Mysore
30
scattered clouds

Social Media

ಶನಿವಾರ, 22 ಮಾರ್ಚ್ 2025
Light
Dark

ಹಾಡು ಪಾಡು – ವಾರದ ಮುಖ

ಕೆ.ಆರ್.ನಗರ ತಾಲ್ಲೂಕು ಮಾಸ್ತಳ್ಳಿ ಪೋಸ್ಟು, ಮೂಲೆಪೆಟ್ಲು ಗ್ರಾಮ ಎಂಬುದು ಮೀನು ಹಿಡಿದು ಬದುಕುವ ಮಂದಿೆುೀಂ ಹೆಚ್ಚಾಗಿ ಇರುವ ಪುಟ್ಟ ಊರು. ಈ ಫೋಟೋದಲ್ಲಿ ನೀವು ನೋಡುತ್ತಿರುವ ರತ್ನ ಎಂಬ ಈ ಹೆಣ್ಣು ಜೀವ ಕಳೆದ ೨೮ ವರ್ಷಗಳಿಂದ ತೆಪ್ಪ ನಡೆಸುತ್ತಾ ಮೀನು ಹಿಡಿಯುತ್ತಾ ಕಾವೇರಿ ಹಿನ್ನೀರ ಮೇಲೆ ಮತ್ಸ್ಯಕನ್ಯೆಯ ಹಾಗೆ ತೇಲುತ್ತಿರುತ್ತಾರೆ. ಮೂಲೆಪೆಟ್ಲು ಗ್ರಾಮದ ಮೀನು ಹಿಡಿಯುವ ಏಕೈಕ ಹೆಣ್ಣು ಮಗಳು ಈಕೆ. ಬೆಳೆದ ಇಬ್ಬರು ಮಕ್ಕಳ ತಾಯಿ ರತ್ನ ತೆಪ್ಪ ನಡೆಸುವ ಮೀನುಗಾರ್ತಿಯಾಗಿದ್ದು ಅನಿವಾರ್ಯತೆಯಿಂದ. ತೆಪ್ಪ ನಡೆಸುತ್ತಿದ್ದ ಗಂಡ ಕಾಯಿಲೆ ಬಿದ್ದಾಗ ಈಕೆಯ ಹೊಟ್ಟೆಯಲ್ಲಿದ್ದ ಹೆಣ್ಣು ಕೂಸಿಗೆ ಐದು ತಿಂಗಳು. ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಮನೆಗೆ ಬಂದವಳು ಸ್ವಾಮಿ ನಂಜುಂಡೇಶ್ವರನಿಗೆ ಅಲ್ಲಿಂದಲೇ ಕೈ ಮುಗಿದು, ‘ನನ್ನ ಗಂಡನ್ನ ಬದುಕಿಸು ಮತ್ತು ನನಗೆ ಬದುಕುವ ಧೈರ್ಯ ಕೊಡು’ ಎಂದು ಬೇಡಿಕೊಂಡವರು ಆ ಎರಡನ್ನೂ ಪಡಕೊಂಡು ಅಂದಿನಿಂದ ತೆಪ್ಪ ಓಡಿಸಲು ತೊಡಗಿದ್ದಾರೆ. ಇಂದಿಗೂ ಅದೇ ಧೈರ್ಯ ಮತ್ತು ಅದೇ ನಂಬಿಕೆಯಿಂದ ತೆಪ್ಪ ನಡೆಸುತ್ತಾರೆ. ಈ ನಡುವೆ ಆಕೆಯ ತೆಪ್ಪ ಮತ್ತು ಬಲೆಗಳು ಪದೇ ಪದೇ ಕಳ್ಳರ ಪಾಲಾಗುತ್ತಿರುತ್ತವೆ. ಈಕೆ ಮತ್ತೆ ಸಾಕ- ಸೋಲ, ಚೀಟಿ, ಸ್ಕೀಮುಗಳ ಸಹಾಯದಿಂದ ಹೊಸ ತೆಪ್ಪ, ಹೊಸ ಬಲೆಗಳನ್ನು ಖರೀದಿಸಿ ಬದುಕಿನ ದೋಣಿ ನಡೆಸುತ್ತಿರುತ್ತಾರೆ.

‘ನದಿಯಲ್ಲಿ ಆಗಾಗ ಜೋರು ಗಾಳಿ ಬೀಸಿದಾಗ ಏನು ಮಾಡುತ್ತೀರಿ ರತ್ನಾ’ ಎಂದು ಕೇಳಿದರೆ ‘ಏನೂ ಮಾಡುವುದಿಲ್ಲ. ಹುಟ್ಟು ಕೂಡ ಹಾಕದೆ ತೆಪ್ಪದ ನಡುವೆ ಸುಮ್ಮನೆ ಕೂತುಕೊಳ್ಳುತ್ತೇನೆ. ಆಗ ಆ ಗಾಳಿಯೇ ತೆಪ್ಪವನ್ನು ದಡಕ್ಕೆ ತಂದು ಬಿಡುತ್ತದೆ’ ಎನ್ನುತ್ತಾರೆ.
ನಾಳೆ ನಮ್ಮ ದೇಶದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ. ಬಹುಶಃ ನಾಳೆಯೂ ಕೂಡ ರತ್ನ ಸಾಗರಕಟ್ಟೆಯ ಕಾವೇರಿ ನೀರಿನಲ್ಲಿ ತೆಪ್ಪದ ಮೇಲೆ ತೇಲುತ್ತಿರುತ್ತಾರೆ. ನೀವೇನಾದರೂ ರಜಾ ನಿಮಿತ್ತ ಆ ಕಡೆ ವಿಹಾರ ಹೋದರೆ ಈ ಸ್ತ್ರೀರತ್ನಳಿಗೊಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯ ಕೋರಲು ಮರೆಯಬೇಡಿ.

Mysoorininda@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