Mysore
21
overcast clouds

Social Media

ಮಂಗಳವಾರ, 07 ಜುಲೈ 2026
Light
Dark

ಸಾರಿಗೆ ಬಸ್ ಸೇವೆ ಕಡಿತ; ಪ್ರಯಾಣಿಕರ ಆಕ್ರೋಶ

ದಾಸೇಗೌಡ ಸರಗೂರು

ಸರಗೂರಿಗೆ ಹೆಚ್ಚಿನ ಬಸ್‌ಗಳ ಸೌಕರ್ಯ ಕಲ್ಪಿಸಲು ಸಾರ್ವಜನಿಕರ ಆಗ್ರಹ

ಸರಗೂರು: ಎಚ್.ಡಿ.ಕೋಟೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕದಿಂದ ಇತ್ತೀಚಿನವರೆಗೂ ಸರಗೂರು-ಹೆಚ್.ಡಿ ಕೋಟೆ ಮಾರ್ಗವಾಗಿ ರಾಜ್ಯದ ವಿವಿಧ ಭಾಗಗಳಿಗೆ ಹಲವಾರು ಬಸ್ ಗಳು ಸಂಚರಿಸುತ್ತಿದ್ದವು. ಆದರೆ, ಅನೇಕ ಮಾರ್ಗಗಳನ್ನು ರದ್ದುಪಡಿಸಿರುವುದರಿಂದ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿದೆ.

ಮಹದೇಶ್ವರ ಬೆಟ್ಟ, ಸೇಲಂ, ಶಿವಮೊಗ್ಗ, ಚಿಕ್ಕಮಗಳೂರು, ಸಿಗಂದೂರು, ದಾವಣಗೆರೆ, ಮಾನಂದವಾಡಿ, ಊಟಿ, ಬಾಳೆಲೆ, ಕುಟ್ಟ, ವಿರಾಜಪೇಟೆ, ಕೋಲಾರ, ಚಾಮರಾಜನಗರ ಮಾರ್ಗಗಳಿಗೆ ನೇರ ಹಾಗೂ ಮಧ್ಯಂತರ ಬಸ್ಗಳ ಸಂಚಾರ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳಲ್ಲಿ ಆದಾಯ ಇಲ್ಲವೆಂಬ ನೆಪದಲ್ಲಿ ಈ ಮಾರ್ಗಗಳನ್ನು ಬೇರೆ ಘಟಕಗಳಿಗೆ ಹಂಚಲಾ ಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಹೆಚ್.ಡಿ.ಕೋಟೆ ಘಟಕದಿಂದ ಕೋಟೆ- ಮೈಸೂರು ಹಾಗೂ ಸರಗೂರು- ಮೈಸೂರು ಮಾರ್ಗವಾಗಿ ನಾನ್‌ಸ್ಟಾಪ್ ಬಸ್ ಗಳ ಸಂಚಾರವನ್ನು ಪ್ರಾರಂಭಿಸಲಾಗಿದ್ದು ಕೋಟೆಗೆ ಮತ್ತು ಸರಗೂರಿಗೆ ತಲಾ ನಾಲ್ಕು ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೋಟೆಗೆ ಅರ್ಧ ಗಂಟೆಗೆ ಒಮ್ಮೆ ಬಸ್ ಸಿಗುತ್ತಿದ್ದರೆ, ಸರಗೂರಿಗೆ ಒಂದು ಗಂಟೆಗೆ ಒಮ್ಮೆ ಮಾತ್ರ ಬಸ್ ಇದೆ. ಅದರಲ್ಲಿಯೂ ಕೆಲವು ಬಸ್‌ಗಳು ನಿಗದಿತ ವೇಳೆಗೆ ಬರುವುದಿಲ್ಲವೆಂಬ ಆರೋಪ ಕೇಳಿಬಂದಿದೆ.

ಈ ಹಿಂದೆ ಕೋಟೆಯಲ್ಲಿ ಸಾರಿಗೆ ಘಟಕ ಇಲ್ಲದಿದ್ದರೂ ಮೈಸೂರು ಘಟಕ ಹಾಗೂ ಚಾಮರಾಜನಗರ ಘಟಕದಿಂದ ಸರಗೂರು ಭಾಗಕ್ಕೆ, ಮಲೆ ಮಹದೇಶ್ವರ ಬೆಟ್ಟಕ್ಕೆ ೩೦ರಿಂದ ೪೦ ಬಸ್‌ಗಳನ್ನು ಬಿಟ್ಟಿದ್ದರು. ಆದರೆ, ಈಗ ಈ ಭಾಗಕ್ಕೆ ಸಮರ್ಪಕ ಬಸ್ ವ್ಯವಸ್ಥೆಯಿಲ್ಲ ಎಂದು ಹೋಟೆಲ್ ಮಾಲೀಕ ಕೊತ್ತೆಗಾಲ ಮಹದೇವು ತಿಳಿಸಿದರು. ಅಲ್ಲದೆ, ಈ ಘಟಕದ ಬಸ್‌ಗಳೆಲ್ಲ ಭಾರೀ ಹಳೆಯದಾಗಿದ್ದು, ರಸ್ತೆಯಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ.

ಶಕ್ತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿರುವುದರಿಂದ ಬಸ್ಸುಗಳಲ್ಲಿ ದಟ್ಟಣೆ ಇರುತ್ತದೆ. ಇದರಿಂದ ವಿದ್ಯಾರ್ಥಿಗಳು, ಇತರ ಪ್ರಯಾಣಿಕರಿಗೆ ಆಸನಗಳೇ ಸಿಗದಂತಾಗಿದೆ. ಅಲ್ಲದೆ, ಹತ್ತುವಾಗ, ಇಳಿಯುವಾಗ ಬಿದ್ದು ಗಾಯಗೊಂಡಿರುವ ಅನೇಕ ಉದಾಹರಣೆಗಳಿವೆ.

” ಸರಗೂರಿನಿಂದ ಹೆಚ್.ಡಿ.ಕೋಟೆ ಕಡೆಗೆ ಬಸ್ಗಳ ಕೊರತೆ ಇರುವ ಬಗ್ಗೆ ಮಾಹಿತಿ ಇದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ಅಮಾವಾಸ್ಯೆ ಸಂದರ್ಭದಲ್ಲಿ ಬೇಲದಕುಪ್ಪೆ, ಭೀಮನಕೊಲ್ಲಿ ದೇವಸ್ಥಾನಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವ ವೇಳೆ ಉಂಟಾಗುವ ವ್ಯತ್ಯಾಸವನ್ನು ಶೀಘ್ರದಲ್ಲೇ ಸರಿಪಡಿಸಲಾಗುತ್ತದೆ.”

-ತ್ಯಾಗರಾಜ್, ಘಟಕ ವ್ಯವಸ್ಥಾಪಕರು,

” ಹೆಚ್.ಡಿ.ಕೋಟೆ ಸರಗೂರು ಭಾಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಹಳೆಯ ಬಸ್‌ಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ಒದಗಿಸಬೇಕು ಹಾಗೂ ರದ್ದಾದ ಮಾರ್ಗಗಳನ್ನು ಮರುಪ್ರಾರಂಭಿಸಬೇಕು.”

-ಗೋವಿಂದಯ್ಯ, ಪ್ರಯಾಣಿಕರು

 

 

Tags:
error: Content is protected !!