Mysore
26
scattered clouds
Light
Dark

ವೈಡ್ ಆಂಗಲ್: ಪ್ರೇಕ್ಷಕರನ್ನು ದೂರ ತಳ್ಳುತ್ತಿರುವುದು ಚಿತ್ರಗಳೇ? ಚಿತ್ರಮಂದಿರಗಳೇ?

ಚಿತ್ರಮಂದಿರಗಳಿಗೆ ಬಂದು ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ನೋಡುತ್ತಿಲ್ಲ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ ಸಾರ್ವತ್ರಿಕವಾಗಿ ಕೇಳಿ ಬರುತ್ತಿರುವ ಮಾತು. ಒಟಿಟಿಗಳು ಕೂಡ ಕನ್ನಡ ಚಿತ್ರಗಳನ್ನು ಕೊಳ್ಳುತ್ತಿಲ್ಲ, ಆದರೆ ಬೇರೆ ಭಾಷೆಗಳ ಚಿತ್ರಗಳನ್ನು ಕೊಳ್ಳುತ್ತವೆ ಎನ್ನುವ ಮಾತೂ ಇದೆ. ಇದು ನಿಜ ಕೂಡ.

ವೆಬ್ ಸರಣಿಗಳ ಕುರಿತೂ ಇದೇ ಮಾತಿದೆ. ಕನ್ನಡದ ವೆಬ್ ಸರಣಿ ನಿರ್ಮಾಪಕರೊಬ್ಬರು ತಾವು ಚಿತ್ರಿಸಿದ ವೆಬ್ ಸರಣಿಯೊಂದನ್ನು ಪ್ರಸಾರಕ್ಕೆ ಕೊಂಡುಕೊಳ್ಳಲು ಒಟಿಟಿ ತಾಣಗಳ ಜೊತೆ ಮಾತುಕತೆ ನಡೆಸಿದ್ದರು. ಸಂಸ್ಥೆಗೆ ಸರಣಿಯ ವಸ್ತು ಇಷ್ಟವಾಗಿತ್ತು. ಆದರೆ ಕನ್ನಡ ಸರಣಿ ಎಂದರೆ ಅದೇಕೋ ಅಪಥ್ಯ? ಈಗ ಚಿತ್ರಿಸಿದ ಸಂಚಿಕೆಗಳನ್ನು ತೆಲುಗಿಗೆ ಡಬ್ ಮಾಡಿ; ಮುಂದಿನವುಗಳನ್ನು ತೆಲುಗಿನಲ್ಲಿ ಚಿತ್ರಿಸಿ’ ಎನ್ನುವ ಸಲಹೆ ನೀಡಿದರಂತೆ ಅವರು. ಇದು ಸರಣಿಗಳಿಗೆ ಮಾತ್ರವಲ್ಲ, ಚಿತ್ರ ನಿರ್ಮಾಪಕರಿಗೂ ಇಂತಹ ಉಚಿತ ಸಲಹೆಗಳು ಧಾರಾಳವಾಗಿ ಸಿಗುತ್ತವೆ. ಚಿತ್ರಗಳಿರಲಿ, ಸರಣಿಗಳಿರಲಿ, ಕನ್ನಡದ ಬದಲು ಬೇರೆ ಭಾಷೆಯಲ್ಲಿ ನಿರ್ಮಿಸಿ ಎನ್ನುವುದಕ್ಕೆ ಕಾರಣ ಸ್ಪಷ್ಟ. ಈಗ ಯಾವುದೇ ಭಾಷೆಯಲ್ಲಿ ತಯಾರಾಗಿರಲಿ, ಅದನ್ನು ಕನ್ನಡದಲ್ಲಿ ಡಬ್ ಮಾಡಿ ಪ್ರಸಾರ ಇಲ್ಲವೇ ಪ್ರದರ್ಶನ ಮಾಡುವುದಕ್ಕೆ ಯಾವುದೇ ತಕರಾರಿಲ್ಲ.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸರಣಿಗಳನ್ನು ಗಮನಿಸಿ, ಅವುಗಳಲ್ಲಿ ಈಗ ಡಬ್ ಆದ ಸರಣಿಗಳ ಸಂಖ್ಯೆ ಹೆಚ್ಚತೊಡಗಿದೆ. ಇಲ್ಲಿ ಚಿತ್ರಿತವಾಗಿ ಪ್ರಸಾರವಾಗುತ್ತಿರುವ ಸರಣಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಮೂಲಗಳ ಪ್ರಕಾರ ಈಗ ಸರಣಿಗಳಲ್ಲಿ ಪ್ರತಿಶತ 50ಕ್ಕಿಂತ ಹೆಚ್ಚು ಡಬ್ ಆದ ಸರಣಿಗಳು. ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಕನ್ನಡ ಚಲನಚಿತ್ರಗಳಲ್ಲಿ ಈಗ ಡಬ್ ಆದವುಗಳ ಸಂಖ್ಯೆ ಏರತೊಡಗಿದೆ. ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳದೆ ಇರಲು ಇದು ಮೂಲ ಕಾರಣ ಎನ್ನುತ್ತಿದೆ ಗಾಂಧಿನಗರ.

ಹಿಂದಿ, ತಮಿಳು, ತೆಲುಗು ಚಿತ್ರಗಳ ಸ್ಯಾಟಲೈಟ್ ಪ್ರಸಾರದ ಹಕ್ಕನ್ನು ಪಡೆಯುವಾಗ, ಅದರ ಎಲ್ಲ ಭಾಷೆಗಳ ಡಬ್ಬಿಂಗ್ ಹಕ್ಕೂ ಸೇರಿರುತ್ತದೆ. ಅದರಲ್ಲಿ ಕನ್ನಡವೂ ಸೇರಿತೆನ್ನಿ, ಕನ್ನಡ ಚಿತ್ರಕ್ಕೆ ಪ್ರತ್ಯೇಕವಾಗಿ ಕೋಟಿಗಟ್ಟಲೆ ಹಣ ನೀಡಬೇಕಾದ ಅಗತ್ಯವಿಲ್ಲ. ಮೂಲ ಚಿತ್ರಗಳವರು ಮೊದಲೇ ಡಬ್ ಮಾಡಿರುವುದರಿಂದ ಅದಕ್ಕೆ ಪ್ರತ್ಯೇಕ ಖರ್ಚೂ ಇರುವುದಿಲ್ಲ. ಹಾಗಾಗಿಯೇ ನೇರ ಕನ್ನಡ ಚಿತ್ರವನ್ನು ಕೊಳ್ಳಲು ವಾಹಿನಿಗಳು ಹಿಂದೇಟು ಹಾಕುತ್ತವೆ.
ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲು, ಚಿತ್ರಗಳ ಗುಣಮಟ್ಟವೊಂದೇ ಕಾರಣವಲ್ಲ. ಅಲ್ಲಿ ಪ್ರವೇಶ ದರ, ತಿಂಡಿ, ತಿನಿಸುಗಳ ದುಬಾರಿ ದರ ಮೂಲ ಕಾರಣ ಕರ್ನಾಟಕದ ಚಿತ್ರಮಂದಿರಗಳಲ್ಲಿ, ವಿಶೇಷವಾಗಿ ಬೆಂಗಳೂರು ಮಹಾನಗರದಲ್ಲಿ ಪ್ರವೇಶ ದರ ತೀರಾ ಹೆಚ್ಚು. 2000 ರೂ.ವರೆಗೆ ಪ್ರವೇಶ ದರ ಇದೆ. ಅದು ಪರಭಾಷಾ ಚಿತ್ರಗಳದ್ದು. ಕನ್ನಡ ಚಿತ್ರಗಳ ಪ್ರವೇಶ ದರ ಪರಭಾಷಾ ಚಿತ್ರಗಳಿಗಿರುವಷ್ಟು ಇಲ್ಲದೆ ಇದ್ದರೂ, ಮಧ್ಯಮ, ಕೆಳಮಧ್ಯಮ ವರ್ಗದ ಪ್ರೇಕ್ಷಕರಿಗೆ ಅದು ದುಬಾರಿ ಅನಿಸುವಷ್ಟು ಇದೆ.

