Mysore
25
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು

ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ – ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ ಅವರೆಲ್ಲರ ಮಾತುಕತೆಗಳಲ್ಲಿ ಜಂಬೆ ಮೇಷ್ಟ್ರು ಒಮ್ಮೆಯಾದರೂ ಯಾವುದೋ ನಾಟಕ,ಸಂದರ್ಭ ಮುಂತಾಗಿ ಪ್ರತ್ಯಕ್ಷವಾಗುತ್ತಾರೆ. ಅವರ ಉಖವಿಲ್ಲದ ಮಾತುಕತೆಗಳು ವಿರಳ. ಇದು ಕಳೆದ ಮೂರು ದಶಕಗಳ ವಿದ್ಯಮಾನ. ಇಂತಹ ರಂಗ ಗುರುಗಳು ಅಪ್ರತ್ಯಕ್ಷವಾಗಿದ್ದರೂ ಪರಿಣಮಿಸುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಜಗತ್ತಿನ ಪ್ರಚಲಿತ ಅಧ್ಯಯನ ಶಿಸ್ತುಗಳಿಗೆ ಹೋಲಿಸಿದರೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಗುರುವಿನ ಇರುವಿಕೆ ಹಾಗೂ ಕಾರ್ಯ ವಿಧಾನಗಳ ಸ್ವರೂಪ.

ಬದುಕಿನ ಪಠ್ಯಗಳಿಂದ ಪಡೆದು ರಂಗಭೂಮಿಯ ಮೂಲಕ ಬದುಕಿಗೇ ಅನ್ವಯಿಸುವ ಆಳವಾದ ಪ್ರಯೋಗಿಕ ಪ್ರಕ್ರಿಯೆಯಲ್ಲಿ ನಿರತರಾದ ಗುರು ಒಮ್ಮೊಮ್ಮೆ ಝೆನ್ ಗುರುವಿನಂತೆ ಭಾಸವಾಗುತ್ತಾರೆ. ಇದು ಮಾನವೀಯ ಅಂತಃಕರಣವೊಂದು ಹಲವು ದಶಕಗಳು ರಂಗ ಗುರುವಿನ ಪಾತ್ರದ ಧಾರಣೆಯ ಧ್ಯಾನದಿಂದ ಪಡೆದುಕೊಂಡಿರಬಹುದಾದ ಆಧ್ಯಾತ್ಮಿಕ ಸಿದ್ಧಿ. ಇಂತಹ ರಂಗ ಗುರುವಿನ ಅನುಸಂಧಾನದಿಂದಾಗಿ ಒದಗಿಬರುವ ಅನುಭವಗಳು ಕಥನಗಳಾಗಿ, ರಂಗಪಠ್ಯವಾಗಿ ವಿದ್ಯಾರ್ಥಿಗಳ ಜೀವನ ದುದ್ದಕ್ಕೂ ಅರಿವಾಗಿ ಪರಿಣಮಿಸುವ ರೀತಿ ಅನನ್ಯವಾದುದು. ಈ ಗುರು ಬದುಕಿನ ಪಠ್ಯಗಳನ್ನು ಆಯ್ದುಕೊಂಡದ್ದು ಜಗತ್ತಿನ ಹಲವು ದೇಶ ಭಾಷೆಗಳ ನೂರಾರು ನಾಟಕಕಾರರ ನಾಟಕ ಬರಹಗಳಿಂದ. ಇವುಗಳನ್ನು ರಂಗಕೃತಿಯಾಗಿಸಿ ಭಾರತೀಯ ಹಾಗೂ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಾ ಆಯಾ ಕಾಲದ ಸಮುದಾಯ ವಿವೇಕ ಹಾಗೂ ಅರಿವನ್ನು ವಿಸ್ತರಿಸಿದವರು.

