Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಧ್ರುವನಾರಾಯಣರನ್ನು ಇಂದಿಗೂ ಸ್ಮರಿಸುವ ಕೋಟೆಯ ಜನತೆ

ಮಂಜು ಕೋಟೆ

ಎಚ್.ಡಿ.ಕೋಟೆ: ಕ್ಷೇತ್ರದ ಜನಪ್ರತಿನಿಧಿಗಳು, ಜನಸಾಮಾನ್ಯರು ಹಾಗೂ ಕ್ಷೇತ್ರದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಿದ್ದ ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಅವರನ್ನು ಕಾರ್ಯಕರ್ತರು, ಮುಖಂಡರು, ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ.

ಜು.೩೧ರಂದು ಧ್ರುವನಾರಾಯಣ ಅವರ ಜನ್ಮದಿನ. ೧೦ ವರ್ಷಗಳ ಕಾಲ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆ, ಹಿಂದುಳಿ ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದ ಧ್ರುವ ಅವರು ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿದ್ದರು. ಹೀಗಾಗಿ ಜನರು ಇಂದಿಗೂ ಅವರನ್ನು ಸ್ಮರಿಸುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಸಂಸದರಾಗಿ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದ ಧ್ರುವರವರು ಗಿರಿಜನರ, ದಲಿತರ, ಬಡವರ, ರೈತರ ಅಭಿವೃದ್ಧಿಗಾಗಿ ಅತೀ ಹೆಚ್ಚು ಅನುದಾನ ನೀಡಿ, ಹೊಸ ಯೋಜನೆಗಳನ್ನು ನೀಡಿ ಶಾಶ್ವತವಾದ ಕೆಲಸಗಳನ್ನು ಮಾಡಿದ್ದರಿಂದ ಜನಸಾಮಾನ್ಯರು ಪ್ರತಿವರ್ಷ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಆಡಳಿತ ಮತ್ತು ಕೆಲಸ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಅವರ ಪ್ರತಿ ಹುಟ್ಟುಹಬ್ಬಕ್ಕೂ ಕಾರ್ಯಕರ್ತರು ಮುಖಂಡರು, ಜನರು ಶುಭಾಶಯ ಕೋರಲು ಮತ್ತು ಆಚರಣೆ ಮಾಡಲು ಮುಂದಾದರೂ ಅವರು ಅದ್ಧೂರಿ ಆಚರಣೆಗೆ ಆದ್ಯತೆ ನೀಡದೆ, ದೇವಸ್ಥಾನ ಮತ್ತು ಅವರ ಜಮೀನಿಗೆ ತೆರಳಿ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಹೊಸ ವರ್ಷದಲ್ಲಿ ತಾಲ್ಲೂಕಿಗೆ ಆಗಮಿಸಿ ಗಿರಿಜನರ ಹಾಡಿಗಳಿಗೆ ಭೇಟಿ ನೀಡಿ, ಅವರಿಗೆ ನೀಡಲಾಗಿದ್ದ ಶಾಲು, ಹಾರ, ಇನ್ನಿತರ ವಸ್ತುಗಳನ್ನು ಅವರಿಗೆ ನೀಡುತ್ತಿದ್ದರು. ನಂತರ ಅವರ ಜೊತೆ ಕೂತು ಊಟ ಮಾಡಿ ಹೊಸ ವರ್ಷ ಆಚರಣೆ ಮಾಡುತ್ತಿದ್ದರು ಇದು ಅವರ ನಡವಳಿಕೆ ಮತ್ತು ಸರಳತೆಗೆ ಸಾಕ್ಷಿಯಾಗಿತ್ತಲ್ಲದೆ, ಇತರ ರಾಜಕಾರಣಿಗಳಿಗೆ ಮಾದರಿಯಾಗಿತ್ತು.

ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿ ಅತಿ ಕಿರಿಯ ವಯಸ್ಸಿನ ಅನಿಲ್ ಚಿಕ್ಕಮಾದು ಅವರನ್ನು ಶಾಸಕರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗಲೂ ಅನಿಲ್ ಚಿಕ್ಕಮಾದು ಅವರು ತಮಗೆ ಮಾರ್ಗದರ್ಶನ ನೀಡಿದ ಧ್ರುವನಾರಾಯಣ ಅವರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಾರೆ

ನಂಜನಗೂಡಿನಲ್ಲೂ ಈಗ ಶಾಸಕರಾಗಿರುವ ದರ್ಶನ್ ಧ್ರುವನಾರಾಯಣ ಅವರಿಗೆ ಕ್ಷೇತ್ರದ ಜನತೆ ಮತ್ತು ಕಾರ್ಯಕರ್ತರು, ಮುಖಂಡರು ಅವರ ತಂದೆಗೆ ನೀಡುತ್ತಿದ್ದ ಎಲ್ಲಾ ಗೌರವ, ಅಭಿಮಾನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಧ್ರುವನಾರಾಯಣ ಅವರು ಮಾಡಿದ ಕೆಲಸ ಕಾರ್ಯಗಳು, ಸರಳ ವ್ಯಕ್ತಿತ್ವದಿಂದಾಗಿ ಜನರು ಇಂದಿಗೂ ಅವರನ್ನು ಸ್ಮರಿಸುತ್ತಿದ್ದಾರೆ.

Tags:
error: Content is protected !!