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ಪ್ರವೇಶ ದರವನ್ನು ಸರ್ಕಾರ ನಿರ್ಧರಿಸುತ್ತದೆ. ನಿರ್ಮಾಪಕರು ಮನಸೋ ಇಚ್ಛೆ ದರವನ್ನು ನಿಗದಿಪಡಿಸುವಂತಿಲ್ಲ. ಆಂಧ್ರಪ್ರದೇಶದ ಪ್ರವೇಶ ದರವನ್ನು ಗಮನಿಸಿ, ಅಲ್ಲಿನ ಚಿತ್ರಮಂದಿರಗಳನ್ನು ಹವಾನಿಯಂತ್ರಿತವಲ್ಲದ, ಹವಾನಿಯಂತ್ರಿತ, ವಿಶೇಷ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು… ಹೀಗೆ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ಮತ್ತೆ ಪ್ರೀಮಿಯರ್ ಮತ್ತು ನಾನ್ ಪ್ರೀಮಿಯರ್ ಎಂದು ವಿಭಾಗಿಸಲಾಗಿದೆ. ಅಲ್ಲಿನ ಆದೇಶದಂತೆ, ಮುನಿಸಿಪಲ್ ಕಾರ್ಪೊರೇಶನ್ ಪ್ರದೇಶದಲ್ಲಿರುವ ಹವಾನಿಯಂತ್ರಣ ಇಲ್ಲದ ಚಿತ್ರಮಂದಿರಗಳ ಪ್ರವೇಶ ದರ ನಾನ್ ಪ್ರೀಮಿಯಂನಲ್ಲಿ ರೂ.40 ಮತ್ತು ಪ್ರೀಮಿಯಂನಲ್ಲಿ ರೂ. 60. ಹವಾನಿಯಂತ್ರಿತ ಚಿತ್ರಮಂದಿರವಾದರೆ ಅದು ರೂ.70 ಮತ್ತು 100 ರೂ.ಗಳು, ವಿಶೇಷ ಚಿತ್ರಮಂದಿರಗಳಲ್ಲಿ ಪ್ರವೇಶ ದರ ನಾನ್ ಪ್ರೀಮಿಯಂಗೆ 100ರೂ., ಪ್ರೀಮಿಯಂಗೆ 125 ರೂ. ಮಲ್ಟಿಪ್ಲೆಕ್ಸ್‌ ಗಳಲ್ಲಿ ಸಾಧಾರಣ ಆಸನಗಳಿಗೆ 150 ರೂ.ಹಾಗೂ ರಿಕ್ಲೈನರ್‌ಗಳಿಗೆ ರೂ. 250.

ನಗರ ಪಂಚಾಯತ್‌ ಪ್ರದೇಶದಲ್ಲಿರುವ ಹವಾನಿಯಂತ್ರಣ ಇಲ್ಲದ ಚಿತ್ರಮಂದಿರಗಳ ಪ್ರವೇಶದರ ನಾನ್ ಪ್ರೀಮಿಯಂನಲ್ಲಿ ರೂ.20 ಮತ್ತು ಪ್ರೀಮಿಯಂನಲ್ಲಿ ರೂ.40. ಹವಾನಿಯಂತ್ರಿತ ಚಿತ್ರಮಂದಿರವಾದರೆ ಅದು ರೂ.50 ಮತ್ತು 70 ರೂ.ಗಳು. ವಿಶೇಷ ಚಿತ್ರಮಂದಿರಗಳಲ್ಲಿ ಪ್ರವೇಶದರ ನಾನ್‌ ಪ್ರೀಮಿಯಂಗೆ 70ರೂ., ಪ್ರೀಮಿಯಂಗೆ 90 ರೂ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಧಾರಣ ಆಸನಗಳಿಗೆ 100 ರೂ. ಹಾಗೂ ರಿಕ್ಷೆನರ್‌ಗಳಿಗೆ ರೂ.250. ಪ್ರವೇಶ ದರಗಳನ್ನು ನಿಗದಿಪಡಿಸುವುದರ ಜೊತೆಗೆ ಪ್ರತಿದಿನ ನಾಲ್ಕು ಪ್ರದರ್ಶನಗಳಿಗೆ ಮಾತ್ರ ಅಲ್ಲಿ ಅನುಮತಿ ಇದೆ. ಐದನೇ ಪ್ರದರ್ಶನಕ್ಕೆ ಅನುಮತಿ ಷರತ್ತಿನ ಮೇಲೆ ಇದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9ರ ಒಳಗೆ ಯಾವುದಾದರೂ ಒಂದು ಪ್ರದರ್ಶನವನ್ನು ಕಡಿಮೆ ನಿರ್ಮಾಣ ವೆಚ್ಚದ ಚಿತ್ರಗಳ ಪ್ರದರ್ಶನ ಮಾಡುವುದೇ ಆದರೆ, ಆ ಐದನೇ ಪ್ರದರ್ಶನಕ್ಕೆ ಅನುಮತಿ ಇದೆ. ಕಡಿಮೆ ನಿರ್ಮಾಣ ವೆಚ್ಚದ ಚಿತ್ರ ಎಂದರೆ, ಅಲ್ಲಿ ಕಲಾವಿದರ ಸಂಭಾವನೆ ಸೇರಿದಂತೆ ಒಟ್ಟು 20 ಕೋಟಿ ರೂ. ನಿರ್ಮಾಣ ವೆಚ್ಚದ ಚಿತ್ರಗಳು. ನೂರು ಕೋಟಿ ರೂ.ಗಳಿಗಿಂತ ಹೆಚ್ಚು ನಿರ್ಮಾಣ ವೆಚ್ಚದ ಚಿತ್ರಗಳಿಗೆ, ಹತ್ತು ದಿನಗಳ ಕಾಲ ಪ್ರವೇಶ ದರವನ್ನು ಹೆಚ್ಚಿಸಲು ಸರ್ಕಾರ ಅನುಮತಿ ನೀಡುತ್ತದೆ.

ಆದರೆ ಅಂತಹ ಚಿತ್ರಗಳ ಪ್ರತಿಶತ 20ರಷ್ಟು ಚಿತ್ರೀಕರಣ ಆ ರಾಜ್ಯದಲ್ಲಿಯೇ ಆಗಬೇಕು ಎನ್ನುವ ಷರತ್ತಿನೊಂದಿಗೆ ಆಂಧ್ರಪ್ರದೇಶದಂತೆಯೇ ತಮಿಳುನಾಡಿನಲ್ಲೂ ಚಿತ್ರಮಂದಿರಗಳ ಪ್ರವೇಶ ದರವನ್ನು ಸರ್ಕಾರ ನಿಯಂತ್ರಿಸಿದೆ. ಹಾಗಾಗಿ ಅಲ್ಲಿನ ಚಿತ್ರಮಂದಿರಗಳಲ್ಲಿ ಆಸಕ್ತ ಪ್ರೇಕ್ಷಕರಿಗೆ ಕಡಿಮೆ ವೆಚ್ಚದಲ್ಲಿ ಚಿತ್ರ ನೋಡಲು ಸಾಧ್ಯ. ಕರ್ನಾಟಕದಲ್ಲಿರುವ ಚಿತ್ರಮಂದಿರಗಳ ಸಂಖ್ಯೆ ಉಳಿದೆಡೆಗಳಂತೆ ಕಡಿಮೆ ಆಗತೊಡಗಿದೆ. ಏಕ ಪರದೆಯ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ಸೇರಿ ಒಟ್ಟು 1,014 ಪರದೆಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ 397 ಪರದೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯವು. ಬೆಂಗಳೂರುನಗರಕ್ಕೆ ಮೆಟ್ರೋ ಸ್ಥಾನ ಇನ್ನೂ ಇಲ್ಲ. ಆದರೆ ಚಿತ್ರ ಮಂದಿರಗಳಲ್ಲಿ ಪ್ರವೇಶ ದರ ಇತರ ಮೆಟ್ರೋ ನಗರಗಳಿಗಿಂತ ಹೆಚ್ಚು.

