Mysore
16
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ʼಸ್ವಚ್ಛ ಮಂಡ್ಯ ಗುರಿಯತ್ತ ಸಾಗುತ್ತಿರುವ ನಗರಸಭೆ’  

ಹೇಮಂತ್‌ಕುಮಾರ್

ಮಂಡ್ಯ: ನಗರದಲ್ಲಿ ಕಳೆದ ಒಂದು ವಾರದಿಂದ ಸದ್ದಿಲ್ಲದೇ ಆರಂಭಗೊಂಡಿರುವ ಸ್ವಚ್ಛ ಸರ್ವೇಕ್ಷಣೆ ಅಭಿಯಾನವು ಸ್ವಚ್ಛ ಮಂಡ್ಯ ಗುರಿಯನ್ನಿಟ್ಟುಕೊಂಡು ಸಾಗಿರುವುದು ನಾಗರಿಕರಲ್ಲಿ ಸಂತಸ ಮೂಡಿಸಿದೆ.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಆಶಯದಂತೆ ಮಂಡ್ಯ ನಗರಸಭೆ ಪೌರಾಯುಕ್ತರಾದ ಪಂಪಶ್ರೀ ಅವರು ರೂಪಿಸಿರುವ ಈ ಅಭಿಯಾನದಲ್ಲಿ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ನಗರಸಭೆಯ ಸಿಬ್ಬಂದಿ ಹಾಗೂ ವಾರ್ಡ್‌ನ ಸ್ವಚ್ಛತಾ ಕೆಲಸಗಾರರು ಪಾಲ್ಗೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರಸಭೆ ವ್ಯಾಪ್ತಿಯ ಎಲ್ಲ ೩೫ ವಾರ್ಡ್ಗಳಲ್ಲೂ ಈ ಅಭಿಯಾನ ಆರಂಭಿಸಿರುವ ಈ ೨೩ ಮಂದಿಯ ತಂಡದಲ್ಲಿ ಆರೋಗ್ಯ ನಿರೀಕ್ಷಕರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಸ್ವಚ್ಛತಾ ಕೆಲಸಗಾರರು ಸೇರಿದಂತೆ ವಾರ್ಡ್‌ಗೆ ೨೦ ರಿಂದ ೨೫ ಮಂದಿ ತೊಡಗಿಸಿ ಕೊಂಡಿರುವುದು ವಿಶೇಷ.

ಈಗಾಗಲೇ ನಗರದ ಕಾಳಿಕಾಂಬ ದೇವಾಲಯದ ಮುಂಭಾಗವಿರುವ ಗಜೇಂದ್ರ ಮೋಕ್ಷ ಕಲ್ಯಾಣಿ ಆವರಣ, ಶಂಕರನಗರದ ಕೆ.ವಿ.ಶಂಕರಗೌಡ ಪಾರ್ಕ್, ಅಂಬುಜಮ್ಮ ಪಾರ್ಕ್ ಸೇರಿದಂತೆ ಬಹುತೇಕ ವಾಡ್ಗಳಲ್ಲಿನ ಕಸದ ರಾಶಿ ಬೀಳುತ್ತಿದ್ದ ಜಾಗಗಳಲ್ಲಿ ಸ್ವಚ್ಛತಾ ಕೆಲಸ ಮಾಡಿ, ಅಲ್ಲಿ ಖಾಲಿ ಟೈರ್‌ಗಳು, ಕಲ್ಲುಗಳು ಮುಂತಾದ ವಸ್ತುಗಳನ್ನು ಕಲರಿಂಗ್ ಮಾಡಿ ಆಧುನಿಕ ಡಿಸೈನ್‌ಗಳ ಮೂಲಕ ಆಕರ್ಷಣಿಯ ತಾಣಗಳನ್ನಾಗಿಸಿರುವುದನ್ನು ಕಾಣಬಹುದಾಗಿದೆ.

ಈ ಸ್ಥಳಗಳಲ್ಲಿ ಕಸ ಸುರಿಯುವ ಪ್ರಕ್ರಿಯೆ ನಿಂತುಹೋಗಿರುವುದು ಸ್ಥಳೀಯರ ಸಮಾಧಾನಕ್ಕೆ ಕಾರಣವಾಗಿದೆ. ೧೫ ಶಾಲಾ,ಕಾಲೇಜುಗಳು, ಹಾಸ್ಟೆಲ್‌ಗಳು, ೩ ಪಾರ್ಕ್‌ಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಸರ್ವೇಕ್ಷಣಾ ಕಾರ್ಯ ನಡೆಸಲಾಗಿದೆ. ಇದರ ಜೊತೆಗೆ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಪ್ರಮುಖ ವೃತ್ತಗಳಲ್ಲಿ ಸ್ವಚ್ಛತೆ ಮಾಡಿ ಹೊಸ ಬದಲಾವಣೆಯ ರೂಪ ನೀಡಲಾಗುತ್ತಿದೆ.

ಮಂಡ್ಯ ನಗರದಲ್ಲಿ ೨೦೧೧ರ ಜನಗಣತಿಯಂತೆ ೧.೩೮ ಲಕ್ಷ ಜನಸಂಖ್ಯೆ ಇತ್ತು. ಇಂದಿನಜನಸಂಖ್ಯೆ ಎಷ್ಟಿರಬಹುದು ಎಂಬುದೂ ಮುಖ್ಯವಾಗುತ್ತದೆ. ನಗರದ ವ್ಯಾಪ್ತಿ ೧೭ ಚ.ಕಿ.ಮೀ.ನಷ್ಟಿದೆ. ೩೫ ವಾರ್ಡ್ ಗಳೂ ಸೇರಿ ಒಟ್ಟಾರೆ ರಸ್ತೆಗಳ ಉದ್ದ ೩೨೫ ಕಿ.ಮೀ.ಗಳಷ್ಟಿದ್ದು, ಒಟ್ಟಾರೆ ೩೨,೦೦೦ ಆಸ್ತಿಗಳನ್ನು ಹೊಂದಿದೆ ಎಂದು ನಗರಸಭೆಯ ಪೋರ್ಟಲ್ ಮಾಹಿತಿ ನೀಡುತ್ತದೆ.

೨೦೧೬ರ ಆರಂಭದಿಂದಲೂ ಮಂಡ್ಯ ನಗರಸಭೆ ಸ್ವಚ್ಛ ಸರ್ವೇಕ್ಷಣಾ ಉಪಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಇತ್ತೀಚಿನ ಪ್ರಯತ್ನಗಳು ಸ್ವಚ್ಛತಾಹೀ ಸೇವಾ-೨೦೨೫ ಅಭಿಯಾನದ ಮೇಲೆ ಕೇಂದ್ರೀಕರಿಸಿವೆ. ನಗರಸಭೆಯು ಸ್ವಚ್ಛತಾ ಅಭಿಯಾನಗಳಲ್ಲಿ ಹಿಂದೆಯೂ ಸಕ್ರಿಯವಾಗಿ ತೊಡಗಿಸಿ ಕೊಂಡಿದೆಯಾದರೂ ಮಂಡ್ಯದ ನಾಗರೀಕರಿಗೆ ಇಂದು ಈ ಅಭಿಯಾನದ ಪರಿಣಾಮಗಳು ಹೆಚ್ಚಿನ ಪರಿಣಾಮ ಬೀರಿವೆ.

ಈ ಅಭಿಯಾನದಲ್ಲಿ ನಗರಸಭೆ ಆಯುಕ್ತರು, ಚುನಾಯಿತ ಸದಸ್ಯರು, ಇಂಜಿನಿಯರ್‌ಗಳು, ಆರೋಗ್ಯ ಸಿಬ್ಬಂದಿ, ಸಜ್ಜುಗೊಳಿಸುವವರು ಮತ್ತು ನಾಗರಿಕರು ಭಾಗವಹಿಸುತ್ತಿರುವುದು ವಿಶೇಷ. ಸ್ವಚ್ಛ, ಸುಸ್ಥಿರ ಭವಿಷ್ಯಕ್ಕಾಗಿ ಸಮುದಾಯದ ಒಳಗೊಳ್ಳುವಿಕೆ ಮತ್ತು ಮಹತ್ವವನ್ನು ಈ ಅಭಿಯಾನವು ಎತ್ತಿ ತೋರಿಸಿದೆ.

” ಮಂಡ್ಯ ನಗರದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನವನ್ನು ಆರಂಭಿಸಿ ಹಲವು ದಿನಗಳೇ ಕಳೆದಿವೆ. ಈಗಾಗಲೇ ಎಲ್ಲ ೩೫ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದ ಸ್ಥಳಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ,ಅಲ್ಲಿ ಕಸ ಸುರಿಯದಂತೆ ಕ್ರಮವಹಿಸಲಾಗಿದೆ. ಒಟ್ಟಾರೆ ಸ್ವಚ್ಛ ಮಂಡ್ಯ ಮಾಡುವುದರತ್ತ ನಮ್ಮ ಗುರಿ ಇದೆ. ಜೂನ್ ತಿಂಗಳವರೆಗೂ ಅಭಿಯಾನ ನಡೆಯಬೇಕಿದ್ದು, ಈ ಫೆಬ್ರವರಿಯಲ್ಲಿ ಹೆಚ್ಚಿನ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಎಲ್ಲ ತಯಾರಿ ನಡೆಸಿಕೊಂಡು ಪ್ರತಿಯೊಂದು ವಾರ್ಡ್‌ನಲ್ಲಿ ೨೫ಕ್ಕೂ ಸ್ವಚ್ಛತಾ ಯೋಧರೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ.”

-ಪಂಪಶ್ರೀ, ಆಯುಕ್ತರು, ನಗರಸಭೆ, ಮಂಡ್ಯ

” ಆಯುಕ್ತರ ಆದೇಶದಂತೆ ಈಗಾಗಲೇ ವಾರ್ಡ್‌ಗಳ ಮುಖ್ಯರಸ್ತೆಗಳು, ವೃತ್ತಗಳು, ಶಾಲೆ, ದೇವಾಲಯಗಳ ಆಸುಪಾಸಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ನಗರಸಭೆ ಪೌರ ಕಾರ್ಮಿಕರನ್ನೂ ತೊಡಗಿಸಿಕೊಂಡು ಸ್ವಚ್ಛತಾ ಸರ್ವೇಕ್ಷಣಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನರು ಕೂಡ ಈ ಅಭಿಯಾನಕ್ಕೆ ಸಹಕರಿಸುತ್ತಿದ್ದಾರೆ.”

-ಪೂರ್ಣಿಮಾ ಗೊಮ್ಮಟೇಶ್, ಆರೋಗ್ಯ ನಿರೀಕ್ಷಕರು

 

 

Tags:
error: Content is protected !!