Mysore
23
overcast clouds

Social Media

ಭಾನುವಾರ, 21 ಜೂನ್ 2026
Light
Dark

ಸಂಪುಟ ವಿಸ್ತರಣೆ: ಮೈಸೂರು ಭಾಗದ ‘ಕೈ’ಶಾಸಕರ ಕಸರತ್ತು

ಕೆ.ಬಿ.ರಮೇಶನಾಯಕ

ಮೈಸೂರು: ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಚುರುಕುಗೊಂಡಿದ್ದು, ಮೈಸೂರು ಭಾಗದ ಹಲವು ಕಾಂಗ್ರೆಸ್ ಶಾಸಕರ ಚಿತ್ತ ಹೈಕಮಾಂಡ್ ನಿರ್ಧಾರದ ಕಡೆಗೆ ಹರಿದಿದೆ.

ಸಚಿವ ಸಂಪುಟದಲ್ಲಿ ಬಾಕಿ ೨೩ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಯಾವುದೇ ಸಮಯದಲ್ಲಿ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಸಚಿವಾಕಾಂಕ್ಷಿಗಳು ಲಾಬಿ ಶುರು ಮಾಡಿದ್ದು, ಮೈಸೂರು ಭಾಗಕ್ಕೆ ಎಷ್ಟು ಸಚಿವ ಸ್ಥಾನಗಳು ದೊರೆಯಬಹುದು ಎಂಬ ಕುತೂಹಲ ಮೂಡಿದೆ. ರಾಜ್ಯದಲ್ಲಿ ತೆರವಾಗಿದ್ದ ನಾಲ್ಕು ರಾಜ್ಯಸಭಾ ಸ್ಥಾನಗಳು, ವಿಧಾನಸಭೆಯಿಂದ ಮೇಲ್ಮನೆಗೆ ಏಳು ಸ್ಥಾನಗಳಿಗೆ ನಡೆದ ೧ಚುನಾವಣೆ ಪ್ರಕ್ರಿಯೆಯು ಮುಗಿದು ಹೈಕಮಾಂಡ್ ನಾಯಕರು ನಿರುಮ್ಮಳಗೊಂಡಿದ್ದು, ಅದರಲ್ಲೂ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಐದನೇ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಂಡಿರುವುದು ನಾಯಕರಲ್ಲಿ ರಣೋತ್ಸಾಹಕ್ಕೆ ಕಾರಣವಾಗಿದೆ.

ಭಾನುವಾರ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ ಮಾಡುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆಯ ಕೂಗಿಗೆ ಮತ್ತಷ್ಟು ಬಲ ಸಿಗಲಿದೆ. ೨೦೧೮-೨೦೨೩ರಲ್ಲಿ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿ.ಶ್ರೀನಿವಾಸ ಪ್ರಸಾದ್, ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್‌ಸೇಠ್, ಚಾಮರಾಜನಗರ ಜಿಲ್ಲೆಯಿಂದ ಸಿ.ಪುಟ್ಟರಂಗಶೆಟ್ಟಿ, ಮಂಡ್ಯದಿಂದ ಅಂಬರೀಶ್ ಅವರಿಗೆ ಅವಕಾಶ ದೊರೆತಿತ್ತು. ೨೦೨೩ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗಿದ್ದಾಗ ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಎನ್.ಚಲುವರಾಯಸ್ವಾಮಿ ಅವರಿಗೆ ಸಚಿವ ಸ್ಥಾನ ಕಲ್ಪಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದರಿಂದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಮೊದಲ ಹಂತದಲ್ಲಿ ೧೩ ಸಚಿವರನ್ನು ನೇಮಕ ಮಾಡಿದ್ದಾರೆ. ಮೊದಲ ಕಂತಿನಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಸ್ಥಾನ ಕಲ್ಪಿಸಲಾಗಿದ್ದು, ಇದೀಗ ಎರಡನೇ ಕಂತಿನ ಸಂಪುಟ ವಿಸ್ತರಣೆಯಲ್ಲಿ ಯಾರ‍್ಯಾರಿಗೆ ದೊರೆಯಲಿದೆ ಎಂಬ ಚರ್ಚೆಗಳು ಶುರುವಾಗಿವೆ. ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ಕಾಲದ ಗೆಳೆಯರಾಗಿರುವ ಎಚ್.ಸಿ. ಮಹದೇವಪ್ಪ ಅವರಿಗೆ ಮೊದಲ ಕಂತಿನಲ್ಲಿ ಅವಕಾಶ ಕೈತಪ್ಪಿರುವುದು ದಲಿತ ಸಮುದಾಯದಲ್ಲಿ ಅತೃಪ್ತಿ ಮೂಡಿಸಿದೆ. ಹಾಗಾಗಿ ಎರಡನೇ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ದಲಿತ ಸಮುದಾಯಕ್ಕೆ ಸೇರಿದ ಎ.ಆರ್.ಕೃಷ್ಣಮೂರ್ತಿ, ಎಂ.ಪಿ.ನರೇಂದ್ರಸ್ವಾಮಿ ಪೈಪೋಟಿ ನೀಡುತ್ತಿದ್ದರೂ ಕೂಡ ರಾಜ್ಯದಲ್ಲಿ ಅತಿ ಹೆಚ್ಚಿನ ಬೆಂಬಲ ಹೊಂದಿರುವ ಮಹದೇವಪ್ಪ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ಹೇಳಿವೆ.

ಕೃಷ್ಣಮೂರ್ತಿ ಅವರು ಹಿರಿತನ ಹಾಗೂ ಹೊಸಮುಖಕ್ಕೆ ಆದ್ಯತೆ ಕಲ್ಪಿಸಿದರೆ ತಮ್ಮನ್ನು ಪರಿಗಣಿಸುವಂತೆ ನಾಯಕರ ಮೇಲೆ ಒತ್ತಡ ಹೇರಿದ್ದರೆ, ನರೇಂದ್ರಸ್ವಾಮಿ, ಸಿಎಂ ಶಿವಕುಮಾರ್ ಮೂಲಕ ಹೈಕಮಾಂಡ್ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಅವಕಾಶ ಕೈತಪ್ಪಿರುವ ಕಾರಣ ಈ ಬಾರಿ ತಮಗೆ ಸಚಿವಗಿರಿ ಪಕ್ಕಾ ಎನ್ನುತ್ತಿರುವ ತನ್ವೀರ್ ಸೇಠ್‌ಗೆ ದೊರೆಯುವುದೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಕೋಟಾದಲ್ಲಿ ಯು.ಟಿ.ಖಾದರ್‌ಗೆ ದಕ್ಕಿದ್ದು, ಜಮೀರ್ ಅಹ್ಮದ್ ಖಾನ್, ಎನ್.ಎ.ಹ್ಯಾರಿಸ್, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಕೂಡ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಅತಿ ಹೆಚ್ಚು ಬಾರಿ ಗೆದ್ದಿರುವ ಜತೆಗೆ, ತಂದೆ ಅಜೀಜ್ ಸೇಠ್ ಕಾಲದಿಂದಲೂ ಪಕ್ಷಕ್ಕೆ ದುಡಿದಿರುವ ಕಾರಣ ತಮಗೆ ಕೊಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸಿ.ಪುಟ್ಟರಂಗಶೆಟ್ಟಿ ಅವರು ಕೂಡ ಜಿಲ್ಲಾ ಪ್ರಾತಿನಿಧ್ಯ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಕೈತಪ್ಪಿದರೆ ಉಪ್ಪಾರ ಸಮಾಜದ ಮತಗಳು ಚದುರುವ ಸಾಧ್ಯತೆ ಇರುವುದರಿಂದ ಸಂಪುಟಕ್ಕೆ ಸೇರುವ ಸಂಭವವಿದೆ.

ಅನಿಲ್‌ಗೂ ೫೦:೫೦ಚಾನ್ಸ್: ಪರಿಶಿಷ್ಟ ಪಂಗಡದ ಕೋಟಾದಡಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅನಿಲ್ ಚಿಕ್ಕಮಾದು ಅವರಿಗೂ ಒಂದು ಚಾನ್ಸ್ ಸಿಗಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಎಸ್‌ಟಿ ಸಮುದಾಯದಿಂದ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ದಕ್ಕಿದ್ದು, ಇನ್ನೂ ಎರಡು ಸ್ಥಾನಗಳು ಈ ಸಮುದಾಯಕ್ಕೆ ಸಿಗುವ ಸಾಧ್ಯತೆ ಇದೆ. ಹಾಗಾಗಿ ಬಿ.ನಾಗೇಂದ್ರ, ಕಂಪ್ಲಿ ಗಣೇಶ್, ಎನ್.ವೈ. ಗೋಪಾಲಕೃಷ್ಣ, ಟಿ.ಸಿ.ರಘುಮೂರ್ತಿ, ಅನಿಲ್ ಚಿಕ್ಕಮಾದು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಟಿ.ಸಿ.ರಘುಮೂರ್ತಿ ಹೆಸರು ಅಂತಿಮವಾಗಿದ್ದು, ಕಂಪ್ಲಿ ಗಣೇಶ್, ಅನಿಲ್ ಚಿಕ್ಕಮಾದು ಅವರಿಗೆ ೫೦:೫೦ ಚಾನ್ಸ್ ಇದೆ. ತಮಗೆ ಕೊಡದಿದ್ದರೆ ಜಿಲ್ಲೆಗೆ ಸೇರಿದ ಕಂಪ್ಲಿ ಗಣೇಶ್‌ಗೆ ಅವಕಾಶ ಮಾಡಿಕೊಡುವಂತೆ ನಾಗೇಂದ್ರ ಪಟ್ಟು ಹಿಡಿದಿದ್ದರೆ, ಶಿವಕುಮಾರ್ ಅವರು ಅನಿಲ್ ಪರ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.

” ಎಚ್.ಸಿ.ಮಹದೇವಪ್ಪ ಅವರಿಗೆ ಮೊದಲ ಕಂತಿನಲ್ಲಿ ಅವಕಾಶ ಕೈತಪ್ಪಿರುವುದು ದಲಿತ ಸಮುದಾಯದಲ್ಲಿ ಅತೃಪ್ತಿ ಮೂಡಿಸಿದೆ. ಹಾಗಾಗಿ ಎರಡನೇ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.”

 

 

Tags:
error: Content is protected !!