ರಮೇಶ್ ಪಿ. ರಂಗಸಮುದ್ರ
ಕಹಿ ಬೇವು ಪ್ರಕೃತಿ ನಮಗೆ ನೀಡಿರುವ ಉತ್ತಮ ‘ವರ’ ಎಂದೇ ಹೇಳಬಹುದು.ಭಾರತದಲ್ಲಿ ಪುರಾಣ ಇತಿಹಾಸ ಕಾಲದಿಂದ ಇಂದಿನವರೆಗೂ ಔಷಧವಾಗಿ ಮಣ್ಣು ಮತ್ತು ಜೀವಿಗಳ ಆರೋಗ್ಯ ಸುಧಾರಣೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಆಯುರ್ವೇದ ಪಿತಾಮಹರಾದ ಚರಕ, ಸುಶ್ರುತ, ಮೊದಲಾದ ಪಂಡಿತರು ತಮ್ಮ ಔಷಧ ಗ್ರಂಥಗಳಲ್ಲಿ ಬೇವಿನ ಬಹುವಿಧದ ಬಳಕೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ಶತಾಯುರ್ ವಜ್ರದೇಹಾಯ
ಸರ್ವ ಸಂಪತ್ಕರಾಯಚ||
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||
ನಿಂಬಕಂ ಎಂದರೆ ಬೇವು, ಬೇವನ್ನು ತಿನ್ನುವುದರಿಂದ ನೂರು ವರ್ಷಗಳ ಆಯಸ್ಸನ್ನು, ರೋಗಮುಕ್ತ ವಜ್ರದಂತಹ ದೇಹಾರೋಗ್ಯ ವನ್ನು ನಮ್ಮ ಎಲ್ಲಾ ಪೀಡೆ, ಅನಿಷ್ಟಗಳನ್ನು ಬೇವು ತಿನ್ನುವುದರಿಂದ ದೂರವಿರಿಸಬಹುದೆಂದು ಹೇಳಿ, ಯುಗಾದಿ ಹಬ್ಬದಲ್ಲಿ ಬೇವನ್ನು ಬೆಲ್ಲದೊಂದಿಗೆ ತಿನ್ನುವುದು ನಮ್ಮ ಸಂಸ್ಕೃತಿಯಲ್ಲಿದೆ.
ಈ ಆಧುನಿಕ ಜಗತ್ತಿನಲ್ಲಿ ಎಲ್ಲ ರೀತಿಯ ಸಿರಿ, ಸಂಪತ್ತು, ವೈಭೋಗಗಳು ಮಾನವನ ಕೈಗೆಟುಕುತ್ತಾ ಬರುತ್ತಿವೆ. ಆದರೆ ಆರೋಗ್ಯ ಭಾಗ್ಯ ದೂರ ಸರಿಯುತ್ತಿದೆ. ಇದಕ್ಕೆ ಕಾರಣ ಮಣ್ಣಿನ ಆರೋಗ್ಯ ವಿಪರೀತ ರಾಸಾಯನಿಕ ವಿಷಯಗಳ ಬಳಕೆಯಿಂದ ಹದಗೆಡುವುದು.
ಇದಕ್ಕೆ ನಾವು ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿ, ಆಹಾರ ಪದ್ಧತಿ, ಔಷಧ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದೇ ಪರಿಹಾರವಾಗಿದೆ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮರೆತರೆ ನಮ್ಮ ಸರ್ವನಾಶಕ್ಕೆ ಪ್ರಕೃತಿಯೇ ಮುಂದಾಗುವುದು ಖಚಿತ. ಮಣ್ಣು ಮತ್ತು ಮನುಷ್ಯರ ಆರೋಗ್ಯ ಸುಧಾರಣೆಯಲ್ಲಿ ಬೇವಿನ ಕೃಷಿಯ ಮಹತ್ವವನ್ನು ಈ ಲೇಖನದಲ್ಲಿ ಅದರ ಆರ್ಥಿಕ ಹಾಗೂ ಲಾಭದ ದೃಷ್ಟಿಯಿಂದಲೂ ಗಮನಿಸಬಹುದು.
