ಸ್ವಾಮಿ ಪೊನ್ನಾಚ್ಚಿ
ನಾನು ಹುಚ್ಚೇಗೌಡರನ್ನು ನೋಡಿದ್ದು ಇತ್ತೀಚೆಗೆ. ಅದೂ ಅತ್ತಿಖಾನೆ ಎಸ್ಟೇಟ್ ಸ್ಥಾಪಕ ಮಾರಿಸ್ ಬಗ್ಗೆ ತಿಳಿಯಲು ಹೋದಾಗ. ಸಿಕ್ಕ ಸಿಕ್ಕವರನ್ನೆಲ್ಲ ಮಾರಿಸ್ ಬಗ್ಗೆ ಗೊತ್ತಾ ಎಂದು ಕೇಳಿಕೊಂಡು ತಿರುಗುವಾಗ ಶ್ರೀಧರ್ ಅವರು ನೇರ ಕರೆದುಕೊಂಡು ಹೋಗಿ ಹುಚ್ಚೇಗೌಡರ ಎದುರು ನಿಲ್ಲಿಸಿದ್ದರು. ಎಂದಿನಂತೆ ಮಾರಿಸ್ ಗೊತ್ತ ನಿಮಗೆ ಎಂದೆ. ಅವರು ಏನೂ ಮಾತನಾಡದೆ ಒಂದು ರಟ್ಟಿನ ಡಬ್ಬದಲ್ಲಿದ್ದ ಕಾಗದ ಪತ್ರಗಳ ಹುಡುಕಿ ವಿದೇಶದಿಂದ ಬಂದಿದ್ದ ಪತ್ರಗಳ ಲಕೋಟೆ ಕೈಗೆ ನೀಡಿದರು. ಆ ಪತ್ರಗಳನ್ನು ಬರೆದಿದ್ದು ಮಾರಿಸ್ ಮಗಳಾದ ಮೋನಿಕಾ ಜಾಕ್ಸನ್. ಒಂದು ಕ್ಷಣ ನನಗೆ ಇದು ಕನಸೇ ಅನ್ನಿಸಿತು. ಎಲ್ಲಿಯ ಮಾರಿಸ್, ಎಲ್ಲಿಯ ಹುಚ್ಚೇಗೌಡರು, ಎಲ್ಲಿಯ ಮೋನಿಕಾ.
ಮಾರಿಸ್‌ನ ಹೊನ್ನಮೇಟಿ ಕಾಡಿನಲ್ಲಿ ಟಿಂಬರ್ ಏಜೆಂಟ್ ಆಗಿದ್ದ ಹುಚ್ಚೇಗೌಡರು ಒಬ್ಬ ಆದರ್ಶ ಗಾಂಧಿ ಅನುಯಾಯಿ ಆಗಿದ್ದರು ಎಂಬುದು ಅನಂತರವೇ ಗೊತ್ತಾಗಿದ್ದು. ಮೊದಲ ಸಲ ಅವರನ್ನು ನೋಡಿದಾಗ ಬಿಳಿಯ ಕಾಟನ್ ಶರ್ಟ್ ಮತ್ತು ಪಂಚೆ ಧರಿಸಿದ್ದರು. ನಾನು ಕೊನೆ ಸಲ ನೋಡಿದಾಗಲೂ ಕೂಡ. ಗಾಂಧಿ ಅವರ ಮನಸಿನಲ್ಲಿ ಅಚ್ಚಳಿಯದೆ ಕುಳಿತುಬಿಟ್ಟಿದ್ದ. ಅದು ಯಾವ ಮಟ್ಟಿಗೆ ಎಂದರೆ ಯಾರಾದರೂ ಗಾಂಧಿಜಿಯನ್ನು ಸ್ವಲ್ಪ ವಿರೋಧಿಸಿ ಮಾತಾಡಿದರೂ ಕೂಡ ಅವರು ಎಷ್ಟೇ ಆಪ್ತರಾಗಿದ್ದರೂ ಅವರಿಂದ ದೂರ. ಗಾಂಧಿವಾದಿಗಳ ಬಗ್ಗೆ ಕೇಳಿದ್ದ ನನಗೆ ನಿಜವಾಗಲೂ ಗಾಂಧಿವಾದ ಹೇಗಿರುತ್ತದೆಂದು ಕಣ್ಣಾರೆ ಕಂಡಿದ್ದು ಹುಚ್ಚೇಗೌಡರಲ್ಲಿ.
ಗಾಂಧಿಜಿಯವರ ಕುರಿತ ಕಾರ್ಯಕ್ರಮಗಳನ್ನು ಯಾರೇ ಮಾಡಲಿ, ಕರೆಯದಿದ್ದರೂ ಅಲ್ಲಿಗೆ ಹಾಜರಾಗುತ್ತಿದ್ದರು. ಸಬರಮತಿ ಆಶ್ರಮಕ್ಕೆ ಹಲವು ಬಾರಿ ಭೇಟಿ ಕೊಟ್ಟು ಅದರಂತೆಯೇ ಬದುಕಲು ಪ್ರಯತ್ನಿಸಿದರು. ಯಾರನ್ನು ಮುಟ್ಟಿಸಿಕೊಳ್ಳಬಾರದು ಎಂದು ದೂರ ಮಾಡಿದ್ದರೋ ಅಂತಹವರನ್ನು ಅಡುಗೆ ಮಾಡಲು, ತಮ್ಮ ಸೇವೆ ಮಾಡಲು ಬಿಡುತಿದ್ದ ಗಾಂಧಿಜಿಯ ನಡೆಯನ್ನೇ ಹುಚ್ಚೇಗೌಡರು ತಮ್ಮ ಬದುಕಿನುದ್ದಕ್ಕೂ ಪಾಲಿಸಿದರು. ಯಾವತ್ತೂ ಯಾರಿಗೂ ಹಿಂಸೆ ಮಾಡಬಾರದೆಂಬ ಗಾಂಧಿಯವರ ತತ್ವದಂತೆ ನಡೆದರು.
ಹುಚ್ಚೇಗೌಡರು ಯಾರನ್ನೂ ಕೂಡ ದ್ವೇಷಿಸುತ್ತಿರಲಿಲ್ಲ. ಕೋಪ ಬಂದಾಗ ಅಯೋಗ್ಯ ಅನ್ನುವ ಮಾತು ಹೊರಡುತ್ತಿತ್ತೆ ವಿನಾ ಎಂದಿಗೂ ಅವರ ಬಗ್ಗೆ ಕೆಟ್ಟ ಯೋಚನೆ ಮಾಡುತ್ತಿರಲಿಲ್ಲ. ತಮ್ಮ ಬದುಕಿನುದ್ದಕ್ಕೂ ಗಾಂಧಿಯನ್ನು ಆವಾಹಿಸಿಕೊಂಡು ಬದುಕಿದರು. ಅದೇನು ಗಾಂಧಿಯವರ ಮೇಲೆ ನಿಮಗೆ ಇಷ್ಟು ಭಕ್ತಿ ಎಂದರೆ ಗಾಂಧಿ ಬಗ್ಗೆ ನಿನಗೇನೂ ಗೊತ್ತಿಲ್ಲ. ಗೊತ್ತಿದ್ದರೆ ಈ ಪ್ರಶ್ನೆ ಕೇಳದೆ ಗಾಂಧಿಯನ್ನು ನೀನೂ ಆರಾಧಿಸುತ್ತಿದ್ದೆ ಎಂದುಬಿಡುತಿದ್ದರು. ನೀವೇ ಹೇಳಿ ಗಾಂಧಿ ಕುರಿತು ಹೆಚ್ಚಿನ ಮಾಹಿತಿ ಎಂದರೆ ಮಾತಿನಲ್ಲಿ ಗಾಂಧಿ ದಕ್ಕಿದ್ದರೆ ಯಾಕೆ ಈ ಮನುಷ್ಯರು ಗೋಡ್ಸೆಗೆ ದೇವಾಲಯ ಕಟ್ಟುತಿದ್ದರು. ಅವರ ಬಗ್ಗೆ ಮಾತಾಡುವುದಲ್ಲ, ಅವರನ್ನು ಆಚರಿಸುವುದು.
ಅದೇ ಗಾಂಧಿ ಮಾರ್ಗ ಎನ್ನುತಿದ್ದರು. ಇವರ ಗಾಂಧಿ ಪ್ರೀತಿಯನ್ನು ಕಂಡು ಗಾಂಧಿಜಿಯ ಭಾವ ಚಿತ್ರ ಇರುವ hmt ಗಡಿಯಾರವೊಂದನ್ನು ಅವರಿಗೆ ಕೊಟ್ಟೆ. ಕೈಗೆ ಧರಿಸಿ ಅತಿಂದಿತ್ತಾಅಲ್ಲಾಡಿಸುತ್ತ ಚಿಕ್ಕ ಮಕ್ಕಳ ಹಾಗೇ ಕೈಲಿದ್ದ ಗಾಂಧಿಯನ್ನು ನೋಡಿ ಖುಷಿ ಪಟ್ಟಿದ್ದರು. ಅಂದ ಹಾಗೆ ಗಾಂಧಿ ಗುಂಡೇಟಿಗೆ ಬಲಿಯಾದಾಗ ಹುಚ್ಚೇಗೌಡರಿಗೆ ಯೌವನದ ವಯಸ್ಸು. ಸ್ವಾತಂತ್ರ್ಯ ಹೋರಾಟಗಾರರು. ಗಾಂಧಿ ಅನುಯಾಯಿಗಳೂ ಆಗಿದ್ದ ಗೋಪಾಲರಾಯರು ಚಾಮರಾಜನಗರದ ಜನನ ಮಂಟಪದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಗಾಂಧಿಯವರ ಕುರಿತು ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಯುವಕ ಅದರಿಂದ ಎಷ್ಟು ಪ್ರಭಾವಿತನಾದ ಎಂದರೆ ಗೋಪಾಲರಾಯರನ್ನು ಗುರುವೆಂದು ಸ್ವೀಕರಿಸಿ ಗಾಂಧಿ ಬಗ್ಗೆ ಹೆಚ್ಚು ಹೆಚ್ಚುಕೇಳುತ್ತ ಓದುತ್ತಾ ತಮ್ಮ ಬದುಕನ್ನೇ ಗಾಂಧಿ ತತ್ವ ಪಾಲನೆಗೆ ಮೀಸಲಿಟ್ಟುಬಿಟ್ಟರು.
ಬದುಕಿನ ಕೊನೆಯವರೆಗೂ ಅವರು ಹೆಚ್ಚು ಸಂಗ್ರಹಿಸಲಿಲ್ಲ. ಸಂಗ್ರಹಿಸಿದ್ದು ಪುಸ್ತಕಗಳನ್ನು ಮಾತ್ರ. ಅದರಲ್ಲೂ ವಿಶೇಷವಾಗಿ ಗಾಂಧಿಯವರ ಬಗ್ಗೆ ಜಗತ್ತಿನ ಬಹುತೇಕ ಲೇಖಕರ ಪುಸ್ತಕಗಳನ್ನು ಅವರು ಓದಿದ್ದರು. ಬಡವರಿಗೆ ಸಹಾಯ ಮಾಡುವುದ ಬಿಡಲಿಲ್ಲ. ಶಾಂತಿ ಅಹಿಂಸಾ ಪಾಲನೆಗೆ ಇನ್ನಿಲ್ಲದಂತೆ ಮಹತ್ವ ಕೊಟ್ಟರು. ಅವರು ಬದುಕಿನ ಕೊನೆಯವರೆಗೂ ಧರಿಸಿದ್ದು ಖಾದಿ ವಸ್ತ್ರ. ತಲೆಯ ಮೇಲೊಂದು ಟೋಪಿ. ಬೇಕು ಅಂದರೆ ಬಿಳಿ ಬಣ್ಣದ ಒಂದು ಸ್ವೆಟರ್ ಅಷ್ಟೇ ಹೆಚ್ಚುವರಿ ಬಟ್ಟೆ.
