ದನಗಳ ಜಾತ್ರೆಗೆ ಚಾಲನೆ ನೀಡಿದ ಸಚಿವ ಶಿವಾನಂದ ಪಾಟೀಲ್ ಮೆಚ್ಚುಗೆ
ಶ್ರೀಧರ್ ಆರ್. ಭಟ್
ನಂಜನಗೂಡು: ತಾಜ್‌ಮಹಲ್‌ಗಿಂತ ಹೆಚ್ಚಿನ ಶ್ರೇಷ್ಠತೆಯ ಇತಿಹಾಸ ಸುತ್ತೂರಿಗಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದರು.
ದನಗಳ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪಶು-ಪ್ರಾಣಿಗಳನ್ನು ರಕ್ಷಿಸಿಕೊಳ್ಳದಿದ್ದರೆ ಮನು ಕುಲಕ್ಕೆ ಉಳಿಗಾಲವಿಲ್ಲ. ಅವುಗಳನ್ನು ರಕ್ಷಿಸಬೇಕೆಂಬ ಸ್ಥಿತಿಯಲ್ಲಿ ಯಾವ ಸರ್ಕಾರಗಳೂ ಇಲ್ಲವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ, ದನಗಳ ಉಳಿವಿಗಾಗಿ ಎಪಿಎಂಸಿಯಿಂದ ಏನಾದರೂ ಸಹಾಯವಾಗುವುದಿದ್ದರೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಉತ್ತರ ಕರ್ನಾಟಕಕ್ಕೆ ಸಿದ್ದೇಶ್ವರ ಜಾತ್ರೆಯಾದರೆ ದಕ್ಷಿಣ ಕರ್ನಾಟಕ್ಕೆ ಸುತ್ತೂರು ಜಾತ್ರೆಯೇ ವಿಶಿಷ್ಟ. ಸಾಧು- ಸಂತರಿಗೆ ನಮ್ಮ ಸಿದ್ದೇಶ್ವರ ಸ್ವಾಮೀಜಿ ಹಾಗೂ ಸುತ್ತೂರು ಸ್ವಾಮೀಜಿಗಳೇ ಮಾದರಿಯಾಗಿದ್ದಾರೆ ಎಂದರು.
ಕಾಖಂಡಿಯ ಗುರುದೇವಾಶ್ರಮದ ಶಿವಯೋಗೀಶ್ವರರು ಮಾತನಾಡಿ, ಬದುಕನ್ನು ಉತ್ಸಾಹವಾಗಿಸಿಕೊಂಡ ಪರಂಪರೆ ಭಾರತದ್ದಾದರೆ, ಅದನ್ನು ಹೋರಾಟವಾಗಿಸಿ ಕೊಂಡವರು ವಿದೇಶಿಯರು. ನಮ್ಮ ಉತ್ಸಾಹದ ಬದುಕಿಗೆ ನಮ್ಮ ಹಬ್ಬ ಹರಿದಿನಗಳು ಜಾತ್ರೆಗಳೇ ಸಾಕ್ಷಿ ಎಂದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಲೋಕಸೇವಾ ಆಯೋಗದ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪ, ಸದಸ್ಯರಾದ ಗೀತಾ, ನರೇಂದ್ರ ಮಾತನಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅರ್ಜುನ ಗುರೂಜಿ, ಪಳನಿಯ ಪುಲಿಪ್ಪನಿ ಸಿದ್ಧರ್ ಆಶ್ರಮದ ಶ್ರೀ ವಲರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮಿಗಳ್ ಹಾಜರಿದ್ದರು.
ಶಾರದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಧೀರಜ್ ಕುಂಚದಿಂದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಚಿತ್ರವನ್ನು ಬಿಡಿಸಿದನು. ಆ ಮೂಲಕ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ, ನಿಜಗುಣರಾಜು ಮತ್ತಿತರರು ಉಪಸ್ಥಿತರಿದ್ದರು. ತ್ರಿಪುರಾಂತಕ ಸ್ವಾಗತಿಸಿದರೆ, ಬಿ.ಆರ್.ಪಂಚಾಕ್ಷರಿ ವಂದಿಸಿದರು.
ದೇಶ ಹಾಳು ಮಾಡುತ್ತಿರುವ ರಾಜಕಾರಣಿಗಳು’
ನಂಜನಗೂಡು: ಚುನಾವಣೆಯ ಗೆಲುವಿಗಾಗಿ ಸಮಾಜವನ್ನು, ದೇಶವನ್ನು ಹಾಳು ಮಾಡಲಾಗುತ್ತಿದೆ. ಈ ಕೆಟ್ಟ ಚಾಳಿ ಬಿಡಬೇಕು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಹೇಳಿದರು. ಚಿತ್ರಕಲೆ, ಗಾಳಿಪಟ ಸ್ಪರ್ಧೆ, ದನಗಳ ಜಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ನೀವು ಒಳ್ಳೆಯದು ಮಾಡುವುದಾದರೆ ಒಂದನೇ ತರಗತಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ, ಉಚಿತ ಚಿಕಿತ್ಸೆ ನೀಡಿ, ೩ ಲಕ್ಷ ೭೦ ಕೋಟಿ ರೂ. ಬಜೆಟ್‌ನಲ್ಲಿ ಸಂಬಳ, ಸಾರಿಗೆಗೆಂದು ಎರಡು ಲಕ್ಷದ ಐವತ್ತು ಕೋಟಿ ರೂ. ಖರ್ಚಾದರೆ ಅಭಿವೃದ್ಧಿಗಾಗಿ ಉಳಿಯುವುದು ಕೇವಲ ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ ರೂ. ಇದರಲ್ಲಿ ನಿಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ರಸ್ತೆ, ವಿದ್ಯುತ್, ನೀರಿನ ಸೌಲಭ್ಯ ಅಭಿವೃದ್ಧಿ ಸಾಧ್ಯವೇ? ಅಕ್ಷರ, ಆರೋಗ್ಯ ಸುಸ್ಥಿರವಾಗಿದ್ದರೆ ಮಾತ್ರ ರಾಷ್ಟ್ರದ ಅಭಿವೃದ್ಧಿ ಎಂಬುದನ್ನು ಮರೆಯಬಾರದು. ಚುನಾವಣೆಯ ಗೆಲುವಿಗಾಗಿ ದೇಶವನ್ನು ಹಾಳು ಮಾಡಬೇಡಿ ಎಂದು ನುಡಿದರು.
ದರ ಬಂದರೆ ಮಾರಾಟ, ಇಲ್ಲವಾದರೆ ವಾಪಸ್!
ನಂಜನಗೂಡು: ಸುತ್ತೂರಿನ ದನಗಳ ಜಾತ್ರೆಗೆ ರಾಸುಗಳ ಜೊತೆ ಆಗಮಿಸಿದ ಆಲತ್ತೂರು ಹುಂಡಿಯ ಭಾಗ್ಯಮ್ಮ ಅವರು, ದರ ಬಂದರೆ ಮಾರಾಟ ಮಾಡುತ್ತೇವೆ. ನಮ್ಮ ನಿರೀಕ್ಷೆಯ ದರ ಬಾರದಿದ್ದರೆ ಹಟ್ಟಿಗೆ ವಾಪಸ್ ಆಗುತ್ತೇವೆ ಎಂದು ಹೇಳಿದರು