Mysore
20
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಅಸತ್ಯ ಎಂಬುದು ಕೆಟ್ಟ ವ್ರಣದ ಹಾಗೆ

ನಲವತ್ತು ವರುಷಗಳ ಕೆಳಗೆ ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಈಗ ಇರುವುದಕ್ಕಿಂತ ಬಹಳ ಕಡಿಮೆಯಾಗಿತ್ತು. ತಾವು ಮದುವೆಯಾದವರಾಗಿದ್ದರೂ, ಬ್ರಹ್ಮಚಾರಿಗಳೆಂದು ನಟಿಸುವುದು ಅವರ ಠೀವಿಯಾಗಿತ್ತು. ಇಂಗ್ಲೆಂಡಿನಲ್ಲಿದ್ದ ಭಾರತದ ವಿದ್ಯಾರ್ಥಿಗಳಿಗೆ ತಾವು ವಿವಾಹಿತರೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿತ್ತು. ಅವರು ಹೀಗೆ ಮರೆಮಾಚಲು ಮತ್ತೊಂದು ಕಾರಣವೂ ಇತ್ತು. ಅವರಿಗೆ ಮದುವೆಯಾಗಿರುವುದು ಇಂಗ್ಲಿಷರಿಗೆಗೊತ್ತಾದರೆ ಈ ಯುವಕರು, ತಾವು ಇಳಿದುಕೊಂಡಿದ್ ಮನೆಯ ಹೆಣ್ಣು ಮಕ್ಕಳುಗಳೊಂದಿಗೆ ಚಕ್ಕಂದವಾಡಲು ಅಥವಾ ಅವರ ಜತೆ ತಿರುಗಾಟಕ್ಕೆ ಹೋಗಲು ಅಸಾಧ್ಯವಾಗುತ್ತಿತ್ತು. ಆ ಅಮೋದ ಪ್ರಮೋದಗಳೇನೋ ಬಹುಮಟ್ಟಿಗೆ ನಿರ್ದೋಷ ವಾಗಿರುತ್ತಿದ್ದವು.

ಹುಡುಗಿಯರ ತಂದೆ ತಾಯಿಯರೇ ಅದನ್ನು ಪ್ರೋತ್ಸಾಹಿಸುತ್ತಲೂ ಇದ್ದರು. ಇಂಗ್ಲೆಂಡಿನಲ್ಲಿ ಪ್ರತಿಯೊಬ್ಬ ಯುವಕನೂ ತನ್ನ ಜೀವನದ ಸಂಗಾತಿಯನ್ನು ತಾನೇ ಆರಿಸಿಕೊಳ್ಳಬೇಕಾಗಿರುವುದರಿಂದ, ಹೆಣ್ಣು ಗಂಡುಗಳ ಈ ಬಗೆಯ ಗೆಳೆತನದ ಮಿಲನ ಅಲ್ಲಿ ಅವಶ್ಯಕವೂ ಇರಬಹುದು. ಭಾರತದ ಯುವಕರು ಇಂಗ್ಲೆಂಡಿಗೆ ಬಂದಕೂಡಲೇ, ಬ್ರಿಟಿಷ್ ಯುವಕರಿಗೆ ಸ್ವಾಭಾವಿಕವಾಗಿರುವ ಇಂತಹ ಸಂಪರ್ಕಗಳಲ್ಲಿ ತೊಡಗಿದರೆ, ಅದರ ಪರಿಣಾಮ, ದೊಡ್ಡ ಆಘಾತವಾಗುತ್ತದೆ. ಅದು ಅನುಭವಕ್ಕೂ ಬಂದಿದೆ. ನಮ್ಮ ಯುವಕರು ಈ ಮೋಹಪಾಶಕ್ಕೆ ಸಿಕ್ಕಿಬಿದ್ದು, ಇಂಗ್ಲಿಷ್ ಯುವಕರಿಗೆ ಅದು ನಿರ್ದೋಷವಾಗಿದ್ದರೂ, ತಮಗೆ ಅನಿಷ್ಟವಾದ ಅಸತ್ಯ ಜೀವನವನ್ನು ನಡೆಸುತ್ತಿದ್ದುದನ್ನು ನಾನು ನೋಡಿದೆ. ಈ ಸಾಂಕ್ರಾಮಿಕ ನನಗೂ ಹರಡಿತು.

