Mysore
24
broken clouds
Light
Dark

ವಾರದ ಮುಖ

ಮಂಡ್ಯ ಪಕ್ಕದ ಬಸರಾಳಿನ ಕಾಲೇಜು ಬೀದಿಯಲ್ಲಿ ಬದುಕುತ್ತಿರುವ ತಂಬೂರಿ ಜವರಯ್ಯನವರಿಗೆ ಈಗ ೮೨ ವರ್ಷ. ಅರವತ್ತು ವರ್ಷಗಳ ಹಿಂದೆ ಅವರನ್ನು ಪತಿಪುರುಷನೆಂದು ಸ್ವೀಕರಿಸಿದ ಮಡದಿ ಬೋರಮ್ಮನವರಿಗೆ ೭೭ ವರ್ಷ. ಇವರಿಬ್ಬರು ಸೇರಿ ತಂಬೂರಿ ಪದ ಹಾಡುತ್ತಾ ದೇಶಾಟನೆ, ಭಿಕ್ಷಾಟನೆ ಗೈಯಲು ತೊಡಗಿ ಹತ್ತಿರ ಹತ್ತಿರ ೫೦ ವರ್ಷ. ಒಂದು ಕಾಲದಲ್ಲಿ ಕೋಳಿಮೊಟ್ಟೆ ಮಾರುತ್ತಾ, ತಿಗಣೆ ಔಷಧಿ ಹೊಡೆಯುತ್ತಾ ಊರೂರು ತಿರುಗುತ್ತಾ ಓಡಾಡುತ್ತಿದ್ದ ಜವರಯ್ಯನವರ ಮಾಮೂಲಿ ಜೀವನದ ಒಂದು ದೊಡ್ಡ ಘಟನೆ ನಾಗಮಂಗಲ ತಾಲ್ಲೂಕು ಮದ್ದನಟ್ಟಿಯ ಯುವತಿ ಬೋರಮ್ಮಳನ್ನು ಮದುವೆ ಆಗಿದ್ದು. ಇನ್ನೊಂದು ಹೊಳೆ ನರಸೀಪುರ ಬಳಿಯ ಬಂಟ್ ಶೆಟ್ಟಳ್ಳಿ ರುದ್ರಮುನಿ ಸ್ವಾಮಿಯವರಿಂದ ಗುರು ದೀಕ್ಷೆ ಪಡೆದು ಹಾಡಲು ತೊಡಗಿದ್ದು. ಇವೆರಡಕ್ಕಿಂತ ಬಹಳ ದೊಡ್ಡ ಘಟನೆ ರಾಜ್ಯೋತ್ಸವ ಪ್ರಶಸ್ತಿ ಬಂದ ಹಣದಲ್ಲಿ ಸೋರುತ್ತಿದ್ದ ಮನೆಯ ದುರಸ್ತಿ ಮಾಡಿದ್ದು ಮತ್ತು ಮಡದಿ ಬೋರಮ್ಮನಿಗೆ ಚಿನ್ನದ ಓಲೆ ಮಾಡಿಕೊಟ್ಟಿದ್ದು.
ಬಡತನ ಬಡತನವೇ ಅಲ್ಲ. ಹಸಿವು ಹಸಿವೇ ಅಲ್ಲ ಎಂದು ಹಾಡುತ್ತ ಬದುಕುತ್ತಿರುವ ಈ ತತ್ವಪದದ ಜೋಡಿಗೆ ಯಾರಾದರೂ ಹಾಡುಕೇಳಿ ನಾಲ್ಕು ಒಳ್ಳೆ ಮಾತನಾಡಿದರೆ ಅದೇ ಸಂತೋಷ. ಒಳ್ಳೆ ಮಾತನಾಡಿ ಸಹಾಯವನ್ನೂ ನೀಡಿದರೆ ಅದೇ ಆ ಹೊತ್ತಿನ ಆಹಾರ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