– ಶಿಲ್ಪ ಎಚ್.ಎಸ್. ಶಿಕ್ಷಕರು
ನನ್ನ ನೆಚ್ಚಿನ ಶಿಕ್ಷಕ ಸಾಲಿನಲ್ಲಿ ಮೊದಲು ನಿಲ್ಲುವವರು ಎಂ.ವಿ. ಮಹಾದೇವಪ್ಪ. ಕನ್ನಡ ಮೇಷ್ಟ್ರು, ನಮ್ಮ ಪ್ರೀತಿಯ ಮೇಷ್ಟ್ರು. ನಾನು ಓದಿದ್ದು ಎಚ್.ಡಿ.ಕೋಟೆಯ ಚಂದ್ರಮೌಳೇಶ್ವರ ಪ್ರೌಢಶಾಲೆಯಲ್ಲಿ. ಖಾಸಗಿ ಶಾಲೆ ಆಗಿದ್ದರೂ ಅಂದಿನ ಕಾಲಕ್ಕೆ ಸೂಕ್ತ ಪೀಠೋಪಕರಣಗಳ ಕೊರತೆ ಇತ್ತು. ಆದರೆ ಅದೆಲ್ಲವನ್ನೂ ಮರೆಸಿ ನಮ್ಮನ್ನು ಪರಿಸರದ ಮಡಿಲಿನಲ್ಲಿ ಕೂರಿಸಿ ಪಾಠ ಮಾಡುತ್ತಿದ್ದರು. ಅಲ್ಲಿಯೇ ನಮಗೆ ಕೊರತೆಗಳನ್ನು ಮರೆತು ಇರುವುದರಲ್ಲಿಯೇ ಚೆಂದದ ಅನುಭವ ಕಟ್ಟಿಕೊಳ್ಳಬೇಕು ಎಂದು ಕಲಿಸಿಕೊಟ್ಟಿದ್ದರು.
ನಾನು ೮ನೇ ತರಗತಿಯಲ್ಲಿದ್ದಾಗ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕರು ಇರಲಿಲ್ಲ. ಆಗ ಈ ವಿಷಯಗಳನ್ನು ನಮ್ಮ ಮುಖ್ಯ ಶಿಕ್ಷಕರಾದ ಮಹಾದೇವಪ್ಪನವೇ ಬೋಧಿಸುತ್ತಿದ್ದರು. ಅವರ ಬೋಧನೆ ಯಾವ ಪರಿಣತ ಶಿಕ್ಷಕರಿಗೂ ಕಡಿಮೆ ಇರಲಿಲ್ಲ. ನನಗೆ ಬೇರೆ ವಿಷಯಗಳಲ್ಲಿ ಆಸಕ್ತಿ ಕಡಿಮೆಯಾಗಿ ಗಣಿತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಿತು. ನಂತರ ೯ನೇ ತರಗತಿಗೆ ಬಂದಾಗ ಹೊಸದಾಗಿ ವಿಜ್ಞಾನ ಶಿಕ್ಷಕರು ನೇಮಕವಾದರು. ಅವರೂ ಅತ್ಯುತ್ತಮವಾಗಿ ಪಾಠ ಮಾಡುತ್ತಿದ್ದರು. ಅವರ ಪ್ರಕಾರ ಮೊದಲ ಕಿರು ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸುತ್ತೆವೆಯೋ ಅದಕ್ಕಿಂತ ಹೆಚ್ಚು ಅಂಕಗಳನ್ನು ಮುಂದಿನ ಕಿರು ಪರೀಕ್ಷೆಯಲ್ಲಿ ಪಡೆಯಬೇಕಿತ್ತು. ಆದರೆ ನಾನು ಭೌತಶಾಸ್ತ್ರದಲ್ಲಿ ಮೊದಲು ೨೪ ಅಂಕಗಳಿಸಿ ನಂತರ ೧೮ ಅಂಕ ಗಳಿಸಿದ್ದೆ. ಇದಕ್ಕೆ ಸಿಟ್ಟಾಗಿದ್ದ ವಿಜ್ಞಾನ ಶಿಕ್ಷಕರು ನನಗೆ ಪೆಟ್ಟು ನೀಡಿದ್ದರು. ಇದನ್ನು ಗಮನಿಸಿದ ನಮ್ಮ ಮುಖ್ಯ ಶಿಕ್ಷಕರಾದ ಮಹಾದೇವಪ್ಪನವರು ನನ್ನನ್ನು ಕರೆದು ನಾನು ಮಾಡಿದ ತಪ್ಪಿನ ಬಗ್ಗೆ ತಿಳಿಸಿದರು. ಹೇಗೆ ಪರೀಕ್ಷೆ ಎದುರಿಸಬೇಕು, ಏನು ಮಾಡಬೇಕು ಎಂದು ತಿಳಿಸಿದರು.
ಅಂದಿನಿಂದ ನಾನು ಆಸಕ್ತಿಯಿಂದ ಭೌತಶಾಸ್ತ್ರ ಓದಲು ಶುರುಮಾಡಿದೆ. ೧೦ನೇ ತರಗತಿಯಲ್ಲಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕಗಳಿಸಿ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡೆ. ನಂತರ ವಿಜ್ಞಾನ ವಿಷಯದಲ್ಲಿಯೇ ಬಿಎಸ್ಸಿ ಮಾಡಿ, ಬಿಎಡ್ ಓದಿ ಇಂದು ವಿಜ್ಞಾನ ಶಿಕ್ಷಕಿಯಾಗಿದ್ದೇನೆ.
ಇದಕ್ಕೆಲ್ಲ ನಮ್ಮ ಗುರುಗಳೇ ಕಾರಣ. ಅವರ ಕಲಿಸಿದ ಪಾಠ, ಅವರ ಸರಳ ಮಾತು, ನಡೆ, ಮೃದು ಸ್ವಭಾವ, ನಮ್ಮನ್ನು ತಿದ್ದಿ, ಬುದ್ದಿ ಹೇಳಿದ ಪರಿ ಅನನ್ಯ. ನನ್ನ ಜೀವನ ರೂಪಿಸಿಕೊಳ್ಳಲು ನೆರವಾದ ನನ್ನ ಗುರು ಮಹಾದೇವಪ್ಪನವರಿಗೆ ಅನಂತ ಧನ್ಯವಾದಗಳು.
– ಶಿಲ್ಪ ಎಚ್.ಎಸ್. ಶಿಕ್ಷಕರು