ಇದು ಅಚ್ಚರಿ, ಆದರೂ ಸತ್ಯ. ಮುಂದಿನ ದಿನಗಳಲ್ಲಿ ಕಬ್ಬು ಬೆಳೆಗಾರರ ಕೈ ಹಿಡಿಯಲಿದೆ ಸಿಹಿ ಜೋಳ. ಕಬ್ಬು ನಮ್ಮ ಮಂಡ್ಯ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಕಳೆದ ಎರಡು ದಶಕಗಳಿಂದ ಕಬ್ಬಿನ ಬೇಸಾಯದಲ್ಲಿ ಆಗಿರುವ ಬದಲಾವಣೆ ಬಹುಶಃ ಬೇರಾವ ಬೆಳೆಯಲ್ಲೂ ಆಗಿಲ್ಲ.
ಮೂರು ಅಡಿ ಸಾಲಿನಲ್ಲಿ ಎಕರೆಗೆ ಮೂರುಗಿಣ್ಣಿರುವ ನಾಲ್ಕು ಟನ್ ಕಬ್ಬಿನ ಬಿತ್ತನೆ ಬಳಸಿ ಬೇಸಾಯ ಮೊದಲಿಗೆ ಆರಂಭವಾಗಿದ್ದು, ಪಟಾಪಟಿ ಕಬ್ಬಿನ ತಳಿಯಿಂದ ಈಗಿನ ಸುಧಾರಿಸಿದ ಮಂಡ್ಯದ ವಿ.ಸಿ.ಫಾರಂ ಕಬ್ಬಿನ ತಳಿಯವರೆಗೆ ತಳಿ ಸುಧಾರಣೆ ಆಗಿದೆ. ಮೂರು ಗಿಣ್ಣಿನ ಕಬ್ಬಿನ ತುಂಡಿನ ಬದಲಾಗಿ ಒಂದು ಗಿಣ್ಣಿನ ಕಬ್ಬಿನ ತುಂಡಿನ ಬಳಕೆ ಹೆಚ್ಚಾಗ್ತಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕಬ್ಬಿನ ಅಂಗಾಂಶ ಕಸಿ ಸಸಿಗಳ ಅಭಿವೃದ್ಧಿಯೂ ಆಗಿದೆ. ಕಬ್ಬಿನ ಸಾಲಿನ ನಡುವಿನ ಅಂತರ ಮೂರು ಅಡಿಗೆ ಬದಲಾಗಿ ಐದು ಅಡಿ, ಆರು ಅಡಿ ಆಗಿದೆ.
ಅನೇಕ ಸಾವಯವ ಕೃಷಿಕರು ಹತ್ತು ಅಡಿ ಅಂತರದಲ್ಲೂ ಕಬ್ಬಿನ ಬೇಸಾಯ ಮಾಡಿ ಅನೇಕ ಅಂತರ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಕಬ್ಬಿನ ಬೇಸಾಯದಲ್ಲಿ ಹನಿ ನೀರಾವರಿ ಅಳವಡಿಕೆಯಿಂದ ಕ್ರಾಂತಿಯೇ ಆಗಿದೆ. ಕಬ್ಬಿನಲ್ಲಿ ಒಳಮೈ ಹನಿ ನೀರಾವರಿ ಅಳವಡಿಕೆಯಿಂದ, ಜೋಡಿ ಸಾಲಿನಲ್ಲಿ ಕಬ್ಬಿನ ಬಿತ್ತನೆ ಆರಂಭವಾದ್ದರಿಂದ, ಕಬ್ಬಿನ ಬಿತ್ತನೆಯಿಂದ ಹಿಡಿದು ಕಟಾವಿನವರೆಗೆ ಯಾಂತ್ರೀಕರಣ ಸಾಧ್ಯವಾಗಿದೆ. ಸಕ್ಕರೆ ಕಾರ್ಖಾನೆಗಳು ಸಹ ಕಬ್ಬಿನ ಯಾಂತ್ರೀಕರಣಕ್ಕೆ ಒತ್ತು ನೀಡುತ್ತಿವೆ. ಕೃಷಿ ಇಲಾಖೆ ಕಬ್ಬು ಬೆಳೆಗಾರರ ರೈತ ಉತ್ಪಾದಕ ಕಂಪೆನಿಗಳಿಗೆ ಆರ್ಥಿಕ ನೆರವು ನೀಡಿ ಕಬ್ಬಿನ ಬೇಸಾಯದಲ್ಲಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತಿದೆ. ಇದು ಈವರೆಗಿನ ಬದಲಾವಣೆ.
