Mysore
27
overcast clouds

Social Media

ಬುಧವಾರ, 04 ನವೆಂಬರ್ 2026
Light
Dark

ನಿರ್ಮಿಸಿದ ಒಂದೂವರೆ ತಿಂಗಳಲ್ಲೇ ಡೆಕ್ ಕಿತ್ತು ಹಾಕಿದರು!

ಎಸ್.ಎಸ್.ಭಟ್

ಆಗಸ್ಟ್‌ನಲ್ಲಿ ಡೆಕ್ ಮೇಲೆ ಸಂಚಾರಕ್ಕೆ ಅನುವು, ಅಕ್ಟೋಬರ್‌ನಲ್ಲಿ ಅದೇ ಡೆಕ್ ಕಿತ್ತು ಸಂಚಾರಕ್ಕೆ ನಿರ್ಬಂಧ 

ನಂಜನಗೂಡು: ಹೊಸದಾಗಿ ನಿರ್ಮಿಸಿ ಕಳೆದ ಆಗಸ್ಟ್ ಕೊನೆಯಲ್ಲಿ ಸಂಚಾರಕ್ಕೆ ಅನುವು ಮಾಡಿದ್ದ ಡೆಕ್‌ಅನ್ನು ಒಂದೂವರೆ ತಿಂಗಳಲ್ಲೇ ಕಿತ್ತು ಹಾಕಿರುವ ಘಟನೆ ನಂಜನಗೂಡು ನಗರಸಭೆಯ ವ್ಯಾಪ್ತಿಯಲ್ಲಿ ನಡೆದಿದೆ.

ನಂಜನಗೂಡು ನಗರಸಭೆಯ ನೀಲಕಂಠ ನಗರದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಅವರು ಬಡಾವಣೆಗಳ ವೀಕ್ಷಣೆಗೆ ಬಂದಾಗ ಜನರ ಬವಣೆ ಕಂಡು ಈ ರಸ್ತೆಯ ಡಾಂಬರೀಕರಣ ಮಾಡಿಸಿ ಡೆಕ್ ನಿರ್ಮಿಸಿ ಜನತೆಗೆ ಅನುಕೂಲ ಮಾಡುವಂತೆ ಸೂಚಿಸಿದ್ದರು. ಅದರಂತೆ ನಗರಸಭೆ ಈ ರಸ್ತೆಯನ್ನು ಡಾಂಬರೀಕರಣ ಮಾಡಿ ಡೆಕ್ ನಿರ್ಮಿಸಿ ಆಗಸ್ಟ್ ತಿಂಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ ಒಂದೂವರೆ ತಿಂಗಳಲ್ಲಿ ಈ ರಸ್ತೆಗೆ ನಿರ್ಮಿಸಿದ್ದ ಡೆಕ್‌ಅನ್ನು ವಿದ್ಯುತ್ ಡ್ರಿಲ್ ಉಪಯೋಗಿಸಿ ಕಿತ್ತು ಹಾಕಲಾಗಿದೆ.

ಡೆಕ್ ನಿರ್ಮಿಸಿದ್ದೂ ನಗರಸಭೆ, ಈಗ ಕಿತ್ತು ಹಾಕಿದ್ದೂ ನಗರಸಭೆ. ಸ್ವಲ್ಪ ದಿನ ಈ ಡೆಕ್ ಮೇಲೆ ಸಂಚಾರ ಮಾಡಿದ ನಿವಾಸಿಗಳು ಮತ್ತೆ ಡೆಕ್ ಉಪಯೋಗಿಸಿ ನಾವು ಈ ರಸ್ತೆಯಲ್ಲಿ ಸಂಚಾರ ಮಾಡುವುದು ಯಾವಾಗ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.

ಶಾಸಕ ದರ್ಶನ್ ಶ್ರಮ ವಹಿಸಿ ನಗರಸಭಾ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿ ಎಂದು ರಸ್ತೆ, ಚರಂಡಿಗಳಿಗೆ ಕೋಟ್ಯಂತರ ರೂ. ಬಿಡುಗಡೆ ಮಾಡಿಸುತ್ತಿದ್ದರೆ ಇತ್ತ ನಗರಸಭೆಯ ನಿರ್ಲಕ್ಷ್ಯದಿಂದ ಆ ಹಣ ಸದುಪಯೋಗವಾಗುವ ಬದಲು ಅಪವ್ಯಯವಾಗಲಾರಂಭಿಸಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ನಗರಸಭೆಯ ಈ ರಸ್ತೆಯ ಕಾಮಗಾರಿ ಪಡೆದಿದ್ದು ನಿರ್ಮಿತಿ ಕೇಂದ್ರ. ಆದರೆ ಕಾಮಗಾರಿ ಮಾಡಿದವರು ಅನಾಮಧೇಯರು. ಹಾಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಈ ಡೆಕ್ ಕಿತ್ತು ಹಾಕುವಂತಾಯಿತು. ತನ್ನ ವ್ಯಾಪ್ತಿಯ ರಸ್ತೆ ಹಾಗೂ ಕಾಮಗಾರಿಗಳ ಉಸ್ತುವಾರಿ ಮಾಡಬೇಕಿದ್ದ ನಗರಸಭೆಯ ಅಧಿಕಾರಿಗಳು ಇತ್ತ ತಲೆ ಹಾಕದ ಪರಿಣಾಮ ವಾಹನಗಳು ಈ ಡೆಕ್ ಮೇಲೆ ಸಂಚರಿಸದಂತಾಗಿತ್ತು. ಡೆಕ್ ಮೇಲೆ ವಾಹನಗಳು ಓಡಾಡದ ರೀತಿಯಲ್ಲಿ ಡೆಕ್ ನಿರ್ಮಿಸಿದ್ದರಿಂದ ಅದನ್ನು ತೆರವುಗೊಳಿಸಬೇಕಾಯಿತು ಎನ್ನುತ್ತಾರೆ ಅಧಿಕಾರಿಗಳು.

ಜನರ ಹಣ ಅಪವ್ಯಯ:  ಸರ್ಕಾರದ ಹಣ ಅಂದರೆ ಸಾರ್ವಜನಿಕರ ಹಣ ಅಪವ್ಯಯಕ್ಕೆ ಕಾರಣರ‍್ಯಾರು ಎಂಬ ಜನರ ಪ್ರಶ್ನೆಗೆ ಉತ್ತರ ನೀಡುವವರಾರು?

 

 

Tags:
error: Content is protected !!