ಓ.ಎಲ್.ನಾಗಭೂಷಣ ಸ್ವಾಮಿ
ದೀಪಾವಳಿ ಟೈಮಿಗೆ ಸರಿಯಾಗಿ ದೀಪಾವಳಿ ವಿಶೇಷಾಂಕದ ಬಗ್ಗೆಯೇ ಬರೆಯೋದಕ್ಕೆ ಸಂಪಾದಕರು ಯಾಕೆ ಹೇಳಿದರೋ! ಯಾವುದೂ ವಿಶೇಷ ಅನ್ನಿಸದ ವಯಸ್ಸಿಗೆ ಕಾಲಿಟ್ಟಿರುವ ನನ್ನ ಯಾಕೆ ಕೇಳಿದರೋ ಗೊತ್ತಾಗುತ್ತಲೇ ಇಲ್ಲ. ಹಾಗಂತ ಅಂದುಕೊಂಡು ಎರಡು ಮೂರು ದಿನ ತಳ್ಳಿದೆ.
ಒಬ್ಬ ಬರಹಗಾರರ ಬರವಣಿಗೆ ಓದುವುದು ಒಂದು ಥರಾ, ಹಲವು ಬರಹಗಾರರು ಲೋಕದಲ್ಲಿ ನಡೆಯುವುದನ್ನು ನೋಡಿ ಬರೆದದ್ದನ್ನು ದಿನಾ ದಿನಾ ಹೊಸತಾಗಿ ಓದುವುದು ಇನ್ನೊಂದು ಥರಾ. ಕನ್ನಡ ಓದುವುದು ಕಲಿತಾಗ ಬರಹಗಾರರು ಬರೆದ ಕಥೆ ಕಾದಂಬರಿ ಓದಿ ಖುಷಿ ಆಗುತ್ತಿತ್ತು. ನನಗಾಗಿಯೇ ಇದನ್ನು ಬರೆದರೇನೊ ಅನಿಸುತ್ತಿತ್ತು. ಆಗ ಪ್ರಜಾವಾಣಿ ಮತ್ತು ಈಗ ಇಲ್ಲವಾಗಿ ಮರೆತೇ ಹೋಗಿರುವ ತಾಯಿ ನಾಡು ಪೇಪರು ಓದುತ್ತ ಎಷ್ಟೊಂದು ಮನುಷ್ಯರು, ಎಷ್ಟೊಂದು ಸಂಗತಿಗಳ ಬಗ್ಗೆ ಪ್ರತಿ ದಿನ ಓದುವುದು ಬೇರೆ ಥರ ಅನಿಸುತ್ತಿತ್ತು. ವಾರದ ಕೊನೆಗೆ ಮಕ್ಕಳ ಪುಟವೋ, ಪ್ರತಿ ಶುಕ್ರವಾರ ಬರುವ ಸಿನಿಮಾ ಸುದ್ದಿಯೋ, ಜಾಹಿರಾತುಗಳೋ ವಿಶೇಷ ಅನಿಸುತ್ತಿದ್ದವು. ದೀಪಾವಳಿ ವಿಶೇಷಾಂಕ ಬಂದರೆ ಆಹಾ, ಹದಿನೈದು ದಿನಗಳಾದರೂ ಮೈ ಮರೆತು ಓದಬಹುದು ಅನ್ನುವ ಖುಷಿ ಇರುತ್ತಿತ್ತು.
ಜೊತೆಗೆ ಪೂರ್ತಿ ಪುಟದ ಬಣ್ಣದ ಚಿತ್ರಗಳು ಇರುತ್ತಿದ್ದವು. ವಾರಕ್ಕೊಂದು ಸಲ ಬರುತ್ತಿದ್ದ ಸಿನಿಮಾ ಸುದ್ದಿ ಬದಲು ನಟ, ನಟಿಯರನ್ನು ಕುರಿತ, ಕಂಪೆನಿ ನಾಟಕದ ಪ್ರಸಿದ್ಧರು ಹಂಚಿಕೊಂಡ ನೆನಪುಗಳಿರುತ್ತಿದ್ದವು. ಅವೆಲ್ಲ ಬಹಳ ರುಚಿ ಅನಿಸುತ್ತಿದ್ದವು. ಜೊತೆಗೆ ಆಗ ಹುಷಾರಿಲ್ಲದ ಅಪ್ಪನಿಗೆ, ಸಲೀಸಾಗಿ ಓದಲಾಗದ ಅಮ್ಮನಿಗೆ, ಅವರು ಕೇಳಿದ ಬರಹವನ್ನು ಗಟ್ಟಿಯಾಗಿ ಓದಿ ಹೇಳುತ್ತ ಕನ್ನಡ ಓದುವ ಅಭ್ಯಾಸ ಬೆಳೆಯಿತು.
ಪ್ರಜಾಮತ, ಜನಪ್ರಗತಿ, ಅಂತ ಎರಡು ವಾರ ಪತ್ರಿಕೆಗಳು ಬರುತ್ತಿದ್ದವು. ಪ್ರಜಾಮತದಲ್ಲಿ ಮಹಾ ಯಕ್ಷಣಿಗಾರ ಮಾಂಡ್ರೇಕ್ ಚಿತ್ರಕಥೆ ಓದಲು ವಾರವೆಲ್ಲ ಕಾದಿರುತ್ತಿದ್ದೆವು. ನನ್ನ ವಯಸ್ಸಿನ ಗೆಳೆಯರು ಎರಡು ನಿಮಿಷಗಳಲ್ಲಿ ಓದು ಮುಗಿದು, ಚಿತ್ರಗಳನ್ನೆಲ್ಲ ಮತ್ತೆ ಮತ್ತೆ ನೋಡಿ, ಕಾಮೆಂಟು ಮಾಡುತ್ತ ಹೊಸ ಲೋಕ ಕಟ್ಟಿಕೊಳ್ಳುತ್ತಿದ್ದೆವು. ಹೊಸ ವಾರ ಪತ್ರಿಕೆ ಬರುತ್ತಂತೆ, ಒಪ್ಪಿಗೆ ಆಗುವ ಹೆಸರು ಹೇಳಿದರೆ ಬಹುಮಾನ ಕೊಡುತ್ತಾರಂತೆ ಅಂತ ಉಮೇದಿನಲ್ಲಿ ಮಾತಾಡುತ್ತಾ ಇರುವಾಗ ಸುಧಾ ಬಂದಿತ್ತು. ನಲವತ್ತೈದು ಪೈಸೆ ಅಥವಾ ಐವತ್ತು ಪೈಸೆಗೆ ಸುಮಾರು ಐವತ್ತು ಪುಟ ಪ್ರತಿ ವಾರ ಸಿನಿಮಾ, ಕಥೆ, ತಮಾಷೆ, ಭವಿಷ್ಯ ಇತ್ಯಾದಿ ಎಲ್ಲವೂ ಸಿಗುತ್ತೆ ಅಂಥ ಖುಷಿಯೋ ಖುಷಿ.
ಸುಧಾದಲ್ಲಿ ಓದಿದ ಧಾರಾವಾಹಿಗಳು ನೆನಪಿವೆ. ಎಡಕಲ್ಲುಗುಡ್ಡದ ಮೇಲೆ, ಅಂತ, ಅವಧಾನ, ಶಬ್ದಗಳು. . . ಹೀಗೆ ಹತ್ತಾರು ಹೆಸರು, ಕಥೆಗಳು ನೆನಪಾಗುತ್ತವೆ. ಈಗ ನೆನೆದರೆ ದೀಪಾವಳಿ ವಿಶೇಷಾಂಕದ ಹೂರಣವನ್ನು ಸಣ್ಣಪ್ರಮಾಣದಲ್ಲಿ ವಾರವಾರ ಹಂಚುವ ಕೆಲಸ ಮಾಡಿದವು ಈ ವಾರ ಪತ್ರಿಕೆಗಳು ಅನಿಸುತ್ತವೆ. ತರಂಗ, ಗೋಕುಲ ಇಂಥ ಎಷ್ಟೊಂದು ವಾರ ಪತ್ರಿಕೆಗಳು ಹುಟ್ಟಿದ ಹಾಗೆ ವರ್ಷಕ್ಕೊಂದು ಹಬ್ಬದೂಟ ಇದ್ದದ್ದು ವಾರವಾರ ಸಿಗುವ ಬಾಯಿ ರುಚಿ ತಣಿಸುವ ಓದು ಆಗಿ ವಿಶೇಷಾಂಕದ ವಿಶೇಷ ಅರುವತ್ತರ ದಶಕದ ಕೊನೆಗೇ ಮಂಕಾಯಿತೇನೋ.
ವರುಷಕ್ಕೆ ಎರಡು ಸಲವೋ ನಾಲ್ಕು ಸಲವೋ ಹೋಳಿಗೆ ಉಣ್ಣುವ, ಹೊಸ ಬಟ್ಟೆ ತೊಡುವ ಸಂಭ್ರಮ ಅಪರೂಪವಾದ್ದರಿಂದಲೇ ವಿಶೇಷವೆನಿಸುತ್ತಿತ್ತು. ರೇಡಿಯೋಗಳಿಲ್ಲದೆ, ಟಿವಿ ಇಲ್ಲದೆ, ಮೊಬೈಲು ಇಲ್ಲದೆ, ಸದ್ದನ್ನು ನಮ್ಮ ಕಿವಿಯೊಳಕ್ಕೆ ಮಾತ್ರ ತಂದು ಸುರಿಯುವ ಇಯರ್ ಫೋನು ಇಲ್ಲದೆ, ಫೇಸ್‌ಬುಕ್ಕು, ರೀಲ್ಸ್‌ಗಳು ಇಲ್ಲದೆ, ಮನಕಲಕುವ ಧಾರಾವಾಹಿಗಳು ಮನೆ ಮನೆಯಲ್ಲೂ ಬೊಬ್ಬಿರಿದು ಮೆರೆಯದೆ ಇರುವ ಹೊತ್ತಿನಲ್ಲಿ ಯಾವುದಾದರೂ ಗಹನ ವಿಷಯದ ಬಗ್ಗೆ ನಾಲ್ಕಾರು ಜನ ಚರ್ಚೆ ಮಾಡುವ ಸೆಮಿನಾರು, ಕಿರು ಪತ್ರಿಕೆ ಇರದಿದ್ದ ಕಾಲದಲ್ಲಿ, ಸಂಶೋಧನೆ ಅನ್ನುವುದು ತೀರಾ ಅಪರೂಪವಾಗಿದ್ದ ಕಾಲದಲ್ಲಿ ವರ್ಷಕ್ಕೊಂದು ವಿಶೇಷ ಸಂಚಿಕೆಯಲ್ಲಿ ಇವೆಲ್ಲ ಇರುತ್ತಿದ್ದದ್ದು ನಿಜವಾಗಿ ವಿಶೇಷವೇ ಆಗಿರುತ್ತಿತ್ತು. ಬೀದಿಯಲ್ಲಿ ಮಿಣುಕು ದೀಪಗಳು ಕತ್ತಲು ಬೆಳಕಿನ ಸರೋವರ ನಿರ್ಮಿಸುತ್ತ ಕತ್ತಲ ಕೊಳಗಳೇ ವಿಶಾಲವಾಗಿದ್ದ ಕಾಲದಲ್ಲಿ ಕೊಳವೆ ದೀಪ ಬಂದು ಸ್ವಲ್ಪ ಹೆಚ್ಚು ಪ್ರಖರ ದೀಪ ಕಾಣುತ್ತಿದ್ದ ಕಾಲ. ನಮ್ಮಪ್ಪನ ಕಾಲದಲ್ಲಿ ಇನ್ನೂ ಬೀದಿಯ ದೀಪದ ಕಂಬವೇರಿ ಎಣ್ಣೆ ಸುರಿದು ದೀಪ ಹೊತ್ತಿಸುವ ಪದ್ಧತಿ ಇತ್ತಂತೆ.
