Mysore
23
scattered clouds

Social Media

ಶುಕ್ರವಾರ, 09 ಅಕ್ಟೋಬರ್ 2026
Light
Dark

ನಲ್ಲೂರು ಅಮಾನಿ ಕೆರೆಗೆ ಹರಿದು ಬಂದ ನೀರು

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ

ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ 

ಗುಂಡ್ಲುಪೇಟೆ: ಉತ್ತಮ ಮಳೆಯಾಗಿರುವುದರಿಂದ ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆಯಾದ ನಲ್ಲೂರು ಅಮಾನಿ ಕೆರೆಗೆ ಒಳಹರಿವು ಹೆಚ್ಚಾಗಿ ನೀರು ಸಂಗ್ರಹವಾಗಿದೆ. ಹದಿನೈದು ವರ್ಷಗಳ ಹಿಂದೆ ಕೆರೆ ತುಂಬಿ ಕೋಡಿ ಬಿದ್ದಿದ್ದು ಬಿಟ್ಟರೆ ಇದುವರೆಗೂ ಕೆರೆ ತುಂಬಿರಲಿಲ್ಲ. ವರುಣನ ಕೃಪೆಯಿಂದ ಕೆರೆಗೆ ನೀರು ಬಂದಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿಯೂ ಮಳೆಯಾದರೆ ಕೆರೆಯ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ.

೧೯೮೪ರಲ್ಲಿ ಕೆರೆ ನಿರ್ಮಾಣ: ೧೯೮೩-೮೪ರ ಅವಧಿಯಲ್ಲಿ ಗುಂಡ್ಲುಪೇಟೆ ಶಾಸಕರಾಗಿದ್ದ ಎಸ್.ನಾಗರತ್ನಮ್ಮ ಅವರು ನಲ್ಲೂರು ಅಮಾನಿ ಕೆರೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರು.  ಕೆರೆ ೧೯೫ ಎಕರೆ ವಿಸ್ತೀರ್ಣ ಹೊಂದಿದ್ದು, ೬.೫೬ ಬಿಲಿಯನ್ ಕ್ಯೂಸೆಕ್ಸ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ೨,೪೨೮ ಹೆಕ್ಟೇರ್ ಕೃಷಿ ಭೂಮಿಗೆ (ಅಚ್ಚುಕಟ್ಟು ಪ್ರದೇಶ) ನೀರಾವರಿ ಸೌಲಭ್ಯ ಒದಗಿಸುತ್ತದೆ. ಈ ಕೆರೆಯಿಂದ ಸುಮಾರು ೧೪ ಕಿ.ಮೀ. ಉದ್ದದ ಎಡದಂಡೆ ಮತ್ತು ಬಲದಂಡೆ ನಾಲೆಗಳನ್ನು ನಿರ್ಮಿಸಲಾಗಿದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎರಡೂ ನಾಲೆಗಳು ಮುಚ್ಚಿ ಹೋಗಿವೆ.

ಕಬಿನಿ ಏತ ನೀರಾವರಿ ಯೋಜನೆ: ಈ ಭಾಗದಲ್ಲಿ ಮಳೆಯ ಕೊರತೆಯಾದಾಗ ಕುಡಿಯುವ ನೀರು ಮತ್ತು ಕೃಷಿಗಾಗಿ ಮಳೆಗಾಲದ ೧೦೦ ದಿನಗಳ ಅವಽಯಲ್ಲಿ ಕಬಿನಿ ನದಿಯಿಂದ ಏತ ನೀರಾವರಿ ಮೂಲಕ ಈ ನಲ್ಲೂರು ಅಮಾನಿ ಕೆರೆ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಒತ್ತುವರಿ, ಜಾಲಿ ಗಿಡಗಳ ತೆರವು ಅಗತ್ಯ: ನಲ್ಲೂರು ಅಮಾನಿ ಕೆರೆಯಲ್ಲಿ ಬೃಹತ್ ಗಾತ್ರದ ಜಾಲಿ ಗಿಡಗಳು ಬೆಳೆದಿವೆ. ಕೆರೆಯಲ್ಲಿ ಹೂಳು ತುಂಬಿರುವುದರಿಂದ ಸಾಕಷ್ಟು ನೀರು ಸಂಗ್ರಹವಾಗುತ್ತಿಲ್ಲ. ಸಕಾಲಕ್ಕೆ ಹೂಳು ತೆಗೆಯುವುದರೊಂದಿಗೆ ಜಾಲಿಗಿಡಗಳನ್ನೂ ತೆರವುಗೊಳಿಸಬೇಕು. ಕೆರೆಗೆ ನೀರು ಸರಾಗವಾಗಿ ಹರಿದು ಬರಲು ಕಾಲುವೆಗಳ ದುರಸ್ತಿ ಮತ್ತು ಒತ್ತುವರಿ ತೆರವುಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

” ರೈತರ ಜೀವನಾಡಿಯಾಗಿರುವ ನಲ್ಲೂರು ಅಮಾನಿಕೆರೆಗೆ ಈ ಬಾರಿ ನೀರು ಹರಿದು ಬಂದಿದೆ. ಇನ್ನೂ ನಾಲ್ಕೈದು ಬಾರಿ ಮಳೆಯಾದರೆ ಅರ್ಧದಷ್ಟು ಕೆರೆ ತುಂಬಲಿದೆ. ಕೆರೆ ತುಂಬಿದರೆ ಅಂತರ್ಜಲ ಮಟ್ಟವೂ ಹೆಚ್ಚಲಿದ್ದು, ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.”

 -ಅಭಿಷೇಕ್, ರೈತ, ಇಂಗಲವಾಡಿ ಗ್ರಾಮ

” ವರುಣನ ಕೃಪೆಯಿಂದ ನಲ್ಲೂರು ಅಮಾನಿ ಕೆರೆಗೆ ನೀರು ಹರಿದು ಬರುತ್ತಿದ್ದು, ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿದೆ.ಕೆರೆ ತುಂಬಿದರೆ ಜಲಾನಯನ ಪ್ರದೇಶದ ರೈತರು ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಲಿದೆ.”

 -ಗುರುಪ್ರಸಾದ್, ರೈತ, ವೀರನಪುರ

” ನಲ್ಲೂರು ಅಮಾನಿ ಕೆರೆಯನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೆರೆಯ ಕಾಲುವೆಗಳ ಹೂಳು ತೆಗೆಸಲು ಅಂದಾಜು ಪಟ್ಟಿಯನ್ನು ತಯಾರಿಸಲು ಕ್ರಮ ಕೈಗೊಳ್ಳಲಾಗುವುದು.”

 – ಮಹೇಶ್, ಎಇಇ, ನೀರಾವರಿ ಇಲಾಖೆ

 

 

Tags:
error: Content is protected !!