ಬೆಂಗಳೂರು : ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ, ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ, ‘ಭಾರತದ, ಮನುಕುಲದ ಹೆಮ್ಮೆಯ ಕ್ಷಣಗಳಿವು. ಇಸ್ರೋ, ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು ಇದು ದಾರಿಯಾಗಲಿ’ ಎಂದು ಬರೆದುಕೊಂಡಿದ್ದಾರೆ.
ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು….ಸಂಭ್ರಮಿಸಲು .. ಇದು ದಾರಿಯಾಗಲಿ. #justasking
— Prakash Raj (@prakashraaj) August 23, 2023
ಇತ್ತೀಚೆಗೆ ಇಸ್ರೋದ ಚಂದ್ರಯಾನ-3ಯನ್ನು ಪ್ರಕಾಶ್ ರಾಜ್ ತಮಾಷೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಚಂದ್ರನ ಮೇಲೆ ಕಾಲಿಟ್ಟಾಗ ಅಲ್ಲೂ ಓರ್ವ ಮಲಯಾಳಿ ಚಾ ಅಂಗಡಿ ಇಟ್ಟಿರುತ್ತಾರೆ ಎನ್ನುವ ಅರ್ಥದ ಜೋಕ್ ಅನ್ನು ಹಂಚಿಕೊಂಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಸ್ಪಷ್ಟೀಕರಣ ನೀಡಿದ್ದರು.
ʼದ್ವೇಷ ದ್ವೇಷವನ್ನು ಮಾತ್ರ ನೋಡುತ್ತದೆ. ಕೇರಳದ ಚಾಯ್‌ವಾಲಾಗಳನ್ನು ಸಂಭ್ರಮಿಸುವ ನಾನು ಆರ್ಮಸ್ಟ್ರಾಂಗ್ (ಚಂದಿರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ) ಕಾಲದ ಜೋಕ್ ಅನ್ನು ಉಲ್ಲೇಖಿಸಿದ್ದೆ. ಟ್ರೋಲರ್‌ಗಳು ಯಾವ ಚಾಯ್‌ವಾಲವನ್ನು ಅದರಲ್ಲಿ ಕಂಡಿದ್ದರು? ನಿಮಗೆ ಜೋಕ್ ಅನ್ನು ಕಾಣಲು ಸಾಧ್ಯವಾಗದಿದ್ದರೆ, ನೀವೇ ಜೋಕ್ ಆಗುತ್ತೀರಿ, ಬೆಳವಣಿಗೆ ಹೊಂದಿರಿʼ ಎಂದು ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದರು.