೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು ಚರಣಗಳನ್ನು ಮಾತ್ರ ಅಳವಡಿಸಿಕೊಂಡಿತು. ೧೯೫೦ರಲ್ಲಿ ಇದಕ್ಕೆ ರಾಷ್ಟ್ರೀಯ ಗೀತೆಯ ಸಮಾನ ಸ್ಥಾನಮಾನ ಸಿಕ್ಕಿತು. ಪ್ರಸ್ತುತ ಕೇಂದ್ರ ಸರ್ಕಾರ ಗೀತೆಯ ಪೂರ್ಣ ಆರು ಚರಣಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಸಂಬಂಧದ ಚರ್ಚೆ ವಿವಾದವನ್ನು ಹುಟ್ಟುಹಾಕಿದೆ. ಈ ಕುರಿತು ಕಾಂಗ್ರೆಸ್-ಬಿಜೆಪಿ ನಾಯಕರಿಬ್ಬರ ಭಿನ್ನ ಅಭಿಪ್ರಾಯಗಳು ಇಲ್ಲಿವೆ.
ವಂದೇ ಮಾತರಂ ಗೀತೆಗೆ ಅಪಮಾನ, ದೇಶದ ಮೊದಲ ಅಪರಾಧಿ ಕಾಂಗ್ರೆಸ್
ಆರ್.ಅಶೋಕ್, ವಿರೋಧ ಪಕ್ಷದ ನಾಯಕರು
ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ‘ವಂದೇ ಮಾತರಂ’ಗೆ ಬಹುಮುಖ್ಯ ಸ್ಥಾನವಿದೆ. ಇದು ಕೇವಲ ಒಂದು ಹಾಡಲ್ಲ. ಇದು ಕೋಟ್ಯಂತರ ದೇಶಭಕ್ತರ ಹೃದಯದಾಳದಲ್ಲಿ ರಾಷ್ಟ್ರಭಕ್ತಿಯ ಕಿಚ್ಚನ್ನು ಹಚ್ಚಿದ ಕ್ರಾಂತಿ ಗೀತೆ. ಇಂದಿಗೂ ಈ ಹಾಡನ್ನು ಕೇಳಿದ ಕೂಡಲೇ ನಮಗೆ ಮಾತೃಭೂಮಿಗಾಗಿ ಹೋರಾಟ ಮಾಡಿ ಮಡಿದ ಲಕ್ಷಾಂತರ ಹೋರಾಟಗಾರರ ನೆನಪಾಗುತ್ತದೆ.
ಈ ಹಾಡನ್ನು ಕೇಳಿದ ಕೂಡಲೇ ಸ್ವಾತಂತ್ರ್ಯ ಚರಿತ್ರೆಯ ನೆನಪಾಗುತ್ತದೆ. ಇಂತಹ ಪವಿತ್ರವಾದ ಹಾಡಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿರುವುದು ಪ್ರತಿ ಭಾರತೀಯನ ಕರ್ತವ್ಯ. ಆದರೆ ಇದನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ತುಷ್ಟೀಕರಣ ಮೆರೆಯುವುದು ಎಂದರೆ ಅದರಷ್ಟು ಕೀಳು ರಾಜಕಾರಣ ಮತ್ತೊಂದಿಲ್ಲ. ಈಗ ಕಾಂಗ್ರೆಸ್ ನಾಚಿಕೆ ಬಿಟ್ಟು ಓಲೈಕೆ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಯನ್ನು ಬಳಸಿಕೊಂಡಿದೆ.
ಹೋರಾಟಗಾರ, ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಅವರ ವಂದೇಮಾತರಂ ಗೀತೆ ನವೆಂಬರ್ ೭, ೧೮೭೫ರಂದು ಸಾಹಿತ್ಯ ನಿಯತಕಾಲಿಕೆ ಬಂಗ ದರ್ಶನ್‌ನಲ್ಲಿ ಮೊದಲು ಪ್ರಕಟವಾಯಿತು. ನಂತರ ೧೮೮೨ರಲ್ಲಿ ಪ್ರಕಟವಾದ ತಮ್ಮ ಕಾದಂಬರಿ ‘ಆನಂದ ಮಠ’ದಲ್ಲಿ ಸೇರಿಸಿದರು. ಬ್ರಿಟಿಷರು ಪ್ರತಿ ಕಾರ್ಯಕ್ರಮದಲ್ಲಿಯೂ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸುವ ‘ಸೇವ್ ದಿ ಕ್ವೀನ್’ ಹಾಡನ್ನು ಕಡ್ಡಾಯಗೊಳಿಸಿದ್ದರು. ಇದು ಸ್ವಾತಂತ್ರ್ಯ ಹೋರಾಟಗಾರರನ್ನು ಕೆರಳುವಂತೆ ಮಾಡಿತ್ತು. ಇದಕ್ಕಾಗಿ ಬಂಕಿಮ ಚಂದ್ರ ಚಟರ್ಜಿ ‘ವಂದೇಮಾತರಂ’ ರಚಿಸಿದರು.