ಒಂದು ಕಡೆ ರಂಗಕೃತಿಗಳನ್ನು ಕಟ್ಟುತ್ತಲೇ ಮತ್ತೊಂದು ಕಡೆ ಕನ್ನಡದ ಮೂಲಕವೇ ಭಾರತೀಯ ರಂಗಭೂಮಿಯನ್ನು ಸಶಕ್ತವಾಗಿ ರೂಪಿಸಬಲ್ಲ ಪ್ರತಿಭಾವಂತ ರಂಗಕರ್ಮಿಗಳನ್ನು ರೂಪಿಸುತ್ತಿದ್ದರು. ಹಲವು ದಶಕಗಳ ರಂಗ ಕಾಯಕ ಫಲವಾಗಿ ಇಂದು ಕರ್ನಾಟಕದ ಯಾವುದೇ ಜಿಯ ಊರುಗಳಲ್ಲಿ ರಂಗ ತರಬೇತಿಯೋ, ನಾಟಕ ಪ್ರದರ್ಶನವೋ ಆಗುತ್ತಿದ್ದರೆ ಅ ಜಂಬೆ ಮೇಷ್ಟ್ರರ ಒಬ್ಬಿಬ್ಬರು ಶಿಷ್ಯರಿರುತ್ತಾರೆ. ಉಡುಪಿ ಯಕ್ಷಗಾನ ಕೇಂದ್ರ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗಳಲ್ಲಿ ಪದವಿ ಪಡೆದು ಪರಿಣತರಾದ ಚಿದಂಬರ ರಾವ್ ಜಂಬೆಯವರು ಸುಮಾರು ಇಪ್ಪತ್ತು ವರ್ಷಗಳ ಕಾಲ ನೀನಾಸಮ್ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಮೈಸೂರು ರಂಗಾಯಣದ ನಿರ್ದೇಶಕರಾಗಿ, ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರಿನ ಮೊದಲ ನಿರ್ದೇಶಕರಾಗಿ, ಸಾಣೇಹಳ್ಳಿಯ ಶಿವಕುಮಾರ ರಂಗಶಾಲೆಯ ನಿರ್ದೇಶಕರಾಗಿ ಒಟ್ಟೂ ಕನ್ನಡ ರಂಗಭೂಮಿಯ ರಂಗಶಾಲೆಗಳಿಗೆ ಅವರ ಅನುಭವದ ಜ್ಞಾನದಿಂದ ಒಳ್ಳೆಯ ಅಡಿಪಾಯ ಹಾಕಿದ್ದಾರೆ. ಆ ಮೂಲಕ ಐದುನೂರಕ್ಕೂ ಹೆಚ್ಚು ಬದ್ದತೆಯುಳ್ಳ ರಂಗಕರ್ಮಿಗಳನ್ನು ಸೃಷ್ಟಿಸಿದ್ದಾರೆ. ಇವರಲ್ಲಿ ಅನೇಕ ನಟ, ನಟಿಯರು, ನಿರ್ದೇಶಕರು, ರಂಗ ತಂತ್ರಜ್ಞರು, ಸಂಗೀತ ಕಲಾವಿದರು, ಸಂಘಟಕರು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜಂಬೆ ಮೇಷ್ಟ್ರ ಶಿಷ್ಯರೆಂಬುದು ಇವರೆಲ್ಲರ ಹೆಮ್ಮೆ ಕರ್ನಾಟಕದಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ನಾಟಕ ಶಾಲೆ ದೆಹಲಿ, ಕಲಾಕ್ಷೇತ್ರ ಮಣಿಪುರ, ರಂಗಮಂಡಲ್ ಭೂಪಾಲ, ಭರತೆಂದು ನಾಟ್ಯ ಅಕಾಡೆಮಿ, ಲಕ್ನೋ ಮುಂತಾದ ರಾಜ್ಯಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ತಲೆಮಾರಿನಿಂದ ತಲೆಮಾರಿಗೆ ಹರಿವ ಈ ಸ್ಮೃತಿ ಕತೆಗಳು ಒಂದು ಕಾಲದ ರಂಗ ಸಮುದಾಯದ ವಿವೇಕವನ್ನು ರೂಪಿಸಿದೆ. ಜಂಬೆ ಮೇಷ್ಟ್ರು ವಿದ್ಯಾರ್ಥಿಯಾಗಿ ನನ್ನನ್ನು ರೂಪಿಸಿದ ನೆನಪಿನ ಕತೆಗಳನ್ನು ಇಲ್ಲಿ ದಾಖಲಿಸುತ್ತಾ ಗುರುವಿಗೆ ನುಡಿಯ ನಮನಗಳನ್ನು ಸಲ್ಲಿಸುತ್ತೇನೆ. ಇಷ್ಟೂ ವರ್ಷಗಳು ಕಾಯ, ವಾಚ, ಮನಸಾ, ನನ್ನ ನಡೆ ನುಡಿಗಳು, ಆಲೋಚನೆಗಳು ಭ್ರಷ್ಟವಾಗದಂತೆ ಕಾಪಾಡಿವೆ. ಈ ಗುರುಗಳಿಂದ ಏನು ಕಲಿತೆ? ಎಂದು ಕೇಳಿದರೆ ನನಗೆ ಈಗಲೂ ಹೇಳಲು ಗೊತ್ತಾಗುವುದಿಲ್ಲ. ನನ್ನ ಬದುಕಿನುದ್ದಕ್ಕೂ ಕಲಾವಿದನಾಗಿರುವ ಕಾರಣಕ್ಕೆ ಜನರು ತೋರಬಯಸಿದ ಸಿಂಪತಿಯನ್ನು ನಿರಾಕರಿಸಿದ್ದೇನೆ. ಪ್ರೀತಿಯನ್ನಷ್ಟೇ ಸ್ವೀಕರಿಸಿ ಅವರ ಕರುಣೆಯಿಂದ ನಾನು ಕಳೆದುಕೊಳ್ಳಬಹುದಾಗಿದ್ದ ನಿಷ್ಠುರತೆಯನ್ನು ಕಾಪಾಡಿಕೊಂಡಿದ್ದೇನೆ. ‘ಮೃದು ಹೃದಯದ ಕಠಿಣ ಗುರು’ ಅವರು.

