Mysore
20
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಮಳೆ ಕೊರತೆ; ಸಂಕಷ್ಟದಲ್ಲಿ ಅವಳಿ ತಾಲ್ಲೂಕುಗಳ ರೈತರು

ಭೇರ್ಯ ಮಹೇಶ್

ಮಳೆ ಅಭಾವದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ, ರೈತರಿಗೆ ಸಾಕಷ್ಟು ನಷ್ಟ

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ, ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಯಲ್ಲಿ ಕೊರತೆ ಉಂಟಾಗಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೆ.ಆರ್.ನಗರ ತಾಲ್ಲೂಕಿನಲ್ಲಿ ಶೇ.೭೮ ಮತ್ತು ಸಾಲಿಗ್ರಾಮ ತಾಲ್ಲೂಕಿನಲ್ಲಿ ಶೇ.೬೧ ಮಳೆ ಕೊರತೆಯಿಂದಾಗಿ ಅವಳಿ ತಾಲ್ಲೂಕುಗಳಲ್ಲಿ ೨೩,೬೫೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾ ಗಿದ್ದು, ಸರ್ಕಾರಕ್ಕೆ ತಾಲ್ಲೂಕು ಆಡಳಿತದ ಮೂಲಕ ಬೆಳೆ ನಷ್ಟ ಸಮೀಕ್ಷೆಯ ವರದಿ ಸಲ್ಲಿಸಲಾಗಿದೆ.

ಅವಳಿ ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿವೆ. ಮಳೆ ಆಶ್ರಿತ ಪ್ರದೇಶದಲ್ಲಿ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ್ದ ಬೆಳೆಗಳು ಈಗ ಮಳೆ ಅಭಾವದಿಂದ ಕಣ್ಣೆದುರೇ ಒಣಗುತ್ತಿವೆ. ಹೀಗಾಗಿ ರೈತರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ.

ಯಾವ ಬೆಳೆಗಳಿಗೆ ಹಾನಿ?: ಕೆ.ಆರ್.ನಗರ ತಾಲ್ಲೂಕಿನ ಮಳೆ ಆಶ್ರಿತ ಪ್ರದೇಶದಲ್ಲಿ ಅಂದಾಜು ೧೦,೭೩೨ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಪ್ರಮುಖವಾಗಿ ರಾಗಿ ೪೩೬ ಹೆ., ಮೆಕ್ಕೆಜೋಳ ೬೫೫ ಹೆ, ತಂಬಾಕು ೨,೪೭೫ ಹೆ, ಅಲಸಂದೆ ೨,೪೨೦ ಹೆ, ಹುರುಳಿ ೪೪೫೦ ಹೆ, ನೆಲಗಡಲೆ ೨೫ ಹೆ, ತೊಗರಿ-೧೫ ಹೆ, ಅವರೆ ೧೦ ಹೆ, ಉದ್ದು ೨೬ ಹೆ, ಹೆಸರು ೩೩ ಹೆ, ಎಳ್ಳು ೮೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.

ಸಾಲಿಗ್ರಾಮ ತಾಲ್ಲೂಕಿನಲ್ಲಿ ೧೨,೯೨೭ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇದರಲ್ಲಿ ತಂಬಾಕು ೭,೯೫೦ ಹೆ, ರಾಗಿ ೯೨೫ ಹೆ, ಹುರುಳಿ ೫೧೦ ಹೆ, ಮೆಕ್ಕೆಜೋಳ ೧೯೮೫ ಹೆ, ಅಲಸಂದೆ ೧,೪೨೧ ಹೆ, ಎಳ್ಳು ೧೫ ಹೆ, ಹೆಸರು ೮೦ ಹೆ, ಉದ್ದು ೨೨ ಹೆ, ಅವರೆ ೧೦ ಹೆ, ತೊಗರಿ ೧೨ ಹೆ. ಹಾಗೂ ೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ನೆಲಗಡಲೆ  ಹಾನಿಯಾಗಿರುವ ವರದಿಯಾಗಿದೆ. ಪ್ರಸ್ತುತ ಈ ಭಾಗದಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಭತ್ತ ಮತ್ತು ಕಬ್ಬು ಬೆಳೆ ನಾಟಿ ಮಾಡುವವರು ಇದೇ ಆಗಸ್ಟ್ ೩೧ರೊಳಗೆ ಬೆಳೆವಿಮೆ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕುಎಂದು ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

” ಸಾವಿರಾರು ರೂ. ಸಾಲ ಮಾಡಿ ಮೆಕ್ಕೆಜೋಳ ಮತ್ತು ರಾಗಿ ಬಿತ್ತನೆ ಮಾಡಿದ್ದೆವು. ಆರಂಭದಲ್ಲಿ ಲಘು ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿ ಬಂದಿತ್ತು. ಆದರೆ ಈಗ ಮಳೆಯೇ ಇಲ್ಲದೆ ಪೈರುಗಳು ಸಂಪೂರ್ಣವಾಗಿ ಒಣಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನೀರು ಇಲ್ಲದೆ ಕೆರೆಕಟ್ಟೆಗಳು ಬರಿದಾಗಿವೆ. ನಮಗೆ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕು.”

-ಸೋಮು, ಪ್ರಗತಿಪರ ರೈತ, ಭೇರ್ಯ

” ಪ್ರತಿ ವರ್ಷ ಮಳೆಯನ್ನೇ ನಂಬಿ ಎಳ್ಳು ಹಾಗೂ ಸೇವಂತಿಗೆ ಹೂ ಹಾಕುತ್ತಿದ್ದೆವು. ಈ ಸಲ ಸಕಾಲಕ್ಕೆ ಮಳೆಯಾಗದ ಕಾರಣ ನಾಟಿ ಮಾಡಲು ನೀರೇ ಸಿಗುತ್ತಿಲ್ಲ. ಈಗಾಗಲೇ ನಾಟಿ ಮಾಡಿರುವ ಸೇವಂತಿಗೆ ಗಿಡಗಳು ಒಣಗುತ್ತಿವೆ. ಸಾಲ ಹೇಗೆ ತೀರಿಸಬೇಕೋ ತಿಳಿಯುತ್ತಿಲ್ಲ.”

-ಬಂಡೆಕುಮಾರ್, ಹೂ ಬೆಳೆಗಾರ, ಸುಗ್ಗನಹಳ್ಳಿ 

” ಮಳೆ ಕೊರತೆಯಿಂದಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮತಾಲ್ಲೂಕುಗಳ ಮಳೆಆಶ್ರಿತ ಭಾಗದಲ್ಲಿ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆಗಳ ಜಂಟಿ ತಂಡಗಳು ಈಗಾಗಲೇಜಮೀನುಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಆರಂಭಿಸಿವೆ. ಬೆಳೆ ಹಾನಿಯ ನಿಖರ ವರದಿಯನ್ನು ಸಿದ್ಧಪಡಿಸಿ, ರೈತರಿಗೆ ಬೆಳೆ ವಿಮೆಹಾಗೂ ಸರ್ಕಾರದಿಂದ ಸೂಕ್ತ ಪರಿಹಾರಕೊಡಿಸಲು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.”

-ಸುಹಾಸಿನಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು

 

 

Tags:
error: Content is protected !!