ಕರ್ನಾಟಕದಲ್ಲಿ ಪ್ರವೇಶ ದರವನ್ನು ನೆರೆಯ ರಾಜ್ಯಗಳಲ್ಲಿ ಇರುವಂತೆ ನಿಯಂತ್ರಿಸುವ ಒತ್ತಾಯವಿತ್ತು. ಸರ್ಕಾರ 200ರೂ. ಗರಿಷ್ಟ ದರ ನಿಗದಿಪಡಿಸಿ ಆದೇಶವೇನೋ ಹೊರಡಿಸಿತು. ಆದರೆ ಉದ್ಯಮದ ಆಸಕ್ತ ಮಂದಿ ಅದರ ವಿರುದ್ಧ ತಡೆಯಾಜ್ಞೆ ತಂದರು. ಸರ್ಕಾರ ಆ ತಡೆಯಾಜ್ಞೆಯನ್ನು ತೆಗೆಸುವ ಕೆಲಸ ಎಷ್ಟು ಮಾಡಿದೆ ಎನ್ನುವುದರ ಕುರಿತಂತೆ ಹೆಚ್ಚಿನ ವಿವರಗಳು ಸಿಗುತ್ತಿಲ್ಲ. ಸರ್ಕಾರಕ್ಕೆ ಸಿನಿಮಾ ಮೊದಲ ಆದ್ಯತೆಯಲ್ಲ, ನಿಜ, ಆದರೆ ಸಿನಿಮಾದಂತಹ ಅತ್ಯಂತ ಶಕ್ತ ಮಾಧ್ಯಮದ ಕುರಿತಂತೆ ಕನಿಷ್ಠ ಕಾಳಜಿಯೂ ಇಲ್ಲದೆ ಹೋದರೆ ಹೇಗೆ ಎನ್ನುವುದು ಉದ್ಯಮದಲ್ಲಿ ಕನ್ನಡ ಚಿತ್ರರಂಗದ ಹಿತಬಯಸುವ ಮಂದಿಯ ಪ್ರಶ್ನೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ ಗಳಲ್ಲಿ ಅವಕಾಶ ಕಡಿಮೆ. ಸಿಕ್ಕರೂ ಅದು ಪ್ರೇಕ್ಷಕರು ಬರುವ ಸಮಯ ಆಗಿರುವುದಿಲ್ಲ. ಪರಭಾಷಾ ಚಿತ್ರಗಳಿಗಾದರೆ, ಪರಭಾಷೆಯ ಜನಪ್ರಿಯ ನಟರ ಚಿತ್ರಗಳಿಗೆ ಇಷ್ಟು ಕೆಂಪು ಕಂಬಳಿ ಹಾಸಿ ಔದಾರ್ಯ ತೋರುತ್ತವೆ. ಈ ಕುರಿತಂತೆ ಯಾರೂ ತಲೆಕೆಡಿಸಿಕೊಂಡಂತಿಲ್ಲ.

ಕನ್ನಡ ಚಿತ್ರಗಳಿಗೆ ಕೆಲವೇ ಪ್ರದರ್ಶನಗಳು ಲಭ್ಯವಾದರೆ, ಪರಭಾಷೆಯ ಚಿತ್ರಗಳಿಗೆ 500ರಿಂದ 1000ದವರೆಗೆ ಪ್ರದರ್ಶನಗಳನ್ನು ಬೆಂಗಳೂರಿನಲ್ಲೇ ನೀಡಿದ ಉದಾಹರಣೆಗಳಿವೆ. ಆ ಚಿತ್ರಗಳ ಪ್ರವೇಶ ದರ ಹೆಚ್ಚಾದಂತೆ ಮಲ್ಟಿಪ್ಲೆಕ್ಸ್‌ ಗಳಿಗೆ ಸಿಗುವ ಬಾಡಿಗೆಯೂ ಹೆಚ್ಚು. ಹಾಗಾಗಿ ಅವುಗಳತ್ತಲೇ ಮಲ್ಟಿಪ್ಲೆಕ್ಸ್‌ಗಳ ಆದ್ಯತೆ. ಇವತ್ತು ತೆರೆಕಾಣುವ ತಮಿಳು ಚಿತ್ರವೊಂದರ ಪ್ರದರ್ಶನ ಬೆಂಗಳೂರಿನಲ್ಲಿ ಮಾತ್ರ ಸಾವಿರದವರೆಗೆ ಪ್ರದರ್ಶನಗಳು! ಅದು ಕೂಡ ಒಂದೊಂದು ಕಡೆ ಐದು ಆರು ಪ್ರದರ್ಶನಗಳು, ಈ ಹಿಂದೆ ಕರ್ನಾಟಕದಲ್ಲಿ ಮುಂಜಾನೆ ಒಂಬತ್ತು ಗಂಟೆಗೆ ಮೊದಲು, ರಾತ್ರಿ ಹತ್ತು ಗಂಟೆಯ ನಂತರ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಈಗ ಹಾಗೇನಿಲ್ಲ. ಹೊತ್ತಿಲ್ಲ, ಗೊತ್ತಿಲ್ಲ. ರಾತ್ರಿ ಮೂರು ಗಂಟೆಯಿಂದಲೇ ಪ್ರದರ್ಶನ ಆರಂಭವಾದ ಉದಾಹರಣೆಗಳಿವೆ!

ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಭಾರತದ ಬಹುತೇಕ ಭಾಷೆಗಳ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಆದರೆ ಕನ್ನಡದ ಚಿತ್ರಗಳು ಇತರ ರಾಜ್ಯಗಳಲ್ಲಿ ಪ್ರದರ್ಶನ ಕಾಣುವುದು ಅಪರೂಪ. ಒಂದು ವೇಳೆ ಪ್ರದರ್ಶನ ಕಾಣುವುದೇ ಆದರೆ ಅವು ಪಾನ್ ಇಂಡಿಯಾ ಹೆಸರಲ್ಲಿ ತಯಾರಾಗಿ ಇತರ ಭಾಷೆಗಳಿಗೆ ಡಬ್ ಆದವುಗಳು, ಅದ್ದೂರಿ ವೆಚ್ಚದ ಚಿತ್ರಗಳು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು, ಪರಭಾಷೆಯ ಚಿತ್ರಗಳನ್ನು ಕನ್ನಡದಲ್ಲೇ ನೋಡಲಿ ಎಂದು ಡಬ್ಬಿಂಗ್ ಪರವಾಗಿ ನಿಂತ ಮಂದಿ ಅದರ ನಂತರದ ಬೆಳವಣಿಗೆಗೆ ಕುರುಡಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೆಸರಿಗೆ ಮಾತ್ರ ಕನ್ನಡದಲ್ಲಿ ಡಬ್ ಆದ ಚಿತ್ರಗಳು ಕರ್ನಾಟಕದಲ್ಲಿ ತೆರೆಗೆ ಬರುತ್ತವೆ. ಉಳಿದಂತೆ, ಅದರ ಮೂಲ ಭಾಷೆ, ಜೊತೆಗೆ ಹಿಂದಿ, ದಕ್ಷಿಣ ಭಾರತೀಯ ಭಾಷೆಗಳ ಚಿತ್ರಗಳೂ ಇಲ್ಲಿ ಪ್ರದರ್ಶನ ಕಾಣುತ್ತವೆ. ಆಯಾ ಭಾಷೆಯ ಚಿತ್ರೋದ್ಯಮಿಗಳಿಗೆ ಇನ್ನಷ್ಟು ವ್ಯವಹಾರಕ್ಕೆ ಇದು ದಾರಿ ಮಾಡಿಕೊಟ್ಟಿತೇ ಹೊರತು, ಇನ್ನೇನಿಲ್ಲ. ಉಳಿದ ವಿಷಯಗಳ ಕುರಿತು ಇತರ ವೇದಿಕೆಗಳಲ್ಲಿ ಚರ್ಚೆಯಾಗಬೇಕು. ಆದರೆ ಅದಕ್ಕೂ ಮೊದಲು, ಚಿತ್ರಮಂದಿರಗಳಲ್ಲಿ ಪ್ರವೇಶ ದರಗಳನಿಯಂತ್ರಣ, ಪ್ರದರ್ಶನಗಳ ಮಿತಿ ಇತ್ಯಾದಿಗಳ ಕುರಿತು, ನೆರೆಯ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ನಿಯಂತ್ರಣ ಆಗಬೇಕು, ಇದು ಅಂದಿನ ತುರ್ತು. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸುವಂತೆ ಸಂಬಂಧಪಟ್ಟವರು ಮಾಡಬೇಕು.

ಕರ್ನಾಟಕದಲ್ಲಿರುವ ಚಿತ್ರಮಂದಿರಗಳ ಸಂಖ್ಯೆ ಉಳಿದೆಡೆಗಳಂತೆ ಕಡಿಮೆ ಆಗತೊಡಗಿದೆ. ಏಕ ಪರದೆಯ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ಸೇರಿ ಒಟ್ಟು 1,014 ಪರದೆಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ 397 ಪರದೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯವು. ಬೆಂಗಳೂರು ನಗರಕ್ಕೆ ಮೆಟ್ರೋ ಸ್ಥಾನ ಇನ್ನೂ ಇಲ್ಲ. ಆದರೆ ಚಿತ್ರ ಮಂದಿರಗಳಲ್ಲಿ ಪ್ರವೇಶದರ ಇತರ ಮೆಟ್ರೋ ನಗರಗಳಿಗಿಂತ ಹೆಚ್ಚು.