ಇದನ್ನು ಓದಿ : ಗ್ರಾಮೀಣ ಭಾಗಗಳಲ್ಲಿ ನಿಲ್ಲದ ವನ್ಯಮೃಗಗಳ ಹಾವಳಿ
ಮುಂದಿನ ಕ್ರಾಂತಿಗೆ ಈಗ ಕಾಲ ಸಜ್ಜಾಗಿದೆ. ಕಬ್ಬಿನ ಆರಂಭಿಕ ಬೆಳವಣಿಗೆ ನಿಧಾನ. ಹಾಗಾಗಿ ಮೊದಲ ಮೂರು ತಿಂಗಳುಗಳಲ್ಲಿ ಅಂತರ ಬೆಳೆ ಬೆಳೆಯಲು ಸಾಧ್ಯ. ಮೊದಲಿಗೆ ಸೋಯಾ, ಅವರೆ, ದ್ವಿದಳ ಧಾನ್ಯ ಬೆಳೆ, ಕೆಲವು ತರಕಾರಿ ಹಾಗೂ ಸೊಪ್ಪಿನ ಬೆಳೆಗಳನ್ನು ಮಾತ್ರ ಶಿಫಾರಸು ಮಾಡಲಾಗಿತ್ತು. ಹೀಗೆ ಬೆಳೆದ ಅಂತರ ಬೆಳೆಗಳು ಕಬ್ಬಿನ ಆರಂಭಿಕ ಕಳೆಗಳನ್ನೂ ಹತೋಟಿ ಮಾಡುತ್ತಿದ್ದವು. ಕಬ್ಬಿನ ಸಾಲಿನ ನಡುವಿನ ಅಂತರ ಯಾವಾಗ ಐದರಿಂದ ಆರು ಅಡಿಗೆ ಏರಿಕೆ ಆಯ್ತೋ ಆಗ ಯಾರೂ ಆಲೋಚಿಸದ ರೀತಿಯಲ್ಲಿ ಅಂತರ ಬೆಳೆಗಳೂ ಬದಲಾದವು. ಸಾವಯವ ಬೆಲ್ಲದ ಉತ್ಪಾದಕರು ಕಬ್ಬಿನ ನಡುವೆ ಬೆಂಡೆ ಕಾಯಿ ಬೆಳೆಯಲು ಆರಂಭಿಸಿದ್ರು. ಬೆಲ್ಲದ ಉತ್ಪಾದನೆಗೆ ಬೆಂಡೆಕಾಯಿ ರಸ ಬೇಕು. ಅನೇಕ ಕೃಷಿಕರು ಕುಂಬಳಕಾಯಿ, ಬೂದು ಕುಂಬಳಕಾಯಿ ಬೆಳೆದು ಯಶಸ್ವಿಯಾಗಿದ್ದಾರೆ.
ಕಬ್ಬೇ ಉಪಬೆಳೆ ಆಗುವಂತೆ ಅಂತರ ಬೆಳೆಗಳನ್ನು ಬೆಳೆದ ಕೃಷಿಕರೂ ಇದ್ದಾರೆ. ಟೊಮೊಟೊ, ಮೆಣಸಿನಕಾಯಿ, ಬದನೆ, ಬೆಂಡೆ, ಎಲ್ಲಾ ಜಾತಿಯ ದ್ವಿದಳ ಧಾನ್ಯಗಳು, ನೆಲಗಡಲೆ, ತೊಗರಿ, ಸೊಪ್ಪಿನ ಬೆಳೆಗಳು, ಕ್ಯಾರೆಟ್, ಬೀಟ್ರೂಟ್, ಮೂಲಂಗಿಯಂತಹ ಗೆಡ್ಡೆ ಬೆಳೆಗಳು ಒಂದೇ ಎರಡೇ. ಅನೇಕ ಕೃಷಿಕರೇ ಹೇಳುವಂತೆ, ಕಬ್ಬಿನ ಬೇಸಾಯದ ಖರ್ಚು ಅಂತರ ಬೆಳೆಗಳ ಬೇಸಾಯದ ಆದಾಯದಿಂದಲೇ ನೀಗಿದೆ.
ಇದನ್ನು ಓದಿ : ಎನ್ಎಸ್ಎಸ್ ವಿದ್ಯಾರ್ಥಿಗಳ ಸೇವೆಯನ್ನು ಸಾರುತ್ತಿದೆ ಸರ್ಕಾರಿ ಶಾಲೆ
ಚಾಮರಾಜನಗರದಲ್ಲಿರುವ ಅಖಿಲ ಭಾರತಜೋಳದ ಬೆಳೆಯ ಸುಸಂಘಟಿತ ಸಂಶೋಧನಾ ಯೋಜನೆ ಹೊಸ ಸಿಹಿ ಜೋಳದ ತಳಿಯನ್ನು ಅಭಿವೃದ್ಧಿ ಪಡಿಸಿದೆ. ಈ ಜೋಳದ ಬೆಳೆಯಿಂದ ಸಕ್ಕರೆ, ಬೆಲ್ಲದ ಉತ್ಪಾದನೆ ಸಾಧ್ಯ. ಅಷ್ಟೇ ಅಲ್ಲ, ಎಥೆನಾಲ್ ಉತ್ಪಾದನೆಗೆ ನೆರವಾಗುವ ಮುಸುಕಿನ ಜೋಳದ ತಳಿಯೂ ಅಭಿವೃದ್ಧಿ ಆಗಿದೆ. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಜತೆ ಎಥೆನಾಲ್ ಉತ್ಪಾದನೆಯತ್ತ ಗಮನ ನೀಡಿವೆ. ಈಗ ಕಬ್ಬಿನ ಸಾಲಿನ ನಡುವಿನ ಅಂತರವನ್ನು ಆರು ಅಡಿಗೆ ಏರಿಸಿ ಕಬ್ಬಿನ ಸಾಲುಗಳ ನಡುವೆ ಸಿಹಿ ಜೋಳ ಹಾಗೂ ಮುಸುಕಿನ ಜೋಳ ಬೆಳೆಯುವ ಪ್ರಯೋಗ ಯಶಸ್ವಿಯಾಗಿದೆ. ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಿದರೆ ಕಬ್ಬಿನ ಇಳುವರಿಗೂ ಕುತ್ತು ಬಾರದು.
ಕಬ್ಬಿನೊಂದಿಗೆ ಸಿಹಿ ಜೋಳ, ಮುಸುಕಿನ ಜೋಳದ ಬೆಳೆಗಳು ಎಕರೆವಾರು ಉತ್ಪಾದನೆ ಹೆಚ್ಚಿಸಿ, ರೈತನ ಜೇಬು ತುಂಬಿಸಿ, ದೇಶದ ಇಂಧನ ಸ್ವಾವಲಂಬನೆಗೂ ಸಹಕಾರಿ ಆಗಲಿವೆ. ಈಗಾಗಲೇ ಸಿಹಿ ಜೋಳದ ದಂಟಿನಿಂದ ಪ್ರತಿಟನ್‌ಗೆ ಅರವತ್ತರಿಂದ ಎಪ್ಪತ್ತು ಟನ್ ಬೆಲ್ಲವನ್ನು ಉತ್ಪಾದನೆ ಮಾಡಿರುವ ಬಾಗಲಕೋಟೆ ಜಿಲ್ಲೆ, ಸಂಗಾನಟ್ಟಿ ಗ್ರಾಮದ ರೈತ ಮಹಾಲಿಂಗಪ್ಪ ಇಟ್ನಾಳ್ ಅವರ ಯಶೋಗಾಥೆಯನ್ನು ನೀವು ತಿಳಿದೇ ಇರುತ್ತೀರಿ. ಅವರು ಸಿಹಿ ಜೋಳ ಬೆಳೆದದ್ದು ಏಕ ಬೆಳೆಯಾಗಿ. ನೀವು ಬೆಳೀಬೇಕಿರೋದು ಕಬ್ಬಿನಲ್ಲಿ ಮಿಶ್ರಬೆಳೆಯಾಗಿ.
ಇದು ಸಾಧ್ಯವೇ ಅಂತಾ ಯೋಚಿಸುತ್ತಾ ಕೂರುವ ಕಾಲ ಇದಲ್ಲ. ಪ್ರಯೋಗಶೀಲರಾಗಿ ಯಶಸ್ವಿಯಾಗುವ ಕಾಲ. ಆಲೋಚಿಸಿ… ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ.
(ಲೇಖಕರು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರು)
-ಎನ್.ಕೇಶವಮೂರ್ತಿ





