Mysore
23
overcast clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ನವೀನ್ ಡಿಸೋಜ

ಅವಧಿಗೂ ಮುನ್ನ ಉತ್ತಮ ಮಳೆ

ಕಳೆದ ೧೦ ವರ್ಷಗಳಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ನೀರು ಬಿಡುಗಡೆ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಅವಧಿಗೂ ಮುನ್ನವೇ ಸುರಿದ ಧಾರಾಕಾರ ಮಳೆಯಿಂದಾಗಿ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನದಿಗೆ ಸುಮಾರು ೪,೦೦೦ ಕ್ಯೂಸೆಕ್ಸ್‌ನಷ್ಟು ನೀರನ್ನು ೪ ಕ್ರಸ್ಟ್ ಗೇಟ್‌ಗಳ ಮೂಲಕ ಹರಿಯಬಿಡಲಾಗುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿಯೇ ಹಾರಂಗಿ ಭರ್ತಿಯಾಗಿ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ.

ಪ್ರತಿವರ್ಷ ಜಿಲ್ಲೆಯಲ್ಲಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಹಾರಂಗಿ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಯಬಿಡಲಾಗುತ್ತಿತ್ತು. ಆದರೆ ಈ ಬಾರಿ ಮೇ ಅಂತ್ಯದಿಂದಲೇ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಅವಧಿಗೆ ಮುನ್ನವೇ ಭರ್ತಿಯಾಗಿದೆ. ಹೀಗಾಗಿ ಕಳೆದ ೧೦ ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿಯೇ ಸುಮಾರು ೪,೦೦೦ ಕ್ಯೂಸೆಕ್ಸ್‌ನಷ್ಟು ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ ೮೦೭.೯೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೪೭೬.೨೫ ಮಿ.ಮೀ.ನಷ್ಟು ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ೧೨೧೦.೦೨ ಮಿ.ಮೀ. ಮಳೆಯಾಗಿದ್ದು, ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ೬೭೪.೦೭ ಮಿ.ಮೀ.ನಷ್ಟು ಮಳೆಯಾಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.೫೦ಕ್ಕೂ ಅಧಿಕ ಪ್ರಮಾಣದ ಮಳೆಯಾಗಿದೆ. ಹೀಗಾಗಿ ಸಹಜ ವಾಗಿಯೇ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಜಲಾಶಯ ಭರ್ತಿಯಾಗಿದೆ. ಸಾಮಾನ್ಯವಾಗಿಹಾರಂಗಿ ಜಲಾಶಯ ಭರ್ತಿಯಾಗುವುದು, ನೀರು ಬಿಡುಗಡೆಯಾಗುವುದು ಆಗಸ್ಟ್ ತಿಂಗಳಿನಲ್ಲಿ.

ಒಮ್ಮೊಮ್ಮೆ ಹೆಚ್ಚು ಮಳೆಯಿದ್ದಾಗ ಜುಲೈ ತಿಂಗಳಾಂತ್ಯದಲ್ಲಿ ನೀರು ಹರಿಯ ಬಿಡಲಾಗುತ್ತದೆ. ಜೂನ್‌ನಲ್ಲಿ ಜಲಾಶಯ ಭರ್ತಿಯಾಗಿರುವುದೇ ಅಪರೂಪ. ಆದರೆ ಈ ಬಾರಿ ಮೇ ತಿಂಗಳಾಂತ್ಯದಲ್ಲಿಯೇ ಜಲಾಶಯ ಬಹುತೇಕ ಭರ್ತಿಯಾಗಿತ್ತು.

೨,೮೫೯ ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ ೮ ಗಂಟೆ ವೇಳೆಗೆ ೨,೮೫೧.೯೫ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೮೨೭.೩೨ ಅಡಿಗಳಷ್ಟು ನೀರು ಮಾತ್ರ ಸಂಗ್ರಹವಿತ್ತು. ಜಲಾಶಯದಲ್ಲಿ ಸದ್ಯ ೫.೬೦೧೨೦ ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಽಯಲ್ಲಿ ೨.೪೫೧೧೭ ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿತ್ತು. ಸದ್ಯ ಜಲಾಶಯಕ್ಕೆ ೩,೧೮೪ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಮಂಗಳವಾರ ನದಿಗೆ ೪,೦೦೦ ಕ್ಯೂಸೆಕ್ಸ್‌ನಷ್ಟು ನೀರನ್ನು ಹರಿಯಬಿಡಲಾಗುತ್ತಿದೆ.

ಮಳೆಯ ಅಬ್ಬರ ಇಲ್ಲದಿದ್ದರೂ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಜತೆಗೆ ಆಗೊಮ್ಮೆ -ಈಗೊಮ್ಮೆ ಧಾರಾಕಾರವಾಗಿ ಮಳೆಯಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಡುವ ಸಾಧ್ಯತೆ ಇದೆ. ಹಾಗಾಗಿ ನದಿ ಪಾತ್ರದ ನಿವಾಸಿಗಳು ಎಚ್ಚರದಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

” ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಜಲಾಶಯ ಶೀಘ್ರ ಗರಿಷ್ಟ ಮಟ್ಟ ತಲುಪಿರುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುವುದು. ಆದ್ದರಿಂದ ಹಾರಂಗಿ ಮತ್ತು ಕಾವೇರಿ ನದಿ ಪಾತ್ರದಲ್ಲಿರುವ ಮತ್ತು ನದಿಯ ಎರಡೂದಂಡೆಗಳಲ್ಲಿ ವಾಸಿಸುವಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನ,ಜಾನುವಾರುಗಲ ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.”

-ಐ.ಕೆ.ಪುಟ್ಟಸ್ವಾಮಿ, ಕಾರ್ಯಪಾಲಕ ಇಂಜಿನಿಯರ್, ಹಾರಂಗಿ ಪುನರ್ವಸತಿ ವಿಭಾಗ

ಹಾರಂಗಿ ಜಲಾಶಯದ ನೀರಿನ ಮಟ್ಟ:

” ಹಾರಂಗಿ ಜಲಾಶಯದ ಗರಿಷ್ಟ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨,೮೫೧.೯೫ ಅಡಿಗಳು. ಕಳೆದ ವರ್ಷ ಇದೇ ದಿನ ೨,೮೨೭.೩೨ ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ ೧.೨ ಮಿ.ಮೀ., ಇಂದಿನ ನೀರಿನ ಒಳಹರಿವು ೩,೧೮೪ ಕ್ಯೂಸೆಕ್ಸ್, ಕಳೆದ ವರ್ಷ ಇದೇ ದಿನ ೫೪೪ ಕ್ಯೂಸೆಕ್ಸ್, ಇಂದಿನ ನೀರಿನ ಹೊರ ಹರಿವು ನದಿಗೆ ೪,೦೦೦ ಕ್ಯೂಸೆಕ್ಸ್, ಕಳೆದ ವರ್ಷ ಇದೇ ದಿನ ನೀರಿನ ಹೊರಹರಿವು ನದಿಗೆ ೨೦೦ ಕ್ಯೂಸೆಕ್ಸ್”

Tags:
error: Content is protected !!