Mysore
26
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಕೊಳ ನಿರುಪಯುಕ್ತ; ಭಕ್ತರಲ್ಲಿ ನಿರಾಸೆ

ಎಂ.ಬಿ.ರಂಗಸ್ವಾಮಿ

ಮೂಗೂರು: ೩ ವರ್ಷಗಳಿಂದ ಸ್ಥಗಿತಗೊಂಡಿರುವ ತೆಪ್ಪೋತ್ಸವ 

ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಕೋಟ್ಯಂತರ ರೂ. ವ್ಯಯಿಸಿ ನೂತನ ಕಲ್ಯಾಣಿ ನಿರ್ಮಾಣ ಮಾಡಿದ್ದರೂ ೩ ವರ್ಷಗಳಿಂದ ತೆಪ್ಪೋತ್ಸವ ನಡೆಯದೆ ಭಕ್ತರಲ್ಲಿ ನಿರಾಸೆ ಉಂಟಾಗಿದೆ.

ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಕಲ್ಯಾಣಿಯು ಪುರಾತನ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು, ಅನಾದಿ ಕಾಲದಿಂದಲೂ ಜಾತ್ರಾ ಮಹೋತ್ಸವದ ವೇಳೆ ಅಮ್ಮನವರ ತೆಪ್ಪೋತ್ಸವವನ್ನು ಬಹಳ ಸಡಗರ ಸಂಭ್ರಮ ದಿಂದ ನಡೆಸಿಕೊಂಡು ಬರಲಾಗುತ್ತಿತ್ತು.

ನಂತರದ ದಿನಗಳಲ್ಲಿ ಕೊಳದ ಅಂದವನ್ನು ಹೆಚ್ಚಿಸುವ ಸಲುವಾಗಿ ಹಳೆಯ ಕೊಳವನ್ನು ತೆರವುಗೊಳಿಸಿ ವಿನೂತನ ರೀತಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನೂತನ ಕಲ್ಯಾ ಣಿಯ ಕಾಮಗಾರಿಯನ್ನು ಕೈಗೊಳ್ಳಲಾಯಿತು. ಆದರೆ, ಕಲ್ಯಾಣಿ ಪರಿಪೂರ್ಣತೆ ಕಾಣದೇ ೩ ವರ್ಷಗಳಿಂದ ತೆಪ್ಪೋತ್ಸವ ನಡೆಯದೆ ಸ್ಥಗಿತಗೊಂಡಿರುವುದು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ. ಜತೆಗೆ ಈ ಬಾರಿಯೂ ಜಾತ್ರೆಯಲ್ಲಿ ತೆಪ್ಪೋತ್ಸವ ನಡೆಯುವ ಬಗ್ಗೆ ಅನುಮಾನ ಮೂಡಿಸಿದೆ.

ಈಗ ನಿರ್ಮಿಸಿರುವ ಕೊಳ ಆಳವಾಗಿದ್ದು, ತೆಪ್ಪ ಓಡಿಸಲು ಅನುಕೂಲವಾಗಿಲ್ಲ ಮತ್ತು ಜನರ ಸುರಕ್ಷತೆ ದೃಷ್ಟಿಯಿಂದ ತೆಪ್ಪೋತ್ಸವ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಜಾತ್ರಾ ಮಹೋತ್ಸವದ ಸರದಿಯಲ್ಲಿ ಪಾಲ್ಗೊಳ್ಳುವ ಸಮುದಾಯದ ಮುಖ್ಯಸ್ಥ ರಲ್ಲಿ ಸಮನ್ವಯತೆ ಇಲ್ಲದಿರುವುದು ಮತ್ತು ಗ್ರಾಮದ ಮುಖಂಡರಲ್ಲಿನ ಇಚ್ಛಾಶಕ್ತಿಯ ಕೊರತೆಯೂ ಕೂಡ ತೆಪ್ಪೋತ್ಸವದ ಸ್ಥಗಿತಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನಾದರೂ ದೇಗುಲದ ನೂತನ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲು ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂಬುದು ಗ್ರಾಮಸ್ಥರ ಮನವಿಯಾಗಿದೆ.

” ನುರಿತ ತೆಪ್ಪ ಓಡಿಸುವವರನ್ನು ಸ್ಥಳಕ್ಕೆ ಕರೆಸಿ ಅವರ ಸಲಹೆಯಂತೆ ಗ್ರಾಮದ ಮುಖಂಡರು, ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ ತೆಪ್ಪೋತ್ಸವ ನಡೆಸುವ ಬಗ್ಗೆ ಜಾತ್ರೆಗೂ ಮುನ್ನವೇ ತೀರ್ಮಾನ ಮಾಡಲಾಗುವುದು.”

 -ಎಂ.ಬಿ.ಸಾಗರ್, ದೇವಾಲಯದ ಪಾರುಪತ್ತೆಗಾರ್, ಮೂಗೂರು.

” ಶ್ರೀ ತ್ರಿಪುರ ಸುಂದರಿ ಅಮ್ಮನವರ ಕಲ್ಯಾಣಿ ಬಗ್ಗೆ ಪೂರ್ಣ ಮಾಹಿತಿ ಲಭ್ಯವಿಲ್ಲ. ಕಚೇರಿಯ ಗುಮಾಸ್ತರಿಂದ ಮಾಹಿತಿ ಪಡೆದು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.”

-ಸುರೇಶಾಚಾರ್, ತಹಸಿಲ್ದಾರ್, ತಿ.ನರಸೀಪುರ.

Tags: