ಭಾರತದಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪರಿಣಾಮ ಮೇ ೩ರಂದು ನಡೆದಿದ್ದ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ. ಜೂನ್ ೨೧ಕ್ಕೆ ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ. ವೈದ್ಯಕೀಯ ದಂಥ ವೃತ್ತಿಪರ ಪರೀಕ್ಷೆಗಳನ್ನು ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ಆಡಳಿತಾತ್ಮಕ ಸಾಮರ್ಥ್ಯದ ಬಗ್ಗೆಯೇ ಈಗ ಶಂಕೆ ಮೂಡುವಂತಾಗಿದೆ. ಲೋಪವಿಲ್ಲದೇ ಪರೀಕ್ಷೆ ನಡೆಸಲು ವಿಫಲವಾಗುವುದು ಮಾತ್ರವಲ್ಲದೇ ಘೆSಅ ಒಳಗಿನಿಂದಲೇ ಈ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ.
ಹಣದಾಸೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳುವಂಥ ದುರುಳರು ನಮ್ಮ ವ್ಯವಸ್ಥೆಯ ಒಳಗೆ ನುಸುಳಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದೇಶಾದ್ಯಂತ ಸುಮಾರು ೨೩ ಲಕ್ಷ ವಿದ್ಯಾರ್ಥಿಗಳು NEET ಪರೀಕ್ಷೆ ಬರೆದಿದ್ದರು. ಎಂಬಿಬಿಎಸ್, ಬಿಡಿಎಸ್, ಆಯುಷ್ (ಆಯುರ್ವೇದ, ಯುನಾನಿ, ಹೋಮಿಯೊಪಥಿ) ಮತ್ತು ಪಶುವೈದ್ಯಕೀಯ ಕೋರ್ಸ್ ಗಳಿಗಾಗಿ ಸುಮಾರು ಎರಡು ವರ್ಷಗಳಿಂದ ಈ ವಿದ್ಯಾರ್ಥಿಗಳು ಸಿದ್ಧತೆಗಳನ್ನು ನಡೆಸಿರುತ್ತಾರೆ. ವೈದ್ಯರಾಗುವ ಮೂಲಕ ಉಜ್ವಲ ಭವಿಷ್ಯವನ್ನು ಹೊಂದಬೇಕೆಂಬ ಕನಸು ಕೇವಲ ಈ ವಿದ್ಯಾರ್ಥಿಗಳದ್ದು ಮಾತ್ರ ಆಗಿರುವುದಿಲ್ಲ, ಅವರ ಇಡೀ ಕುಟುಂಬದ್ದೇ ಆಗಿರುತ್ತದೆ. ಆದರೆ, ಸರ್ಕಾರದ ಅದಕ್ಷ, ಅಪ್ರಾಮಾಣಿಕ, ಸಂವೇದನಾಹೀನ ನಡವಳಿಕೆ ಮತ್ತು ವ್ಯವಸ್ಥೆಯಲ್ಲಿ ನುಸುಳಿಕೊಂಡಿರುವ ಗೆದ್ದಲು ಹುಳಗಳು ಈ ಲಕ್ಷಾಂತರ ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡುತ್ತಾರೆ. ಪದೇಪದೇ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇನ್ನಿತರ ಭ್ರಷ್ಟ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರಚುತ್ತಾರೆ, ಮಾನಸಿಕ ಒತ್ತಡವನ್ನು ಹೆಚ್ಚಿಸಿ ಖಿನ್ನತೆಗೆ ತಳ್ಳುತ್ತಾರೆ. ಈಗ ಮತ್ತದೇ ನಡೆದಿದೆ.
ವಿದ್ಯಾರ್ಥಿಗಳ ಕನಸುಗಳ ಕೊಲೆ: NEET ಕೇವಲ ಮೂರು ಗಂಟೆಯ ಪರೀಕ್ಷೆ ಮಾತ್ರವಲ್ಲ. ಇದು ವಿದ್ಯಾರ್ಥಿಗಳು ಎರಡು ವರ್ಷಗಳ ನಿರಂತರ ಪರಿಶ್ರಮಕ್ಕೆ ಫಲ ಪಡೆಯುವ ಗಳಿಗೆಯೂ ಹೌದು. ಹಗಲು ರಾತ್ರಿ ಎನ್ನದೇ ಕಣ್ಣಿಗೆ ಎಣ್ಣೆ ಬಿಟ್ಕೊಂಡು ವಿದ್ಯಾರ್ಥಿಗಳು ಅಭ್ಯಾಸ ಮಾಡಿರುತ್ತಾರೆ. ಎರಡು ವರ್ಷಗಳ ಕಾಲ ಆತ್ಮೀಯ ಸ್ನೇಹಿತರು, ಸಂಬಂಽಕರ ಭೇಟಿ, ಸಭೆ, ಸಮಾರಂಭ, ಸಂಭ್ರಮಗಳನ್ನು ತೊರೆದು ಒಂದು ತಪಸ್ಸಿನಂತೆ ಓದಿನಲ್ಲಿ ಮುಳುಗಿರುತ್ತಾರೆ. ಅಷ್ಟೇ ಅಲ್ಲ, ಪರೀಕ್ಷೆಯ ದಿನ ಯಾವುದೋ ದೂರದ ಊರುಗಳಿಂದ, ಬೇರೆ ರಾಜ್ಯಗಳಿಂದ ಪಾಲಕರ ಜೊತೆಗೆ ಬಂದು ಪರೀಕ್ಷೆಗೆ ಹಾಜರಾಗಿರುತ್ತಾರೆ.
ಇದಕ್ಕೆಲ್ಲ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇಷ್ಟೆಲ್ಲ ಆದ ಮೇಲೆ ಪ್ರಶ್ನೆಪತ್ರಿಕೆ ಸೋರಿಕೆ ಯಾಗಿದೆ, ಪರೀಕ್ಷೆ ರದ್ದಾಗಿದೆ, ಮತ್ತೊಮ್ಮೆ ಪರೀಕ್ಷೆ ಬರೆಯಬೇಕು ಎಂದು ಗೊತ್ತಾದಾಗ ಆ ಲಕ್ಷಾಂತರ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಏನಾಗಿರಬೇಡ? ಪರೀಕ್ಷಾ ವ್ಯವಸ್ಥೆಯಲ್ಲಿನ ಈ ಭ್ರಷ್ಟಾಚಾರ ಭಾರತದ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತ ಯುವಕರ ಪರಿಶ್ರಮದ ಹತ್ಯೆಯೂ ಹೌದು. ದೇಶದ ಕೋಟ್ಯಂತರ ಮಧ್ಯಮ ವರ್ಗಗಳ ಪಾಲಕರ ಕನಸುಗಳ ದರೋಡೆಯೂ ಹೌದು.
ನೂರಾರು ಕೋಟಿ ರೂ.ಗಳ ದಂಧೆ: ಆರಂಭಿಕ ತನಿಖೆಗಳ ಪ್ರಕಾರ NEET ಪ್ರಶ್ನೆ ಪತ್ರಿಕೆಗಳನ್ನು ರೂ. ೩೦ ಸಾವಿರದಿಂದ ಲಕ್ಷಾಂತರ ರೂಪಾಯಿವರೆಗೆ ಮಾರಾಟ ಮಾಡಲಾಗಿದೆ. ಒಂದು ಪ್ರಶ್ನೆ ಪತ್ರಿಕೆ ರೂ. ೨೮ ಲಕ್ಷಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ೨೩ ಲಕ್ಷ ವಿದ್ಯಾರ್ಥಿಗಳ ಪೈಕಿ ಕೇವಲ ಶೇ.೫ರಷ್ಟು ವಿದ್ಯಾರ್ಥಿಗಳ ಕೈಗೆ ಈ ಪ್ರಶ್ನೆಪತ್ರಿಕೆಗಳು ಪರೀಕ್ಷೆಗಿಂತ ಮೊದಲೇ ತಲುಪಿದ್ದರೂ ಅಂಥ ವಿದ್ಯಾರ್ಥಿಗಳ ಸಂಖ್ಯೆ ೧ ಲಕ್ಷ ೧೫ ಸಾವಿರದಷ್ಟಾಗುತ್ತದೆ. ಸರಾಸರಿ ಒಂದು ಪ್ರಶ್ನೆಪತ್ರಿಕೆಯನ್ನು ರೂ.೫೦ ಸಾವಿರಕ್ಕೆ ಮಾರಾಟ ಮಾಡಿದ್ದರೂ ಆ ಮೊತ್ತ ಸುಮಾರು ೫೭೫ ಕೋಟಿ ರೂಪಾಯಿ ಆಗುತ್ತದೆ. ಇದರರ್ಥ ಪ್ರಶ್ನೆಪತ್ರಿಕೆ ಸೋರಿಕೆಯಿಂದ ರಾತೋರಾತ್ರಿ ಕೆಲವರು ನೂರಾರು ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಒಂದು ವ್ಯವಸ್ಥಿತ ಮಾಫಿಯಾ ರೀತಿ ದೇಶದಲ್ಲಿ ಈಗ ಕೆಲಸ ಮಾಡುತ್ತಿದೆ. ಅದೇ ಕಾರಣಕ್ಕೆ ಇಲ್ಲಿಯವರೆಗೆ ಸುಮಾರು ನಾಲ್ಕು ಬಾರಿ NEET ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ. NEET ಮಾತ್ರವಲ್ಲ ವಿವಿಧ ವೃತ್ತಿಪರ ಕೋರ್ಸ್‌ಗಳು, ಪೊಲೀಸ್, ಸೈನ್ಯ ಭರ್ತಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳನ್ನು ಗಣನೆಗೆ ತೆಗೆದುಕೊಂಡರೆ ಕಳೆದ ಹತ್ತು ವರ್ಷಗಳಲ್ಲಿ ಒಟ್ಟು ಸುಮಾರು ೮೯ ಬಾರಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಐವತ್ತಕ್ಕೂ ಹೆಚ್ಚು ಬಾರಿ ಪರೀಕ್ಷೆಗಳನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಲಾಗಿದೆ. ಈ ವಿವರಗಳು ನಮ್ಮ ಆಡಳಿತದ ಬೇಜವಾಬ್ದಾರಿತನಕ್ಕೆ, ಅದಕ್ಷತೆಗೆ, ಅಪ್ರಾಮಾಣಿಕತೆಗೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಕ್ಕೆ ಹಿಡಿದ ಕನ್ನಡಿಯಂತಿವೆ.
ಕೋಚಿಂಗ್ ಮಾಫಿಯಾ: ದೇಶದಲ್ಲಿ ಶಿಕ್ಷಣವೆಂಬುದು ಒಂದು ದೊಡ್ಡ ಹಣ ಗಳಿಸುವ ದಂಧೆಯಾಗಿ ಮಾರ್ಪಟ್ಟಿರುವುದೇ ಈ ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಪ್ರಮುಖ ಕಾರಣ. ಘೆಉಉS ಆರಂಭವಾದಾಗಿನಿಂದ ಕೋಚಿಂಗ್ ಸಂಸ್ಕೃತಿ ಹೆಚ್ಚಾಗಿದೆ ಮತ್ತು ಕೋಚಿಂಗ್ ಮಾಫಿಯಾ ಕೂಡ ಸಕ್ರಿಯವಾಗಿದೆ.
ಕೋಚಿಂಗ್ ಎಂಬುದು ಈಗ ಲಕ್ಷಾಂತರ ಕೋಟಿ ರೂಪಾಯಿ ಉದ್ಯಮವಾಗಿದೆ. ನಮ್ಮ ಕೋಚಿಂಗ್ ಬಹಳ ಅದ್ಭುತವಾಗಿದೆ, ನಮ್ಮ ಸೆಂಟರ್‌ನಲ್ಲಿ ಓದಿದ ವಿದ್ಯಾರ್ಥಿಗಳು ಎಲ್ಲ ರೀತಿಯ ಪರೀಕ್ಷೆಗಳನ್ನು ಸುಲಭವಾಗಿ ಪಾಸು ಮಾಡುತ್ತಾರೆ ಎಂಬುದನ್ನು ಮಾರ್ಕೆಟಿಂಗ್ ಮಾಡಿದಾಗ ಈ ಕೋಚಿಂಗ್ ಸೆಂಟರ್ಗಳ ಡಿಮ್ಯಾಂಡ್ ಹೆಚ್ಚಾಗುತ್ತದೆ. ಈ ರೀತಿ ಡಿಮ್ಯಾಂಡ್ ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಕೋಚಿಂಗ್ ಸೆಂಟರ್ಗಳು ವ್ಯವಸ್ಥೆಯಲ್ಲಿನ ಲೋಪಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿಸಿ ತಮ್ಮ ಸೆಂಟರ್‌ನ ರಿಸಲ್ಟ್ ಉಳಿದವರಿಗಿಂತ ಚೆನ್ನಾಗಿದೆ ಎಂದು ಬಿಂಬಿಸಿಕೊಳ್ಳುವ ಪೈಪೋಟಿಗೆ ಇಳಿಯುತ್ತವೆ. ಪರೀಕ್ಷಾ ವ್ಯವಸ್ಥೆಯ ಅಧೋಗತಿಗೆ ಇದುವೇ ಪ್ರಮುಖ ಕಾರಣವಾಗಿದೆ.
ಜೊತೆಗೆ, ಪ್ರಶ್ನೆಪತ್ರಿಕೆಗಳ ಮುದ್ರಣ, ವಿತರಣೆ, ಪರೀಕ್ಷೆ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಮ್ಯಾನೇಜ್ ಮಾಡುವ ಹಂತದಲ್ಲೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತವೆ. ಅದಕ್ಕೂ ಭ್ರಷ್ಟ ವ್ಯವಸ್ಥೆಯೇ ಕಾರಣ. ಅಧಿಕಾರದಲ್ಲಿರುವವರ ಆಶೀರ್ವಾದವೂ ಈ ಪರೀಕ್ಷಾ ಮಾಫಿಯಾಕ್ಕೆ ಲಭ್ಯವಿದೆ ಎಂಬ ಆರೋಪಗಳಿವೆ. ಅದೇ ಕಾರಣಕ್ಕೆ ಪದೇಪದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದರೂ ಯಾರೊಬ್ಬರಿಗೂ ನೆನಪಿಡುವಂಥ ಶಿಕ್ಷೆ ಆಗುವುದಿಲ್ಲ. ಕಣ್ಣೊರೆಸುವುದಕ್ಕಾಗಿ ಕೇವಲ ಕೆಲ ದಿನಗಳ ಕಾರಾಗೃಹ ವಾಸ ನಂತರ ಜಾಮೀನು. ಮತ್ತೆ ಅದೇ ದುರವಸ್ಥೆ, ಪ್ರಶ್ನೆ ಪತ್ರಿಕೆ ಸೋರಿಕೆಯ ಪುನರಾವರ್ತನೆ. ಇದು ದೇಶದಲ್ಲೀಗ ದೊಡ್ಡ ರೋಗವಾಗಿ ಮಾರ್ಪಟ್ಟಿದೆ.
ನೀಟ್‌ಗೆ ದಕ್ಷಿಣ ಭಾರತದ ವಿರೋಧವೇಕೆ?:
ಕೇಂದ್ರ ಸರ್ಕಾರದ ನೀಟ್ ಪರೀಕ್ಷಾ ನೀತಿಯು ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಪ್ರವೇಶಾತಿ ವಿಚಾರದಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂದು ದಕ್ಷಿಣ ಭಾರತದ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಒಂದು ರಾಜ್ಯದ ಸ್ವಾಯತ್ತತೆಯನ್ನು ಉಲ್ಲಂಸುತ್ತದೆ. ರಾಜ್ಯ ಪಠ್ಯಕ್ರಮಕ್ಕೆ ಹೊಡೆತ ಬೀಳುತ್ತದೆ. ರಾಜ್ಯ ಶಿಕ್ಷಣ ಮಂಡಳಿಗಳನ್ನು ದುರ್ಬಲಗೊಳಿಸುತ್ತದೆ, ಸಂಯುಕ್ತ ವ್ಯವಸ್ಥೆಗೆ ಧಕ್ಕೆ ತರುತ್ತದೆ. ದುಬಾರಿ ಕೋಚಿಂಗ್ ಸಂಸ್ಕೃತಿಯಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಪ್ರಕರಣಗಳು ನೀಟ್ ಪರಿಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿವೆ ಎಂಬುದು ದಕ್ಷಿಣದ ರಾಜ್ಯಗಳ ವಾದ. ಅಲ್ಲದೆ ಮೇ ೩ರಂದು ನಡೆದಿದ್ದ ನೀಟ್ ಪರಿಕ್ಷೆ ರದ್ದು ಮಾಡಿದ್ದರಿಂದ ಮನನೊಂದು ಈಗಾಗಲೇ ಪರಿಕ್ಷೆ ಬರೆದಿದ್ದ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.




