Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಹಣ ಸರ್ಕಾರದಲ್ಲ ನಮ್ಮದು, ಇಎಂಐ ಕಟ್ತೀರಾ ಇಲ್ಲವಾ? !

ಮೈಕ್ರೋ ಫೈನಾನ್ಸ್ ಗಳ ಹಾವಳಿ ತಡೆಗೆ ಸುಗ್ರೀವಾಜ್ಞೆ ಜಾರಿ; ಆದೇಶಕೂ ಮುನ್ನವೇ ಸಿಬ್ಬಂದಿ ಧಮಕಿ

ಸಿಬ್ಬಂದಿ ಒತ್ತಡ ತಾಳಲಾರದೆ ಕಂಡಕಂಡವರ ಮನೆಯಲ್ಲಿ ಅವಿತುಕೊಳ್ಳುತ್ತಿರುವ ಮಹಿಳೆಯರು

ಕೆ. ಬಿ. ರಮೇಶನಾಯಕ

ಮೈಸೂರು: ಹಣ ನಮ್ಮದು, ಯಾವ ಸರ್ಕಾರ ಏನು ಕಾನೂನು ಜಾರಿ ಮಾಡಿದರೂ ನಮಗೇನೂ ಭಯವಿಲ್ಲ. ಇಎಂಐ ಕಟ್ಟುತ್ತೀರಾ ಇಲ್ಲವಾ ಹೇಳಿ. ಕಟ್ಟಲ್ಲ ಅಂದರೆ ನಮಗೆ ವಸೂಲಿ ಮಾಡೋದು ಗೊತ್ತು, ನೀವು ಎಲ್ಲಿ ಅವಿತುಕೊಂಡಿದ್ದರೂ ಬಿಡಲ್ಲ! ಇವು ಮೈಕ್ರೋ-ನಾನ್ಸ್ ಕಂಪೆನಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಲಗಾರರಿಗೆ ಹಾಕುತ್ತಿರುವ ಧಮಕಿ ಮಾತುಗಳು.

ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ ತಡೆಯಲು ಸುಗ್ರೀವಾಜ್ಞೆ ಜಾರಿ ಮಾಡಲು ರಾಜ್ಯ ಸರ್ಕಾರ ತಯಾರಿಯಾಗಿರುವ ಬೆನ್ನಲ್ಲೇ ಹಳೆಯ ಸಾಲವನ್ನು ವಸೂಲಿ ಮಾಡಲು ಮುಂದಾಗಿರುವ ಸಿಬ್ಬಂದಿ ಈಗ ಧಮಕಿ ಅಸ್ತ್ರ ಪ್ರಯೋಗಿಸುತ್ತಿರುವುದರಿಂದ ಸಾಲ ಪಡೆದ ಮಹಿಳೆಯರು ಕಂಗೆಟ್ಟು ಮನೆಗೆ ಬೀಗ ಹಾಕಿಕೊಂಡು ಕಂಡಕಂಡವರ ಮನೆಯಲ್ಲಿ ಅವಿತುಕೊಂಡಿರುವ ಪ್ರಕರಣ ಕಂಡುಬಂದಿದೆ.

ಪೌರ ಕಾರ್ಮಿಕರು, ಕಲ್ಲು ಒಡೆಯುವವರು, ಗಾರೆ ಕೆಲಸಗಾರರು, ಕುಲುಮೆ ಮತ್ತಿತರ ವೃತ್ತಿ ಅವಲಂಬಿತರು ಹೆಚ್ಚಾಗಿ ವಾಸ ಮಾಡುವ ಜೆ. ಪಿ. ನಗರ ಸಮೀಪದ ಮಹದೇವಪುರ ಕೊಳೆಗೇರಿ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಿರುವ ವಸತಿ ಸಮುಚ್ಚಯ ಸಂಕೀರ್ಣದಲ್ಲಿ ನೆಲೆಸಿರುವ ನಿವಾಸಿಗಳು ಹೇಳುವ ನೋವಿನ ಮಾತುಗಳು ಮನಕಲಕುವಂತಿವೆ.

