ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಟಿ.ವಿ. ವಾಹಿನಿಗಳು ಇಲ್ಲದ ಸಮಸ್ಯೆಗಳನ್ನು ಭೂತಕಾರವಾಗಿ ಬೆಳೆಸುವ ಕೆಲಸ ಮಾಡುತ್ತವೆ ಎಂಬ ಆಕ್ಷೇಪ ಎಲ್ಲೆಡೆ ಕೇಳಿ ಬರುತ್ತಿದೆ. ಒಂದು ರೀತಿಯಲ್ಲಿ ಟಿ.ವಿ. ವಾಹಿನಿಗಳು ಸುಳ್ಳು ಸುದ್ದಿಗಳ ಕಾರ್ಖಾನೆಯಾಗುವ ಹಂತ ತಲುಪಿದೆ ಎಂದು ಬಹಳಷ್ಟು ಜನ ಆಕ್ಷೇಪಿಸುತ್ತಾರೆ. ಈ ಆಕ್ಷೇಪಗಳಿಗೆ ಧ್ವನಿ ಕೊಡುವ ರೀತಿಯಲ್ಲಿ ಹಿರಿಯ ನಿರ್ದೇಶಕ ಬಿ.ಸುರೇಶ್ ಅವರ ‘ಅಡುಗೆ ಮನೆಯಲ್ಲೊಂದು ಹುಲಿ’ ನಾಟಕ ಸಮಕಾಲಿನ ವಸ್ತುವೊಂದರ ಮೇಲೆ ಬೆಳಕು ಚೆಲ್ಲುತ್ತದೆ.
ಮೈಸೂರಿನ ನಟನ ರಂಗ ಶಾಲೆಯ ವಿದ್ಯಾರ್ಥಿಗಳು ಪ್ರಾಂಶುಪಾಲರಾದ ಮೇಘ ಸಮೀರ ಅವರ ನಿರ್ದೇಶನದಲ್ಲಿ ರಂಗರೂಪಕ್ಕಿಳಿಸಿರುವ ಈ ನಾಟಕ ಅದರ ವಸ್ತುವಿನಿಂದಾಗಿ ಎಲ್ಲರ ಕಣ್ಣು ಸೆಳೆಯುವಂತಿದೆ. ಒಂದು ಸುಳ್ಳನ್ನು ಹತ್ತು ಬಾರಿ ಹೇಳಿದರೆ ಸುಳ್ಳೇ ಸತ್ಯವಾಗಿ ಬಿಡುವ ಅಪಾಯವನ್ನು ನಾಟಕ ರಂಜನೀಯವಾಗಿ ಚಿತ್ರಿಸುತ್ತದೆ.
ಇಂಜಿನಿಯರಿಂಗ್ ಓದಿ ಕೆಲಸ ಸಿಕ್ಕದೆ, ನಗರ ಮಧ್ಯದ ವೃತ್ತದಲ್ಲಿ ಪಕೋಡ, ಟೀ ಮಾಡುವ ಯುವಕ ಟೀ ಆನಂದ ಅಕ್ಕಿ ಹೆಬ್ಬಾಳ, ತನ್ನ ಅಂಗಡಿಗೆ ಬರುವ ಸ್ನೇಹಿತನೊಂದಿಗೆ ಮಾತಿಗೆ ಮಾತು ಬೆಳೆಸಿ ಸುಮ್ಮನೇ ಏರ್ಪಡುವ ಜಿದ್ದಾ ಜಿದ್ದಿನಲ್ಲಿ, ಆ ಗೆಳೆಯ ಒಂದು ವರ್ಷದೊಳಗೆ ಸುಳ್ಳನ್ನೇ ಸತ್ಯವಾಗಿಸುವ ಶಪಥ ತೊಡುವುರೊಂದಿಗೆ, ನೈಜ ನಾಟಕ ಆರಂಭವಾಗುತ್ತದೆ.
ಜನನಿಬಿಡ ಪ್ರದೇಶದಲ್ಲಿರುವ ಮನೆೊಂಂದರಲ್ಲಿ ಹುಲಿ ಸಾಕುತ್ತಿದ್ದಾರೆ ಎಂಬ ಅನಾಮಿಕನೋರ್ವನ ಅರ್ಜಿಯನ್ನು ಆಧರಿಸಿ ಅರಣ್ಯ ಇಲಾಖೆ ನೌಕರ ಆ ಮನೆಗೆ ಬಂದು ಮನೆಯವರಿಂದ ತಮ್ಮ ಮನೆಯಲ್ಲಿ ಹುಲಿ ಇದ್ದರೆ ಸರ್ಕಾರದ ತಕ್ಕೆಗೆ ಕೊಡುವುದು ಎಂದು ಬರೆಸಿಕೊಳ್ಳುತ್ತಾನೆ. ಇದರೊಂದಿಗೆ ಆ ಮನೆಯವರಿಗೆ ಹುಲಿಯ ಕಾಟ ಆರಂಭವಾಗುತ್ತದೆ. ಇಲ್ಲದ ಹುಲಿಯನ್ನು ತಂದು ಕೊಡುವಂತೆ ಪೋಲಿಸ್ ಇಲಾಖೆ ಆಜ್ಞಾಪಿಸುತ್ತದೆ. ಬೇಟೆಗಾಗಿ ಪ್ರಸಿದ್ಧರಾಗಿದ್ದ ಮಹಾರಾಜರ ವಂಶಸ್ಥನ ಆಗಮನವಾಗಿ ಸಾಕಷ್ಟು ಅವಾಂತರವಾಗುತ್ತದೆ.
ವಾಸ್ತವವಾಗಿ ಇಲ್ಲಿ ಹುಲಿೆುೀಂ ಇಲ್ಲ. ನಗರದ ಮನೆಯಲ್ಲಿ ಹುಲಿ ಸಾಕುತ್ತಿದ್ದಾರೆಂದು ಅನಾಮಿಕ ಮಾಡುವ ಸುಳ್ಳು ಆರೋಪ ಟಿವಿ ವಾಹಿನಿಗಳ ಬಾಯಿಗೆ ಸಿಕ್ಕು ಸಿಕ್ಕಾಪಟ್ಟೆ ಬೆಳೆಯುತ್ತದೆ. ಇಲ್ಲದ ಹುಲಿಯನ್ನೇ ಸಾಕುವುದು ತಪ್ಪೋ ಸರಿೋಂ ಎಂಬ ಬಗ್ಗೆ ಟಿ.ವಿ.ಯಲ್ಲಿ ಭಾರೀ ಚರ್ಚೆಯಾಗಿ, ಚರ್ಚೆ ಹೊಡೆದಾಟಕ್ಕೆ ತಿರುಗಿ ರಾದ್ಧಾಂತವಾಗುತ್ತದೆ.
ಒಟ್ಟಾರೆಯಾಗಿ ಸುಳ್ಳಿನಿಂದಲೇ ಆರಂಭವಾಗಿ ಸುಳ್ಳನ್ನೇ ಸತ್ಯವಾಗಿಸುವ ನಾಟಕವಾಡುವ ಈ ಪ್ರಸಂಗ ಇಂದಿನ ಟಿ.ವಿ. ವಾಹಿನಿಗಳ ಕಾರ‌್ಯಕ್ರಮಗಳ ಸತ್ಯ ದರ್ಶನ ಮಾಡಿಸುತ್ತವೆ. ಈ ನಾಟಕ ನೋಡಿದಾಗ ಮನಸ್ಸು ವಿಷಾದದಿಂದ ಕುದಿಯುತ್ತದೆ. ಅಂಕೆ ತಪ್ಪಿದ ಮಾಧ್ಯಮಗಳಿಗೆ ಗಂಟೆ ಕಟ್ಟುವರಾರು ಮತ್ತು ಹೇಗೆ ಎಂಬ ಪ್ರಶ್ನೆ ಉಳಿದು ಹೋಗುತ್ತದೆ.
ಇವತ್ತಿನ ಮಾಧ್ಯಮಗಳ ಆಟಕ್ಕೆ ಮನಸ್ಸು ರೋಸಿಹೋಗುತ್ತದೆ. ನಟನ ರಂಗ ಶಾಲೆಯ ೨೦೨೧-೨೨ನೇ ಸಾಲಿನ ರಂಗ ಡಿಪ್ಲೋಮದ ವಿದ್ಯಾರ್ಥಿಗಳು ಈ ನಾಟಕಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಆದರೆ ನಟರು ರಂಗದ ಮೇಲೆ ಇನ್ನೂ ಪಳಗಬೇಕೆಂದು ನಾಟಕ ನೋಡಿದಾಗ ಅನಿಸುತ್ತದೆ.
ಡಾ. ನಿರಂಜನ ವಾನಳ್ಳಿ, ಕೃಷ್ಣಮೂರ್ತಿ ಬಡಾವಣೆ, ತೊಣಚಿಕೊಪ್ಪಲು, ಮೈಸೂರು