ಒಟ್ಟು ಕತ್ತಲೆಯೇ ಹೆಚ್ಚು ಅನ್ನಿಸುವ ಕಾಲದಲ್ಲಿ ಲಕ್ಷ ದೀಪೋತ್ಸವದಂಥ ಬೆಳಕಿನ ಹಬ್ಬ ಖುಷಿ ತರುತ್ತಿತ್ತು. ನನ್ನ ಎಳವೆಯಲ್ಲಿ ಮಲೆನಾಡಿನಲ್ಲಿ ಇನ್ನೂ ಕುಗ್ರಾಮವಾಗಿದ್ದ ಸುಬ್ರಹ್ಮಣ್ಯದಲ್ಲಿ ಅಕಸ್ಮಾತ್ ನೋಡಲು ಅವಕಾಶ ಸಿಕ್ಕ ಲಕ್ಷದೀಪೋತ್ಸವದ ಚಿತ್ರ, ಸಾಲು ಸಾಲಾಗಿ ಉರಿಯುತ್ತಿದ್ದ ಎಣ್ಣೆ ದೀಪಗಳ ಚಿತ್ರ ಅರುವತ್ತು ವರ್ಷ ಹಿಂದಿನದಾದರೂ ಈಗಲೂ ಮನಸ್ಸು ತುಂಬುತ್ತದೆ. ಬೆಳಕು ವಿಶೇಷವಾಗಿದ್ದ ಕಾಲ ಅದು. ಎಷ್ಟೋ ಮನೆಗಳಲ್ಲಿ ವಿದ್ಯುತ್ ದೀಪ ಕೂಡ ಇರದಿದ್ದ ಕಾಲ. ಜೊತೆಗೆ ನರಕಾಸುರ ಇತ್ಯಾದಿ ಕಥೆಗಳ ಬೆಂಬಲ ಬೇರೆ. ನೀರು ಎರೆದು ಕೊಳ್ಳುವುದೇ ಸಂಭ್ರಮ, ಒಂದು ಹಬ್ಬ ಮತ್ತು ಕಿರಿಕಿರಿ ಎರಡೂ ಆಗಿದ್ದ ಕಾಲ. ಹೊಸದಾಗಿ ಮದುವೆಯಾದ ದಂಪತಿ ಮೊದಲ ದೀಪಾವಳಿಗೆ ಹೆಣ್ಣಿನ ಮನೆಗೆ ಬರುವ ವಿಶೇಷ ಹಬ್ಬದ ಕಾಲ. ಈಗ ಅವು ಯಾವುದೂ ವಿಶೇಷ ಅನಿಸದಿರುವುದು ನನ್ನ ಹಾಗೆ ಉದ್ಯೋಗದಲ್ಲಿದ್ದು, ಮುಗ್ಧತೆ ಕಳಕೊಂಡು ನಿತ್ಯದ ಚಟುವಟಿಕೆಯ ವೃತ್ತದಾಚೆಗೆ ನಿವೃತ್ತರಾಗಿ ಮೈ ಮನಸ್ಸುಗಳು ಮುಸ್ಸಂಜೆಗೆ ಕಾಲಿಡುತ್ತಾ ಮತ್ತೆ ಕತ್ತಲೆಗೆ ಹತ್ತಿರವಾದವರಿಗೆ ಮಾತ್ರ ಅನಿಸುತ್ತದೋ? ಅಥವಾ ಬದಲಾವಣೆ ನಿಜವಾಗಿ ಆಗಿದೆಯೋ?
ನಾನು ಎಳವೆಯಲ್ಲಿ ನೋಡಿದ ಮೈಸೂರು, ಬೆಂಗಳೂರಿನ ಬದುಕು, ಊರಿನ ಲಕ್ಷಣಗಳ ಮ್ಯಾಪು ಮನಸ್ಸಿನಲ್ಲಿ ಊರಿಕೊಂಡಿದೆ. ದಿಟ್ಟಿಸಿ ನೋಡಿದರೆ ಈ ದಿನಮಾನದಲ್ಲಿ ಕ್ರಿಸ್ತ ಪೂರ್ವ ಕಾಲದ ಮ್ಯಾಪು ನೋಡಿದ ಹಾಗೆ ಇರುತ್ತದೆ. ರಾತ್ರಿಗಳು ಕಳೆದು ಹೋಗಿವೆ. ಚಿಕ್ಕಂದಿನಲ್ಲಿ ಮನೆಯ ಹೊರಗೋ ಚಾವಣಿಯ ಮೇಲೋ ಚಾಪೆಯ ಮೇಲೆ ಮಲಗಿ ನಕ್ಷತ್ರ ನೋಡುತ್ತ ದೂರ ದೂರದ ಮಿಣುಕು ದೀಪಗಳು ದೊಡ್ಡ ಅಗರಬತ್ತಿಯ ಹಾಗೆ ಕಾಣುತ್ತಿದ್ದ ಕತ್ತಲು ಈಗಿಲ್ಲ. ಬೀದಿಯ ತುದಿಯಲ್ಲಿ, ತಿರುವಿನಲ್ಲಿ ಇರುತ್ತಿದ್ದ ಪೇಪರ್ ಅಂಗಡಿಗಳು ಈಗ ಕಾಣಿಸುವುದೇ ಅಪರೂಪ. ಪಾರ್ಕಿನಲ್ಲಿ, ರೈಲು ಬಸ್ಸುಗಳಲ್ಲಿ, ಪುಸ್ತಕವನ್ನು ಅಥವಾ ಕೊನೆಯ ಪಕ್ಷ ಪೇಪರನ್ನು ಓದುತ್ತಿದ್ದವರೂ ಇಲ್ಲವಾಗಿದ್ದಾರೆ.
ಕ್ಷಣಕ್ಷಣದ ಸುದ್ದಿಗಳನ್ನು ಬೇಕೋ ಬೇಡವೋ ತಂದು ಅಂಗೈಯಲ್ಲಿಡುವ ಮೊಬೈಲು ಇರುವಾಗ, ಯಾವುದೋ ಕ್ಷುಲ್ಲಕ ಸುದ್ದಿಯನ್ನು ದಿನವಿಡೀ ಮುರಿದು ಮುರಿದು ಘೋಷಿಸುತ್ತಿರುವಾಗ ಓದುವ ವ್ಯವಧಾನವೆಲ್ಲಿದೆ? ದೀಪಾವಳಿ ಕಥಾಸ್ಪರ್ಧೆ ವರ್ಷಕ್ಕೊಮ್ಮೆ ಎರಡು ಅಥವಾ ಮೂರು ಪತ್ರಿಕೆಗಳು ನಡೆಸುತ್ತಿದ್ದವು. ಈಗ ಚಿಕ್ಕ ಊರುಗಳಲ್ಲೂ ಒಂದೊಂದು ಪ್ರತಿಷ್ಠಾನ ಒಂದೊಂದು ಪ್ರಶಸ್ತಿ. ಯಾವುದೇ ಪ್ರಶಸ್ತಿ, ಬಹುಮಾನ ಪಡೆಯದೆ ಇರುವ ಯುವ ಲೇಖಕರು ಇರುವುದೇ ಅನೂಹ್ಯ ಅನ್ನುವಂಥ ಪರಿಸ್ಥಿತಿ.
ವರ್ಷಕ್ಕೆ ಎರಡು ಅಥವಾ ಮೂರು ಹೋಳಿಗೆ ಊಟವಿದ್ದದ್ದು, ಈಗ ಕಾಸಿದ್ದರೆ ಮನೆಗೇ ಬರುವಷ್ಟು ಸಸ್ತಾ ಆಗಿರುವಾಗ ಊಟ, ಹೊಸರುಚಿ ಕೂಡ ವಿಶೇಷವಲ್ಲ. ಪೇಪರು ವಿಶೇಷವಲ್ಲ, ವಿಶೇಷಾಂಕ ವಿಶೇಷವಲ್ಲ, ಬಹುಮಾನ ವಿಶೇಷವಲ್ಲ, ಪ್ರಶಸ್ತಿ ವಿಶೇಷವಲ್ಲ, ಊಟ, ಸಿಹಿ ವಿಶೇಷವಲ್ಲ, ಹೊಸಬಟ್ಟೆಯಂತೂ ವಿಶೇಷ ಅಲ್ಲವೇ ಅಲ್ಲ. ವಿಶೇಷಾಂಕ ಮಾತ್ರ ವಿಶೇಷವಾಗಿರಲು ಹೇಗೆ ಸಾಧ್ಯ? ಹಾಗೆ ರೂಢಿಯನ್ನು ಮುರಿದು ಲಂಕೇಶರು ಸೃಷ್ಟಿ ಮಾಡಿದ್ದ ಪಾಂಚಾಲಿ ವಿಶೇಷಾಂಕ, ಸಂಕ್ರಮಣವು ವರ್ಷಕ್ಕೊಮ್ಮೆ ಬಹುಮಾ ನಿತ ಬರಹಗಳನ್ನು ಪ್ರಕಟಿಸುತ್ತಿದ್ದ ವಿಶೇಷಾಂಕ ನೆನಪಿನಲ್ಲಿ ಉಳಿದಿವೆ. ಯಾವುದು ರೂಢಿಯನ್ನು ಮುರಿಯುತ್ತದೋ ಅಪರಿಚಿತ ವಾಗಿರುತ್ತದೋ ಅದು ಮಾತ್ರ ವಿಶೇಷವಾಗಿರುತ್ತದೆ, ಅಲ್ಲವೇ? ವಾಣಿಜ್ಯದ ಕಾರಣಕ್ಕೆ ವರ್ಷದ ಪ್ರತಿದಿನವೂ ಒಂದೊಂದು ವಿಶೇಷ ದಿನವಾಗಿದೆ. ಅಮ್ಮನ ದಿನ, ಅಪ್ಪನ ದಿನ, ಮಗಳ ದಿನ, ಗೆಳೆತನದ ದಿನ, ಪ್ರೇಮಿಗಳ ದಿನ ಹೀಗೆ. ಒಂದೊಂದು ದಿನವೂ ವಿಶೇಷವಾದ ದಿನವಾದಾಗ ವಿಶೇಷ ದಿನ ಅನ್ನುವುದಕ್ಕೆ ಅರ್ಥವೇ ಇಲ್ಲ. ವಿಶೇಷಾಂಕದ ಬರಹಗಳೂ ದಿನವೂ ಕಾಣುವ ಬರಹಗಳೇ ಆದಾಗ, ಹೆಸರಿಗೆ ವಿಶೇಷವೆಂದು ಓದಬೇಕೆಂಬ ಅಪೇಕ್ಷೆಯೂ ಹುಟ್ಟುವುದಿಲ್ಲ.
ಇದು ನಿರಾಸೆಯ ಮಾತೂ ಹೌದು. ಇನ್ನೊಂದು ಮಗ್ಗುಲನ್ನೂ ನೋಡಿ. ಭಾರತದ ಶೇಕಡಾ ೧೪ಜನಕ್ಕೆ, ಅಂದರೆ ಸುಮಾರು ಒಂದೂವರೆ ಕೋಟಿ ಜನಕ್ಕೆ ಹೊತ್ತಿನ ಊಟ ಸಿಗುವುದಿಲ್ಲ ಎಂಬ ಹಸಿವಿನ ಲೆಕ್ಕ ಇತ್ತೀಚೆಗಷ್ಟೇ ನೋಡಿದೆ. ಕೋಟಿ ಜನದ ಬದುಕಲ್ಲೂ ಕತ್ತಲೆಯಲ್ಲೇ ಇರುವ ವಿಪರ್ಯಾಸವೂ ನಮ್ಮನ್ನು ಬಾಽಸದು. ಲೋಕದ ಚಿಂತೆ ನಿಮಗೇಕಯ್ಯಾ ಇದು ನಮ್ಮ ಘೋಷವಾಕ್ಯ. ಕಿವಿಗೆ ಹೊರಗಿನ ಸದ್ದು ಬೀಳದ ಹಾಗೆ ಇಯರ್‌ಫೋನು, ಹೊರಗಿನ ಲೋಕ ಕಣ್ಣಿಗೆ ಕಾಣದ ಹಾಗೆ ಟಿವಿ ಅಥವಾ ಮೊಬೈಲಿನ ಪರದೆ, ಹೊರಗೆ ಬೆಳಕಿನ ಮಾಲಿನ್ಯ ಹೆಚ್ಚಿದಷ್ಟೂ ಒಳಗೆ ಕತ್ತಲು ದಟ್ಟವಾಗುತ್ತಿರುವ ಒಂಟಿ ಜನರೇ ಎಲ್ಲೆಲ್ಲೂ ಕಾಣುತ್ತಿದ್ದಾರೆ.