ಸುತ್ತೂರು ನಂಜುಂಡ ನಾಯಕ
ಇತ್ತೀಚಿನ ವರ್ಷಗಳಲ್ಲಿ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ ಮಂಡ್ಯದ ಕೆಲ ರೈತ ಯುವಕರು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ಮದುವೆಗೆ ಹೆಣ್ಣು ಸಿಗುವಂತೆ ಕರುಣಿಸು ಮಾದಪ್ಪ ಎಂದು ಬೇಡಿಕೊಂಡಿದ್ದರು. ಓದಿದ ಹೆಣ್ಣು ಮಕ್ಕಳು ರೈತನ ಕೈಹಿಡಿಯಲು ಮುಂದೆ ಬರುತ್ತಿಲ್ಲ ಎನ್ನುವುದಕ್ಕಿಂತ ಹೆಣ್ಣು ಹೆತ್ತವರೇ ತಮ್ಮ ಮಗಳನ್ನು ರೈತನಿಗೆ ಕೊಟ್ಟು ಮದುವೆ ಮಾಡಲು ಹಿಂಜರಿಯುತ್ತಿದ್ದಾರೆ.
ಕಷ್ಟವೋ ಸುಖವೋ ನಗರದಲ್ಲಿ ವಾಸವಿರುವ ಡಿ ಗ್ರೂಪ್ ನೌಕರನಾದರೂ ಸರಿ ಸರ್ಕಾರಿ ನೌಕರಿಯಲ್ಲಿರುವ ಹುಡುಗನಿಗೇ ಮಗಳನ್ನು ಕೊಡುವುದು. ಇಷ್ಟು ಓದಿಸಿ, ಮುದ್ದಾಗಿ ಸಾಕಿ, ಕಸ-ಮುಸುರೆ ಹೊರಲು ಹಳ್ಳಿಯಲ್ಲಿ ಹೊಲ ಉಳುವವನಿಗೆ ನಮ್ಮ ಮಗಳನ್ನು ಕೊಡಲ್ಲ ಎನ್ನುವ ಮನಸ್ಥಿತಿಗೆ ತಲುಪಿದ್ದಾರೆ ಬಹುತೇಕ ಹೆಣ್ಣು ಹೆತ್ತವರು. ಇದೇ ಕಾರಣಕ್ಕೆ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗಿದೆ. ಆದರೆ, ಇಲ್ಲೊಬ್ಬರು ಇಂಜಿನಿಯರಿಂಗ್ ಪದವೀಧರೆ ತಾನು ಹೊಲ ಉಳುವ ರೈತನನ್ನೇ ಮದುವೆಯಾಗುವುದು ಎಂದು ಹಠ ಹಿಡಿದು ಕೃಷಿಕನನ್ನೇ ವರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಂಜನಗೂಡು ತಾಲ್ಲೂಕು ಇಮ್ಮಾವು ಗ್ರಾಮದ ಇಂಜಿನಿಯರಿಂಗ್ ಪದವೀಧರೆ ಯೋಗೇಶ್ವರಿ ಅವರು ಇದೇ ತಾಲ್ಲೂಕು ಚಂದ್ರವಾಡಿ ಗ್ರಾಮದ ರೈತ ಪರಮೇಶ್ವರ ಎಂಬವರನ್ನು ವರಿಸಿ ಮಾದರಿಯಾಗಿದ್ದಾರೆ.
ತುಮಕೂರಿನ ಸಿದ್ದಗಂಗಾ ಶ್ರೀ ಕ್ಷೇತ್ರ ಹಾಗೂ ಸುತ್ತೂರು ಜೆಎಸ್‌ಎಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗವನ್ನೂ ಮಾಡುತ್ತಿದ್ದ ಯೋಗೇಶ್ವರಿ ಅವರು ಮದುವೆ ವಿಷಯದಲ್ಲಿ ಮಾತ್ರ ರೈತನನ್ನೇ ಕೈಹಿಡಿಯುವುದು ಎಂದು ಗಟ್ಟಿ ನಿರ್ಧಾರ ಮಾಡಿ ಮನೆಯವರಿಗೆ ತಿಳಿಸಿದ್ದಾರೆ. ಅದರಂತೆ ಚಂದ್ರವಾಡಿ ಗ್ರಾಮದ ಪರಮೇಶ್ ಹುಡುಗಿ ನೋಡಲು ಬಂದಾಗ ನಾನು ಎಸ್‌ಎಸ್‌ಎಲ್‌ಸಿ ಅಷ್ಟೇ ಓದಿ ವ್ಯವಸಾಯ ಮಾಡುತ್ತಿದ್ದೇನೆ. ಇಂಜಿನಿಯರಿಂಗ್ ಮಾಡಿ ಕೆಲಸದಲ್ಲಿರುವ ನೀವು ನನ್ನನ್ನು ಒಪ್ಪುತ್ತೀರಾ ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಾರೆ.
