Mysore
24
broken clouds

Social Media

ಬುಧವಾರ, 26 ಮಾರ್ಚ್ 2025
Light
Dark

ಯುವ ಡಾಟ್‌ ಕಾಮ್‌: ಮಳೆ ಮತ್ತು ಇಳೆಯ ಪ್ರೇಮ ಕಹಾನಿ

-ಅಕ್ಷತಾ ಎಸ್.,ಮಲ್ಲಮ್ಮ, ಮರಿಮಲ್ಲಪ್ಪ ಪದವಿ ಕಾಲೇಜು, ಮೈಸೂರು

ಹೇ….. ಭೂಮಿ ಏನಿಷ್ಟು ಸಂಭ್ರಮ, ನಿನ್ನನ್ನೇ ನೀನು ಮರೆತಂತೆ. ಮಳೆಯ ಸ್ಪರ್ಶವಾಗುತ್ತಿದ್ದಂತೆ ಗೆಳೆಯನ ಕಂಡ ಪ್ರೇಯಸಿಯಂತಾಗಿ ನಳನಳಿಸುವೆ. ಬೇಸಿಗೆಯಲ್ಲಿ ವಿರಹದಿಂದ ನೊಂದಿದ್ದರೂ ಮೊದಲ ಮಳೆಗೆ ಘಮಿಸುವೆ. ಹಸಿರಿನ ಸೀರೆಯನ್ನು ನಿಧಾನವಾಗಿ ಹೊದ್ದುಕೊಳ್ಳುತ್ತಾ ನಳನಳಿಸುವೆ.

ಎಲ್ಲಡೆ ಝುಳು ಝುಳು ನೀನಾದ ಮಾಡುತ್ತಾ, ಸಂತೋಷಕ್ಕೆ ಎಲ್ಲೆ ಇಲ್ಲ ಎಂದು ನಲಿಯುವೆ. ಇದೇ ನಲಿವಿನಲ್ಲಿ ಮರ, ಗಿಡ, ಬಳ್ಳಿ, ಹೂಗಳು ಬೆಳೆದು ನಿಲ್ಲುತ್ತವೆ. ಆನಂದ ಸೂಸುತ್ತವೆ.

ಅಲಂಕಾರ ಮಾಡಿಕೊಂಡು ತಾನೇ ಸುಂದರಿ ಎಂದು ಬೀಗಬೇಡಿ, ಎಷ್ಟು ಕಾಲ ಈ ಸೌಂದರ್ಯ? ಆದರೆ ಪ್ರತಿ ವರ್ಷ ನವ ಯುವತಿಯಂತೆ ಕಂಗೊಳಿಸುವವಳು ನಾನು, ಚಿರಯುವತಿ ನಾನು… ಎಂದು ಈಗಿನ ಕಾಲದ ಯುವತಿಯರನ್ನು ಚೇಡಿಸುವ ನಿನ್ನ ತಣ್ಣನೆಯ ನೋಟ ಎಲ್ಲರಿಗೂ ಅಚ್ಚರಿಯೇ.

ಮಳೆ ಬಿದ್ದಾಗ ಇಳೆಯಲ್ಲಾಗುವ ಸದ್ದು, ಹೊರ ಬರುವ ಸಂಭಾಷಣೆಯಲ್ಲಿ ಸುಮಧುರ ಸಂಗೀತವಿರುತ್ತದೆ. ಗಾಳಿ, ಗಂಧ ಜೊತೆ ಸೇರಿ ಸಂಗೀತ ಗೋಷ್ಠಿಯೇ ನೆರೆದಂತಾಗುತ್ತದೆ. ಎಲ್ಲರನ್ನೂ ತಾಯಿಯಂತೆ ಪೋಷಿಸುವ ಇಳೆ, ವರುಣನ ಮುಂದೆ ಮಾತ್ರ ಮಗುವಿನಂತೆ ಕಾಣುತ್ತಾಳೆ.

ಇಷ್ಟು ಪ್ರೀತಿಯನ್ನು ವರುಣನ ಮೇಲೆ ಇಟ್ಟಿದ್ದರೂ ಸದಾಕಾಲ ತನ್ನೊಂದಿಗೆ ನಿಲ್ಲು ಎಂದು ಹೇಳುವ ಸ್ವಾರ್ಥಿಯಲ್ಲ ಇಳೆ. ಏಕೆಂದರೆ ವರುಣನ ಅಬ್ಬರ ಹೆಚ್ಚಾದರೆ ಆಗುವ ಅನಾಹುತದ ಅರಿವು ಅವಳಿಗಿದೆ. ಒಮ್ಮೊಮ್ಮೆ ವರುಣ ತಾಳ್ಮೆ ಮೀರಿ ಅಬ್ಬರಿಸಿದಾಗಲೂ ಅವನನ್ನು ಸಮಾಧಾನಿಸಿ ತನ್ನೊಡಲನ್ನು ಸೇರಿಸಿಕೊಳ್ಳುತ್ತಾಳೆ.

ಮಳೆಗಾಲ ಕಳೆದು ಬೇಸಿಗೆ ಶುರುವಾಗುತ್ತಿದ್ದಂತೆ ಮತ್ತದೇ ವಿರಹ. ಆದರೂ ಮತ್ತದೇ ದೀರ್ಘ ತಾಳ್ಮೆಯಿಂದ ಮುಂದಿನ ಮುಂಗಾರಿಗೆ ಕಾಯುತ್ತಾಳೆ. ಇದೆಲ್ಲವೂ ಪ್ರಕೃತಿಯಲ್ಲಿ ಇರುವ ಪ್ರೀತಿಯ ಜಾಲದಂತೆ ಕಾಣುವುದು ನನ್ನೊಬ್ಬಳಿಗಾ? ಎನ್ನುವ ಪ್ರಶ್ನೆಯೂ ಆಗಾಗ ಹುಟ್ಟುತ್ತದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