ನನಗೆ ಮದುವೆಯಾಗಿ ಒಂದು ಮಗುವಿದ್ದರೂ ಸಹ, ನಾನು ಬ್ರಹ್ಮಚಾರಿ ಎಂದು ಹೇಳಿಕೊಳ್ಳಲು ಹಿಂದೆಗೆಯಲಿಲ್ಲ. ಆದರೆ ಹೀಗೆ ಮರೆಮಾಚಿದುದರಿಂದ ನನಗೆ ಸುಖವೇನೂ ಉಂಟಾಗಲಿಲ್ಲ. ನನ್ನ ಮುಖಹೇಡಿತನವೂ ಮೌನ ಸ್ವಭಾವವೂ ನನ್ನನ್ನು ಹೆಚ್ಚು ಅಪಾಯಗಳಿಂದ ರಕ್ಷಿಸಿದವು. ನಾನು ಸರಿಯಾಗಿ ಮಾತಾಡದಿದ್ದರೆ, ನನ್ನೊಂದಿಗೆ ಸಂಭಾಷಣೆ ನಡೆಸಲು ಅಥವಾ ನನ್ನ ಜತೆಗೆ ತಿರುಗಾಡಲು ಯೋಗ್ಯನೆಂದು ಯಾವ ಹುಡುಗಿಯೂ ಭಾವಿಸಲಾರಳು. ನನ್ನ ಹೇಡಿತನ ನನ್ನ ಸಂಕೋಚ ಸ್ವಭಾವಕ್ಕೆ ಸಮಾನವಾಗಿತ್ತು. ನಾನು ಉಳಿದುಕೊಂಡಿದ್ದ ವೆಂಟನಾ ಭಾಗದ ಕುಟುಂಬಗಳಲ್ಲಿ ಯಜಮಾನಿಯ ಮಗಳು ಅತಿಥಿಯನ್ನು ಸಂಚಾರಕ್ಕೆ ಕರೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಒಂದು ದಿನ ನನ್ನ ಯಜಮಾನಿಯ ಮಗಳು ನನ್ನನ್ನು ವೆಂಟನಾ ಸುತ್ತಲಿನ ಸುಂದರವಾದ ಗುಡ್ಡಗಳಿಗೆ ಕರೆದುಕೊಂಡು ಹೊರಟಳು. ನನ್ನ ನಡಿಗೆ ನಿಧಾನವಲ್ಲವಾದರೂ, ಆಕೆ ಇನ್ನೂ ವೇಗವಾಗಿ ನಡೆಯುತ್ತ ದಾರಿಯುದ್ದಕ್ಕೂ ಮಾತನಾಡುತ್ತಾ ನನ್ನನ್ನುಎಳೆದುಕೊಂಡು ಹೋದಳು. ನಾನು ಅವಳ ಮಾತುಗಳಿಗೆ ಒಂದೊಂದು ಸಲ ಮೆತ್ತಗೆ “ಹೌದು” ಎಂಬುದಾಗಿ ಅಥವಾ “ಇಲ್ಲ” ಎಂಬುದಾಗಿ ಉತ್ತರ ಕೊಡುತ್ತಿದ್ದೆ. ನಾನು ಅತಿ ಹೆಚ್ಚಾಗಿ ಮಾತನಾಡುತ್ತಿದ್ದುದು ಎಂದರೆ “ಹೌದು, ಎಷ್ಟು ಸೊಗಸಾಗಿದೆ”ಎಂದು. ಆಕೆ ಹಕ್ಕಿಯಂತೆ ಹಾರಿಹೋಗುತ್ತಿದ್ದಳು. ನಾನಾದರೋ ಯಾವಾಗ ಮನೆಯನ್ನು ಹಿಂದಕ್ಕೆ ಸೇರುತ್ತೇನೋ ಎಂದು ಚಿಂತಿಸುತ್ತಾ ನಡೆಯುತ್ತಿದ್ದೆ. ನಾವು ಗುಡ್ಡದ ತುದಿ ಮುಟ್ಟಿದೆವು. ಅಲ್ಲಿಂದ ಕೆಳಗಿಳಿಯುವುದು ಹೇಗೆ? ಎತ್ತರವಾದ ಬೂಟುಗಳನ್ನು ಧರಿಸಿದ್ದರೂ ಆ ಇಪ್ಪತ್ತೈದು ವರುಷದ ತರುಣಿ, ಗುಡ್ಡದಿಂದ ಕೆಳಗಡೆಗೆ ಅಂಬಿನ ವೇಗದಿಂದ ಹೊರಟಳು.

ನಾನು ಇನ್ನೂ ಕೆಳಗಿಳಿಯಲು ಒದ್ದಾಡುತ್ತಿದ್ದೆ. ನನಗೆನಾಚಿಕೆಯಾಗಿತ್ತು. ಅವಳು ಗುಡ್ಡದ ಬುಡದಲ್ಲಿ ನಗುತ್ತಾ ನಿಂತುಕೊಂಡು ನನಗೆ ಧೈರ್ಯ ಕೊಡುತ್ತಿದ್ದಳು. ಮೇಲಕ್ಕೆ ಬಂದು ಕೈ ಹಿಡಿದುಕೊಂಡು ‘ನಿಮ್ಮನ್ನು ಕೆಳಕ್ಕೆ ಇಳಿಸಲೇ’ ಎನ್ನುತ್ತಿದ್ದಳು. ನಾನು ಹೇಗೆ ಅಂತಹ ಹೇಡಿಯಾದೆನು? ಹಾಗೂ ಹೀಗೂ ಇಳಿದೆ. ಮಧ್ಯೆ ಮಧ್ಯೆ ತೆವಳು ತ್ತಲೂ ಅಂತೂ ಕೊನೆಗೆ ನೆಲವನ್ನು ಮುಟ್ಟಿದೆ. ಅವಳು “ಶಹಭಾಸ್” ಎಂದು ಗಟ್ಟಿಯಾಗಿ ನಕ್ಕು, ನನ್ನ ಲಜ್ಜೆಯನ್ನು ಇನ್ನೂ ಅಧಿಕಗೊಳಿಸಿ ದಳು. ಅವಳಿಗೆ ಆ ಅಧಿಕಾರವಿತ್ತು.

ಆದರೆ ನಾನು ಹಾಗೆ ಎಲ್ಲೆಡೆಗಳಲ್ಲಿಯೂ ಕಳಂಕವಿಲ್ಲದೆ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ನಾನು ಅಸತ್ಯ ರೂಪದ ಪ್ರಣದಿಂದ ಪಾರಾಗಬೇಕೆಂಬುದು ದೇವರ ಇಷ್ಟವಾಗಿತ್ತು. ಎಂಟನಾ ಹಾಗೆಯೇ ಇದ್ದ ಬ್ರೆಟನ್ ಎಂಬ ಮತ್ತೊಂದು, ಒಳ್ಳೆಯ ವಾಯುಗುಣವಿದ್ದ ಸಮುದ್ರ ತೀರ ಪ್ರದೇಶಕ್ಕೆ ನಾನು ಹೋದೆ. ಇದು ನಾನು ವೆಂಟನಾಗೆ ಹೋಗುವುದಕ್ಕಿಂತ ಮುಂಚಿತವಾಗಿ, ಅಲ್ಲಿನ ಹೋಟೆಲಿನಲ್ಲಿ ತಕ್ಕಮಟ್ಟಿಗೆ ಅನುಕೂಲ ಸ್ಥಿತಿಯಲ್ಲಿದ್ದ ಒಬ್ಬ ವೃದ್ಧ ವಿಧವೆಯ ಪರಿಚಯ, ನನಗೆ ಆಯಿತು. ಅದು ನಾನು ಇಂಗ್ಲೆಂಡಿಗೆ ಹೋದ ಮೊದಲ ವರ್ಷ. ಹೋಟೆಲಿನಲ್ಲಿ ದೊರೆಯುವ ಆಹಾರ ಪದಾರ್ಥಗಳ ಪಟ್ಟಿ, ಫ್ರೆಂಚ್ ಭಾಷೆಯಲ್ಲಿತ್ತು. ಅದು ನನಗೆ ಅರ್ಥವಾಗಲಿಲ್ಲ. ವೃದ್ಧ ಸ್ತ್ರೀ ಕುಳಿತಿದ್ದ ಮೇಜಿನ ಮುಂದೆಯೇ ನಾನೂ ಕುಳಿತಿದ್ದೆ.

ನಾನು ಹೊಸಬ. ಸ್ವಲ್ಪ ಗಾಬರಿಗೊಂಡಿದ್ದೆನೆಂಬುದು ಆಕೆಗೆ ಗೊತ್ತಾಗಿ, ಕೂಡಲೇ ಆಕೆ ನನ್ನ ಸಹಾಯಕ್ಕೆ ಬಂದಳು. ಕನಿಕರದಿಂದ, ನೀವು ಇಲ್ಲಿಗೆ ಹೊಸಬರಾಗಿ ಕಾಣುತ್ತೀರಿ. ನೀವು ಏಕೆ ಇನ್ನೂ ಯಾವ ತಿಂಡಿಯನ್ನೂ ತರಿಸಿಲ್ಲ?” ಎಂದು ಕೇಳಿದಳು. ನಾನು ತಿಂಡಿಯ ಪಟ್ಟಿಯನ್ನು ನಿಧಾನವಾಗಿ ಓದಿಕೊಳ್ಳುತ್ತಾ ಯಾವ ಯಾವ ತಿಂಡಿಯಲ್ಲಿ ಯಾವ ಯಾವ ಪದಾರ್ಥ ಸೇರಿದೆ ಎಂಬುದನ್ನು ಸೇವಕ ನಿಂದ ವಿಚಾರಿಸುವ ಪ್ರಯತ್ನದಲ್ಲಿದ್ದಾಗಲೇ ಆ ಸದ್ಗೃ ಹಿಣಿ ಮೇಲಿನಂತೆ ನನ್ನನ್ನು ವಿಚಾರಿಸಿದಳು. ನಾನು ಆಕೆಗೆ ಧನ್ಯವಾದವನ್ನು ಅರ್ಪಿಸಿ, “ನಾನು ಶಾಕಾಹಾರಿ. ಫ್ರೆಂಚ್ ಭಾಷೆ ನನಗೆ ಅರ್ಥವಾಗಲಿಲ್ಲ. ಯಾವ ತಿಂಡಿ ನನಗೆ ಸರಿ ಎಂಬುದನ್ನು ಕುರಿತು ವಿಚಾರಿಸುವುದರಲ್ಲಿದ್ದೆ” ಎಂದೆ. ಆಕೆ, “ನಾನು ನಿಮಗೆ ಸಹಾಯ ಮಾಡುತ್ತೇನೆ. ಪಟ್ಟಿಯನ್ನು ನಿಮಗೆ ವಿವರಿಸಿ ನೀವು ಏನನ್ನು ತಿನ್ನಬಹುದೆಂಬುದನ್ನು ಹೇಳುತ್ತೇನೆ” ಎಂದಳು. ನಾನು ಆಕೆಯ ಸಹಾಯವನ್ನು ಕೃತಜ್ಞತೆಯಿಂದ ಸ್ವೀಕರಿಸಿದೆ. ಹೀಗೆ ನಮ್ಮ ಸ್ನೇಹ ಪ್ರಾರಂಭವಾಯಿತು. ನನ್ನ ಮತ್ತು ಆಕೆಯ ಈ ಸ್ನೇಹ, ನಾನು ಇಂಗ್ಲೆಂಡಿನಲ್ಲಿರುವವರೆಗೆ ಅಲ್ಲದೆ ಅನಂತರ ಬಹುಕಾಲ ಉಳಿದುಕೊಂಡಿತು. ಆಕೆ ನನಗೆ ತನ್ನ ಲಂಡನ್ ನಿವಾಸದ ವಿಳಾಸವನ್ನು ಕೊಟ್ಟು, ಪ್ರತಿ ಭಾನುವಾರವೂ ನನ್ನನ್ನು ತನ್ನ ಮನೆಗೆ ಭೋಜನಕ್ಕೆ ಆಹ್ವಾನಿಸುತ್ತಿದ್ದಳು. ಅಲ್ಲದೆವಿಶೇಷ ಸಂದರ್ಭಗಳು ಒದಗಿದಾಗಲೆಲ್ಲಾ, ಆಕೆ ನನ್ನನ್ನು ಆಹ್ವಾನಿಸುತ್ತಿದ್ದಳು. ತರುಣಿಯರಿಗೆ ನನ್ನ ಪರಿಚಯ ಮಾಡಿಸಿ ನಾನು ಅವರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟು ನನ್ನ ನಾಚಿಕೆ ಇಲ್ಲದಂತಾಗಲು ಸಹಾಯ ಮಾಡಿದಳು. ಆಕೆ ತನ್ನೊಡನೆ ವಾಸಿಸುತ್ತಿದ್ದ ಯುವತಿಯೊಬ್ಬಳನ್ನು ಇತರರಿಗಿಂತ ಹೆಚ್ಚಾಗಿ ನನ್ನೊಂದಿಗೆ ಮಾತುಕತೆಗೆ ಸೇರುವಂತೆ ಯೋಜಿಸಿದ್ದಳು. ಅನೇಕ ವೇಳೆ ನಮ್ಮಿಬ್ಬರನ್ನೇ ಬಿಟ್ಟು ಹೊರಟು ಹೋಗುತ್ತಿದ್ದಳು. ನನಗೆ ಇದೆಲ್ಲ ಮೊದಲು ಬಹಳ ಕಷ್ಟವಾಗಿ ತೋರಿತು. ಸಂಭಾಷಣೆಯನ್ನು ಮೊದಲು ಪ್ರಾರಂಭಿಸುವುದಕ್ಕಾಗಲಿ ಸರಸ ವಿನೋದಗಳಲ್ಲಿ ತೊಡಗುವುದಕ್ಕಾಗಲಿ ನನಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವಳೇ ನನಗೆ ದಾರಿ ತೋರಿಸಿದಳು. ಕಾಲಕ್ರಮದಲ್ಲಿ ಅವುಗಳನ್ನು ನಾನು ಕಲಿತೆ. ಅಲ್ಲಿಂದ ಮುಂದೆ ಭಾನುವಾರ ಯಾವಾಗ ಬಂದೀತೆಂದುಎದುರು ನೋಡುವುದನ್ನು ಮೊದಲು ಮಾಡಿದೆ. ಆ ಯುವತಿಯೊಡನೆ ಮಾತುಕತೆಗಳಲ್ಲಿಯೂ ನನಗೆ ಉತ್ಸುಕತೆಯುಂಟಾಯಿತು.

ಆ ವೃದ್ಧಳು ದಿನದಿನಕ್ಕೆ ತನ್ನ ಬಲೆಯನ್ನು ವಿಶಾಲವಾಗಿ ಬೀಸತೊಡಗಿದಳು. ನಾವಿಬ್ಬರೂ ಸೇರುವುದು ಆಕೆಗೆ ಇಷ್ಟವಾಗಿತ್ತು. ನಮ್ಮಿಬ್ಬರ ವಿಷಯದಲ್ಲಿ ಆಕೆ ಯಾವುದಾದರೂ ಯೋಜನೆಯನ್ನು ಮಾಡಿಕೊಂಡಿದ್ದಳೋ ಏನೋ, ನಾನು ಒಳ್ಳೆಯ ಗೊಂದಲಕ್ಕೆ ಸಿಕ್ಕಿಕೊಂಡಿದ್ದೆ. “ನನಗೆ ಮದುವೆಯಾಗಿದೆ” ಎಂದು ಈ ಸದ್ಗೃಹಿಣಿಗೆ ನಾನು ಮೊದಲೇ ಹೇಳಿಬಿಟ್ಟಿದ್ದರೆ ಎಷ್ಟು ಚೆನ್ನಾಗಿದ್ದಿತು. ಆಗ ಈಕೆ ನಮ್ಮಿಬ್ಬರ ವಿವಾಹವನ್ನು ಕುರಿತು ಯೋಚಿಸುತ್ತಲೇ ಇರಲಿಲ್ಲ. ಆದರೂ ತಿದ್ದಿಕೊಳ್ಳುವುದಕ್ಕೆ ಮೀರಿ ಹೋಗಿಲ್ಲ. ಸತ್ಯವನ್ನು ಹೇಳಿಬಿಟ್ಟರೆ ಇನ್ನೂ ಹೆಚ್ಚು, ಈಗಲೂ ಕಾಲ ಸಂಕಟದಿಂದ ನಾನು ಪಾರಾಗಬಹುದು ಎಂದುಕೊಂಡೆ. ಹೀಗೆ ಯೋಚಿಸಿ ಈ ಮುಂದಿನ ಅಭಿಪ್ರಾಯ ಬರುವಂತಹ ಒಂದು ಪತ್ರವನ್ನು ಆಕೆಗೆ ಬರೆದೆನು.

“ಬ್ರಿಟನ್‌ನಲ್ಲಿ ನಮ್ಮಿಬ್ಬರ ಪರಿಚಯವಾದಂದಿನಿಂದ ನೀವು ನನ್ನಲ್ಲಿ ಅಂತಃಕರಣವಿಟ್ಟಿದ್ದೀರಿ. ತಾಯಿ, ಮಗನನ್ನು ರಕ್ಷಿಸುವಂತೆ ನೀವು ನನ್ನನ್ನು ಕಂಡಿದ್ದೀರಿ. ನನ್ನ ಮದುವೆಯಾಗಬೇಕು ಎಂದೂ ನಿಮಗೆ ಯೋಚನೆ. ಈ ಉದ್ದೇಶದಿಂದ ನೀವು ನನಗೆ ಯುವತಿಯರ ಪರಿಚಯ ಮಾಡಿಸುತ್ತಿದ್ದೀರಿ. ಇದು ಮುಂದುವರಿಯುವುದಕ್ಕೆ ಮುಂಚೆ ನಿಮ್ಮ ಈ ಪ್ರೇಮಕ್ಕೆ ನಾನು ಅನರ್ಹನಾಗಿದ್ದೇನೆಂದು ಹೇಳಿಕೊಳ್ಳಬೇಕು. ನಿಮ್ಮಲ್ಲಿ ಬಂದು ಹೋಗುವುದನ್ನು ನಾನುಪ್ರಾರಂಭಿಸಿದಾಗಲೇ, ನನಗೆ ಮದುವೆಯಾಗಿದೆ ಎಂಬುದನ್ನು ನಾನು ನಿಮಗೆ ತಿಳಿಸಬೇಕಾಗಿತ್ತು. ಇಂಗ್ಲೆಂಡಿಗೆ ಬರುವ ಭಾರತದ ವಿದ್ಯಾರ್ಥಿಗಳು ತಮಗೆ ವಿವಾಹವಾಗಿರುವ ವಿಷಯವನ್ನು ಮುಚ್ಚಿಡುವರೆಂಬುದುನನಗೆ ಗೊತ್ತು. ನಾನೂ ಹಾಗೆಯೇ ಮಾಡಿದೆ. ಹಾಗೆ ನಾನು ಮಾಡಬಾರದಾಗಿತ್ತು ಎಂಬುದು ಈಗ ಗೊತ್ತಾಗುತ್ತಿದೆ.

ನಾನು ಇನ್ನೂ ಹುಡುಗನಾಗಿರುವಾಗಲೇ ನನ್ನ ಮದುವೆಯಾಯಿತು. ಈಗ ನಾನು ಒಂದು ಮಗುವಿನ ತಂದೆ ಎಂಬುದನ್ನೂ ಹೇಳಬೇಕಾಗಿದೆ. ಈ ವಿಷಯವನ್ನು ಇಷ್ಟು ದಿನವೂ ನಿಮಗೆ ತಿಳಿಸದೆ ಇದ್ದುದಕ್ಕೆ ನನಗೆ ಬಹಳ ಪಶ್ಚಾತ್ತಾಪವಾಗಿದೆ. ಆದರೆ ಈಗ ಸತ್ಯವನ್ನು ಹೇಳುವ ಧೈರ್ಯವನ್ನು ದೇವರು ನನಗೆ ಕೊಟ್ಟುದಕ್ಕೆ ನನಗೆ ಆನಂದವಾಗಿದೆ. ನೀವು ನನ್ನನ್ನು ಕ್ಷಮಿಸುವಿರಾ? ನೀವು ನನಗೆ ಪರಿಚಯ ಮಾಡಿಸಿಕೊಟ್ಟ ಆ ಯುವತಿಯೊಂದಿಗೆ ನಾನು ಯಾವ ಅನುಚಿತ ವ್ಯವಹಾರವನ್ನೂ ಮಾಡಿಲ್ಲವೆಂದು ನಿಮಗೆ ಆಶ್ವಾಸನೆ ಕೊಡುತ್ತೇನೆ. ನನ್ನ ಮಿತಿ ನನಗೆ ಗೊತ್ತಿದೆ. ಆದರೆ ನನಗೆ ಮದುವೆಯಾಗಿದ್ದುದು ನಿಮಗೆ ತಿಳಿಯದಿದ್ದುದರಿಂದ, ನಾವಿಬ್ಬರೂ ವಿವಾಹವಾಗಬೇಕೆಂದು ನೀವು ಸ್ವಾಭಾವಿಕವಾಗಿ ಬಯಸಿದಿರಿ. ಈ ಬಗೆಯ ಸಂಬಂಧ ಇದಕ್ಕಿಂತ ಮುಂದೆ ಹೋಗದಿರುವುದಕ್ಕಾಗಿ, ನಾನು ನಿಮ್ಮೊಂದಿಗೆ ಸತ್ಯವನ್ನು ಹೇಳಬೇಕಾಗಿದೆ.”

“ಈ ಪತ್ರ ನಿಮಗೆ ತಲುಪಿದ ನಂತರ ನಾನು ನಿಮ್ಮಲ್ಲಿ ಬಂದು ಹೋಗುವುದಕ್ಕೆ ಯೋಗ್ಯನಲ್ಲವೆಂದು ನೀವು ಭಾವಿಸಿದರೆ, ನಾನು ಅದನ್ನು ತಪ್ಪು ತಿಳಿದುಕೊಳ್ಳುವುದಿಲ್ಲ.ನಿಮ್ಮ ಮಮತೆ ಮತ್ತು ಆದರದಿಂದ ನನ್ನನ್ನು ಸರ್ವಕಾಲವೂನಿಮಗೆ ಋಣಿಯನ್ನಾಗಿ ಮಾಡಿದ್ದೀರಿ. ಇಷ್ಟಾದ ಮೇಲೂ ನೀವು ನನ್ನನ್ನು ನಿಮ್ಮಿಂದ ದೂರ ಮಾಡದೆ, ನಿಮ್ಮಲ್ಲಿ ಬಂದು ಸೇರಲು ಯೋಗ್ಯನೆಂದು ಭಾವಿಸುವುದಾದರೆ, ಅದು ನಿಮ್ಮ ವಾತ್ಸಲ್ಯದ ಇನ್ನೂ ಹೆಚ್ಚಿನ ಕುರುಹು ಎಂದು ಸುಖಿಯಾಗುವೆನಲ್ಲದೆ, ಅದಕ್ಕೆ ಅರ್ಹನಾಗಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ.” ಇಂತಹ ಪತ್ರವನ್ನು ಒಂದೇ ಏಟಿಗೆ ನಾನು ಬರೆದು ಬಿಟ್ಟೆನೆಂದು ವಾಚಕರು ಭಾವಿಸದಿರಲಿ. ಆ ಯೋಗ್ಯತೆ ನನಗೆ ಇರಲಿಲ್ಲ. ನಾನು ಅದನ್ನು ಬರೆದು ಬರೆದು ಅನೇಕ ಸಲ ತಿದ್ದಿರಬೇಕು. ಅದು ನನ್ನನ್ನು ಮುಸುಕಿದ್ದ ಒಂದು ದೊಡ್ಡ ಹೊರೆ ಕಡಿಮೆಯಾಗುವಂತೆ ಮಾಡಿತು. ಮುಂದಿನ ಟಪಾಲಿನಲ್ಲಿಯೇ ಆಕೆಯ ಉತ್ತರ ಬಂತು. ಅದು ಈ ಕೆಳಗಿನ ಅಭಿಪ್ರಾಯವನ್ನೂ ಒಳಗೊಂಡಿತ್ತು.

“ನಿಮ್ಮ ಹೃದಯವನ್ನು ಬಿಚ್ಚಿ ಬರೆದ ಪತ್ರ ಬಂದಿದೆ. ನಮ್ಮಿಬ್ಬರಿಗೂ ಸಂತೋಷವಾಯಿತು. ಚೆನ್ನಾಗಿ ನಕ್ಕೆವು. ನೀವು ಅಸತ್ಯನಾಗಿ ನಡೆದುಕೊಂಡೆ ಎನ್ನುವ ತಪ್ಪು ಕ್ಷಮಾರ್ಹವಾದುದು. ವಸ್ತುಸ್ಥಿತಿಯನ್ನು ನೀವು ನಮಗೆ ತಿಳಿಯಪಡಿಸಿದ್ದು ಒಳ್ಳೆಯದೇ ಆಯಿತು. ನಮ್ಮ ಆಹ್ವಾನವಂತೂ ನಿಮಗೆ ಇದ್ದೇಇದೆ. ಬರುವ ಭಾನುವಾರ ನಿಮ್ಮನ್ನು ತಪ್ಪದೇ ನಿರೀಕ್ಷಿಸು ತ್ತೇವೆ. ಮತ್ತು ನಿಮ್ಮ ಬಾಲ್ಯ ವಿವಾಹದ ಕಥೆಯನ್ನು ಕೇಳುವ ವಿನೋದವನ್ನು ಎದುರು ನೋಡುತ್ತಿದ್ದೇವೆ. ಈ ಘಟನೆ ಯಿಂದ ನಮ್ಮ ನಿಮ್ಮ ಮೈತ್ರಿಗೆ ಸ್ವಲ್ಪವೂ ಕುಂದುಂಟಾಗಿಲ್ಲವೆಂದು ಹೇಳುತ್ತೇನೆ.” ನನ್ನ ಅಂತರಂಗದಲ್ಲಿದ್ದ ಅಸತ್ಯವೆಂಬ ವ್ರಣದಿಂದ ನಾನು ಹೀಗೆ ಮುಕ್ತನಾದೆನು. ಅಲ್ಲಿಂದ ಮುಂದೆ ಅವಶ್ಯಕವಾದೆಡೆಗಳಲ್ಲೆಲ್ಲ ನನ್ನ ವಿವಾಹ ಮುಂತಾದ ವಿಷಯಗಳನ್ನು ಕುರಿತು ನಿಸ್ಸಂಕೋಚವಾಗಿ ಮಾತನಾಡಲು ನಾನು ಎಂದಿಗೂ ಹಿಂದೆಗೆಯುತ್ತಿರಲಿಲ್ಲ.

Tags:
error: Content is protected !!