ಖಂಡಿತಾ ನಾನು ರೈತನನ್ನೇ ಮದುವೆಯಾಗುವುದು ಎಂದು ಸಂತೋಷದಿಂದ ಒಪ್ಪಿದ ಕಾರಣ ಹಿರಿಯರು ಇಬ್ಬರಿಗೂ ಮದುವೆ ಮಾಡಿಸಿದ್ದು, ದಂಪತಿ ಅನ್ಯೋನ್ಯವಾಗಿದ್ದಾರೆ. ‘ಸಂಬಳ ತರುವ ವಿದ್ಯೆಗಿಂತ ಕೋಟ್ಯಂತರ ಜನರಿಗೆ ಅನ್ನ ನೀಡುವ ರೈತನನ್ನು ನಾನು ಮದುವೆಯಾಗಿರುವುದು ನನಗೆ ಹೆಮ್ಮೆ ಎನಿಸಿದೆ. ಕೃಷಿ ಕಾಯಕದಲ್ಲಿ ಕೈಲಾಸವನ್ನೇ ಕಾಣಬಹುದು ಎಂದು ನಂಬಿಕೊಂಡು ಇಂಜಿನಿಯರ್ ಕೆಲಸವನ್ನೂ ತ್ಯಜಿಸಿ ಬಂದಿದ್ದೇನೆ. ನಾವು ಎಷ್ಟೇ ಓದಿ ದೊಡ್ಡ ಕೆಲಸಕ್ಕೆ ಸೇರಿದರೂ ಬೆಳಿಗ್ಗೆ ಎದ್ದು ಅನ್ನದಾತನಿಗೆ ನಮಸ್ಕರಿಸುತ್ತೇವೆ. ಆದ್ದರಿಂದ ನಾವು ಅನ್ನದಾತನನ್ನು ಕೈ ಬಿಡಬಾರದು ಎಂದು ದೇಶಕ್ಕೆ ಅನ್ನ ಕೊಡುವ ರೈತನನ್ನು ಸಂತೋಷದಿಂದ ಮದುವೆಯಾಗಿದ್ದೇನೆ’ ಎಂದು ಯೋಗೇಶ್ವರಿ ಅವರು ‘ಆಂದೋಲನ’ ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡರು.
ಇಂಜಿನಿಯರಿಂಗ್ ಪದವೀಧರೆಯ ಕೈಹಿಡಿದಿರುವ ರೈತ ಪರಮೇಶ್ವರ ಮಾತನಾಡಿ, ‘ನಾನು ಎಸ್‌ಎಸ್ ಎಲ್‌ಸಿ ಓದಿಕೊಂಡು ವ್ಯವಸಾಯದಲ್ಲಿ ತೊಡಗಿದ್ದೆ. ಮನೆಯವರ ಒತ್ತಾಯದಿಂದ ಇಮ್ಮಾವು ಗ್ರಾಮಕ್ಕೆ ಹುಡುಗಿ ನೋಡಲು ಹೋಗಿದ್ದೆ. ಯೋಗೇಶ್ವರಿಯವರನ್ನು ಭೇಟಿ ಮಾಡಿದಾಗ ನಾನೊಬ್ಬ ರೈತ, ಎಸ್‌ಎಸ್‌ಎಲ್‌ಸಿ ಫೇಲ್ ಆಗಿ ವ್ಯವಸಾಯ ಮಾಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ರೈತರಿಗೆ ಯಾರೂ ಹೆಣ್ಣು ಕೊಡಲ್ಲ ಎಂದು ಹೇಳುತ್ತಾರೆ. ಆದರೆ ನನ್ನನ್ನು ಮದುವೆಯಾಗಲು ನೀವು ಒಪ್ಪುತ್ತೀರಾ ಎಂದು ಸಂಕೋಚದಿಂದಲೇ ಕೇಳಿದ್ದೆ. ತಕ್ಷಣ ಯೋಗೇಶ್ವರಿ ಅವರು, ದೇಶಕ್ಕೆ ಅನ್ನ ನೀಡುವವರೇ ರೈತರು. ಹೀಗಾಗಿ ರೈತನನ್ನೇ ಮದುವೆಯಾಗಲು ಬಯಸಿದ್ದೇನೆ ಎಂದು ಒಪ್ಪಿಗೆ ಸೂಚಿಸಿದರು.
ಅವರ ಆಶಯದಂತೆಯೇ ನಾನು ಯೋಗೇಶ್ವರಿ ಅವರನ್ನು ಮದುವೆಯಾಗಿದ್ದೇನೆ. ಈಗ ನಾವು ಚಂದ್ರವಾಡಿ ಗ್ರಾಮದಲ್ಲಿ ಸಾವಯವ ಕೃಷಿಯ ಜತೆಗೆ ಎಂಟು ಹಸುಗಳು, ರೇಷ್ಮೆ ಹುಳು ಸಾಕಣೆ, ಕುರಿ, ಮೇಕೆಗಳನ್ನು ಸಾಕಿಕೊಂಡು ಉತ್ತಮ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರು..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಂಜನಗೂಡು ತಾಲ್ಲೂಕು ಇಮ್ಮಾವು ಗ್ರಾಮದ ಇಂಜಿನಿಯರಿಂಗ್ ಪದವೀಧರೆ ಯೋಗೇಶ್ವರಿ ಅವರು ಇದೇ ತಾಲ್ಲೂಕು ಚಂದ್ರವಾಡಿ ಗ್ರಾಮದ ರೈತ ಪರಮೇಶ್ವರ ಎಂಬವರನ್ನು ವರಿಸಿ ಮಾದರಿಯಾಗಿದ್ದಾರೆ.