ಮಾನವತೆಯ ಮೇರು ಸಾಹಿತಿ ದೇಮ
ದಲಿತ ಸಂವೇದನೆಯ ಅತ್ಯಂತ ಸೃಜನಶೀಲ ಸಾಹಿತಿಗೆ ಸಂದ ಪಂಪ ಪ್ರಶಸ್ತಿ ಗೌರವ
ಮೈಸೂರು: ಕನ್ನಡದ ದಲಿತ, ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ದಲಿತ ಸಂವೇದನೆಗಳನ್ನು ಅತ್ಯಂತ ಸೃಜನಶೀಲವಾಗಿ ಸಾಹಿತ್ಯದಲ್ಲಿ ದಾಖಲಿಸಿದ ಪ್ರಸಿದ್ಧ ಕಥೆಗಾರ, ಕಾದಂಬರಿಕಾರ ಹಾಗೂ ಸಾಮಾಜಿಕ ಹೋರಾಟಗಾರ ದೇವನೂರ ಮಹಾದೇವ ಅವರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದೇವನೂರ ಮಹಾದೇವ ಒಂದು ವಿಶಿಷ್ಟ ಪ್ರತಿಭೆ. ಅವರು ನವ್ಯೋತ್ತರ ಕಾಲಘಟ್ಟದಲ್ಲಿ ಬರವಣಿಗೆ ಆರಂಭಿಸಿ ದಲಿತ ಬಂಡಾಯ ಪಂಥದ ಪ್ರಮುಖ ಲೇಖಕರೆನಿಸಿಕೊಂಡವರು.
‘ದ್ಯಾವನೂರು’ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸದಿಕ್ಕು ತೋರಿದವರು ಮಹಾದೇವ. ನಂತರ ಅವರು ಬರೆದ ‘ಒಡಲಾಳ’, ‘ಕುಸುಮಬಾಲೆ’ ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳೆಂದು ಪರಿಗಣಿತವಾದವು. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ನಂಜಯ್ಯ ಹಾಗೂ ನಂಜಮ್ಮ ದಂಪತಿಯ ಪುತ್ರರಾಗಿ ೧೯೪೮ರ ಜೂನ್ ೧೦ರಂದು ಜನಿಸಿದ ದೇವನೂರು ಮಹಾದೇವ ಅವರು ದೇವನೂರು, ನಂಜನಗೂಡು, ಮೈಸೂರು ಮುಂತಾದೆಡೆ ವಿದ್ಯಾಭ್ಯಾಸ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು.
ಅನಂತರ ಕೆಲಕಾಲ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ಅನಂತರದ ವರ್ಷಗಳಲ್ಲಿ ಪೂರ್ಣಾವಧಿ ವ್ಯವಸಾಯಗಾರರಾದರು. ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ವಿದ್ಯಾರ್ಥಿ ದಿಸೆಯಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ದೇಮ ಆರಂಭದಲ್ಲಿ ಬರೆದದ್ದು ಕವನಗಳನ್ನು. ನವ್ಯ ಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲಘಟ್ಟದಲ್ಲಿ ಕಥೆಗಳ ಗೆಯ್ಮೆಯಲ್ಲಿ ತೊಡಗಿದ ದೇವನೂರು ‘ಅಮಾಸ’, ‘ಡಾಂಬರು ಬಂದುದು’, ‘ಮಾರಿಕೊಂಡವರು’, ‘ಮೂಡಲ ಸೀಮೆಯಲ್ಲಿ ಕೊಲೆಗಿಲೆ ಮುಂತಾಗಿ’, ‘ಗ್ರಸ್ಥರು’ ಮೊದಲಾದ ದಲಿತ ಸಂವೇಧನೆಯ ಅತ್ಯಂತ ಸೃಜನಶೀಲ, ಮೌಲಿಕ ಕಥೆಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ವಲಯದಲ್ಲಿ ಹೊಸ ಆಯಾಮವನ್ನೇ ನೀಡಿದ ಈ ಕಥೆಗಳು ಬಹುಬೇಗ ಕನ್ನಡ ಕಥಾ ಲೋಕದಲ್ಲಿ ನಿರಂತರ ಚರ್ಚೆಗಳನ್ನು ಹುಟ್ಟುಹಾಕಿದವು.