ಮೂರು ತಿಂಗಳ ಇಎಂಐ ಹಣ ಕಟ್ಟದಿದ್ದಕ್ಕೆ ಮನೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಪಡೆದು ಬೇರೆಯವರಿಗೆ ಕೊಟ್ಟು ಹಣ ಪಾವತಿಸಿಕೊಂಡ ಪ್ರಕರಣ ನಡೆದ ಬೆನ್ನಲ್ಲೇ ಅನೇಕ ಮಹಿಳೆಯರು ತಮ್ಮ ರೋದನೆಯನ್ನು ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಗಂಡನ ಆರೋಗ್ಯ ನೋಡಿಕೊಳ್ಳುವ ಜತೆಗೆ ಗಂಧದ ಕಡ್ಡಿ ಉಜ್ಜಿ ಜೀವನಮಾಡುತ್ತಿರುವ ಸಾಕಮ್ಮ ಎಂಬವರು ನಾಲ್ಕು ತಿಂಗಳ ಇಎಂಐ ಕಟ್ಟದ ಕಾರಣ ಬಾಯಿಗೆ ಬಂದಂತೆ ಬೈಯ್ದಿ ದ್ದಾರೆ. ಹಣಕಟ್ಟದಿದ್ದರೆ ನೀನು ಕೆಲಸ ಮಾಡುತ್ತಿರುವ ಕಡೆಯೇ ಬಂದು ಎಲ್ಲರೆದುರು ಮಾನಮರ್ಯಾದೆ ತೆಗೆಯಬೇಕಾಗುತ್ತದೆ ಎಂದು ಹೆದರಿಸಿದ್ದರಿಂದ ಕೆಲಸಕ್ಕೆ ಹೋಗದೆ ಮನೆ ಯಲ್ಲೇ ಉಳಿದಿದ್ದಾರೆ. ಮತ್ತೊಬ್ಬರಿಗೆ ನೀನು ಹಣ ಕಟ್ಟಬೇಕು, ಇಲ್ಲ ಸೆಕ್ಯುರಿಟಿ ಗಾರ್ಡ್ ಕೆಲಸ ದಿಂದ ತೆಗೆಸುತ್ತೇವೆಂದು ಬೆದರಿಕೆ ಹಾಕಿದ್ದಾರೆ.

ಗಂಡನನ್ನು ಕಳೆದು ಕೊಂಡು ಮೂವರು ಮಕ್ಕಳನ್ನು ಸಾಕುತ್ತಿರುವ ಮಹಿಳೆಯೊಬ್ಬರು ಹುಷಾರಿಲ್ಲದೆ ಕಂತನ್ನು ಕಟ್ಟುವುದನ್ನು ನಿಲ್ಲಿಸಿದ್ದಾರೆ. ಆದರೆ, ಹೆಣ್ಣು ಮಕ್ಕಳು ಇರುವ ಮನೆಗೆ ಬಂದು ಗಲಾಟೆ ಮಾಡಿರುವುದರಿಂದ ಆಕೆಯು ಮಾನಸಿಕವಾಗಿ ಕುಗ್ಗಿ ಎರಡು ದಿನಗಳಿಂದ ಮನೆಗೆ ಹೋಗದೆ ಎಲ್ಲೋ ಆಶ್ರಯ ಪಡೆದಿದ್ದರು. ಸಂಬಂಧಿಕರು ಧೈರ್ಯ ತುಂಬಿ ವಾಪಸ್ ಕರೆತಂದು ಬಿಟ್ಟಿದ್ದಾರೆ.

ಸಾಲಕ್ಕೆ ಹೆದರಿ ಅವಿತುಕೊಳ್ಳುವ ಸ್ಥಿತಿ: ಬ್ಯಾಂಕ್ ಸಿಬ್ಬಂದಿ ಯಾವಾಗಲೂ ಬಂದು ಗಲಾಟೆ ಮಾಡುವ ಕಾರಣ ಬೆಚ್ಚಿಬೀಳುತ್ತಿರುವ ಮಹಿಳೆಯರು ಅಕ್ಕಪಕ್ಕದವರ ಮನೆಗಳಲ್ಲಿ ಅವಿತುಕೊಂಡು ಇಲ್ಲವೆಂದು ಹೇಳುತ್ತಿದ್ದಾರೆ. ಕೆಲ ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಿಬ್ಬಂದಿ ಪಾಳಿಯ ಕಾರ್ಮಿಕರಂತೆ ಸಾಲಗಾರರ ಮನೆಯ ಮುಂದೆ ಬಂದು ಕುಳಿತುಕೊಳ್ಳುತ್ತಿರುವುದ ರಿಂದ ರಾತ್ರಿ ತನಕ ಸಮಯ ಕಳೆದು ೮ ಗಂಟೆಯ ಮೇಲೆ ಮನೆ ಸೇರುತ್ತಿದ್ದೇವೆ ಎಂದು ಗಾರೆಕೆಲಸ ಮಾಡುವ ಪುಷ್ಪ ಎಂಬಾಕೆ ಕಣ್ಣೀರಿಟ್ಟರು.

