Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಇಂದು ಕೇಂದ್ರ ಬಜೆಟ್‌

ರಾಜ್ಯದ ಮಹತ್ವದ ಅಭಿವೃದ್ದಿ ಕಾರ್ಯಗಳಿಗೆ ಹಲವು ನಿರೀಕ್ಷೆ

ಬೆಂಗಳೂರು: ೨೦೨೫-೨೬ನೇ ಆರ್ಥಿಕ ವರ್ಷದ ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಶನಿವಾರ ಮಂಡಿಸಲಿರುವ ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರ ಹಲವು ನಿರೀಕ್ಷೆ ಗಳನ್ನು ಇಟ್ಟುಕೊಂಡಿದೆ.

ಬೆಂಗಳೂರಿನ ಮಹತ್ವದ ಅಭಿವೃದ್ಧಿ ಕಾರ್ಯಗಳೂ ಸೇರಿದಂತೆ ರಾಜ್ಯದ ಹಲವು ಮಹತ್ವದ ಯೋಜನೆಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ. ಈ ಸಂಬಂಧ ಈಗಾಗಲೇ ಕೇಂದ್ರದ ಮುಂದೆ ಅಧಿಕೃತ ಬೇಡಿಕೆಯ ಪಟ್ಟಿ ಸಲ್ಲಿಸಿದೆ. ಪ್ರಮುಖವಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಹಲವು ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರಾಜ್ಯದ ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಸಂಬಂಧ ಇತ್ತೀಚೆಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶ ಮತ್ತು ಜಾಗತಿಕ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ವಿಶೇಷ ಹೊಂದಾಣಿಕೆಯ ಅನುದಾನ, ಬರಪೀಡಿತ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಈ ಹಿಂದೆಯೇ ಘೋಷಿಸಿದ್ದ ೫,೩೦೦ ಕೋಟಿ ರೂ. ಬಿಡುಗಡೆಗೂಳಿಸುವಂತೆ ಮನವಿ ಮಾಡಿದ್ದಾರೆ.

ಮೇಕೆದಾಟು ಮತ್ತು ಮಹದಾಯಿ ಯೋಜನೆ ಗಳಿಗೆ ಅನುಮೋದನೆ ನೀಡಬೇಕು. ೧೫ನೇ ಹಣ ಕಾಸು ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನ ೧೧,೪೯೫ ಕೋಟಿ ಬಿಡುಗಡೆಗೊಳಿಸುವಂತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ ೫,೦೦೦ ಮತ್ತು ಅಡುಗೆಯವರು ಮತ್ತು ಸಹಾಯಕರಿಗೆ ೨,೦೦೦ ರೂ. ಗಳಿಗೆ ಹೆಚ್ಚಳಗೊಳಿಸುವಂತೆ ಬೇಡಿಕೆ ಇಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ನೆರವನ್ನು ನಗರ ಪ್ರದೇಶದ ಮನೆಗಳಿಗೆ ೧. ೫ ಲಕ್ಷ ರೂ. ಗಳಿಂದ ೫ ಲಕ್ಷ ರೂ. ಮತ್ತು ಗ್ರಾಮೀಣ ಮನೆಗಳಿಗೆ ೭೨,೦೦೦ ರೂ. ಗಳಿಂದ ೩ ಲಕ್ಷ ರೂ. ಗಳಿಗೆ ಹೆಚ್ಚಿಸಬೇಕು ವೃದ್ಧಾಪ್ಯ, ವಿಧವೆಯರು ಮತ್ತು ವಿಕಲಚೇತನರ ಪಿಂಚಣಿ ಹೆಚ್ಚಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಕೇಂದ್ರಕ್ಕೆ ಬೇಡಿಕೆ ಪಟ್ಟಿ ನೀಡಿದ್ದಾರೆ.

ಬೆಂಗಳೂರಿನ ಸುಮಾರು ೯೦,೦೦೦ ಕೋಟಿ ರೂ. ಗೂ ಅಽಕ ವೆಚ್ಚದ ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವಿನ ಬೇಡಿಕೆ ಇಟ್ಟಿದೆ. ಇದರಲ್ಲಿ ಪ್ರಮುಖವಾಗಿ ಟನೆಲ್ ರಸ್ತೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಳು ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳಾಗಿವೆ. ನಗರದ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಡೆಕ್ಕರ್ ಮೇಲ್ಸೇತುವೆ, ಪಿಆರ್‌ಆರ್ ಬಿಸಿನೆಸ್ ಕಾರಿಡಾರ್, ನೀರು ಸರಬರಾಜು ಸೇರಿ ಅನೇಕ ಮಹತ್ವದ ಯೋಜನೆಗಳನ್ನು ಕೈಗೊಂಡಿದ್ದು, ಅವುಗಳಿಗೆ ೨೦೨೫-೨೬ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಡಿಸಿಎಂ ಮನವಿ ಮಾಡಿದ್ದಾರೆ.

ನಗರ ಸುರಂಗ ಮಾರ್ಗಕ್ಕೆ ಅನುದಾನದ ಮನವಿ: ಸಂಚಾರ ದಟ್ಟಣೆ ನಿವಾರಣೆಗಾಗಿ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಹೆಚ್‌ಎಸ್‌ಆರ್ ಬಡಾವಣೆಯ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೂ ಉತ್ತರ-ದಕ್ಷಿಣ ೧೮. ೫ ಕಿ. ಮೀ.

ಟನಲ್ ರಸ್ತೆ ನಿರ್ಮಾಣಕ್ಕೆ ೧೫ ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಕೆ. ಆರ್. ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್‌ವರೆಗೂ ೨೮. ೫ ಕಿ. ಮೀ. ಟನಲ್ ರಸ್ತೆ ನಿರ್ಮಾಣಕ್ಕೆ ೨೫ ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ೧೯ ಸಾವಿರ ಕೋಟಿ ರೂ. ಮೌಲ್ಯದ ಡಿಪಿಆರ್ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿದೆ. ರಾಷ್ಟ್ರೀಯ ಹೆದ್ದಾರಿಗೂ ಈ ಟನಲ್ ಸಂಪರ್ಕಿಸುವುದರಿಂದ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಇವುಗಳಿಗೆ ಬಜೆಟ್‌ನಲ್ಲಿ ಆರ್ಥಿಕ ನೆರವು ನೀಡುವಂತೆ ಕೋರಲಾಗಿದೆ.

ಪ್ರಸಕ್ತ ಮೆಟ್ರೋ ರೈಲು ಮಾರ್ಗಗಳಿಗೆ ಐದು ಕಾರಿಡಾರುಗಳನ್ನು ವಿಸ್ತರಣೆ ಮಾಡಲು ಗುರುತಿಸಲಾಗಿದೆ. ಸುಮಾರು ೧೨೯ ಕಿ. ಮೀ. ಮೆಟ್ರೋ ಮಾರ್ಗವನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ಉದ್ದೇಶಿತ ವಿಸ್ತರಿತ ಮೆಟ್ರೋ ಕಾರಿಡಾರ್ ಹೊರ ವರ್ತುಲ ರಸ್ತೆ ಹಾಗೂ ಬೆಂಗಳೂರು ಉಪನಗರವನ್ನು ಸಂಪರ್ಕಿಸುತ್ತದೆ. ಈ ಐದು ಮೆಟ್ರೋ ಕಾರಿಡಾರುಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡುವಂತೆ ಮನವಿ ಮಾಡಲಾಗಿದೆ.

ನಮ್ಮ ಮೆಟ್ರೋದ ಮೂರನೇ ಹಂತದ ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೂ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಯಶಸ್ವಿ ಹಿನ್ನೆಲೆಯಲ್ಲಿ ಮೆಟ್ರೋ ನಾಲ್ಕನೇ ಹಂತದ ಯೋಜನೆಯನ್ನು ಡಬಲ್ ಡೆಕ್ಕರ್ ಮೂಲಕ ನಿರ್ಮಿಸಲು ತೀರ್ಮಾನಿಸಲಾಗಿದೆ. ಜೆ. ಪಿ. ನಗರದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ ೪೫ ಕಿ. ಮೀ. ಉದ್ದದ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ೮,೯೧೬ ಕೋಟಿ ರೂ. ಅಗತ್ಯವಿದ್ದು, ಪೂರಕ ಅನುದಾನ ನೀಡುವಂತೆ ಆಗ್ರಹಿಸಲಾಗಿದೆ.

ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಸುಮಾರು ೩,೦೦೦ ಕೋಟಿ ರೂ. ನೆರವಿಗಾಗಿ ವಿಶ್ವ ಬ್ಯಾಂಕ್‌ಗೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಗೆ ಸಲ್ಲಿಸಲಾಗಿದೆ. ಹೀಗಾಗಿ, ಬಹುಬೇಗ ಮಂಜೂರಾತಿ ನೀಡುವಂತೆ ಕೋರಲಾಗಿದೆ.

ಜೊತೆಗೆ ನಗರದ ಸಂಚಾರ ದಟ್ಟಣೆ ಇರುವ ೧೧ ಜಂಕ್ಷನ್‌ಗಳಲ್ಲಿ ೯೯. ೫೦ ಕಿ. ಮೀ. ಗಳಷ್ಟು ೧೭ ಮೇಲ್ಸೇತುವೆ ನಿರ್ಮಾಣ ಅಗತ್ಯವಿದ್ದು, ಇದಕ್ಕಾಗಿ ೧೨ ಸಾವಿರ ಕೋಟಿ ರೂ. ಬೇಕಾಗಿದೆ. ಪ್ರಮುಖ ನದಿ ಹಾಗೂ ದೊಡ್ಡ ಕೆರೆಗಳು ಹಾಗೂ ರಾಜಕಾಲುವೆ ಪಕ್ಕದ ಬಫರ್ ಪ್ರದೇಶಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಈ ಬಫರ್ ವಲಯದಲ್ಲಿ ೩೦೦ ಕಿ. ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ೩,೦೦೦ ಕೋಟಿ ರೂ. ಪೂರಕ ಅನುದಾನ ನೀಡುವಂತೆ ಕೋರಲಾಗಿದೆ.

Tags: