ಒಂದು ಸಿನಿಮಾ ಸೂಪರ್ ಹಿಟ್ ಆಯಿತು ಎಂದಾಗ ಅದನ್ನು ಪರಭಾಷೆಗೆ ಡಬ್ ಮಾಡುವ ಕೆಲಸ ಆಗುತ್ತದೆ. ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತು. ಬಳಿಕ ತೆಲುಗು, ತಮಿಳು ಹಾಗೂ ಹಿಂದಿಗೆ ರಿಲೀಸ್ ಆಗಿ ಭರ್ಜರಿ ಕಮಾಯಿ ಮಾಡಿತು. ಈಗ ಹಾಸ್ಟೆಲ್ ಹುಡುಗರ ಸರದಿ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತೆಲುಗಿಗೆ ಡಬ್ ಆಗಿದೆ. ಈ ಚಿತ್ರಕ್ಕೆ ತೆಲುಗಿನಲ್ಲಿ ಬಾಯ್ಸ್ ಹಾಸ್ಟೆಲ್ ಎಂದು ಶೀರ್ಷಿಕೆ ಇಡಲಾಗಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕನ್ನಡದಲ್ಲಿ ಜುಲೈ 21ರಂದು ರಿಲೀಸ್ ಆಯಿತು. ಈ ಚಿತ್ರ ಕನ್ನಡ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯಿತು. ಹಾಸ್ಟೆಲ್ ಹುಡುಗರ ತಮಾಷೆ ಅನೇಕರಿಗೆ ಇಷ್ಟವಾಯಿತು. ರಕ್ಷಿತ್ ಶೆಟ್ಟಿ ಒಡೆತನದ ಪರಂವ ಸ್ಟುಡಿಯೋಸ್ ಈ ಚಿತ್ರವನ್ನು ಪ್ರೆಸೆಂಟ್ ಮಾಡಿದೆ. ಈ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ.
ತೆಲುಗಿನಲ್ಲಿ ಈ ಚಿತ್ರ ಆಗಸ್ಟ್ 26ರಂದು ರಿಲೀಸ್ ಆಗಲಿದೆ. ಬಾಯ್ಸ್ ಹಾಸ್ಟೆಲ್ ಎನ್ನುವ ಶೀರ್ಷಿಕೆ ಫೈನಲ್ ಆಗಿದ್ದು, ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಾಯ್ ಬಿಸ್ಕೆಟ್ ಫಿಲ್ಮ್ಸ್ ಹಾಗೂ ಅಕ್ಕಿನೇನಿ ನಾಗಾರ್ಜುನ ಅವರ ಅನುಪಮಾ ಸ್ಟುಡಿಯೋ ಈ ಚಿತ್ರವನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಹಂಚಿಕೆ ಮಾಡುತ್ತಿದೆ. ಅಲ್ಲಿ ಈ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಚಿತ್ರದಲ್ಲಿ ನಟಿಸಿದ ಬಹುತೇಕ ಎಲ್ಲರೂ ಹೊಸ ಪ್ರತಿಭೆಗಳೇ. ಹಲವರಿಗೆ ರಂಗಭೂಮಿ ಹಿನ್ನೆಲೆ ಇದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಸಿಕ್ಕಿದೆ. ವರುಣ್ ಗೌಡ, ಪ್ರಜ್ವಲ್ ಬಿ.ಪಿ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಎಸ್. ಕಶ್ಯಪ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ರಮ್ಯಾ ಅತಿಥಿ ಪಾತ್ರ ಮಾಡಿ ಗಮನ ಸೆಳೆದರು. ಸದ್ಯ ಹೈದರಾಬಾದ್ನಲ್ಲಿ ಕನ್ನಡ ವರ್ಷನ್ ಪ್ರದರ್ಶನ ಕಾಣುತ್ತಿತ್ತು ಎನ್ನಲಾಗಿದೆ. ಈಗ ತೆಲುಗು ವರ್ಷನ್ ರಿಲೀಸ್ ಆಗುತ್ತಿರುವುದರಿಂದ ಕನ್ನಡ ಅವತರಣಿಕೆಯನ್ನು ತೆಗೆಯಲಾಗಿದೆ.
#HostelHudugaruBekagiddare Kannada lo talk ithe 🔥 coming telugu as #BoysHostel in Cinemas 26th Aug. pic.twitter.com/j2QwaX4lWz
— RatpacCheck (@RatpacCheck) August 11, 2023