ನಂತರ ದ್ಯಾವನೂರು (ಕಥಾಸಂಕಲನ), ಒಡಲಾಳ, ಕುಸುಮಬಾಲೆ (ಕಾದಂಬರಿ) ಈ ಕೃತಿಗಳನ್ನು ಹೊರತಂದರು. ಆಗೆ ನೋಡಿದರೆ ದೇವನೂರು ಬರೆದ ಕೃತಿಗಳ ಸಂಖ್ಯೆ ಕಮ್ಮಿ ಆದರೆ ಅವರ ಸಾಹಿತ್ಯದ ಮೇಲೆ ನಡೆದ ಚರ್ಚೆ ಸಾವಿರಾರು ಗ್ರಂಥಗಳನ್ನು ರಚಿಸುವಷ್ಟಾಗುತ್ತದೆ. ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಪ್ರೊ.ರಾಮದಾಸ್ ಮೊದಲಾದ ಲೇಖಕರ ಒಡನಾಟದೊಂದಿಗೆ ಮೈಸೂರಿನಲ್ಲಿ ಸಂಚಲನ ಮೂಡಿಸಿದ್ದ ದೇಮ ಸಾಹಿತ್ಯ ವಲಯದಲ್ಲಿ ಸ್ವತಃ ತಾವೇ ಕಥಾಪಾತ್ರದಂತೆ ಜೀವತಳೆದರು.
೬೦-೭೦ರ ದಶಕದಲ್ಲಿ ಲೋಹಿಯಾ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿ ಯುವಜನ ಸಭಾದ ಚಟುವಟಿಕೆಗಳ ಸಕ್ರಿಯರಾದ ಮಹಾದೇವ ಅವರು ವಿದ್ಯಾರ್ಥಿ ದೆಸೆ ಯಲ್ಲಿಯೇ ನರ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ ರಾಗಿ, ಪ್ರಕಾಶಕರಾಗಿದ್ದರು. ೧೯೭೫ರಲ್ಲಿ ಜಯಪ್ರಕಾಶ ನಾರಾಯಣ ಅವರು ಮೈಸೂರಿಗೆ ಬಂದಿದ್ದಾಗ ಸಾರ್ವಜನಿಕ ಸಭೆಯೊಂದರ ಅಧ್ಯಕ್ಷತೆ ವಹಿಸಿದ ಗೌರವಕ್ಕೆ ಪಾತ್ರರಾಗಿದ್ದರು. ೧೯೭೯ರಲ್ಲಿ ದಲಿತ ಬಂಡಾಯ ಸಾಹಿತ್ಯ ಚಳವಳಿಯ ನಿಕಟ ಸಂಬಂಧ ಹೊಂದಿದ್ದ ದೇಮ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಘಟಕರಾಗಿಯೂ ಕಾರ್ಯನಿರ್ವಹಿಸಿದರು.
೧೯೮೯ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ ನಡೆದ ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಮ್‌ನಲ್ಲಿ ಕರ್ನಾಟಕವನ್ನು ಪ್ರತಿನಿಽಸಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಸಾರಸ್ವತ್ವ ಲೋಕದಲ್ಲಿ ಗಮನ ಸೆಳೆದ ‘ಒಡಲಾಳ’, ‘ಕುಸುಮಬಾಲೆ’ ಮತ್ತು ‘ಅಮಾಸ’ ಕೃತಿಗಳು ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಅತಿ ಹೆಚ್ಚು ಜನಮನ್ನಣೆ ಪಡೆದಿವೆ. ೧೯೮೪ರಲ್ಲಿ ಕಲ್ಕತ್ತೆಯ ಭಾರತೀಯ ಭಾಷಾಪರಿಷತ್ತು ಇವರ ‘ಒಡಲಾಳ’ ಕೃತಿಯನ್ನು ಉತ್ತಮ ಸೃಜನಶೀಲ ಕೃತಿ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ೧೯೯೧ರಲ್ಲಿ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ೧೯೯೫ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಇವರ ಕೃತಿಗಳು ಇಂಗ್ಲಿಷ್ ಹಾಗೂ ಮತ್ತಿತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಯಾರ ಜಪ್ತಿಗೂ ಸಿಗದ ನವಿಲುಗಳು ಇವರ ಸಾಹಿತ್ಯ ಕುರಿತ ವಿಶೇಷ ಬಗೆಯ ವಿಮರ್ಷಾ ಕೃತಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ದೇವನೂರು ರಚಿಸಿದ ‘ಎದೆಗೆ ಬಿದ್ದ ಅಕ್ಷರ’, ‘ಆರ್‌ಎಸ್‌ಎಸ್ ಆಳ ಅಗಲ’ ಕೃತಿಗಳು ದೇವನೂರು ಮಹಾದೇವ ಅವರ ವೈಚಾರಿಕ ಚಿಂತನೆಗೆ ಸಾಕ್ಷಿಯಾಗಿವೆ. ಆರಂಭದಲ್ಲಿ ದಲಿತ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ದೇಮ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಆರಂಭಕ್ಕೆ ಒತ್ತಾಸೆಯಾಗಿ, ಅದರಬೌದ್ಧಿಕ ಶಕ್ತಿಯಾದರು. ಲೋಹಿಯಾ ಸಮಾಜವಾದದಿಂದ ಪ್ರಭಾವಿತರಾಗಿ, ಅಂಬೇಡ್ಕರ್-ಗಾಂಽ ಚಿಂತನೆಗಳನ್ನು ತಮ್ಮ ಮೂಲ ದ್ರವ್ಯವನ್ನಾಗಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ಹೋರಾಡುತ್ತಿರುವ ದೇವನೂರ ಮಹಾದೇವ ಅವರು ನಮ್ಮ ಕಾಲದ ಬಹು ಮುಖ್ಯ ಸಾಮಾಜಿಕ, ರಾಜಕೀಯ ವಾಗ್ವಾದಗಳಿಗೆಪ್ರತಿಕ್ರಿಯಿಸುತ್ತಾ, ನಾಡಿನ ಸಾಕ್ಷಿಪ್ರಜ್ಞೆ ಎನ್ನಿಸಿಕೊಂಡಿದ್ದಾರೆ.
ದೇಮರನ್ನು ಅರಸಿ ಬಂದ ಪ್ರಶಸ್ತಿಗಳು:
ಅಮೆರಿಕಾದಲ್ಲಿ ನಡೆದ ‘ಇಂಟರನ್ಯಾಷನಲ್ ರೈಟಿಂಗ್ ಪ್ರೋಗ್ರಾಂ’ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗಿ
೧೯೮೪: ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ನಿಂದ ಉತ್ತಮ ಸೃಜನಶೀಲ ಕೃತಿಯೆಂದು ಗೌರವ
೧೯೯೧ರಲ್ಲಿ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೫: ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೫: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೨೦೧೧: ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ ಗೌರವ (೨೦೧೫ರಲ್ಲಿ ಹಿಂದಿರುಗಿಸಿದ್ದಾರೆ)
೨೦೧೨: ಅಲ್ಲಮಪ್ರಭು ಶೂನ್ಯಪೀಠ ಪ್ರಶಸ್ತಿ
೨೦೧೨: ಕನ್ನಡ ಸಾಹಿತ್ಯಪರಿಷತ್ತಿನ ನೃಪತುಂಗ ಪ್ರಶಸ್ತಿ(ನಿರಾಕರಣೆ)
೨೦೧೩: ಹಂಪಿ ಕನ್ನಡ ವಿವಿಯಿಂದ ನಾಡೋಜ ಗೌರವ
೨೦೧೩: ವಿ.ಎಂ.ಇನಾಂದಾರ್ ಪ್ರಶಸ್ತಿ (ಎದೆಗೆ ಬಿದ್ದಅಕ್ಷರ ಕೃತಿಗೆ)
೨೦೧೩: ಬೆಂಗಳೂರಿನ ಸೂರ್ತಿಧಾಮದ ಬೋಧಿವೃಕ್ಷ ಪ್ರಶಸ್ತಿ
೨೦೧೪: ವೈಸೂರು ವಿವಿಯ ಗೌರವ ಡಾಕ್ಟರೇಟ್
೨೦೧೬: ಕುವೆಂಪು ರಾಷ್ಟ್ರೀಯ ಪ್ರಶಸ್ತಿ
೨೦೧೮: ಶಿವರಾಮ ಕಾರಂತ ಪ್ರಶಸ್ತಿ
೨೦೨೪: ತಮಿಳುನಾಡು ಸರ್ಕಾರದಿಂದ ವೈಕಂ ಪ್ರಶಸ್ತಿ
೨೦೨೬: ಪಂಪ ಪ್ರಶಸ್ತಿ