ನನ್ನ ಗಂಡ ತಂದುಕೊಟ್ಟರೆ ಉಂಟು, ಇಲ್ಲದಿದ್ದರೆ ಏನಿಲ್ಲ. ಮನೆಗೆ ಬಾಡಿಗೆ ಕಟ್ಟಿಕೊಂಡು ಇಬ್ಬರು ಮಕ್ಕಳನ್ನು ಓದಿಸ್ತಾ ಇದ್ದೇನೆ. ನಮ್ಮ ಯಜಮಾನರು ೨ ವಾರಗಳಿಂದ ಕೆಲಸಕ್ಕೆ ಹೋಗದೆ ಒಂದೇ ಒಂದು ಇಐಎಂ ಕಟ್ಟಿಲ್ಲ. ನೀವು ಕಟ್ಟಲೇ ಬೇಕು ಅಂತ ಹೇಳಿದರು. ನಾನು ರೇಷನ್ ಕಾರ್ಡ್ ಗಿರವಿಗೆ ಇಟ್ಟು ೮೬೦ ರೂ. ಕೊಟ್ಟಿದ್ದೇನೆ ಎಂದು ಹೇಳಿ ಕೊಂಡರು.

ಸರ್ಕಾರ ಏನೇ ಕಾನೂನು ತಂದರೂ ನಮಗೇನು. ದುಡ್ಡು ನಮ್ಮದು. ನಮ್ಮನ್ನು ಏನೂ ಮಾಡೋದಕ್ಕೆ ಆಗೋದಿಲ್ಲ. ಮೊದಲು ಬಡ್ಡಿ,ಅಸಲು ಕಟ್ಟಿ, ಸರ್ಕಾರ ಅಂತ ಕೂತರೆ ಮನೆಯ ವಸ್ತು ಸಾಗಿಸಬೇಕಾಗುತ್ತದೆ ಎನ್ನುವ ಬೆದರಿಕೆಯ ಮಾತುಗಳನ್ನಾಡಿ ಹೋಗುತ್ತಿದ್ದಾರೆ. ನಾನು ಬೆಳಿಗ್ಗೆ ಹೋಗಿ, ಸಂಜೆ ಬರ‍್ತಾ ಇದ್ದೇನೆ ಸರ್. – ಪುಷ್ಪ, ಕೂಲಿ ಕಾರ್ಮಿಕರು.

ಐಡಿಎಫ್‌ಸಿ, ಗ್ರಾಮೀಣ ಕೂಟ ಮೊದಲಾದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿ ತುಂಬಾ ಜಗಳ ಮಾಡ್ತಾರೆ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ಒಮ್ಮೊಮ್ಮೆ ಬಳಸುವ ಪದಗಳನ್ನು ಕೇಳಿ ಕೆರೆಯಲ್ಲಿ ಮುಳುಗಿ ಬಿಡಲೇ ಅನಿಸುತ್ತದೆ. ಸರ್ಕಾರ ನಮ್ಮಂತಹವರ ನೆರವಿಗೆ ನಿಲ್ಲಬೇಕು. ಪೊಲೀಸರಿಗೆ ಹೇಳಿದರೆ ಸಾಲ ತೆಗೆದು ಕೊಳ್ಳುವಾಗ ಚೆನ್ನಾಗಿತ್ತಾ, ಈಗ ಕಟ್ಟಲು ಆಗೋದಿಲ್ಲ ಅಂದರೆ ಹೇಗೆ ಅಂತಾರೆ. -ಸಾಜೀಯಾ ಬೇಗಂ, ನಿವಾಸಿ.

 

Tags: