆ.
ಆ ಮಣ್ಣಿನಲ್ಲಿ ಬದುಕಿ ಬಾಳಿದವರ ಬಾಳ್ವೆಯನ್ನು ಅರ್ಥಪೂರ್ಣವಾಗಿಯಂತೂ ನಾವು ಮುಂದುವರಿಸುತ್ತಿಲ್ಲ. ಭೂಮಿ ಕೊರೆಯುತ್ತೇವೆ, ಫ್ಯಾಕ್ಟರಿ ಹೆಸರಲ್ಲಿ ಏನೇನೋ ತಂದು ಸುರಿಯುತ್ತೇವೆ. ಹಳ್ಳಿಯ ಚಿತ್ರವನ್ನೇ ಅದು ಇತ್ತು ಅನ್ನುವುದೇ ಮರೆತುಹೋಗುವಷ್ಟು ಕೆಡಿಸಿ, ವಿಕಾರಮಾಡಿ, ನಾವೂ ಹೊಸ ಅವತಾರ ತಾಳಿ, ತಿರುಗಾಡುತ್ತೇವೆ. ಜಲ್ಲಿ ಮಷೀನು ಜಲ್ಲಿಯೊಂದಿಗೆ ಹಳ್ಳಿಯನ್ನೂ ಕ್ರಶ್ ಮಾಡುತ್ತಿದೆ. ಸಿಮೆಂಟ್ ಮಿಕ್ಸರು ಸಂಸ್ಕೃತಿಗಳನ್ನೂ ಕಲಸಿಹಾಕುತ್ತಿದೆ. ಏನನ್ನೂ ಉಳಿಸಿಕೊಳ್ಳುವುದು ನಮ್ಮ ಕೈಲಿಲ್ಲ ವೆಂಬಂತೆ ಕೈಚೆಲ್ಲುತ್ತಾ ಅಥವಾ ಹಾಗೆ ನಟಿಸುತ್ತಾ ಹೋಗುವ ನಾವು ಊರು ಕೆಡುವುದನ್ನು ಸುಮ್ಮನೇ ನೋಡುತ್ತಿದ್ದೇವೆ. ನಮ್ಮೂರು ಸಿಟಿಯಾಯ್ತು. ಕೋಟಿ ಬಂತು ಅನ್ನೋ ಖುಷಿಯಲ್ಲೂ, ಊರನ್ನು ನಾವು ಕೆಡಿಸಿದರೆ ಊರು ನಾಳೆ ನಮ್ಮನ್ನು ಕೆಡಿಸದೇ ಬಿಡುವುದಿಲ್ಲ. ಕೆಡುವುದಂತೂ ಇದ್ದದ್ದೇ. ಈಗ ಕಡೇಪಕ್ಷ ಊರ ಹೆಸರಿನ ಅರ್ಥವೇನಿರಬಹುದೆಂದಾದರೂ ತಿಳಿದುಕೊಳ್ಳೋಣ ಅನಿಸುತ್ತದೆ.
ನನ್ನ ಹತ್ರ ಟೈಂ ಮಷೀನಿಲ್ಲ. ಸಂಶೋದನೆ ಮಾಡಲು ಬೇಕಾದ ಸರಕಿಲ್ಲ. ಕಾಸು ಮೊದಲೇ ಇಲ್ಲ. ಹಾಗಾಗಿ ಖರ್ಚಿರದ ಕೆಲಸವೆಂದು ಪ್ರಾರ್ಥನೆಯೊಂದನ್ನು ಮಾತ್ರ ಮಾಡುತ್ತೇನೆ. ಮತ್ತು ಆ ಕೋಚನೆಂಬೋ ಕೋಚನನೆ ಕೇಳುತ್ತೇನೆ; “ಅಯ್ಯಾ ಕೋಚನೇ, ನೀನು ಯಾರಾಗಿದ್ದೆ? ಏನಾಗಿದ್ದೆ? ಯಾವ ಕಾಲದಲ್ಲಿ ಬದುಕಿ ಬಾಳಿದ್ದೆ? ಎಷ್ಟು ದೂರವ ಆಳಿದ್ದೆ? ಊರವರೆಲ್ಲ ನಿನ್ನ ಹೆಸರು ಹಿಡಿದು ಬೈಯುವಷ್ಟು ಕಿರಪಿರ ಯಾಕೆ ಮಾಡುತ್ತಿದ್ದೆ? ನೋಡೀಗ ನಿನ್ನ ನೆಲದ ಮೇಲೆ ಫಾರಿನ್ ಕಾಸು ಸುರೀತಾವೆ. ಸ್ವಲ್ಪ ಏಳು ಸ್ವಾಮೀ, ಎದ್ದು ಬಂದು ನನ್ನ ಕನಸಿನಲ್ಲಿ ಭೇಟಿಯಾಗು. ಹಳೇದೆಲ್ಲ ಹೇಳಿಹೋಗು”.
ಅಕಸ್ಮಾತ್ ಅವನು ಬಂದು ಕನಸಲ್ಲಿ ಹೇಳಿಹೋದರೆ ಮತ್ತೊಂದು ಲೇಖನ ಬರೆದು ನಿಮಗೂ ಹೇಳುತ್ತೇನೆ.
ನಿಮ್ಮೂರ ಹೆಸರು ಹೇಗೆ ಬಂತೆಂದು ಗೊತ್ತೇ ನಿಮಗೆ? ಗೊತ್ತಿದ್ದರೆ ಸರಿ. ಇಲ್ಲದಿದ್ದರೆ ನಿಮಗೂ ಈಗ ಪ್ರಾರ್ಥನೆಯೊಂದೇ ದಾರಿ!