ರಷ್ಯಾದ ’ಆಂಟನ್ ಚೆಕಾವ್’ ಜಂಬೆ ಸರ್‌ಗೆ ಮೆಚ್ಚಿನ ಲೇಖಕ. ನಾಟಕಕಾರ. ಅವರ ಈ ಐದು ದಶಕಗಳ ದೀರ್ಘ ರಂಗ ಪಯಣದಲ್ಲಿ ನೀನಾಸಮ್ ವಿದ್ಯಾರ್ಥಿಗಳಿಗೆ, ತಿರುಗಾಟಕ್ಕೆ, ದೇಶದ ಹಲವು ರಂಗ ತಂಡಗಳಿಗೆ ಚೆಕಾವ್‌ನ ನಾಟಕಗಳನ್ನು ನಿರ್ದೇಶಿಸಿzರೆ. ದಿ ಚೆರ್ರಿ ಆರ್ಚಡ್. ತ್ರೀ ಸಿಸ್ಟರ್ಸ, ಅಂಕಲ್ ವಾನ್ಯ ಸೇರಿದಂತೆ ಚೆಕಾವ್‌ನ ಹಲವು ನಾಟಕಗಳನ್ನು ಒಂದು ರೀತಿಯ ರಿಯಲೆಸ್ಟಿಕ್ ಅನುಸಂಧಾನದಲ್ಲಿ ಶೋಧಿಸಿದವರು ಅವರು. ನಿಜ ಹೇಳಬೇಕೆಂದರೆ ಇಷ್ಟು ವರ್ಷಗಳಲ್ಲಿ ಮತ್ತೆ ಮತ್ತೆ ಚೆಕಾವ್‌ನ ನಾಟಕಗಳಿಗೆ ಒಡ್ಡಿಕೊಳ್ಳುತ್ತಾ ಪರಿಣತಿಯನ್ನು ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಧಾರವಾಡದ ರಂಗಾಯಣದ ವಿದ್ಯಾರ್ಥಿಗಳಿಗೆ ಈ ಲೇಖಕನ ಕಥೆಗಳು, ಲೇಖನಗಳು, ಪತ್ರಗಳು ಎಲ್ಲವನ್ನೂ ಇಟ್ಟುಕೊಂಡು ಈ ಎ ಬರಹಗಳಲ್ಲಿರುವ ಚೆಕಾವ್‌ನ ಹುಡುಕುತ್ತಾ ’ಚೆಕಾವ್ ಟು ಶಾಂಪೇನ’ ನಾಟಕವನ್ನು ನಿರ್ದೇಶಿಸಿದ್ದರು. ಸುಮಾರು ಎರಡು ತಿಂಗಳು ನಡೆದ ಈ ತಾಲೀಮು ಪ್ರಕ್ರಿಯೆಯ ಬಗೆಗೆ ನನ್ನೊಂದಿಗೆ ಮಾತನಾಡುತ್ತಾ ಅವರು ಹೇಳಿದರು ’ಇಷ್ಟು ವರ್ಷಗಳಲ್ಲಿ ಎಷ್ಟೆ ಬಾರಿ ಚೆಕಾವ್‌ನ ನಾಟಕಗಳನ್ನು ಮಾಡಿಸಿದ್ದೇನೆ, ಆದರೆ ಚೆಕಾವ್ ನನಗೀಗ ಬೇರೆಯದೇ ರೀತಿಯಲ್ಲಿ ಅರಿವಾಗುತ್ತಿದ್ದಾನೆ’ ಎಂದುಬಿಟ್ಟರು. ನಾಟಕ ಆಗಲು ನಿಜವಾಗಿ ಒಂದು ತಿಂಗಳ ತಾಲೀಮಿನ ಅವಧಿ ಸಾಲದು ಅನ್ನಿಸುತ್ತಿದೆ ಎಂದರು. ಎಷ್ಟು ವಿನಯದಿಂದ ಇಷ್ಟು ವರ್ಷಗಳಲ್ಲಿ ಚೆಕಾವ್ ನನಗೆ ಅರ್ಥವಾಗಿದ್ದು ಅಲ್ಪ, ಅರಿವಾಗುತ್ತಿರುವುದು ಈಗ ಎಂದುಬಿಟ್ಟರಲ್ಲ ಅನಿಸಿತು. ಇದು ನನಗೆ ಗುರುಗಳು ಹೇಳಿದ ಪಾಠ ಎಂದುಕೊಂಡೆ.

ತಿಪಟೂರಿನ ನಮ್ಮ ರಂಗ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಒಮ್ಮೊಮ್ಮೆ ನನ್ನ ಪಕ್ಕದಲ್ಲಿ ಒಂದು ಖಾಲಿ ಕುರ್ಚಿಯನ್ನು ಇರಿಸಿಕೊಂಡಿರುತ್ತಿದ್ದೆ. ಮತ್ತು ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆ, ಈ ಕುರ್ಚಿಯಲ್ಲಿ ನನ್ನ ಗುರುಗಳು ಕುಳಿತಿರುತ್ತಾರೆ; ನಾನೇನಾದರೂ ತಪ್ಪು ಮಾಡಿದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು. ನಾನು ಪಾಠ ಮಾಡುವಾಗ ಒಮ್ಮೊಮ್ಮೆ ಜಂಬೆ ಸರ್ ಕುರಿತು ಹೇಳಿದ್ದರಿಂದ ಅವರಿಗೆಲ್ಲ ನನ್ನ ಗುರುಗಳ ಬಗ್ಗೆ ಕಲ್ಪನೆ ಇತ್ತು. ಮತ್ತು ಹೆಗ್ಗೋಡು ಬೆಂಗಳೂರಿನ ನಡುವೆ ಕಾರಿನಲ್ಲಿ ಓಡಾಡುವಾಗ ತಿಪಟೂರಿನ ನನ್ನ ಮನೆಗೆ ಬರುತ್ತಿದ್ದುದರಿಂದ ಅವರಲ್ಲಿ ಕೆಲವರಿಗೆ ಅವರ ಪರಿಚಯವಿದ್ದಿತು. ಅದೇಕೋ ಗೊತ್ತಿಲ್ಲ ಅವರಿಗೆ ಮೀಸಲಾಗಿದ್ದ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳುತ್ತಿರಲಿಲ್ಲ. ಮೈಸೂರಿನ ರಂಗಾಯಣದಲ್ಲಿ ರಂಗ ಶಾಲೆಯ ವಿದ್ಯಾರ್ಥಿಗಳಿಗಾಗಿ ನಾನು ಗಾರ್ಸಿಯ ಲೋರ್ಕಾನ ’ಚಮ್ಮಾರನ ಹೆಂಡತಿ’ ನಾಟಕವನ್ನು ನಿರ್ದೇಶಿಸುತ್ತಿದ್ದೆ..