ಇಂದು ಕರ್ನಾಟಕ ಬೇವು, ಶ್ರೀಗಂಧದ ಮರದಂತೆಯೇ ವಿನಾಶದಂಚಿಗೆ ಸರಿಯುತ್ತಿದೆ. ಇದಕ್ಕೆ ಕಾರಣ ಕರ್ನಾಟಕದ ಮಣ್ಣಿನಲ್ಲಿ ಬೆಳೆದ ಬೇವಿಗೆ ಕಟುವಾದ ಕಹಿ ಇರುವ ಕಾರಣ ಬೇವಿನ ಮರಮುಟ್ಟುಗಳು ಇಂದು ಸಾಮಾನ್ಯರ ಕೈಗೆ ಎಟುಕದ ದರವನ್ನು ತಲುಪಿ ಕ್ರಮೇಣ ಇಲ್ಲವಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಬೇವನ್ನು ಮರಮುಟ್ಟಿಗೆ ಬಳಸುತ್ತಿದ್ದಾರೆ. ಆ ಬೇವಿನ ಮರವು ಹಗುರಾಗಿದ್ದು, ಕಹಿಯ ಅಂಶವಿರುವುದಿಲ್ಲ. ಬೇವಿನ ಉತ್ಪನ್ನಗಳನ್ನು ಇಂದು ಸಾವಯವ ಕೃಷಿಗೆ ಪೂರಕವಾಗಿ ನವೋದ್ಯಮಗಳಲ್ಲಿ ಅತಿಯಾಗಿ ಬಳಕೆಯಾಗುತ್ತಿರುವುದರಿಂದ ಬೇವು ವಿರಳವಾಗುತ್ತಿದೆ.
ಬೇವಿನ ಬೇಸಾಯದ ಕ್ರಮಗಳು:
ತನ್ನ ವಿಶಿಷ್ಟ ಕಹಿ ಗುಣ ಹಾಗೂ ಔಷಧಿಯ ಗುಣಗಳಿಂದ ಬೇವು ಬಹು ಬೇಡಿಕೆ ಹಾಗೂ ಬೆಲೆ ಮತ್ತು ಆದಾಯವನ್ನು ತಂದುಕೊಡುವ ಕೃಷಿಯಾಗಿದೆ. ಕರ್ನಾಟಕದ ಮಣ್ಣಿನಲ್ಲಿ ಬೆಳೆಯುವ ಬೇವು ಕಟು ಕಹಿಯನ್ನು ಹೊಂದಿದ್ದು ನೂರಾರು ವರ್ಷ ಬಾಳಿಕೆ ಬರುವ ಮರಮುಟ್ಟುಗಳನ್ನು ನೀಡುವುದರಿಂದ ಬೇವಿನ ಮರಕ್ಕೆ ವಿಪರೀತ ಬೇಡಿಕೆಯಿದೆ.
ಬೇವು ೧೨ರಿಂದ ೧೮ ಮೀಟರ್ ಎತ್ತರವಾಗಿ ಹಾಗೂ ೧.೮ರಿಂದ ೩ ಮೀಟರ್ ಸುತ್ತಳತೆಯನ್ನು ಹೊಂದಿರುತ್ತದೆ. ನೇರವಾದ ಕಾಂಡ ಮತ್ತು ಅಗಲವಾದ ರೆಂಬೆ ಕೊಂಬೆಗಳನ್ನು ಹೊಂದಿದ್ದು, ಬಿರು ಬೇಸಿಗೆಯ ಬಿಸಿಲನ್ನು ಎದುರಿಸಿ ಎಲೆಗಳು ಹಚ್ಚ ಹಸಿರಾಗಿರುತ್ತವೆ. ಕಹಿಯಾದ ಚಿಕ್ಕ-ಚಿಕ್ಕ ಎಲೆಗಳ ಸಮೂಹವನ್ನು ಹೊಂದಿದ್ದು, ಬಿಳಿ ಅಥವಾ ತಿಳಿ ಹಳದಿ ಬಣ್ಣದ ಗೊಂಚಲು ಗೊಂಚಲಾದ ಹೂವನ್ನು ಬಿಡುತ್ತದೆ ಹಾಗೂ ಜೇನು ನೊಣಗಳನ್ನು ಆಕರ್ಷಿಸುತ್ತದೆ.
ಬೇವಿನ ಕಾಯಿ ಹಸಿರು ಬಣ್ಣವನ್ನು ಹೊಂದಿದ್ದು, ಹಣ್ಣಾದಾಗ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಹಿ ಗಂಜಿಯಂತಹ ದ್ರವದ ನಡುವೆ ಬೀಜವಿರುತ್ತದೆ. ಈ ಬೇವಿನ ಗಂಜಿಯು ಪಕ್ಷಿಗಳಿಗೆ ಇಷ್ಟವಾಗುತ್ತದೆ. ಕಂದು ಬಣ್ಣದ ಬೀಜಗಳು ೧.೩ರಿಂದ ೧.೮ ಸೆಂ.ಮೀ. ಉದ್ದವಾಗಿರುತ್ತವೆ.
ನಾಟಿ ಮಾಡುವ ಕ್ರಮ: ಮರಗಳಿಂದ ಸಂಗ್ರಹಿಸಿದ ಬೀಜಗಳನ್ನು ಮರಳು ಮತ್ತು ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ನೆಡಬೇಕು. ಸಾಮಾನ್ಯವಾಗಿ ೧೦ರಿಂದ ೧೨ ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ೮ರಿಂದ ೧೨ ಇಂಚು ಬೆಳೆದ ಸಸಿಗಳನ್ನು ಉಳುಮೆ ಮಾಡಿದ ಹೊಲಗಳಲ್ಲಿ ೧೧/೨, ೧೧/೨ ಅಳತೆಯ ಗುಂಡಿಗಳಲ್ಲಿ ಗಿಡದಿಂದ ಗಿಡಕ್ಕೆ ೧೦ರಿಂದ ೧೫ ಅಡಿ ಅಂತರ ಹಾಗೂ ಸಾಲಿನಿಂದ ಸಾಲಿಗೆ ೧೫ರಿಂದ ೨೦ ಅಡಿ ಅಂತರದಲ್ಲಿ ಗೊಬ್ಬರ ತುಂಬಿದ ಗುಂಡಿಗೆ ನೆಡಬಹುದು. ಗಿಡಗಳು ಸದೃಢವಾಗಿ ನಿಲ್ಲಲು ಒಂದು ಊರುಗೋಲನ್ನು ಗಿಡದ ಪಕ್ಕ ನೆಟ್ಟು ದಾರದಿಂದ ಕಟ್ಟಬೇಕು. ಜೂನ್- ಜುಲೈ ತಿಂಗಳಿನಲ್ಲಿ ನೆಟ್ಟು ಮಳೆ ಕಡಿಮೆಯಾದಾಗ ಬೇಸಿಗೆಯಲ್ಲಿ ಒಂದು ವರ್ಷ ಹಿತ -ಮಿತವಾಗಿ ನೀರನ್ನು ಕೊಡಬೇಕು.
ಸಾವಯವ ಕೃಷಿಯ ಉನ್ನತಿಗಾಗಿ ಬೇವು ಕೃಷಿ ಆರಂಭಿಸಿ:
ಬೇವಿನ ಮರದ ಉಪಯೋಗಗಳು:
* ಇಂದು ಬೇವಿನ ಮರದ ಬೇಸಾಯವು ಯಾವ ತೋಟಗಾರಿಕಾ ಬೆಳೆಗಳಿಗಿಂತಲೂ ಲಾಭಗಳಿಸುವಲ್ಲಿ ಹಿಂದೆ ಬಿದ್ದಿಲ್ಲ. ಗ್ಯಾರಂಟಿಯಾದ ಆದಾಯವನ್ನು ತಂದು ಕೊಡುವ ವಾಣಿಜ್ಯ ಬೆಳೆಯಾಗಿದೆ
* ಬೇವಿನ ಎಲೆ, ಹಿಂಡಿ, ಎಣ್ಣೆಗಳು ಮಣ್ಣನ್ನು ಫಲವತ್ತಾಗಿ ಮಾಡುವುದಲ್ಲದೇ ಮಣ್ಣಿನಲ್ಲಿರುವ ಜಂತು ಹುಳುಗಳನ್ನು ನಾಶ ಮಾಡುತ್ತವೆ. ಕೀಟ ರೋಗಗಳಿಗೆ ಉಪಯುಕ್ತ ಔಷಧವಾಗುವುದರ ಜತೆಗೆ ಸದಾ ಪರಿಸರವನ್ನು ಸಂರಕ್ಷಿಸುತ್ತದೆ
* ಮಣ್ಣಿನ ಕಣ ರಚನೆಯನ್ನು ಸುಧಾರಿಸಿ, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಕ್ರಿಯೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಬೇವಿನ ಹಿಂಡಿ ಹೆಚ್ಚು ಉಪಯುಕ್ತವಾಗಿದೆ
* ಬೇವಿನ ಎಣ್ಣೆಯನ್ನು ಡೀಸೆಲ್‌ಗೆ ಪರ್ಯಾಯವಾಗಿ ಅಥವಾ ಮಿಶ್ರಣವಾಗಿ ಡೀಸೆಲ್ ಇಂಜಿನ್‌ಗಳಿಗೆ ಬಳಸಬಹುದಾಗಿದೆ
* ಸಾವಯವ ಗೊಬ್ಬರ ತಯಾರಿಕೆಯಲ್ಲಿ ಬೇವಿನ ಒಣ ಎಲೆ, ಪುಡಿ, ಎಣ್ಣೆ, ಹಿಂಡಿಗಳನ್ನು ಬಳಸಲಾಗುತ್ತಿದ್ದು, ಇವುಗಳಿಗೆ ವಿಪರೀತ ಬೇಡಿಕೆಯಿದೆ
* ಸೌಂದರ್ಯ ವರ್ಧಕಗಳಲ್ಲಿ, ಕೇಶ ತೈಲದಲ್ಲಿ , ಮುಖದ ಕಲೆ, ಮೊಡವೆನಿವಾರಣೆ, ಮುಲಾಮುಗಳಲ್ಲಿ, ಕೆಲವು ಕಾಯಿಲೆಗಳಿಗೆ ಔಷಧವಾಗಿ ಬೇವಿನ ಎಣ್ಣೆಯನ್ನು ಬಳಸಲಾಗುತ್ತದೆ
* ಮಧುಮೇಹಿಗಳಿಗೆ, ಚರ್ಮರೋಗಗಳಿಗೆ, ಜಂತು ನಾಶಕಗಳಿಗೆ, ಸಂತಾನ ನಿಯಂತ್ರಣ ಔಷಧವಾಗಿ ಬೇವಿನ ಉತ್ಪನ್ನಗಳನ್ನು ಬಳಸಲಾಗುತ್ತದೆ
* ಬೇವಿನ ಉತ್ಪನ್ನಗಳನ್ನು ಕೃಷಿಯಲ್ಲಿ ಪೀಡೆ ನಾಶಕ, ಕೀಟನಾಶಕ, ಶಿಲೀಂಧ್ರ ನಾಶಕವಾಗಿ ಬಳಸಲಾಗುತ್ತದೆ





