Mysore
29
scattered clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಇಂದಿನಿಂದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭ

ನವೀನ್ ಡಿಸೋಜ

ಮಡಿಕೇರಿ ದಸರಾಕ್ಕೆ ಕರಗಗಳೇ ಮುನ್ನುಡಿ

ವಿಜಯದಶಮಿವರೆಗೆ ಮನೆಮನೆಗೆ ತೆರಳಿ ಆಶೀರ್ವಚನ ನೀಡುವ ಪರಂಪರೆ

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಅ.೧೧ರಂದು ನಗರದ ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಸುಮಾರು ೩೦೦ ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವವು ಮಡಿಕೇರಿಯ ಧಾರ್ಮಿಕ ಪರಂಪರೆ, ನಂಬಿಕೆ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿದೆ.

ನಗರದ ನಾಲ್ಕು ದಿಕ್ಕುಗಳಲ್ಲಿ ನೆಲೆಸಿರುವ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ದಂಡಿನ ಮಾರಿಯಮ್ಮ ದೇವತೆಗಳ ಕರಗಗಳು ನವರಾತ್ರಿ ಸಂದರ್ಭದಲ್ಲಿ ನಗರ ಪ್ರದಕ್ಷಿಣೆ ನಡೆಸಲಿವೆ. ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ನಗರವನ್ನು ಕಾಯುವ ದೇವತೆಯೆಂದೂ, ಕೋಟೆ ಮಾರಿಯಮ್ಮ ಕೋಟೆಯ ರಕ್ಷಕಿಯೆಂದೂ, ಕಂಚಿ ಕಾಮಾಕ್ಷಿ ಆರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸುವ ದೇವತೆಯೆಂದೂ, ದಂಡಿನ ಮಾರಿಯಮ್ಮ ಸೈನ್ಯವನ್ನು ಕಾಪಾಡುವ ದೇವತೆಯೆಂದೂ ಭಕ್ತರು ನಂಬಿದ್ದಾರೆ.

ಅ.೧೧ರಂದು ನಾಲ್ಕೂ ದೇವಾಲಯಗಳಿಂದ ಕರಗಗಳು ಮಹದೇವಪೇಟೆಯ ಪಂಪಿನ ಕೆರೆಗೆ ಆಗಮಿಸಲಿವೆ. ಅಲ್ಲಿ ಸಂಪ್ರದಾಯದಂತೆ ಕರಗಗಳನ್ನು ಸಿದ್ಧಪಡಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಂಜೆ ನಗರ ಸಂಚಾರ ಆರಂಭಿಸಲಾಗುತ್ತದೆ. ದಾರಿಯುದ್ದಕ್ಕೂ ಭಕ್ತರು ಕರಗಗಳಿಗೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಿದ್ದಾರೆ. ಕರಗಗಳು ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡರಾಮ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯಗಳಿಗೆ ತೆರಳಿ, ಬಳಿಕ ಪೇಟೆ ಶ್ರೀರಾಮ ಮಂದಿರಕ್ಕೆ ಆಗಮಿಸಲಿವೆ. ಅಲ್ಲಿಂದ ಕರಗಗಳು ತಮ್ಮ ತಮ್ಮ ದೇವಾಲಯಗಳಿಗೆ ಮರಳಲಿವೆ.

ಕರಗ ಸಿದ್ಧಪಡಿಸುವುದು ವಿಶಿಷ್ಟ ಧಾರ್ಮಿಕ ವಿಧಿವಿಧಾನವಾಗಿದೆ. ಬಿಂದಿಗೆಯ ಮೇಲೆ ಬಿದಿರಿನಿಂದ ಗೋಪುರದ ಆಕಾರ ನಿರ್ಮಿಸಿ, ಹೂವುಗಳಿಂದ ಅಲಂಕರಿಸಲಾಗುತ್ತದೆ. ಅದರ ಮುಂಭಾಗದಲ್ಲಿ ಶಕ್ತಿ ದೇವತೆಯ ಬೆಳ್ಳಿಯ ಮುಖವಾಡವನ್ನು ಅಳವಡಿಸಿ ಕರಗವನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿದಿನ ಕರಗದ ಹೂವುಗಳನ್ನು ಬದಲಾಯಿಸಿ ಹೊಸದಾಗಿ ಶೃಂಗರಿಸಲಾಗುತ್ತದೆ. ಬೆಳಿಗ್ಗೆ ನಗರ ಸಂಚಾರಕ್ಕೆ ಹೊರಡುವ ಮುನ್ನ ನೈವೇದ್ಯ ಅರ್ಪಿಸುವುದು ಸಂಪ್ರದಾ ಯವಾಗಿದೆ. ವಿಜಯದಶಮಿಯಂದು ನಾಲ್ಕೂ ಕರಗಗಳು ಮಡಿಕೇರಿಯ ರಾಜಬೀದಿಯಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಬನ್ನಿ ಮಂಟಪದವರೆಗೆ ತೆರಳಲಿವೆ. ಅ.೨೨ರ ಬೆಳಗಿನ ಜಾವ ಬನ್ನಿ ಕಡಿಯುವ ವಿಧಿವಿಧಾನದೊಂದಿಗೆ ಕರಗ ಉತ್ಸವದ ಪ್ರಮುಖ ಆಚರಣೆಗಳು ಸಂಪನ್ನಗೊಳ್ಳಲಿವೆ. ಕರಗ ಹೊರುವ ಅರ್ಚಕರು ಉತ್ಸವಕ್ಕೂ ಸುಮಾರು ೧೫ ದಿನಗಳ ಮುಂಚಿತವಾಗಿ ಮದ್ಯ ಮತ್ತು ಮಾಂಸಾಹಾರ ತ್ಯಜಿಸಿ ವ್ರತ ಆಚರಿಸುತ್ತಾರೆ. ಮಹಾಲಯ ಅಮಾವಾಸ್ಯೆಯ ಮರುದಿನ ಶರನ್ನವರಾತ್ರಿಯ ಪಾಡ್ಯದಿಂದ ಕರಗಗಳ ಧಾರ್ಮಿಕ ವಿಧಿವಿಧಾನಗಳು ಆರಂಭವಾಗುತ್ತವೆ.

ನವರಾತ್ರಿಯ ಮೊದಲ ದಿನ ಅರ್ಚಕರಿಗೆ ಕಂಕಣ ಕಟ್ಟಲಾಗುತ್ತದೆ. ಕರಗ ಹೊರುವ ಅರ್ಚಕರು ಬೆಳಗಿನ ಉಪಾಹಾರವಾಗಿ ಮೊಸರನ್ನವನ್ನಷ್ಟೇ ಸ್ವೀಕರಿಸುವ ಸಂಪ್ರದಾಯವೂ ಇದೆ. ಕರಗ ಉತ್ಸವವು ಮಡಿಕೇರಿಯ ಧಾರ್ಮಿಕ ನಂಬಿಕೆ, ಜನಪದ ಪರಂಪರೆ ಮತ್ತು ದಸರಾ ಸಂಭ್ರಮವನ್ನು ಒಂದೆಡೆ ಬೆಸೆಯುವ ವಿಶಿಷ್ಟ ಆಚರಣೆಯಾಗಿದ್ದು, ಈ ಬಾರಿಯೂ ಭಕ್ತರು ಹಾಗೂ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆಯಿದೆ.

ರೋಗ ನಿಯಂತ್ರಣಕ್ಕೆ ಆರಂಭವಾದ ಉತ್ಸವ:  ಮಡಿಕೇರಿ ಕರಗ ಉತ್ಸವದ ಹಿಂದೆ ಐತಿಹಾಸಿಕ ಹಿನ್ನೆಲೆ ಹಾಗೂ ಜನಪದ ನಂಬಿಕೆಗಳಿವೆ. ೩೦೦ ವರ್ಷಗಳ ಹಿಂದೆ ಮಡಿಕೇರಿ ಪ್ರದೇಶದಲ್ಲಿ ಸಿಡುಬು ರೋಗ ವ್ಯಾಪಿಸಿ ಅನೇಕರು ಮೃತಪಟ್ಟಿದ್ದರು. ರೋಗ ನಿಯಂತ್ರಣಕ್ಕಾಗಿ ಕೊಡಗಿನ ಅರಸರು ವಿವಿಧ ಪ್ರಯತ್ನಗಳನ್ನು ಕೈಗೊಂಡರೂ ಫಲಕಾರಿಯಾಗಲಿಲ್ಲ ಎನ್ನಲಾಗುತ್ತದೆ. ಬಳಿಕ ಅರಮನೆಯ ಸ್ವಾಮೀಜಿಗಳ ಸಲಹೆಯಂತೆ ನಗರದ ನಾಲ್ಕು ದಿಕ್ಕುಗಳಲ್ಲಿ ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಲಾಯಿತು ಎಂಬ ಪ್ರತೀತಿ ಇದೆ. ದೇವತೆಗಳ ಕರಗ ಮಹೋತ್ಸವ ಆರಂಭಿಸಿ, ಕರಗಗಳನ್ನು ಮನೆಮನೆಗೆ ಕೊಂಡೊಯ್ಯುವ ಸಂಪ್ರದಾಯ ರೂಢಿಗೆ ಬಂದಿತು. ಮನೆಗಳಿಗೆ ಆಗಮಿಸುವ ಕರಗಗಳನ್ನು ಸ್ವಾಗತಿಸಿ ಪೂಜೆ ಸಲ್ಲಿಸುವುದರಿಂದ ರೋಗ ದೂರವಾಯಿತು ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹಾಲಯ ಅಮಾವಾಸ್ಯೆಯ ಬಳಿಕ ಕರಗ ಉತ್ಸವ ಆರಂಭವಾಗಿ ವಿಜಯದಶಮಿವರೆಗೆ ಮನೆಮನೆಗೆ ತೆರಳಿ ಆಶೀರ್ವಚನ ನೀಡುವ ಪರಂಪರೆ ಇಂದಿಗೂ ಮುಂದುವರಿದಿದೆ.

” ನಾಡಿನ ಸುಭಿಕ್ಷೆಗಾಗಿ ರಾಜರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬಂದಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿಯೂ ಅ.೧೧ರಂದು ನಗರದ ಪಂಪಿನ ಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ವಿಜಯದಶಮಿಯವರೆಗೆ ಕರಗಗಳು ನಗರ ಪ್ರದಕ್ಷಿಣೆ ನಡೆಸಲಿದ್ದು, ವಿಜಯದಶಮಿಯ ರಾತ್ರಿ ರಾಜಬೀದಿಯಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಬನ್ನಿ ಮಂಟಪದವರೆಗೆ ತೆರಳಲಿವೆ. ಅ.೨೨ರ ಬೆಳಗಿನ ಜಾವ ಬನ್ನಿ ಕಡಿಯುವ ವಿಧಿವಿಧಾನ ನಡೆಯಲಿದೆ.”

ಜಿ.ವಿ. ರವಿಕುಮಾರ್, ಗೌರವಾಧ್ಯಕ್ಷರು, ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಕರಗ ಸಮಿತಿ

 

 

Tags:
error: Content is protected !!