Mysore
27
overcast clouds

Social Media

ಬುಧವಾರ, 04 ನವೆಂಬರ್ 2026
Light
Dark

ಸದಸ್ಯರ ಸಂಖ್ಯೆ ನಿಗದಿಗೆ ಮಾನದಂಡ ಯಾವುದು?

ಕೃಷ್ಣ ಸಿದ್ದಾಪುರ

ಸಿದ್ದಾಪುರ, ಮಾಲ್ದಾರೆ ಗ್ರಾಮ ಪಂಚಾಯಿತಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಇರದ ಮತದಾರರ ಸಂಖ್ಯೆ 

ಸಿದ್ದಾಪುರ: ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿಗಳಲ್ಲಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಸದಸ್ಯರ ಸಂಖ್ಯೆಯನ್ನು ನಿಗದಿ ಮಾಡದೇ ಇರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದು ವಾರ್ಡ್‌ನಲ್ಲಿ ಕಡಿಮೆ ಮತದಾರರಿದ್ದರೂ ನಾಲ್ವರು ಸದಸ್ಯರಿಗೆ ಅವಕಾಶ ಕಲ್ಪಿಸಿದರೆ, ಮತ್ತೊಂದು ವಾರ್ಡ್ನಲ್ಲಿ ಅದಕ್ಕಿಂತ ಹೆಚ್ಚಿನ ಮತದಾರರಿದ್ದರೂ ಮೂವರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ವ್ಯತ್ಯಾಸಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಎತ್ತಿದ್ದಾರೆ. ವಾರ್ಡ್ಗಳ ಮರುವಿಂಗಡಣೆ ಮತ್ತು ಸದಸ್ಯರ ಸಂಖ್ಯೆಯ ನಿಗದಿಯಲ್ಲಿ ಪಾರದರ್ಶಕತೆ ಇರಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ವಾರ್ಡ್ ಸಂಖ್ಯೆ ೧ರಲ್ಲಿ ೬೮೧ ಮತದಾರರಿಗೆ ನಾಲ್ವರು ಸದಸ್ಯರನ್ನು ನಿಗದಿಪಡಿಸಲಾಗಿದೆ. ಸಿದ್ದಾಪುರ ವಾರ್ಡ್ ೧ ಮತ್ತು ೨ರಲ್ಲಿ ಒಟ್ಟು ೯೮೪ ಮತದಾರರಿಗೆ ನಾಲ್ವರು ಸದಸ್ಯರಿದ್ದಾರೆ. ಕರಡಿಗೋಡು ವಾರ್ಡ್ ೪ರಲ್ಲಿ ೧,೧೪೩ ಮತದಾರರಿಗೆ ನಾಲ್ವರು ಸದಸ್ಯರನ್ನು ನಿಗದಿಪಡಿಸಲಾಗಿದೆ.  ಆದರೆ ಕರಡಿಗೋಡು ವಾರ್ಡ್ ೩ರಲ್ಲಿ ೧,೧೪೦ ಮತದಾರರಿದ್ದರೂ ಕೇವಲ ಮೂವರು ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ಮತದಾರರಿರುವ ವಾರ್ಡ್‌ಗೆ ಕಡಿಮೆ ಸದಸ್ಯರ ಅವಕಾಶ ನೀಡಿರುವುದು ಯಾವ ನ್ಯಾಯ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಈ ಹಿಂದೆ ನಾಲ್ವರು ಚುನಾಯಿತ ಸದಸ್ಯರಿದ್ದ ವಾರ್ಡ್‌ನಲ್ಲಿ ಒಂದು ಸ್ಥಾನವನ್ನು ಕಡಿತಗೊಳಿಸಲಾಗಿತ್ತು. ಇದೀಗ ಮತದಾರರ ಸಂಖ್ಯೆಯನ್ನು ಪರಿಗಣಿಸಿ ಮತ್ತೆ ನಾಲ್ವರು ಸದಸ್ಯರಿಗೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ವಾರ್ಡ್ ಸಂಖ್ಯೆ ೨ರಲ್ಲಿ ೭೨೪ ಮತದಾರರಿಗೆ ಮೂವರು ಸದಸ್ಯರು, ವಾರ್ಡ್ ಸಂಖ್ಯೆ ೩ರಲ್ಲಿ ೭೮೦ ಮತದಾರರಿಗೆ ಮೂವರು ಸದಸ್ಯರನ್ನು ನಿಗದಿಪಡಿಸಲಾಗಿದೆ. ಮಾಲ್ದಾರೆ ವಾರ್ಡ್ ಸಂಖ್ಯೆ ೧ರಲ್ಲಿ ೯೬೦ ಮತದಾರರಿಗೆ ನಾಲ್ವರು ಸದಸ್ಯರಿದ್ದಾರೆ. ಆದರೆ ಬಾಡಗ ಬಾಣಂಗಾಲ ವಾರ್ಡ್ ಸಂಖ್ಯೆ ೧ರಲ್ಲಿ ೧,೨೧೭ ಮತದಾರರಿದ್ದರೂ ಮೂವರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇಲ್ಲಿಯೂ ಮತದಾರರ ಸಂಖ್ಯೆ ಹೆಚ್ಚಿದ್ದರೂ ಸದಸ್ಯರ ಸಂಖ್ಯೆ ಕಡಿಮೆಯಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ನಾಲ್ವರು ಸದಸ್ಯರಿದ್ದ ವಾರ್ಡ್‌ನಲ್ಲಿ ಒಂದು ಸ್ಥಾನವನ್ನು ಕಡಿತಗೊಳಿಸಲಾಗಿದೆ. ಜನಸಂಖ್ಯೆ ಹಾಗೂ ಮತದಾರರ ಪ್ರಮಾಣಕ್ಕೆ ಅನುಗುಣವಾಗಿ ಸದಸ್ಯರ ಸಂಖ್ಯೆಯನ್ನು ಮರುನಿಗದಿಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

” ಜಿಲ್ಲೆಯಲ್ಲಿ ಒಟ್ಟು ೧೦೨ ಗ್ರಾಮ ಪಂಚಾಯಿತಿಗಳಿವೆ. ಮೀಸಲಾತಿ ಅಥವಾ ಸದಸ್ಯರ ಸಂಖ್ಯೆ ನಿಗದಿಯಲ್ಲಿ ಸಮಸ್ಯೆಗಳಿದ್ದರೆ ಸಂಬಂಧಪಟ್ಟವರು ದಾಖಲೆಗಳ ಸಹಿತ ಲಿಖಿತ ದೂರು ಸಲ್ಲಿಸಬಹುದು. ನಿಯಮಾನುಸಾರ ಪರಿಶೀಲಿಸಿ ಸೂಕ್ತವಾಗಿ ಸ್ಪಂದಿಸಲಾಗುವುದು.”

-ಎಸ್.ಜೆ.ಸೋಮಶೇಖರ್,  ಕೊಡಗು ಜಿಲ್ಲಾಧಿಕಾರಿ

” ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ೨೫೦ ಮತದಾರರಿಗೆ ಒಬ್ಬ ಸದಸ್ಯ ಎಂಬ ನಿಯಮವಿದೆ. ಆದರೆ ಸಿದ್ದಾಪುರ ಪಂಚಾಯಿತಿಯಲ್ಲಿ ೧,೨೦೦ ಮತದಾರರಿಗೆ ಎರಡರಿಂದ ಮೂವರು ಸದಸ್ಯರು ಹಾಗೂ ೬೦೦ರಿಂದ ೯೦೦ ಮತದಾರರಿಗೆ ನಾಲ್ವರು ಸದಸ್ಯರನ್ನು ನೀಡಿರುವುದು ಸರಿಯಲ್ಲ. ಈ ಹಿಂದೆ ಆಕ್ಷೇಪಣೆ ಸಲ್ಲಿಸಲು ಕಡಿಮೆ ಸಮಯಾವಕಾಶ ನೀಡಿದ್ದರಿಂದ ಲೋಪ ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗದ ಹಿನ್ನೆಲೆಯಲ್ಲಿ ಈ ವ್ಯತ್ಯಾಸಗಳನ್ನು ಸರಿಪಡಿಸಲು ಅವಕಾಶವಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು.”

-ಎಂ.ಎಂ.ಶೌಕತ್ ಅಲಿ, ಸಿದ್ದಾಪುರ ಗ್ರಾಪಂ ಮಾಜಿ ಸದಸ್ಯ

” ಬಾಡಗ ಬಾಣಂಗಾಲ ವಾರ್ಡ್ ಸಂಖ್ಯೆ ೧ರ ಮೈಲಾಪುರ ಬೂತ್‌ನಲ್ಲಿ ಒಟ್ಟು ೧,೨೧೭ ಮತದಾರರಿದ್ದಾರೆ. ೨೦೧೫ರಲ್ಲಿ ನಾಲ್ವರು ಸದಸ್ಯರಿದ್ದ ಸಂಖ್ಯೆಯನ್ನು ಕಡಿತಗೊಳಿಸಿ ಮೂವರಿಗೆ ಸೀಮಿತಗೊಳಿಸಲಾಗಿದೆ. ೭೫೦ ಮತದಾರರಿಗೆ ಮೂವರು ಸದಸ್ಯರು ಎಂಬ ಮೀಸಲಾತಿ ಯಾವ ಆಧಾರದಲ್ಲಿ ನಿಗದಿಪಡಿಸಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ಹಿಂದೆ ೧೯ ಸದಸ್ಯರಿದ್ದ ಪಂಚಾಯಿತಿಯಲ್ಲಿ ಸದಸ್ಯರ ಸಂಖ್ಯೆಯನ್ನು ೧೮ಕ್ಕೆ ಇಳಿಸಲಾಗಿದೆ. ೨೦೨೦ ಮತ್ತು ೨೦೨೬ರ ಚುನಾವಣೆಗಳಲ್ಲೂ ಇದೇ ರೀತಿಯ ಮೀಸಲಾತಿ ಪ್ರಕಟಿಸಲಾಗಿದೆ. ಈ ಸಂಬಂಧ ತಾಲ್ಲೂಕು ದಂಡಾಽಕಾರಿಗೆ ದೂರು ಸಲ್ಲಿಸಲಾಗುವುದು.”

-ಹನೀಫ, ಮಾಲ್ದಾರೆ ಗ್ರಾಪಂ ಮಾಜಿ ಸದಸ್ಯ

 

 

Tags:
error: Content is protected !!