ಬೆಂಗಳೂರಿನಲ್ಲಿದ್ದ ಗಾಂಧಿಯವರ ಮೊಮ್ಮಗಳ ಜೊತೆ ಹುಚ್ಚೇಗೌಡರಿಗೆ ನಿಕಟ ಸಂಪರ್ಕವಿತ್ತು. ಭೇಟಿ ಮಾಡಿ ಚರ್ಚಿಸುತ್ತಿದ್ದರು. ಗಾಂಧಿ ಜಯಂತಿಯ ದಿನದಂದು ಅವರ ಕೋಣೆಯಲ್ಲಿ ಮತ್ತು ಕಿಸೆಯಲ್ಲಿ ಸಿಹಿ ಇರುತ್ತಿತ್ತು. ಯಾರೇ ಭೇಟಿ ಆದರೂ ಅವರಿಗೆ ಸಿಹಿ ಕೊಡುತಿದ್ದರು. ಗಾಂಧಿ ಜಯಂತಿಯ ಶುಭಾಶಯಗಳು ಎಂದು ಮಾತ್ರ ಹೇಳುತ್ತಿರಲಿಲ್ಲ.
ಶಾಲೆಯಿಂದ ಗಾಂಧಿ ಜಯಂತಿ ಮುಗಿಸಿ ಬರುವ ಮಕ್ಕಳಿಗೆ ಈ ದಿನ ಹುಚ್ಚೇಗೌಡರ ಎದುರು ಸಿಕ್ಕರೆ ಚಾಕೋಲೇಟ್ ಗ್ಯಾರಂಟಿ . ಆ ದಿನ ಹೆಚ್ಚು ಮಕ್ಕಳು ಹುಚ್ಚೇಗೌಡರ ಮನೆ ಎದುರು ಜಮಾಯಿಸಿಬಿಡುತಿದ್ದರು. ಗಾಂಧಿ ಕುರಿತ ಕಾರ್ಯಕ್ರಮಗಳಲ್ಲಿ ಯಾರಾದರೂ ತಪ್ಪು ಮಾಹಿತಿ ನೀಡಿದರೆ ಅಥವಾ ಗಾಂಧಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತುಗಳನ್ನಾಡಿದರೆ ತಿದ್ದುತ್ತಿದ್ದರು ಆಗದಿದ್ದರೆ ಅಲ್ಲಿಂದಲೇ ಹೊರಡುತ್ತಿದ್ದರು. ಗಾಂಧಿಯವರ ಮೇಲಿನ ಕೆಟ್ಟ ಆಲೋಚನೆಗಳನ್ನು ಎಂದಿಗೂ ಸಹಿಸುತ್ತಿರಲಿಲ್ಲ. ಸತ್ಯವನ್ನೇ ಹೇಳುತ್ತಿದ್ದ ಹುಚ್ಚೇಗೌಡರು ಸುಳ್ಳು ಮಾತಾಡುವವರನ್ನು ನಂಬುತ್ತಿರಲಿಲ್ಲ. ಇವರ ಕೊನೆ ಘಳಿಗೆಯಲ್ಲಿ ಕೈಲಿ ಹಿಡಿದಿದ್ದ ಪುಸ್ತಕ ಭಗವದ್ಗೀತೆ.




