Mysore
21
overcast clouds
Light
Dark

ಮಾಳದ ಹಾಡಿಯಲ್ಲಿ ಹೆಪ್ಪುಗಟ್ಟಿದ ಮೌನ; ಹುಲಿ ದಾಳಿಯಿಂದ ಅಮ್ಮನ ಕಳೆದುಕೊಂಡ ಮಕ್ಕಳು ಅತಂತ್ರ

ಅಂತರಸಂತೆ: ಆ ಹಾಡಿಯ ತುಂಬಾ ಹೆಪ್ಪುಗಟ್ಟಿದಂತಹ ಮೌನ… ಪುಟ್ಟ ಮನೆ, ಕೆಲ ವರ್ಷಗಳ ಹಿಂದೆ ಅಪ್ಪನ ಸಾವು ಕಂಡಿದ್ದ ಮೂವರು ಮಕ್ಕಳಲ್ಲಿ, ಭಾನುವಾರ ಹೆತ್ತಮ್ಮನನ್ನೂ ಕಳೆದುಕೊಂಡ ಅಗಾಧ ನೋವು ತುಂಬಿತ್ತು. ಅದೂ ಅಮ್ಮನನ್ನು ಹುಲಿ ಕೊಂದು, ತಿಂದು ಹಾಕಿದ್ದು, ಆ ಮಕ್ಕಳನ್ನು ಮಾತ್ರವಲ್ಲ, ಇಡೀ ಹಾಡಿಯನ್ನು ದುಃಖದ ಕಡಲಿಗೆ ತಳ್ಳಿತ್ತು. ಇದು ಎಚ್.ಡಿ.ಕೋಟೆ ತಾಲ್ಲೂಕಿನ ಎನ್. ಬೇಗೂರು ಸಮೀಪದ ಮಾಳದ ಹಾಡಿಯ ಚಿಕ್ಕಮ್ಮ ಅವರು ಹುಲಿ ದಾಳಿಯಿಂದ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಹಾಡಿಯಲ್ಲಿ ಸೋಮವಾರ ಕಂಡುಬಂದ ಚಿತ್ರಣ.

ತಂದೆ ಇಲ್ಲದ ಮಕ್ಕಳನ್ನು ಕೂಲಿ ಕೆಲಸ ಮಾಡಿ ಸಾಕಿದ್ದರು ಚಿಕ್ಕಮ್ಮ. ಕೆಲ ವರ್ಷಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡ ಮಕ್ಕಳನ್ನು ತಾಯಿ ಚಿಕ್ಕಮ್ಮ ಕೂಲಿ ಕೆಲಸ ಮಾಡಿ ಸಾಕಿದ್ದವರು. ಬಡತನದ ಕುಟುಂಬ, ಸ್ವಂತ ಜಮೀನೂ ಇಲ್ಲದೆ ಕೂಲಿ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದರು. ಆದರೆ, ಶನಿವಾರ ಸಂಜೆ ಮೇಕೆ ಮೇಯಿಸುತ್ತಿದ್ದ ಚಿಕ್ಕಮ್ಮ ಅವರ ಮೇಲೆ ಹುಲಿ ದಾಳಿ ನಡೆಸಿ, ಕೊಂದು ತಿಂದಿದೆ. ಅತ್ತ ತಂದೆಯೂ ಇಲ್ಲದೆ, ಇತ್ತ ತಾಯಿಯೂ ಇಲ್ಲದೆ ಮೂವರು ಮಕ್ಕಳು ಅನಾಥರಾಗಿದ್ದಾರೆ.

ಚಿಕ್ಕಮ್ಮನ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಚಿಕ್ಕಮ್ಮ ಕೂಲಿ ಕೆಲಸ ಮಾಡಿ ಸಾಕಿದ್ದರು. ಸದ್ಯ ಈಗ ತಾಯಿಯನ್ನೂ ಕಳೆದುಕೊಂಡು ಮಕ್ಕಳ ಬದುಕು ಅತಂತ್ರ ವಾಗಿದೆ. ಮನೆಯಲ್ಲಿ ಮೌನದ ವಾತಾವರಣ ಮಡುಗಟ್ಟಿದೆ. ಹಾಡಿಯಲ್ಲಿ ಆಗಾಗ್ಗೆ ಕಾಡಾನೆಗಳು ದಾಳಿ ಮಾಡುತ್ತಿದ್ದವು. ಆದರೆ ಹುಲಿ ದಾಳಿ ಸಾಕಷ್ಟು ವರ್ಷಗಳಿಂದ ಇಲ್ಲದಿದ್ದ ಪರಿಣಾಮ ಇದು ಸ್ಥಳೀಯರಿಗೆ ಹೊಸದೆನಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಹುಲಿ ದಾಳಿಯಿಂದ ಬೆಚ್ಚಿಬಿದ್ದ ಜನರು ಒಬ್ಬಂಟಿಯಾಗಿ ಓಡಾಡಲು, ಜಮೀನುಗಳಿಗೆ ಹೋಗಲು, ಬಹಿರ್ದೆಸೆಗೆ ಹೋಗಲು ಹೆದರುವಂತಾಗಿದ್ದು, ಗುಂಪಾಗಿ ಓಡಾಡುತ್ತಿದ್ದಾರೆ. ಅಲ್ಲದೆ, ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಈಗಾಗಲೇ ಎನ್.ಬೇಗೂರು, ಮಾಳದ ಹಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಧ್ವನಿವರ್ಧಕಗಳ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಮಗನಿಗೊಂದು ಉದ್ಯೋಗ ನೀಡಬೇಕು: ಕೂಲಿ ಕೆಲಸ ಮಾಡುತ್ತಿದ್ದ ಚಿಕ್ಕಮ್ಮನಿಗೆ ಒಂದಿಷ್ಟೂ ಜಮೀನೂ ಇಲ್ಲ. ಕುಟುಂಬ ಮೂಲ ಆಧಾರವೇ ಕೂಲಿ. ಇಂತಹ ಕಡುಬಡತನದಲ್ಲಿ ಚಿಕ್ಕಮ್ಮ ತನ್ನ ಮೂವರು ಮಕ್ಕಳನ್ನು ಬೆಳೆಸಿದರು. ಇಬ್ಬರು ಹೆಣ್ಣು ಮಕ್ಕಳು ಬೇರೆ, ಈಗ ಆಸರೆಯಾಗಿದ್ದ ಚಿಕ್ಕಮ್ಮನೂ ಇಲ್ಲದೆ ಮಕ್ಕಳು ಅನಾಥರಾಗಿದ್ದಾರೆ. ಮನೆಯ ಹಿರಿಯ ಮಗ ಮಹದೇವ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಮೃತ ಮಹಿಳೆಯ ಕುಟುಂಬಕ್ಕೆ ಎಷ್ಟೇ ಪರಿಹಾರ ನೀಡಿದರೂ ಅದು ತಾತ್ಕಾಲಿಕ. ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದರೆ ಕುಟುಂಬದ ಸದಸ್ಯರೊಬ್ಬರಿಗೆ ಖಾಯಂ ಉದ್ಯೋಗ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

“ಕಾಡು ಪ್ರಾಣಿ ದಾಳಿ ತಡೆಗೆ ಕಟ್ಟುನಿಟ್ಟಿನ ಕ್ರಮವಹಿಸಲಿ
ಕಾಡು ಪ್ರಾಣಿಗಳು ನಿರಂತರವಾಗಿ ದಾಳಿ ನಡೆಸುತ್ತಿದೆ. ಅದರಲ್ಲಿಯೂ ಆದಿವಾಸಿ ಸಮುದಾಯದ ಜನರು ಕಾಡಂಚಿನಲ್ಲಿಯೇ ವಾಸವಿರುವುದರಿಂದ ಅವರ ಮೇಲೆಯೇ ಈ ದಾಳಿಗಳು ಹೆಚ್ಚಾಗುತ್ತಿವೆ. ಅರಣ್ಯ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಿ ಹುಲಿ, ಕಾಡಾನೆಗಳ ದಾಳಿಗಳು ನಡೆಯದಂತೆ ನೋಡಿಕೊಳ್ಳಬೇಕು. ಅಲ್ಲದೆ ಹುಲಿ ದಾಳಿಗೊಳಗಾಗಿ ಮೃತಪಟ್ಟ ಕುಟುಂಬದ ಸದಸ್ಯರೊಬ್ಬರಿಗೆ ಖಾಯಂ ಉದ್ಯೋಗ ನೀಡಬೇಕು.
-ಪುಟ್ಟಬಸವಯ್ಯ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯದ ಸದಸ್ಯರು.

ಹುಲಿ ಸೆರೆಗೆ ಆಗ್ರಹ
ಹುಲಿ ದಾಳಿಯಿಂದಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಮನುಷ್ಯರ ಮೇಲೆ ದಾಳಿ ಮಾಡಿರುವ ಹುಲಿ ಮತ್ತೆ ದಾಳಿಗೆ ಮುಂದಾಗಬಹುದು ಎಂಬುದು ಗ್ರಾಮಸ್ಥರ ಆತಂಕ. ಇದರಿಂದಾಗಿಯೇ ಸಂಜೆಯಾಗುತ್ತಲೇ ಬೀದಿಯಲ್ಲಿ ಓಡಾಡಲು ಬೆದರುತ್ತಿದ್ದಾರೆ. ಹಾಗಾಗಿ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ನಮ್ಮ ತಾಯಿ ಆಡು ಮೇಯಿಸುತ್ತಿದ್ದರು. ಶನಿವಾರ ಸಂಜೆ ಮಳೆ ಬರುತ್ತಿದ್ದುದರಿಂದ ಮರದಡಿ ಕುಳಿತ್ತಿದ್ದಾರೆ. ಈ ವೇಳೆ ಹುಲಿ ದಾಳಿ ನಡೆಸಿ ನಮ್ಮ ತಾಯಿಯನ್ನು ಬಲಿ ಪಡೆದಿದೆ. ಅರಣ್ಯ ಇಲಾಖೆಯವರೂ ನಮ್ಮ ಜತೆಗೂಡಿ ಶೋಧ ನಡೆಸಿದ್ದರಿಂದ ತಾಯಿಯ ಮೃತದೇಹ ಪತ್ತೆಯಾಯಿತು. ಅಷ್ಟರಾಗಲೇ ಹುಲಿ ದೇಹವನ್ನು ಛಿದ್ರ ಮಾಡಿತ್ತು. ಆ ಸ್ಥಿತಿಯಲ್ಲಿ ನಮ್ಮ ತಾಯಿಯ ಮೃತದೇಹ ನೋಡಿ ದುಃಖ ತಡೆಯಲಾಗಲಿಲ್ಲ.
-ಮಹದೇವ, ಮೃತ ಚಿಕ್ಕಮ್ಮನ ಮಗ.