೫೨ ದಿನಗಳ ಕಾಲ ಸಮುದ್ರದಲ್ಲಿ ೩,೦೦೦ ನಾಟಿಕಲ್ ಮೈಲಿ ಸಾಗಿದ ಜಿಎಸ್‌ಎಸ್ ಅವರ ಮೊಮ್ಮಗಳ ಸಾಹಸಗಾಥೆ
ಅಟ್ಲಾಂಟಿಕ್ ಸಮುದ್ರ… ಅದೊಂದು ಕಾಲಜ್ಞಾನದ ಪಾಠಶಾಲೆಯಂತೆ. ಮನುಷ್ಯನೊಳಗಿನ ಶಕ್ತಿ, ಸಾಮರ್ಥ್ಯ, ಧೈರ್ಯ, ಸಹನೆ ಎಲ್ಲವನ್ನೂ ಪರೀಕ್ಷಿಸುವ ಜಾಗ. ಅಂತಹ ಸಮುದ್ರದ ಮಧ್ಯದಲ್ಲಿ ಯಾವುದೇ ಇಂಜಿನ್ ಇಲ್ಲದ ಸಣ್ಣದೊಂದು ದೋಣಿಯಲ್ಲಿ ಏಕಾಂಗಿಯಾಗಿ ತನ್ನ ಕೈಗಳಿಂದ ದೋಣಿಯನ್ನು ಹುಟ್ಟು ಹಾಕುತ್ತಾ, ಏಕಾಏಕಿಯಾಗಿ ಬಂದೆರಗುವ ೨೦ ಅಡಿಯಷ್ಟು ಎತ್ತರದ ಅಲೆಗಳ ಅಬ್ಬರವನ್ನು ಮೆಟ್ಟಿ ನಿಲ್ಲುತ್ತಾ, ಎದುರಾದ ಎಲ್ಲಾ ತಾಂತ್ರಿಕ ಸವಾಲುಗಳನ್ನು ತಾನೇ ಬಗೆಹರಿಸುತ್ತಾ ೫೨ ದಿನಗಳ ಕಾಲ ಹಗಲು ರಾತ್ರಿಗಳನ್ನು ಕಳೆದು “ಅಟ್ಲಾಂಟಿಕ್ ಮಹಾಯಾನ”ವನ್ನು ಸಾಧಿಸುವುದೆಂದರೆ ಅದು ದುಸ್ಸಾಹಸವೇ ಸರಿ.
ಇದು ಯಾವುದೋ ರೋಮಾಂಚಕ ಸಿನೆಮಾ ಅಥವಾ ಕಾದಂಬರಿಯ ಕತೆಯಲ್ಲ, ತನ್ನ ಧೈರ್ಯ, ಸ್ಥೆ ರ್ಯ ಹಾಗೂ ಪ್ರೇರಣೆಗಳ ಅಲೆಗಳಲ್ಲಿ ೫೨ ದಿನಗಳ ಕಾಲ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಮೊದಲ ಭಾರತೀಯ ಮಹಿಳೆ ಎಂದು ದಾಖಲೆ ನಿರ್ಮಿಸಿರುವ ಅನನ್ಯ ಪ್ರಸಾದಳ ಸಾಹಸಗಾಥೆ. ತನ್ನ ಸುರಕ್ಷಿತ ವಲಯದಿಂದ (ಕಂಫರ್ಟ್ ಜೋನ್) ಅನಿವಾರ್ಯದ ಪರಿಸ್ಥಿತಿಗೆ ತನ್ನನ್ನು ತಾನು ಒಡ್ಡಿಕೊಳ್ಳದೆ ತನ್ನ ಸಾಮರ್ಥ್ಯವನ್ನು ಮನಗಾಣುವುದು ಸಾಧ್ಯವಿಲ್ಲ ಎಂಬುದನ್ನು ಬಲವಾಗಿ ನಂಬಿರುವ ಅನನ್ಯ ಸಮುದ್ರಯಾನದಂತಹ ಅಪಾಯಕಾರಿ ಕ್ರೀಡೆಯಲ್ಲಿ ಭಾಗವಹಿಸಿ ತನ್ನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ನಿರ್ಧಾರ ಮಾಡಿದಳು. ಸಮುದ್ರಯಾನವನ್ನು ಪ್ರಾರಂಭಿಸಿದಾಗ ತನಗಿಂತಲೂ ಹೆಚ್ಚು ತಯಾರಿ ನಡೆಸಿದ್ದ ದೃಢಕಾಯದ ಗಂಡಸರನ್ನು ನೋಡಿ, ತಾನು ಅಷ್ಟು ತಯಾರಿ ಮಾಡಿಕೊಂಡಿಲ್ಲವಲ್ಲ… ತಾನು ಹೆಣ್ಣು, ತನಗೆ ಗಂಡಸರಷ್ಟು ದೈಹಿಕ ಶಕ್ತಿ ಇಲ್ಲವೋ ಏನೋ ಎಂಬ ಆತಂಕಗಳು ಎದುರಾದರೂ ದೋಣಿಯನ್ನು ಹುಟ್ಟುಹಾಕುತ್ತಾ… ಹಾಕುತ್ತಾ… ತನ್ನ ಸಾಮರ್ಥ್ಯವನ್ನು ತಾನೇ ಕಂಡುಕೊಂಡಳು. ಕಡೆಗೆ ದೃಢಕಾಯ ಶರೀರದ, ಅನುಭವಿ ಗಂಡಸರನೇಕರನ್ನು ಹಿಂದಿಕ್ಕಿ ತನ್ನ ಗುರಿ ತಲುಪಿದಳು. ಇದು ಆಕೆಯ ದೃಢಸಂಕಲ್ಪ, ದೈಹಿಕ, ಮಾನಸಿಕ ತಯಾರಿ ಹಾಗೂ ಅಚಲ ಆತ್ಮವಿಶ್ವಾಸದಿಂದ ಸಾಧ್ಯವಾಗಿರುವ ಅದ್ಭುತ “ಅಟ್ಲಾಂಟಿಕ್ ಒಡಿಸ್ಸಿ”ಯಾಗಿದೆ.
ಭಾರತದಲ್ಲಿ ಹುಟ್ಟಿ ಇಂಗ್ಲೆಂಡಿನಲ್ಲಿ ಬೆಳೆದ ಅನನ್ಯ ಪ್ರಸಾದ್, ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಡಾ.ಶಿವಪ್ರಸಾದ್ ಹಾಗೂ ಪೂರ್ಣಿಮಾ ದಂಪತಿಯ ಮಗಳು. ಚಿಕ್ಕ ವಯಸ್ಸಿನಿಂದಲೂ ಸಾಹಸಮಯ ಕ್ರೀಡೆಗಳಲ್ಲಿ ಅತೀವ ಆಸಕ್ತಿ ಹೊಂದಿರುವ ಅನನ್ಯ ಹೊಸ ಸಾಹಸಗಳನ್ನು ಮಾಡಲು ಬಯಸುವ ಮತ್ತು ಹೊಸ ಚಟುವಟಿಕೆಗಳನ್ನು ಪ್ರಯತ್ನಿಸುವ ಮನೋಭಾವನೆವುಳ್ಳವಳು. ಅದು ಏಕಾಂಗಿಯಾಗಿ ಸ್ಕೆ ಡೈವ್ ಮಾಡುವುದನ್ನು ಕಲಿಯುವುದಿರಲಿ, ಕಯಾಕಿಂಗ್, ಟ್ರಕ್ಕಿಂಗ್, ರಾಕ್ ಕ್ಲೆ ಂಬಿಂಗ್ ಅಥವಾ ಪರ್ವತಾರೋಹಣವೇ ಆಗಿರಲಿ, ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಕೆ ಸದಾ ಮುಂದು.
ಅಟ್ಲಾಂಟಿಕ್ ಸಮುದ್ರದಲ್ಲಿ ಪ್ರತಿ ವರ್ಷ ಡಿಸೆಂಬರ್‌ನಲ್ಲಿ ‘ವಲ್ಡ್ ಟಫೆಸ್ಟ್ ರೋ’ ಎಂಬ ದೋಣಿ ಹಾಯುವ ಸ್ಪರ್ಧೆ ನಡೆಯುತ್ತದೆ. ಇದು ಕೇವಲ ದೋಣಿ ವಿಹಾರದ ಹೆಸರಲ್ಲ, ಅಟ್ಲಾಂಟಿಕ್ ಸಾಗರದಲ್ಲಿ ದೈತ್ಯ ಅಲೆಗಳನ್ನು ಮೆಟ್ಟಿನಿಲ್ಲುವ ಮಹಾಯಾನ. ೨೦೨೪ರ ಡಿಸೆಂಬರ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಅನನ್ಯ ಏಕಾಂಗಿಯಾಗಿ ಭಾಗವಹಿಸಲು ನಿರ್ಧರಿಸಿದಳು. ತನ್ನ ಹೃದಯಕ್ಕೆ ಹತ್ತಿರವಾದ, ಜಿ.ಎಸ್.ಜಯದೇವ (ಅನನ್ಯ ಅವರ ದೊಡ್ಡಪ್ಪ) ಅವರು ಸ್ಥಾಪಿಸಿದ ಅನಾಥ ಹಾಗೂ ಬಡ ಮಕ್ಕಳಿಗೆ ವಸತಿ – ಶಿಕ್ಷಣವನ್ನು ಒದಗಿಸುವ ದೀನಬಂಧು ಸಂಸ್ಥೆ ಹಾಗೂ ಮೆಂಟಲ್ ಹೆಲ್ತ್ ಸಂಸ್ಥೆಗೆ ದೇಣಿಗೆ ನೀಡುವ ಸಲುವಾಗಿ ಆಕೆ ಅಟ್ಲಾಂಟಿಕ್ ಸಾಗರದಲ್ಲಿ ದೋಣಿ ವಿಹಾರ ಮಾಡುವ ಸವಾಲನ್ನು ಸ್ವೀಕರಿಸಿದಳು.
ಈ ಸ್ಪರ್ಧೆಗಾಗಿ ೩ ವರ್ಷಗಳ ಕಾಲ ಅನನ್ಯ ಹಲವಾರು ಸುರಕ್ಷತಾ ತರಬೇತಿಗಳನ್ನು ಪೂರ್ಣಗೊಳಿಸಿದಳು. ದೈಹಿಕ ಹಾಗೂ ಮಾನಸಿಕ ತಯಾರಿಯನ್ನು ನಡೆಸಿದಳು. ಕಡೆಗೆ ವಿಶೇಷವಾಗಿ ನಿರ್ಮಿಸಲಾದ ದೋಣಿಯಲ್ಲಿ ರೋಯಿಂಗ್ ಮಾಡಿದಳು. ಅದು ಸಮುದ್ರದ ಕಠಿಣ ಪರಿಸರವನ್ನು ತಡೆದುಕೊಳ್ಳಲು ಸೂಕ್ತವಾಗಿ ನಿರ್ಮಿಸಲಾಗಿದ್ದ ದೋಣಿಯಾಗಿತ್ತು. ಅದರಲ್ಲಿ ೫೨ ದಿನಗಳಿಗೆ ಬೇಕಾಗುವ ಉಪಕರಣಗಳು, ಉಪಗ್ರಹ ಫೋನ್, ಆಹಾರದ ವ್ಯವಸ್ಥೆಯನ್ನು ಮಾಡಿಕೊಂಡಳು. ಟೆನೆರೈಫ್‌ನ ಲಾ ಗೊಮೆರಾದಿಂದ ಆಂಟಿಗುವಾಕ್ಕೆ ಅನನ್ಯಳ ಸಾಹಸಯಾನ ಆರಂಭವಾಯಿತು.
ಆಕೆಯ ಈ ಯಾನದಲ್ಲಿ ಸಮುದ್ರದ ಸಹಜ ಸೌಂದರ್ಯವನ್ನು ಸವಿಯುವ ಜೊತೆಗೆ ಸವಾಲುಗಳನ್ನೂ ಎದುರಿಸಬೇಕಾಯಿತು. ಕಡಲಿನ ಅಲೆಗಳು ನೋಡಲು ಮನಮೋಹಕ, ಆದರೆ ಅದೇ ಕಡಲು ಒಂದೇ ಕ್ಷಣದಲ್ಲಿ ಉಗ್ರರೂಪವನ್ನೂ ತಾಳಬಲ್ಲದು. ಅಂತಹ ಅಲೆಗಳೊಂದಿಗೆ ಸೆಣಸಾಡುತ್ತಾ, ಒಂದು ಸಣ್ಣ ದೋಣಿಯಲ್ಲಿ ಹುಟ್ಟು ಹಾಕುತ್ತಾ ಸಮುದ್ರ ಯಾನವನ್ನು ಮಾಡುವುದು ಸುಲಭದ ವಿಷಯವಲ್ಲ. ಸಮುದ್ರದಲ್ಲಿ ಉಕ್ಕೇರುತ್ತಿದ್ದ ಅಲೆಗಳೇನು ಸಣ್ಣ ಅಲೆಗಳಾಗಿರಲಿಲ್ಲ, ೨೦ ಅಡಿಯಷ್ಟು ಎತ್ತರಕ್ಕೆ ಚಿಮ್ಮಿ ಅಟ್ಟಹಾಸ ಮೆರೆಯುತ್ತಿದ್ದ ದೈತ್ಯ ಅಲೆಗಳಾಗಿದ್ದವು.
ಅವುಗಳನ್ನು ಎದುರಿಸುತ್ತಾ ಮುಂದುವರಿಯುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಅನನ್ಯ ಚಲಾಯಿಸುತ್ತಿದ್ದ ದೋಣಿಯನ್ನು ಹಾಯುವ “ಹುಟ್ಟು” (ಓರ್) ಮುರಿದುಹೋಯಿತು. ಸಮುದ್ರದಲ್ಲಿ ಏಳುತ್ತಿದ್ದ ಅಲೆಗಳು ದೋಣಿಗೆ ಬಂದು ಅಪ್ಪಳಿಸುತ್ತಿದ್ದವು. ದೋಣಿ ನಿಯಂತ್ರಣ ತಪ್ಪುತ್ತಿತ್ತು. ಆದರೂ ಧೃತಿಗೆಡದ ಅನನ್ಯ ತನ್ನ ಕೌಶಲದಿಂದ ಮುರಿದ “ಹುಟ್ಟು”ಗಳನ್ನು ತಾನು ತಂದಿದ್ದ ಉಪಕರಣಗಳಿಂದ ಸ್ವತಃ ರಿಪೇರಿ ಮಾಡಿಕೊಂಡು ಸಮುದ್ರಯಾನವನ್ನು ಮುಂದುವರಿಸಿದಳು. ಅದು ಅಲೆಗಳೊಂದಿಗೆ ಆಕೆ ನಡೆಸಿದ ಸೆಣಸಾಟವಷ್ಟೇ ಆಗಿರಲಿಲ್ಲ, ಅಲೆಗಳಿಗೆ ತಲೆಬಾಗದೆ ಭಯವನ್ನು ಮೀರಿದ ಆಕೆಯ ಮಾನಸಿಕ ಹೋರಾಟವೂ ಆಗಿತ್ತು. ಆಕೆಗೆ ಎದುರಾದ ಸವಾಲು ಇಷ್ಟಕ್ಕೇ ಮುಗಿಯಲಿಲ್ಲ.
ಮತ್ತೊಮ್ಮೆ ಆಕೆಯ ದೋಣಿಯ “ರಡಾರ್” ಮುರಿದುಹೋಯಿತು. ದೋಣಿಯಲ್ಲಿ ದಿಕ್ಕನ್ನು ಸೂಚಿಸುವುದಕ್ಕಾಗಿ “ರಡಾರ್”ಅನ್ನು ಅಳವಡಿಸಲಾಗಿರುತ್ತದೆ. ಈ ಉಪಕರಣ ದೋಣಿಯ ಕೆಳಭಾಗದಲ್ಲಿದ್ದು, ಒಂದು ವೇಳೆ ಅದೇನಾದರೂ ಸ್ಥಗಿತವಾದರೆ ಸಮುದ್ರ ಮಧ್ಯದಿಂದ ದಡ ಸೇರುವುದು ಅಸಂಭವ. ಈ “ರಡಾರ್” ಮುರಿದ ಕಾರಣ ದಿಕ್ಕು ತಪ್ಪಿದ ಅನನ್ಯಳ ದೋಣಿ ಅಲೆಗಳ ಮಧ್ಯೆ ಸಿಲುಕಿಕೊಂಡಿತು. ಅಂತಹ ಭಯಾನಕ ಸನ್ನಿವೇಶದಲ್ಲಿಯೂ ಅನನ್ಯಗೆ ಧೈರ್ಯ ತುಂಬಿದ್ದು, ಆಕೆಯ ತಯಾರಿ ಹಾಗೂ ಆತ್ಮ ವಿಶ್ವಾಸ. ಕಡೆಗೆ ದೋಣಿಯ ತಳಭಾಗದಲ್ಲಿದ್ದ “ರಡಾರ್”ಅನ್ನು ಬದಲಾಯಿಸುವುದಕ್ಕಾಗಿ ಅನನ್ಯ ಸಮುದ್ರಕ್ಕೆ ಜಿಗಿಯದೆ ಬೇರೆ ದಾರಿಯಿಲ್ಲ.
ಆಮ್ಲಜನಕ ಮಾಸ್ಕ್ ಆಗಲಿ, ಯಾವುದೇ ತಂತ್ರಜ್ಞಾನವಾಗಲಿ ಇಲ್ಲ. ಆದರೂ ಆಕೆ ಧೈರ್ಯ ಮಾಡಿ ಸಮುದ್ರಕ್ಕೆ ಜಿಗಿದು ದೋಣಿಯ ಕೆಳಭಾಗವನ್ನು ತಲುಪಿ, ತಾನು ತಂದಿದ್ದ ಉಪಕರಣಗಳಿಂದ ಮುರಿದಿದ್ದರಡಾರ್‌ನ ಬಿಡಿಭಾಗವನ್ನು ಬದಲಾಯಿಸಿದಳು. ಮತ್ತೆ ತನ್ನ ದೋಣಿಯನ್ನೇರಿ, ತಾನು ತಲುಪಬೇಕಿದ್ದ ಗಮ್ಯಸ್ಥಾನದ ದಿಕ್ಕು ಹಿಡಿದು ತನ್ನ ಸಮುದ್ರಯಾನವನ್ನು ಮುಂದುವರಿಸಿ ತನ್ನ ಗುರಿ ಮುಟ್ಟಿದಳು.
ಅನನ್ಯ ಪ್ರಸಾದ್ ಮಧ್ಯ-ಅಟ್ಲಾಂಟಿಕ್ ಸಾಗರದಾದ್ಯಂತ ೩,೦೦೦ ನಾಟಿಕಲ್ ಮೈಲಿಗಳಷ್ಟು ದೋಣಿ ವಿಹಾರ ಮಾಡಿದ ಏಷಿಯಾ ಖಂಡದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಇದು ಆಕೆಯ ದೃಢಸಂಕಲ್ಪ, ದೈಹಿಕ ಹಾಗೂ ಮಾನಸಿಕ ತಯಾರಿ ಮತ್ತು ಅಚಲ ಆತ್ಮವಿಶ್ವಾಸದಿಂದ ಸಾಧ್ಯವಾಗಿರುವ ಅದ್ಭುತ ಸಾಧನೆಯಾಗಿದೆ. ಈ ಸಾಹಸಮಯ ಅಟ್ಲಾಂಟಿಕ್ ಸಮುದ್ರಯಾನದಲ್ಲಿ ಆಕೆಯನ್ನು ಮುನ್ನಡೆಸಿದ್ದು ಮಾಂಸಖಂಡಗಳ ಶಕ್ತಿ ಮಾತ್ರವಲ್ಲ, ಆಕೆಯ ಸಂಕಲ್ಪ ಶಕ್ತಿಯೇ ಮೂಲ ಕಾರಣ. ಈ ಸಂಕಲ್ಪ ಶಕ್ತಿಯನ್ನು ಕಂಡುಕೊಳ್ಳುವುದೇ ಎಲ್ಲ ಸಾಹಸಗಳ ಮೂಲ ಉದ್ದೇಶ ಕೂಡ ಹೌದು.
ಸ್ತ್ರೀ ಎಂದರೆ ಅಷ್ಟೇ ಸಾಕೆ… ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ…
ಜಿ.ಎಸ್.ಶಿವರುದ್ರಪ್ಪ ಅವರು ಬರೆದ ಕವಿತೆಯ ಈ ಸಾಲುಗಳಲ್ಲಿ ಮಹಿಳೆಯ ಜೀವನದ ಸಾರ್ಥಕತೆ ಇದೆ. ತನ್ನ ಮನೆಯಿಂದ ಹಿಡಿದು ಸಮಾಜದ ಪ್ರತಿಯೊಂದು ಸ್ತರದಲ್ಲಿಯೂ ತನ್ನ ಅಸ್ತಿತ್ವವನ್ನು ಹೊಸಕಿ ಹಾಕುವವರಮಧ್ಯೆಯೇ ತನ್ನನ್ನು ತಾನು ನಿರೂಪಿಸಿಕೊಳ್ಳುತ್ತಾ ಆಕಾಶದೆತ್ತರಕ್ಕೆ ಬೆಳೆದಿರುವ ಮಹಿಳೆಯ ನಿಸ್ವಾರ್ಥ ತ್ಯಾಗ, ನಿಷ್ಕಲ್ಮಶ ಪ್ರೀತಿ ಹಾಗೂ ಸಾರ್ಥಕ ಬದುಕಿನ ಚಿಂತನೆಯಿದೆ. ಇಂದು ಈ ಕವಿತೆಯ ಜೀವಂತ ರೂಪವಾಗಿ ಅವರ ಮೊಮ್ಮಗಳಾದ ಅನನ್ಯ ಪ್ರಸಾದ್ ೩,೦೦೦ ನಾಟಿಕಲ್ ಮೈಲಿಗಳು (೪,೮೦೦ ಕಿ.ಮೀ.)ಸಾಹಸಮಯ ‘ಅಟ್ಲಾಂಟಿಕ್ ಒಡಿಸ್ಸಿ’ ಎಂಬ ಮಹಾಯಾನವನ್ನು ಸಾಧಿಸಿದ್ದಾಳೆ.
ಜಿಎಸ್‌ಎಸ್ ಅವರು ಸಾಹಿತ್ಯ ಸಾಗರದಲ್ಲಿ ಮುಳುಗಿ ಮನಮುಟ್ಟುವ ಕಾವ್ಯ ಕೃಷಿಯನ್ನು ಮಾಡಿದರೆ, ಅನನ್ಯ ಪ್ರಸಾದ್ ಶಾರೀರಿಕ ಸಾಹಸದಿಂದ ಸಾಗರವನ್ನು ದಾಟಿ ದಾಖಲೆ ನಿರ್ಮಿಸಿದ್ದಾಳೆ. ಅಟ್ಲಾಂಟಿಕ್ ಮಹಾಸಾಗರವನ್ನು ದೋಣಿಯಲ್ಲಿ ಏಕಾಂಗಿಯಾಗಿ ಹುಟ್ಟುಹಾಕಿದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆಯನ್ನು ಮಾಡುವ ಮೂಲಕ ಕನ್ನಡಿಗರು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾಳೆ.
– ರಶ್ಮಿ ಕೋಟಿ