ಅಂದು ನಾಟಕದ ಪ್ರಥಮ ಪ್ರದರ್ಶನಕ್ಕಾಗಿ ತಾಲೀಮು ನಡೆಯುತ್ತಿತ್ತು. ಜಂಬೆ ಸರ್ ಅಂದು ಅನಿರೀಕ್ಷಿ ತವಾಗಿ ಮೈಸೂರಿಗೆ ಬಂದಿದ್ದು; ಬೆಂಗಳೂರಿಗೆ ವಾಪಸ್ಸು ಹೊರಟಿದ್ದರು. ನಾನು ರಂಗಾಯಣದಲ್ಲಿ ನಾಟಕ ಮಾಡಿಸುತ್ತಿರುವ ವಿಷಯ ತಿಳಿದು ಫೋನ್ ಮಾಡಿದರು. ನಾನು ತಕ್ಷಣವೇ ಯೂನಿವರ್ಸಿಟಿಯ ಗೆಸ್ಟ್ ಹೌಸ್‌ಗೆ ಹೋದೆ. ಬೆಂಗಳೂರಿಗೆ ಹೊರಟು ಲಗೇಜನ್ನೆ ಹೊರಗಿಟ್ಟುಕೊಂಡು ಜಂಬೆ ಸರ್ ರಿಸೆಪ್ಷನ್‌ನಲ್ಲಿ ಕಾಯುತ್ತಾ ಕುಳಿತಿದ್ದರು. ನಾನು ಹೋಗಿ ಇಂದು ಉಳಿದು ಕೊಂಡು ನನ್ನ ನಾಟಕವನ್ನು ನೋಡಲೇಬೇಕೆಂದು ವಿನಂತಿಸಿದೆ. ತಕ್ಷಣವೇ ’ನಾಟಕಕ್ಕೆ ಬರ್ತೇನ್ರಿ ; ನಾನು ಏನು ಏನು ಪಾಪ (ತಪ್ಪು) ಮಾಡಿದ್ದೇನೆ ನೋಡಬೇಕಲ್ಲ’ ಎಂದು ಲಗೇಜನ್ನು ರೂಮಿಗೆ ವಾಪಸ್ಸು ಇರಿಸಿಬಿಟ್ಟರು. ಅವರು ಕಲಿಸಿದ ವಿದ್ಯೆಯ ಒಪ್ಪು- ತಪ್ಪುಗಳು ಈ ಹಲವು ವರ್ಷಗಳಲ್ಲಿ ಹೇಗೆ ಪರಿಣಮಿಸಿರಬಹುದು ಎಂಬುದನ್ನು ಅಂದಿನ ನನ್ನ ನಾಟಕ ಪ್ರಯೋಗದ ಕನ್ನಡಿಯಲ್ಲಿ ನೋಡಿಕೊಳ್ಳಲು ಬಯಸಿ ಹೇಳಿದ ಆತ್ಮವಿಮರ್ಶೆಯ ಈ ಮಾತನ್ನು ಕೇಳಿದ ತಕ್ಷಣ ನನ್ನೊಳಗೆ ಗಾಢ ಮೌನ ಆವರಿಸಿಬಿಟ್ಟಿತು. ಗುರುವಿನ ಇಂತಹ ನಡೆ-ನುಡಿಗಳು ನನ್ನನ್ನು ಶೋಧಿಸುತ್ತಲೇ ಇರುತ್ತದೆ.

ಕೃಪೆ: ಕನ್ನಡ ಪ್ಲಾನೆಟ್.ಕಾಮ್

” ಸುಮಾರು ೨೮ ವರ್ಷಗಳ ಹಿಂದೆ ನಾನು ನೀನಾಸಮ್‌ನಲ್ಲಿ ವಿದ್ಯಾರ್ಥಿಯಾಗಿzಗ ಚಿದಂಬರ ರಾವ್ ಜಂಬೆಯವರು ನನ್ನ ಗುರುಗಳು. ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಅವರಿಂದ ಹೇಳಿಸಿಕೊಂಡ ಪಾಠ ಕಡಿಮೆ, ಆದರೆ ಅವರ ಇರುವಿಕೆಯಿಂದ ಪಡೆದುಕೊಂಡದ್ದು ಹೆಚ್ಚು. ಅವರ ಇರುವಿಕೆಯಿಂದಾದ ಅನುಭವಗಳು ನನ್ನ ಆಲೋಚನೆ ನಡೆ ನುಡಿಗಳನ್ನು ಪ್ರಭಾವಿಸಿವೆ.”

 

 

Tags:
error: Content is protected !!