ಕಾಂಗ್ರೆಸ್‌ನ ಅಪರಾಧ: ವಂದೇಮಾತರಂಗೆ ೧೫೦ ವರ್ಷ ಸಂದ ಪ್ರಯುಕ್ತ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ ತಂದು ಕಾನೂನಾಗಿ ಜಾರಿ ಮಾಡಿದೆ. ಈ ಕಾನೂನು ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಇರುವ ಸ್ಥಾನವನ್ನೇ ‘ವಂದೇ ಮಾತರಂ’ಗೂ ನೀಡಿದೆ. ರಾಷ್ಟ್ರಗೀತೆ ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅಥವಾ ಗಾಯನದಲ್ಲಿ ನಿರತವಾದ ಸಭೆಗೆ ಅಡಚಣೆ ಮಾಡಿದರೆ ಅದು ಅಪರಾಧವಾಗುತ್ತದೆ. ಇದಕ್ಕೆ ಗರಿಷ್ಟ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿದೆ. ಇದನ್ನೇ ವಂದೇಮಾತರಂಗೂ ವಿಸ್ತರಿಸಲಾಗಿದೆ. ಅಂದರೆ ವಂದೇಮಾತರಂ ಹಾಡಿಗೆ ಅಡ್ಡಿಪಡಿಸಿದರೆ ಅದು ಕಾನೂನು ಪ್ರಕಾರ ಅಪರಾಧ.
ಈ ಕಾನೂನನ್ನು ಮೊದಲು ಉಲ್ಲಂಘನೆ ಮಾಡಿರುವುದು ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ. ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇಮಾತರಂ ಹಾಡುವಾಗ ಈ ಮೂವರು ನಾಯಕರು ಅಡ್ಡಿಪಡಿಸಿದ್ದರು. ಈ ಕುರಿತ ವೀಡಿಯೋ ವೈರಲ್ ಆಗಿ ಜನರು ಛೀಮಾರಿ ಹಾಕಿದ್ದರು. ಆದರೂ ತಾವು ಮಾಡಿದ್ದೇ ಸರಿ ಎಂದು ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದರು.
ತುಷ್ಟೀಕರಣಕ್ಕಾಗಿ ಗೀತೆ ಮೊಟಕು: ಕಾಂಗ್ರೆಸ್ ಬಹಳ ಹಿಂದಿನಿಂದಲೂ ತುಷ್ಟೀಕರಣ ರಾಜಕೀಯ ಮಾಡಿಕೊಂಡು ಬಂದಿದ್ದು, ಇದಕ್ಕೆ ‘ಜಾತ್ಯತೀತ’ ಎಂಬ ಹೆಸರು ನೀಡಲಾಗಿದೆ. ಈ ದೇಶದ ಮುಸ್ಲಿಮರು ನೆಲದ ಸಂಸ್ಕ ತಿ, ಪರಂಪರೆಯನ್ನು ಒಪ್ಪಿಕೊಂಡೇ ಜೀವನ ನಡೆಸುತ್ತಿದ್ದಾರೆ. ಸಂತ ಶಿಶುನಾಳ ಷರೀಫರು, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಕವಿ ಪ್ರೊ.ಕೆ.ಎಸ್ .ನಿಸಾರ್ ಅಹಮದ್ ಮೊದಲಾದವರು ಭಾರತವನ್ನು ತಾಯಿಯಾಗಿ ಕಂಡಿದ್ದಾರೆ. ಇವರೆಂದೂ ಹಿಂದೂ ದೇವರ ಬಗ್ಗೆ ಆಕ್ಷೇಪ ಮಾಡಿಲ್ಲ. ಇಂದಿಗೂ ಅನೇಕ ಮುಸ್ಲಿಮರು ಹಿಂದೂಸ್ತಾನದ ಸನಾತನ ಪರಂಪರೆಯನ್ನು ಗೌರವಿಸುತ್ತಾರೆ.
ಅದೇ ರೀತಿ ವಂದೇಮಾತರಂ ಬರೆದಾಗಲೂ ಅದರಲ್ಲಿ ದುರ್ಗೆ, ಲಕ್ಷ್ಮೀ, ಸರಸ್ವತಿಯರ ಬಗ್ಗೆ ವರ್ಣನೆ ಮಾಡಲಾಗಿದೆ. ವಂದೇಮಾತರಂನಲ್ಲಿ ಒಟ್ಟು ಆರು ಚರಣಗಳಿದ್ದು, ಅದರಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬುದು ಕಾಂಗ್ರೆಸ್‌ನ ಅಭಿಪ್ರಾಯ. ಏಕೆಂದರೆ ಐದನೇ ಚರಣದಲ್ಲಿ ತ್ವಂಹಿದುರ್ಗಾದಶ-ಪ್ರಹರಣ-ಧಾರಿಣೀ ಕಮಲಾಕಮಲದಳ-ವಿಹಾರಿಣೀ ವಾಣೀ ವಿದ್ಯಾದಾಯಿನೀ ಎಂಬ ಸಾಲುಗಳಿವೆ. ಈ ಸಾಲುಗಳು ದುರ್ಗೆ, ಲಕ್ಷ್ಮೀ ಹಾಗೂ ಸರಸ್ವತಿಯನ್ನು ಭಾರತ ಮಾತೆಗೆ ಹೋಲಿಕೆ ಮಾಡುವ ಸಾಲುಗಳು. ಅನಾದಿಕಾಲದಿಂದಲೂ ಭರತಖಂಡದೊಂದಿಗೆ ಸನಾತನ ಧರ್ಮ ಬೆಸೆದುಕೊಂಡಿರುವುದರಿಂದ ಸಹಜವಾಗಿಯೇ ಇಂತಹ ವರ್ಣನೆ ಬಂದಿದೆ.
ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ಕಾಂಗ್ರೆಸ್‌ಗೆ ಮಾತ್ರ ಇದರಲ್ಲಿ ಅಸಮಾನತೆ ಕಂಡುಬಂತು. ಆದ್ದರಿಂದ ೧೯೩೭ರ ಅಕ್ಟೋಬರ್‌ನಲ್ಲಿ ಕೊಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂಬ ನಿರ್ಣಯ ಅಂಗೀಕರಿಸಲಾಯಿತು. ಕೆಲವು ಮುಸ್ಲಿಂ ಮುಖಂಡರು ಆಕ್ಷೇಪ ಮಾಡಿದರು ಎಂಬ ಕಾರಣಕ್ಕೆ ಮುಸ್ಲಿಂ ಒಲೈಕೆಗಾಗಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಈಗಿನ ಕಾಂಗ್ರೆಸ್ ಕೂಡ ಅದನ್ನೇ ಅನುಸರಿಸಿದೆ. ಏಕೆಂದರೆ ಮುಸ್ಲಿಮರೆಂದರೆ ಇವರಿಗೆ ಮತ ಬ್ಯಾಂಕ್. ಮುಸ್ಲಿಮರ ಕಾಲೋನಿ ಅಭಿವೃದ್ಧಿಪಡಿಸುವುದು, ಮುಸ್ಲಿಮರಿಗೆ ಶಿಕ್ಷಣ ನೀಡುವುದು, ಉದ್ಯೋಗ ನೀಡುವುದು, ಮುಸ್ಲಿಮ ರನ್ನುಬಡತನ ದಿಂದ ಮೇಲಕ್ಕೆತ್ತುವುದು, ಮುಸ್ಲಿಂ ಮಹಿಳೆಯರಿಗೆ ಸಮಾನತೆ ತರುವುದು, ಇವ್ಯಾವುದೂ ಕಾಂಗ್ರೆಸ್‌ಗೆ ಬೇಕಿಲ್ಲ. ಆದರೆ ವಂದೇಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡುವುದು ಎಂದರೆ ಇಸ್ಲಾಂನ ತತ್ವಕ್ಕೆ ವಿರುದ್ಧವಾದುದು ಎಂಬ ವಿಷ ಬೀಜವನ್ನು ಮುಸ್ಲಿಮರ ತಲೆಯಲ್ಲಿ ಬಿತ್ತಲಾಗಿದೆ. ಇದೇ ಕಾಂಗ್ರೆಸ್ ನಾಯಕರು ಗಣೇಶ ಮೆರವಣಿಗೆಯ ವಿಷಯ ಬಂದಾಗ ಮಾತ್ರ ಹಿಂದೂಗಳಿಗೆ ಸಾಮರಸ್ಯದ ಪ್ರವಚನ ಕೊಡುತ್ತಾರೆ.
ಸರ್ಕಾರವೆಂದರೆ ಪಕ್ಷವೇ?: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎಲ್ಲ ನಿರ್ಧಾರಗಳನ್ನು ವಿರೋಧಿಸುವ ರಾಜ್ಯ ಕಾಂಗ್ರೆಸ್, ವಂದೇಮಾತರಂ ವಿಚಾರದಲ್ಲೂ ಅದನ್ನೇ ಮಾಡಿದೆ. ಕೇಂದ್ರ ಸರ್ಕಾರದಿಂದ ವಂದೇಮಾತರಂ ಹಾಡುವ ಕುರಿತು ಮಾರ್ಗಸೂಚಿ ಹೊರಡಿಸಿದರೆ, ರಾಜ್ಯ ಸರ್ಕಾರದಿಂದ ಪ್ರತ್ಯೇಕವಾಗಿ ಎರಡು ಚರಣ ಹಾಡುವ ಕುರಿತು ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಯಾವ ಆಧಾರದಲ್ಲಿ ಹೊರಡಿಸಲಾಗಿದೆ ಎಂದು ಕೇಳಿದರೆ, ಕಾಂಗ್ರೆಸ್ ಪಕ್ಷದ ಹಳೆ ನಿರ್ಣಯವನ್ನು ಹೇಳುತ್ತಾರೆ.
ಅಂದರೆ ಇಡೀ ಕರ್ನಾಟಕ ಸರ್ಕಾರವನ್ನೇ ಕಾಂಗ್ರೆಸ್ ಪಕ್ಷದ ಕಚೇರಿಯಾಗಿ ಮಾಡಿಕೊಳ್ಳಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಆದೇಶವನ್ನು ಪಾಲಿಸಬೇಕಿದ್ದರೂ, ಪಕ್ಷದ ನಿರ್ಣಯವನ್ನು ಸರ್ಕಾರಿ ಆಡಳಿತದಲ್ಲಿ ಬೆರೆಸಿರುವ ಈ ನಡೆ ಸಂವಿಧಾನಕ್ಕೆ ಮಾಡುವ ಅಪಮಾನ. ಆದರೆ ಕಾಂಗ್ರೆಸ್‌ಗೆ ಇದು ಹೊಸ ಸಂಗತಿಯಲ್ಲ. ಪಕ್ಷಕ್ಕಾಗಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ತತ್ವಗಳನ್ನು ಮೂಲೆಗುಂಪು ಮಾಡುವ ಗುಣ ಕಾಂಗ್ರೆಸ್ ನಾಯಕರ ರಕ್ತದಲ್ಲೇ ಇದೆ.
” ವಿಧಾನಸಭೆ ಅಧಿವೇಶನದಲ್ಲಿ ನಾವು ವಂದೇಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿದ್ದೇವೆ. ಮುಂದೆಯೂ ಗೀತೆಗೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ. ಅಪಮಾನ ಮಾಡುವ ಸಣ್ಣ ಅವಕಾಶವನ್ನೂ ನೀಡುವುದಿಲ್ಲ.”
ರಾಷ್ಟ್ರೀಯ ಸಂಕೇತ ಜನರನ್ನು ಬೆಸೆಯಬೇಕು; ರಾಷ್ಟ್ರ ಪ್ರೇಮದ ಮಾಪಕವಾಗಬಾರದು
ಬಿ.ಕೆ.ಹರಿಪ್ರಸಾದ್, ಅಧ್ಯಕ್ಷರು, ಕೆಪಿಸಿಸಿ
ಸ್ವತಂತ್ರ ರಾಷ್ಟ್ರವೊಂದರ ಪ್ರಜೆ ತನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು ಎಷ್ಟು ಬಾರಿ ಸಾಬೀತುಪಡಿಸಬೇಕು? ಯಾವ ಹಾಡನ್ನು ಹಾಡುತ್ತಾನೆ, ಎಷ್ಟುಚರಣಗಳನ್ನು ಹಾಡುತ್ತಾನೆ, ಯಾವ ಘೋಷಣೆಯನ್ನು ಕೂಗುತ್ತಾನೆ ಎಂಬುದರ ಆಧಾರದ ಮೇಲೆ ನಾಗರಿಕನ ರಾಷ್ಟ್ರ ನಿಷ್ಠೆಯನ್ನು ಅಳೆಯಲು ಹೊರಟರೆ, ಅದು ದೇಶಪ್ರೇಮದ ವಿಸ್ತರಣೆಯಾಗುವುದಿಲ್ಲ; ಪ್ರಜಾಪ್ರಭುತ್ವದ ವ್ಯಾಪ್ತಿಯನ್ನೇ ಸಂಕುಚಿತಗೊಳಿಸುತ್ತದೆ.
ಭಾರತದ ರಾಷ್ಟ್ರವಾದ ಹುಟ್ಟಿದ್ದು ಇಂತಹ ಪರೀಕ್ಷೆಗಳಿಂದಲ್ಲ. ಪರಸ್ಪರ ಭಿನ್ನರಾಗಿದ್ದ ಕೋಟ್ಯಂತರ ಜನರು ತಮ್ಮ ಭಿನ್ನತೆಗಳನ್ನು ಉಳಿಸಿಕೊಂಡೇ ಒಂದು ಮಹತ್ತರ ಸ್ವಾತಂತ್ರ್ಯದ ಕನಸಿಗಾಗಿ ಒಟ್ಟಾಗಿ ನಿಂತಾಗ ಭಾರತೀಯ ರಾಷ್ಟ್ರವಾದ ರೂಪುಗೊಂಡಿದೆ. ಭಾರತದ ರಾಷ್ಟ್ರೀಯ ಸಂಕೇತಗಳ ಇತಿಹಾಸವನ್ನು ವರ್ತಮಾನದ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಓದುವುದು ಅಪಾಯಕಾರಿ. ‘ವಂದೇ ಮಾತರಂ’ ಕುರಿತಂತೆ ಈಗ ನಡೆಯುತ್ತಿರುವ ಚರ್ಚೆಯನ್ನೂ ಇದೇ ಹಿನ್ನೆಲೆಯಲ್ಲಿ ನೋಡಬೇಕಾಗಿದೆ.
‘ವಂದೇ ಮಾತರಂ’ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಮೂಲ್ಯ ಸ್ಮೃತಿ. ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಗೀತೆ ಸ್ವದೇಶಿ ಚಳವಳಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಹಲವು ಘಟ್ಟಗಳಲ್ಲಿ ಹೋರಾಟಗಾರರಿಗೆ ಸ್ಛೂರ್ತಿಯಾಯಿತು. ಅದರ ಈ ಐತಿಹಾಸಿಕ ಪಾತ್ರವನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ. ೧೮೮೨ರ ದಶಕದಲ್ಲಿ ‘ವಂದೇ ಮಾತರಂ’ನ ಪೂರ್ಣ ಪಠ್ಯ ಹಾಗೂ ಅದು ಸೇರಿಕೊಂಡಿದ್ದ ಆನಂದಮಠ ಕಾದಂಬರಿಯ ಕುರಿತು ಸ್ವಾತಂತ್ರ್ಯಪೂರ್ವ ಭಾರತದಲ್ಲಿಯೇ ಗಂಭೀರವಾಗಿ ಚರ್ಚೆಗೆ ಒಳಗಾಗಿದೆ.
ಇತಿಹಾಸದ ಕಾಲರೇಖೆಯೇ ಈ ಚರ್ಚೆಗೆ ಸ್ಪಷ್ಟ ಉತ್ತರ ನೀಡುತ್ತದೆ. ೧೮೮೨ರಲ್ಲಿ ಪ್ರಕಟವಾದ ಆನಂದಮಠದ ಭಾಗವಾಗಿದ್ದ ‘ವಂದೇ ಮಾತರಂ’ ಕಾಲಕ್ರಮೇಣ ಬಂಗಾಳದ ಸ್ವದೇಶಿ ಚಳವಳಿಯ ಸ್ಛೂರ್ತಿ ಗೀತೆಯಾಗಿ, ಬಳಿಕ ರಾಷ್ಟ್ರೀಯ ಹೋರಾಟದ ಘೋಷಣೆಯಾಗಿ ಬೆಳೆದಿತ್ತು.
೧೮೯೬ರ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅದನ್ನು ಹಾಡಿದರು. ನಂತರಗೀತೆಯ ಕೆಲವು ಭಾಗಗಳ ಕುರಿತು ಬಂಗಾಳದಲ್ಲಿಯೇ ಆಕ್ಷೇಪಗಳು ವ್ಯಕ್ತವಾದಾಗ, ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಜವಾಹರಲಾಲ್ ನೆಹರೂ ಅವರೊಂದಿಗೆ ಪತ್ರವ್ಯವಹಾರ ನಡೆಸಿ ವಿಷಯವನ್ನು ಗಂಭೀರ ಚರ್ಚೆಗೆ ತಂದರು.
೧೯೩೭ರಲ್ಲಿ ಟಾಗೋರ್ ಅವರ ಸಲಹೆ ಹಾಗೂ ಗಾಂಧಿ, ನೆಹರೂ, ಪಟೇಲ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ರಾಷ್ಟ್ರೀಯ ನಾಯಕರ ಸಮಾಲೋಚನೆಯ ಹಿನ್ನೆಲೆಯಲ್ಲಿ, ಎಲ್ಲರ ಭಾವನೆಗಳನ್ನೂ ಗೌರವಿಸುವ ದೃಷ್ಟಿಯಿಂದ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳ ಬಳಕೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒತ್ತು ನೀಡಿತು. ಇದು ಯಾರದೋ ಒತ್ತಡಕ್ಕೆ ಮಣಿದ ನಿರ್ಧಾರವಲ್ಲ; ರವೀಂದ್ರನಾಥ ಟಾಗೋರ್ ಅವರಂತಹ ಮಹಾನ್ ಚಿಂತಕರ ಸಲಹೆಯನ್ನು ಪರಿಗಣಿಸಿ, ರಾಷ್ಟ್ರೀಯ ಏಕತೆಯನ್ನು ಪ್ರಧಾನವಾಗಿಟ್ಟುಕೊಂಡು ಕಾಂಗ್ರೆಸ್ ಕೈಗೊಂಡ ಪ್ರಜ್ಞಾಪೂರ್ವಕ ನಿರ್ಧಾರ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
೧೯೩೭ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಜವಾಹರಲಾಲ್ ನೆಹರೂ, ಮಹಾತ್ಮ ಗಾಂಽ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಮೊದಲಾದವರೊಂದಿಗೆ ನಡೆದ ಸಮಾಲೋಚನೆಗಳ ಹಿನ್ನೆಲೆಯಲ್ಲಿ ‘ವಂದೇ ಮಾತರಂ’ ಹಾಡುವ ಸಂದರ್ಭಗಳಲ್ಲಿ ಮೊದಲ ಎರಡು ಚರಣಗಳನ್ನು ಬಳಸುವ ನಿಲುವು ರೂಪುಗೊಂಡಿತು.
ಇದು ಗೀತೆಯ ಮಹತ್ವವನ್ನು ಕಡಿಮೆ ಮಾಡುವ ನಿರ್ಣಯವಾಗಿರಲಿಲ್ಲ. ವಿಭಿನ್ನ ಧರ್ಮಗಳು ಮತ್ತು ನಂಬಿಕೆಗಳ ಜನರನ್ನು ಒಳಗೊಂಡ ರಾಷ್ಟ್ರೀಯ ಚಳವಳಿಯಲ್ಲಿ ಎಲ್ಲರ ಭಾವನೆಗಳನ್ನೂ ಗೌರವಿಸುವ ರಾಜಕೀಯ ವಿವೇಕವಾಗಿತ್ತು. ಈ ನಿರ್ಣಯವನ್ನು ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷ ತಮ್ಮ ಕಾರ್ಯಕ್ರಮದ ಮೊದಲು ಒಂದೇ ಮಾತರಂ ಹಾಡುವ ಪರಂಪರೆಯನ್ನು ಕೈ ಬಿಟ್ಟಿಲ್ಲ, ಬಿಡುವುದೂ ಇಲ್ಲ.
ರಾಷ್ಟ್ರೀಯ ಸಂಕೇತಗಳು ದೇಶದ ಜನರನ್ನು ಒಗ್ಗೂಡಿಸಬೇಕೇ ಹೊರತು, ಒಬ್ಬ ಭಾರತೀಯನನ್ನು ಮತ್ತೊಬ್ಬ ಭಾರತೀಯನ ವಿರುದ್ಧ ನಿಲ್ಲಿಸಬಾರದು. ಇದೇ ಕಾರಣಕ್ಕೆ ಈಗಿನ ಚರ್ಚೆ ಅತ್ಯಂತ ಕಳವಳ ಮೂಡಿಸುತ್ತದೆ. ೨೦೨೬ರಲ್ಲಿ ‘ವಂದೇ ಮಾತರಂ’ಗೆ ಸಂಬಂಧಿಸಿದ ಕಾನೂನು ಮತ್ತು ಅಧಿಕೃತ ಮಾರ್ಗಸೂಚಿಗಳಲ್ಲಿ ಬದಲಾವಣೆಗಳು ಬಂದಿವೆ. ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆಯ ರಕ್ಷಣೆಯನ್ನು ‘ವಂದೇ ಮಾತರಂ’ಗೂ ವಿಸ್ತರಿಸಲಾಗಿದೆ. ಮತ್ತೊಂದೆಡೆ ಅಧಿಕೃತ ಸಂದರ್ಭಗಳಲ್ಲಿ ಪೂರ್ಣ ಆರು ಚರಣಗಳ rendition ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎರಡು ಚರಣ ಹಾಡಿದವನು ಕಡಿಮೆ ದೇಶಭಕ್ತನೇ? ಆರು ಚರಣ ಹಾಡಿದವನು ಹೆಚ್ಚು ದೇಶಭಕ್ತನೇ? ಹಾಡನ್ನು ಗೌರವದಿಂದ ಆಲಿಸಿದವನ ರಾಷ್ಟ್ರನಿಷ್ಠೆ ಕಡಿಮೆಯಾಗುತ್ತದೆಯೇ? ರಾಷ್ಟ್ರಪ್ರೇಮವನ್ನು ಚರಣಗಳ ಸಂಖ್ಯೆಯಲ್ಲಿ ಅಳೆಯಬಹುದೇ?
ಈ ಪ್ರಶ್ನೆಗಳನ್ನು ಕೇಳುವುದು ‘ವಂದೇ ಮಾತರಂ’ಗೆ ವಿರೋಧವಲ್ಲ. ಬದಲಿಗೆ ಅದನ್ನು ಪಕ್ಷ ರಾಜಕಾರಣದ ಅಳತೆಗೋಲಾಗಿ ಕುಗ್ಗಿಸಬಾರದು ಎಂಬ ಕಾಳಜಿ. ಕಳೆದ ಒಂದು ದಶಕಗಳಿಂದ ದೇಶಪ್ರೇಮದ ಅಭಿವ್ಯಕ್ತಿಯನ್ನೇ ಏಕರೂಪಗೊಳಿಸುವ ವಿಚಿತ್ರ ಪ್ರವೃತ್ತಿ ಕಾಣುತ್ತಿದೆ. ನಾಗರಿಕನು ಯಾವ ಘೋಷಣೆ ಕೂಗುತ್ತಾನೆ, ಯಾವ ಆಹಾರ ಸೇವಿಸುತ್ತಾನೆ, ಯಾವ ಉಡುಗೆ ಧರಿಸುತ್ತಾನೆ, ಯಾವ ಇತಿಹಾಸವನ್ನು ಒಪ್ಪುತ್ತಾನೆ, ಯಾವ ಹಾಡನ್ನು ಹಾಡುತ್ತಾನೆ ಎಂಬ ಪ್ರಶ್ನೆಗಳ ಮೂಲಕ ಅವನ ರಾಷ್ಟ್ರೀಯ ನಿಷ್ಠೆಯನ್ನು ಅಳೆಯುವ ಪ್ರಯತ್ನ ನಡೆಯುತ್ತಿದೆ.
ಇದು ಆರೋಗ್ಯಕರ ರಾಷ್ಟ್ರವಾದದ ಲಕ್ಷಣವಲ್ಲ ಸ್ವಾತಂತ್ರ್ಯ ಚಳವಳಿಯ ವಿರುದ್ಧ ಇದ್ದ ಆರ್‌ಎಸ್‌ಎಸ್, ಕ್ವಿಟ್ ಇಂಡಿಯಾ ಹೋರಾಟದ ವಿರುದ್ಧ ಬ್ರಿಟಿಷರಿಗೆ ಸಹಾಯ ಮಾಡಿದ ಸಂಘಪರಿವಾರ, ದೇಶದ ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರಲಾಂಛನ ಹಾಗೂ ಸಂವಿಧಾನದ ವಿರುದ್ಧ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸಿರುವ ಆರ್‌ಎಸ್‌ಎಸ್ ಹಾಗೂ ಅದರ ರಾಜಕೀಯ ಘಟಕ ಬಿಜೆಪಿ ಇಂದು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯ ಪ್ರಾಮಾಣಪತ್ರ ನೀಡುತ್ತಿರುವುದು ದುರಂತ ಅಲ್ಲವೇ? ಆರ್ ಎಸ್‌ಎಸ್ ತಮ್ಮ ಶಾಖೆಗಳಲ್ಲಿ, ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಒಂದೇ ಒಂದು ಚರಣವೂ ಹಾಡದ ಸಂಘಟನೆ ಹಾಗೂ ಅದರ ರಾಜಕೀಯ ಪಕ್ಷ ಇಂದು ಸಂಪೂರ್ಣ ಚರಣ ಹಾಡಲು ಫತ್ವಾ ಹೊರಡಿಸುವುದು ದೇಶದ ವಿಪರ್ಯಾಸವಲ್ಲವೇ? ಸ್ವತಂತ್ರ ದೇಶದಲ್ಲಿ ಸರ್ಕಾರದ ನೀತಿಯನ್ನು ವಿರೋಧಿಸುವುದೂ ದೇಶದ್ರೋಹವಲ್ಲ. ಸರ್ಕಾರ ಮತ್ತು ರಾಷ್ಟ್ರ ಒಂದೇ ಅಲ್ಲ. ಹೀಗಾಗಿ ಸರ್ಕಾರವನ್ನು ಪ್ರಶ್ನಿಸುವವರನ್ನು ರಾಷ್ಟ್ರವನ್ನು ಪ್ರಶ್ನಿ ಸುವವನಂತೆ ಚಿತ್ರಿಸುವ ಕ್ಷಣದಿಂದಲೇ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ.
ದೇಶಕ್ಕೆ ಅನ್ನ ನೀಡುವ ರೈತ ಎಷ್ಟು ಚರಣ ಹಾಡುತ್ತಾನೆ ಎಂದು ಕೇಳಬೇಕೇ? ಸಿಯಾಚಿನ್‌ನ ಹಿಮದಲ್ಲಿ ಗಡಿ ಕಾಯುವ ಸೈನಿಕ ಯಾವ ಘೋಷಣೆ ಕೂಗುತ್ತಾನೆ ಎಂದು ಪರೀಕ್ಷಿಸಬೇಕೇ? ಪೌರಕಾರ್ಮಿಕ, ಕಾರ್ಮಿಕ, ಶಿಕ್ಷಕ, ವೈದ್ಯ ಇವರೆಲ್ಲ ತಮ್ಮ ಭಾರತೀಯತೆಯನ್ನು ಯಾರ ಮುಂದೆ ಸಾಬೀತುಪಡಿಸಬೇಕು?
” ದೇಶಪ್ರೇಮ ನಾಲಗೆಯಲ್ಲಿ ಮಾತ್ರ ಇರುವುದಿಲ್ಲ. ಅದು ದುಡಿಮೆಯಲ್ಲಿದೆ; ತ್ಯಾಗದಲ್ಲಿದೆ; ಸಹಬಾಳ್ವೆಯಲ್ಲಿದೆ; ಮತ್ತೊಬ್ಬ ನಾಗರಿಕನ ಘನತೆಯನ್ನು ಗೌರವಿಸುವುದಲ್ಲಿದೆ. ಜನರನ್ನು ವಿಭಜಿಸಿ ಗೀತೆಯನ್ನು ಆರಾಧಿಸುವುದಕ್ಕಿಂತ, ಜನರನ್ನು ಒಗ್ಗೂಡಿಸಿ ಅದರ ಆಶಯವನ್ನು ಬದುಕುವುದೇ ‘ವಂದೇ ಮಾತರಂ’ಗೆ ಸಲ್ಲಿಸಬಹುದಾದ ಅತ್ಯಂತ ಅರ್ಥಪೂರ್ಣ ಗೌರವ.”




